Indian Mythology: ಮಹಾಭಾರತದಲ್ಲಿ ಕರ್ಣನ ಜನ್ಮರಹಸ್ಯ ಹನ್ನೊಂದು ಮಂದಿಗೆ ತಿಳಿದಿತ್ತು!
ಮಹಾಭಾರತದಲ್ಲಿ ಕರ್ಣನ ಜನ್ಮರಹಸ್ಯ ಕುಂತಿ, ಸೂರ್ಯ, ಕೃಷ್ಣನಿಗೆ ಮಾತ್ರ ಗೊತ್ತಿತ್ತು ಎಂಬುದು ಜನಪ್ರಿಯ ತಿಳುವಳಿಕೆ. ಆದರೆ ಇನ್ನೂ ಹಲವಾರು ಮಂದಿಗೆ ಈ ರಹಸ್ಯ ತಿಳಿದಿತ್ತು. ಯಾರ್ಯಾರು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಮಹಾಭಾರತದಲ್ಲಿ ಕರ್ಣನ ಕಥೆ ನಿಮಗೆಲ್ಲಾ ತಿಳಿದೇ ಇದೆ. ಕುಂತಿಗೆ ಮದುವೆಯಾಗುವ ಮೊದಲೇ ಸೂರ್ಯದೇವನಿಂದಾಗಿ ಜನಿಸಿದ ಕರ್ಣ, ಮುಂದೆ ದುರದೃಷ್ಟವಶಾತ್ ಕೌರವನ ಬಳಿ ಸೇರಿ ಪಾಂಡವರ ವೈರಿಯಾಗಿ ಬೆಳೆಯುತ್ತಾನೆ. ತನ್ನ ಸಹೋದರರೊಂದಿಗೇ ಕಾದಾಡಿ, ಸೋದರ ಅರ್ಜುನನ ಕೈಗಳಲ್ಲೇ ಸಾಯುತ್ತಾನೆ. ಜನಪ್ರಿಯ ತಿಳುವಳಿಕೆ ಪ್ರಕಾರ ಕರ್ಣನ ಜನ್ಮರಹಸ್ಯ ಕುಂತಿ, ಸೂರ್ಯ, ಕೃಷ್ಣನಿಗೆ ಮಾತ್ರ ಗೊತ್ತಿತ್ತು ಎಂಬುದು. ಆದರೆ ಇನ್ನೂ ಹಲವಾರು ಮಂದಿಗೆ ಇದು ಗೊತ್ತಿತ್ತಂತೆ. ಹನ್ನೊಂದು ಮಂದಿಗೆ ಇದು ಗೊತ್ತಿತ್ತು. ಯಾರ್ಯಾರು ಅಂತ ನೋಡೋಣ.
ಭಗವಾನ್ ಸೂರ್ಯ: ಇವನು ಕರ್ಣನ ತಂದೆ, ಜಗತ್ತಿನ ಕಣ್ಣು. ಎಲ್ಲವನ್ನೂ ನೋಡಬಲ್ಲವನು. ಕುಂತಿ ಕರ್ಣನಲ್ಲಿಗೆ ಬಂದು ಮಾತನಾಡಲಿದ್ದಾಳೆ ಎಂಬುದನ್ನು ಮುಂಚಿತವಾಗಿ ಬಂದು ಕರ್ಣನಿಗೆ ತಿಳಿಸಿದವನೇ ಇವನು.
ಮಾತೆ ಕುಂತಿ: ಕರ್ಣನ ತಾಯಿ. ಕುಂತಿಯು ಆಗ ತಾನೇ ಹುಟ್ಟಿದ ಕರ್ಣನನ್ನು ಪೆಟ್ಟಿಗೆಯಲ್ಲಿ ಇಟ್ಟು ನದಿಯಲ್ಲಿ ಬಿಡುತ್ತಾಳೆ. ಬಹಳ ವರ್ಷಗಳ ನಂತರ ಹಸ್ತಿನಾವತಿಯ ರಾಜಕುಮಾರರ ಶಸ್ತ್ರಾಭ್ಯಾಸ ಮುಗಿದು ಅವರ ಕೌಶಲ್ಯ ಪ್ರದರ್ಶನದ ದಿನ ಬರುತ್ತದೆ. ಆ ದಿನ ಕುಂತಿಯು ಕರ್ಣನಿಗೆ ಹುಟ್ಟಿನಿಂದ ಇದ್ದ ಕವಚ-ಕುಂಡಲಗಳನ್ನು ಕಂಡು ಈತನು ತನ್ನ ಮಗ ಎಂದು ಗುರುತುಹಿಡಿಯುತ್ತಾಳೆ.
ಭಗವಾನ್ ವ್ಯಾಸರು: ಇವರು ಸರ್ವಜ್ಞರು, ಮಹಾಭಾರತವನ್ನು ಆದಿಯಿಂದ ಬಲ್ಲವರು, ಬರೆದವರು. ಆಗಾಗ ಹಸ್ತಿನಾವತಿಗೆ ಬಂದು ಅಲ್ಲಿನ ರಾಜಕೀಯ, ಸಾಂಸಾರಿಕ ಬದುಕನ್ನು ನಿರ್ದೇಶಿಸುತ್ತಿದ್ದ ವ್ಯಾಸರಿಗೆ ಕರ್ಣನ ಕತೆ ಮೊದಲೇ ತಿಳಿದಿತ್ತು. ಆದರೆ ಯಾರಿಗೂ ಹೇಳಲಿಲ್ಲ.
ನಾರದ ಮುನಿಗಳು: ಇವರು ತ್ರಿಲೋಕಸಂಚಾರಿಗಳು. ಕರ್ಣನ ಹುಟ್ಟಿನ ಬಗ್ಗೆ ಇವರಿಗೆ ತಿಳಿದಿತ್ತು. ಭೀಷ್ಮರಿಗೆ ಕರ್ಣನ ಮೂಲದ ಬಗ್ಗೆ ತಿಳಿಸಿದವರೇ ಇವರು.
ಪಿತಾಮಹ ಭೀಷ್ಮರು: ಯುಧಿಷ್ಠಿರನ ರಾಜಸೂಯ ಯಜ್ಞದಲ್ಲಿ ನಾರದ ಮುನಿಗಳಿಂದ ಕರ್ಣನ ಹುಟ್ಟಿನ ಬಗ್ಗೆ ಭೀಷ್ಮರು ತಿಳಿದುಕೊಂಡರು. ಹಾಗೆಂದು ಶರಶಯ್ಯೆಯಲ್ಲಿ ಇರುವಾಗ ತನ್ನನ್ನು ಕಾಣಲು ಬಂದ ಕರ್ಣನಿಗೆ ಹೇಳುತ್ತಾರೆ. ಆದರೆ ಇವರೂ ಯಾರಿಗೂ ಹೇಳುವುದಿಲ್ಲ.
ಭಗವಾನ್ ಶ್ರೀಕೃಷ್ಣ: ಸಕಲವನ್ನೂ ಬಲ್ಲ ಪರಮಾತ್ಮ. ಇವನಿಗೆ ತಿಳಿಯದ ವಿಚಾರಗಳೇ ಇಲ್ಲ. ಮೊದಲ ಬಾರಿಗೆ ಕರ್ಣನ ಹುಟ್ಟಿನ ಬಗ್ಗೆ ಕರ್ಣನಿಗೇ ತಿಳಿಸಿದವನು. ಹಸ್ತಿನಾವತಿಗೆ ಸಂಧಾನಕ್ಕೆ ಬಂದ ಕೃಷ್ಣ, ಸಂಧಾನ ವಿಫಲಗೊಂಡ ಬಳಿಕ, ಕರ್ಣನನ್ನು ಕರೆದು ಇದನ್ನು ಹೇಳುತ್ತಾನೆ. ಬಳಿಕ ಕುಂತಿಯನ್ನು ಕರೆದು, ಕರ್ಣನಲ್ಲಿಗೆ ಹೋಗಿ ವರ ಪಡೆದು ಬರಲು ಛೂಬಿಡುತ್ತಾನೆ.
ಕರ್ಣ: ಕುರುಕ್ಷೇತ್ರದಲ್ಲಿನ ಯುದ್ಧಕ್ಕೆ ಮೊದಲು ಶ್ರೀಕೃಷ್ಣನು ಕರ್ಣನಿಗೆ ಆತನ ಹುಟ್ಟಿನ ವಿಷಯವನ್ನು ಹೇಳಿ ಪಾಂಡವರ ಕಡೆಗೆ ಬರುವಂತೆ ಅನುನಯಿಸುತ್ತಾನೆ. ಆದರೆ ಕರ್ಣ ಒಪ್ಪುವುದಿಲ್ಲ. ತನ್ನನ್ನು ಸಾಕಿದ ದುರ್ಯೋಧನನಿಗಾಗಿ ಕುರುಕ್ಷೇತ್ರದಲ್ಲಿ ಕಾದಾಡಿ ಪ್ರಾಣ ಬಿಡುತ್ತಾನೆ.
Indian Mythology: ಯಮ ಸೂರ್ಯನ ಮಗ ಆದರೆ, ಧರ್ಮರಾಯ ಸೂರ್ಯನಿಗೆ ಮಗನೇ, ಮೊಮ್ಮಗನೇ?
ಸಂಜಯ- ಧೃತರಾಷ್ಟ್ರ: ಭಗವಾನ್ ವ್ಯಾಸರು ಕೊಟ್ಟ ದಿವ್ಯದೃಷ್ಟಿಯಿಂದ ಮೇಲೆ ಹೇಳಿದ ಶ್ರೀಕೃಷ್ಣ-ಕರ್ಣರ ಸಂವಾದವನ್ನು ಸಂಜಯನು ಆಲಿಸಿ ಧೃತರಾಷ್ಟ್ರನಿಗೆ ಹೇಳುತ್ತಾನೆ. ಹೀಗಾಗಿ ಧೃತರಾಷ್ಟ್ರನಿಗೂ ಯುದ್ಧದ ಹಂತದಲ್ಲಿ ಗೊತ್ತಾಗಿಬಿಡುತ್ತದೆ.
ದುರ್ಯೋಧನ- ಸತ್ಯಂತಪ: ಸತ್ಯಂತಪ ಎಂಬ ಮುನಿಗಳಿಂದ ದುರ್ಯೋಧನನಿಗೆ ಇದು ಗೊತ್ತಾಗಿಬಿಡುತ್ತದೆ ಎಂದು ಮಹಾಕವಿ ಪಂಪ ತನ್ನ ಮಹಾಭಾರತದಲ್ಲಿ ಹೇಳುತ್ತಾನೆ. ಕಾಡಿಗೆ ಬೇಟೆಗೆ ಹೋದ ದುರ್ಯೋಧನ- ಕರ್ಣರು ಸತ್ಯಂತಪರ ಆಶ್ರಮಕ್ಕೆ ಭೇಟಿ ಕೊಟ್ಟಾಗ ಮೊದಲು ಕರ್ಣನಿಗೆ ಕೂರಲು ಆಸನ ಕೊಡುತ್ತಾರೆ. ಇದೇಕೆ ಎಂದು ದುರ್ಯೋಧನ ಗುಟ್ಟಾಗಿ ಅವರಲ್ಲಿ ಕೇಳಲು, ಈ ರಹಸ್ಯವನ್ನು ಅರುಹುತ್ತಾರೆ. ಆದರೆ ದುರ್ಯೋಧನನೂ ಈ ವಿಷಯವನ್ನು ರಹಸ್ಯವಾಗಿಯೇ ಇಡುತ್ತಾನೆ.
Chanakya Niti: ಮಹಾ ಚಾಣಾಕ್ಷ ಆಚಾರ್ಯ ಚಾಣಕ್ಯ ಸತ್ತದ್ದು ಹೇಗೆ?