ಪಾಂಚಾಲ ನಗರದಲ್ಲಿ ರಾಜ ದ್ರುಪದನ ಮಗಳಾಗಿ ದ್ರೌಪದಿ ಜನಿಸಿದಳು. ಅವಳು ಹುಟ್ಟಿದ್ದೇ ಒಂದು ವಿಸ್ಮಯ.

ದ್ರೋಣನಿಗೂ ದ್ರುಪದನಿಗೂ ಬಾಲ್ಯ ಸ್ನೇಹ. ಒಂದೇ ಗುರುಕುಲದಲ್ಲಿ ವಾಸ ಮತ್ತು ಕಲಿಕೆ. ಎಷ್ಟು ಆಪ್ತ ಸ್ನೇಹ ಅಂದರೆ ದ್ರುಪದ ಒಮ್ಮೆ ಹೀಗೆ ಹೇಳಿದ- ಮಿತ್ರಾ, ನಾನು ಮುಂದೆ ರಾಜನಾದಾಗ ನಿನಗೆ ಅರ್ಧ ರಾಜ್ಯ ಕೊಡುತ್ತೇನೆ.

ದ್ರೋಣ ಆ ಮಾತನ್ನು ನಂಬಿದ. ಮುಂದೆ ಇಬ್ಬರೂ ಕಲಿತ ನಂತರ ಬೇರೆ ಬೇರೆಯಾದರು. ದ್ರುಪದ ಪಾಂಚಾಲದ ರಾಜನಾದ.

ದ್ರೋಣ ಪರಶುರಾಮರಲ್ಲಿಗೆ ಹೋಗಿ ಎಲ್ಲ ಅಸ್ತ್ರ ಶಸ್ತ್ರ ವಿದ್ಯೆಗಳನ್ನೂ ಕಲಿತ. ಆದರೆ ಬಡವನಾಗಿಯೇ ಉಳಿದ. ಮಗ ಅಶ್ವತ್ಥಾಮನಿಗೆ ಒಂದು ಲೋಟ ಹಾಲು ಕೊಡಲಾಗದಷ್ಟೂ ಬಡತನ. ಆಗ ಅವನಿಗೆ ಸ್ನೇಹಿತ ದ್ರುಪದ ನೆನಪಾಯಿತು.

ಅವನಲ್ಲಿಗೆ ಹೋದ. ದ್ರೋಣನ ಉದ್ದೇಶ ಇದ್ದುದು ಅರ್ಧ ರಾಜ್ಯ ಕೇಳುವುದಲ್ಲ. ಜೀವನೋಪಾಯಕ್ಕೆ ಏನಾದರೂ ಕೊಡು ಎಂದು ಕೇಳುವುದಾಗಿತ್ತು. ಆದರೆ ದ್ರುಪದ ದ್ರೋಣನಿಗೆ ಅವಮಾನ ಮಾಡಿ ಹೊರಹಾಕಿದ. ಬಡ ಬ್ರಾಹ್ಮಣನ ಜೊತೆಗೆ ಅರಸರಿಗೆ ಎಲ್ಲಿಯ ಸ್ನೇಹ ಎಂದ.

ಈ ಮೂರು ವಿಷಯಗಳ ಬಗ್ಗೆ ನಾಚಿಕೆ ಬೇಡವೆನ್ನುತ್ತೆ ಚಾಣಕ್ಯ ನೀತಿ ...

ದ್ರೋಣ ಸಿಟ್ಟಿಗೆದ್ದ. ಪ್ರತೀಕಾರ ತೀರಿಸುವ ಉದ್ದೇಶದಿಂದ ಹಸ್ತಿನಾಪುರಕ್ಕೆ ಬಂದು, ಅಲ್ಲಿನ ರಾಜಕುಮಾರರಿಗೆ ವಿದ್ಯೆ ಹೇಳಿಕೊಟ್ಟ. ಅರ್ಜುನನ್ನು ಬಿಲ್ವಿದ್ಯಾ ಪಾರಂಗತನನ್ನಾಗಿ ಮಾಡಿದ. ನಂತರ ಅವನಿಂದಲೇ ದ್ರುಪದನನ್ನು ಸೋಲಿಸಿ ಕಟ್ಟಿ ಹಿಡಿತರಿಸಿ ಕಾಲನಿಂದ ಒದ್ದು ಅವಮಾನ ಮಾಡಿದ.

ದ್ರುಪದನಿಗೆ ಅವಮಾನವಾಯಿತು. ಅರ್ಜುನನಿಂದಲೇ ದ್ರೋಣನನ್ನು ಮಣಿಸುತ್ತೇನೆ ಎಂದ ಶಪಥ ಮಾಡಿದ. ಯಾಜೋಪಯಾಜರೆಂಬ ಬ್ರಾಹ್ಮಣರನ್ನು ಹಿಡಿದು ಅವರಿಂದ ಅಭಿಚಾರ ಕರ್ಮ ಮಾಡಿಸಿದ. ಯಜ್ಞ ಕುಂಡದಿಂದ ದ್ರೌಪದಿ ಹಾಗೂ ದೃಷ್ಟದ್ಯುಮ್ನ ಹುಟ್ಟಿ ಬಂದರು. ದೃಷ್ಟದ್ಯುಮ್ನ ದ್ರೋಣರನ್ನು ಕೊಲ್ಲುವ ಉದ್ದೇಶದಿಂದ ಹುಟ್ಟಿದ್ದ. ದ್ರೌಪದಿ ಅರ್ಜುನನನ್ನು ಮದುವೆಯಾಗಲು ಹುಟ್ಟಿದ್ದಳು.

ದ್ರೌಪದಿಯ ಸ್ವಯಂವರಕ್ಕೆ ಎಲ್ಲರೂ ಆಗಮಿಸಿದ್ದರು. ಬ್ರಾಹ್ಮಣ ವೇಷದಲ್ಲಿದ್ದ ಪಾಂಡವರು ಸಹ. ಕೃಷ್ಣ- ಬಲರಾಮ ಸಹ. ಕೃಷ್ಣ ಅವರನ್ನು ಗುರುತಿಸಿದ. ಸ್ವಯಂವರದ ಪಣ ಗೆಲ್ಲಲು ಕ್ಷತ್ರಿಯರಿಂದ ಸಾಧ್ಯವಾಗದೆ ಹೋದಾಗ, ಅರ್ಜುನ ಮತ್ಸ್ಯಯಂತ್ರ ಬೇಧಿಸಿದ. ಗೆದ್ದ. ದ್ರೌಪದಿ ಅವನಿಗೆ ಮಾಲೆ ಹಾಕಿದಳು. ನಂತರ ಅವನ ಜೊತೆ ಪಾಂಡವರು ತಂಗಿದ್ದ ಕುಂಬಾರನ ಮನೆಗೆ ಹೋದಳು. ಅರ್ಜುನ ಹೊರಗೆ ನಿಂತು, ಒಳಗಿದ್ದ ಅಮ್ಮ ಕುಂತಿಗೆ ಕೇಳುವಂತೆ 'ಅಮ್ಮಾ ಇಂದಿನ ಭಿಕ್ಷೆ ತಂದಿದ್ದೇವೆ' ಎಂದು ಕೂಗಿದ. 'ಐವರೂ ಹಂಚಿಕೊಳ್ಳಿ' ಎಂದಳು ಕುಂತಿ.ಕುಂತಿಗೆ ಗೊತ್ತೇ ಇತ್ತು- ಅಂದು ಅವರು ಹೋದದ್ದು ದ್ರೌಪದಿಯ ಸ್ವಯಂವರಕ್ಕೆ ಎಂದು. ಅರ್ಜುನ ಗೆಲ್ಲಲಿದ್ದಾನೆ ಎಂಬುದೂ ಗೊತ್ತಿತ್ತು. ಅದನ್ನು ವೇದವ್ಯಾಸರು ಮೊದಲೇ ಹೇಳಿದ್ದರು. ಹಾಗಿದ್ದರೂ ಆಕೆ 'ಐವರೂ ಹಂಚಿಕೊಳ್ಳಿ' ಎಂದು ಹೇಳಿದ್ದೇಕೆ?

ಪಾಂಡು ಮಹಾರಾಜ ವಯಾಗ್ರ ಸೇವಿಸಿದ್ದನೇ? ಅದೇ ಆತನ ಸಾವಿಗೆ ಕಾರಣವಾಯ್ತಾ? ...

ಅದರ ಹಿಂದಿನ ಉದ್ದೇಶ ಇದು- ಸುರಸುಂದರಿ ದ್ರೌಪದಿಯನ್ನು ಅರ್ಜುನನೊಬ್ಬನೇ ಮದುವೆಯಾದರೆ ಉಳಿದವರಲ್ಲಿ ಅಸೂಯೆ, ನಂತರ ಹೊಡೆದಾಟ ಉಂಟಾಗಬಹುದು. ಮನೆ ಒಡೆಯುತ್ತದೆ, ಎರಡು, ಮೂರು ಐದಾಗುತ್ತದೆ. ತನ್ನ ಮಕ್ಕಳು ಹಸ್ತಿನಾಪುರ ಆಳುವ ಕುಂತಿಯ ಕನಸು ಛಿದ್ರವಾಗುತ್ತದೆ. ಆದ್ದರಿಂದಲೇ ಕುಂತಿ ತಲೆ ಉಪಯೋಗಿಸಿದಳು.

ಮರುದಿನ ಮದುವೆ. ದ್ರೌಪದಿಯ ಮದುವೆ ಮಂಟಪಕ್ಕೆ ಐವರೂ ಬಾಸಿಂಗ ಕಟ್ಟಿಕೊಂಡು ಬಂದಾಗ ದ್ರುಪದ ದಂಗಾದ. ಆಗ ವೇದವ್ಯಾಸರು ಆಗಮಿಸಿದರು, ದ್ರೌಪದಿಯ ಹಿಂದಿನ ಜನ್ಮದ ಕತೆ ಹೇಳಿದರು.
ಹಿಂದಿನ ಜನ್ಮದಲ್ಲಿ ಆಕೆ ಒಬ್ಬ ಬ್ರಾಹ್ಮಣಿಯಾಗಿದ್ದಳು. ಆಕೆಗೆ ಮದುವೆ ಆಗಿರಲಿಲ್ಲ. ನೊಂದು ಘೋರ ತಪಸ್ಸು ಮಾಡಿದಳು. ಶಿವ ಪ್ರತ್ಯಕ್ಷನಾದ. ಏನು ಬೇಕು ಹೇಳೆಂದ.

'ಪತಿಯನ್ನು ಅನುಗ್ರಹಿಸು' ಎಂದು ಐದು ಬಾರಿ ಕೇಳಿದಳು. ಪರಶಿವ 'ತಥಾಸ್ತು' ಎಂದ. ನಿನಗೆ ಐವರು ಗಂಡಂದಿರು ಆಗಲಿದ್ದಾರೆ ಎಂದ. ಆಕೆ ಬೆಚ್ಚಿದಳು. ಇದೇನು ಎಂದಳು. ಅದು ಹಾಗೇ, ನೀನು ಐದು ಬಾರಿ ಕೇಳಿದೆ, ನಾನು ಕೊಟ್ಟೆ. ನನ್ನ ಮಾತು ತಪ್ಪದು. ಆದರೆ ಈಗಲ್ಲ, ಮುಂದಿನ ಜನ್ಮದಲ್ಲಿ ಎಂದ.
ಈ ಕತೆಯನ್ನು ವೇದವ್ಯಾಸರು ಹೇಳಿದ ಬಳಿಕ ಎಲ್ಲರೂ ಒಪ್ಪಿದರು.

ಭಾಗವತದಲ್ಲಿ ಬರುವ ರಾಮ-ಸೀತೆಯರ ಕತೆ ಕೇಳಿದರೆ ರಾಮಾಯಣ ಪಾರಾಯಣ ಮಾಡಿದಷ್ಟು ಫಲ ಲಭಿಸುವುದು ...

ಮುಂದೆ, ನಾರದ ಋಷಿಗಳು ಆಗಮಿಸಿ ಪಾಂಡವರಿಗೆ ಒಂದು ನಿಯಮ ವಿಧಿಸಿದರು- ಎಲ್ಲರೂ ಒಟ್ಟಿಗೇ ದ್ರೌಪದಿಯ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಒಬ್ಬೊಬ್ಬನೂ ಒಂದೊಂದು ವರ್ಷ ಮಾಡಿ. ಅವರ ಏಕಾಂತವನ್ನು ಇನ್ನೊಬ್ಬರು ಉಲ್ಲಂಘಿಸಿದರೆ ಅವರು ಹನ್ನೆರಡು ವರ್ಷ ಕಾಡಿಗೆ ಹೋಗಬೇಕು.
ಹೀಗೆ ಅವರು ದ್ರೌಪದಿಯ ಜೊತೆ ಒಂದೊಂದು ವರ್ಷದಂತೆ ಸುಖವಾಗಿ ಇದ್ದರು.