ಚಾಣಕ್ಯನ ಪ್ರಕಾರ, ಹಲವು ಸಂದರ್ಭಗಳಲ್ಲಿ ಮುಂದೆ ನಿಮಗಾಗುವ ಮುಜುಗರ, ಹತಾಶೆ, ಸಿಟ್ಟು, ಅವಮಾನ ಇವನ್ನೆಲ್ಲ ಇಲ್ಲದಂತಾಗಿಸಲು ಮೊದಲೇ 'ಇಲ್ಲ' ʼನೋʼ ಎನ್ನುವುದು ಮುಖ್ಯ. 'ನೋ' ಎನ್ನುವುದು ಪ್ರಾಮಾಣಿಕತೆಯ ಸಂಕೇತ.
ಬದುಕಿನಲ್ಲಿ ನಾವು ʼಎಸ್ʼ ಎನ್ನುವ ಹಲವು ಸಂದರ್ಭಗಳು ಇರುವಂತೆಯೇ ʼನೋʼ ಎನ್ನಬೇಕಾದ ಹಲವು ಸಂದರ್ಭಗಳೂ ಇರುತ್ತವೆ. "ದಾಕ್ಷಿಣ್ಯಕ್ಕೆ ಬಸಿರಾದರೆ ಹೆರುವುದಕ್ಕೆ ಜಾಗವಿಲ್ಲ" ಎಂದು ಗಾದೆಯನ್ನು ನೀವು ಕೇಳಿರಬಹುದು. ಬಹಳಷ್ಟು ಸಲ ದಾಕ್ಷಿಣ್ಯಕ್ಕೆ ಅಂದರೆ ಮುಲಾಜಿಗೆ ಬಿದ್ದು ನಾವು ಯಾವಯಾವುದೋ ಕೆಲಸ ಕಾರ್ಯಕ್ಕೆ ಒಪ್ಪಿಕೊಂಡುಬಿಡುತ್ತೇವೆ. ನಂತರ ಕಷ್ಟಪಡುತ್ತೇವೆ. ಹಲವು ಸಲ ʼನೋʼ ಎಂದರೆ ಇಂಥ ಕಷ್ಟದಿಂದ ನಾವು ಪಾರಾಗಬಹುದು. ಚಾಣಕ್ಯನ ಪ್ರಕಾರ, ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು, ಅತಿಯಾದ ಬದ್ಧತೆಯನ್ನು ತಪ್ಪಿಸಲು "ಇಲ್ಲ" ಎಂದು ಹೇಳುವುದು ಬಹಳ ಮುಖ್ಯ. ಭರವಸೆ ನೀಡಿ ಅದನ್ನು ಈಡೇರಿಸುವಲ್ಲಿ ವಿಫಲರಾಗುವುದಕ್ಕಿಂತ ಒಪ್ಪಿಕೊಳ್ಳುವುದಕ್ಕೂ ಮೊದಲೇ ನಿರಾಕರಿಸುವುದು ಉತ್ತಮ. "ನೋ" ಎಂದು ಹೇಳುವುದು ಪ್ರಾಮಾಣಿಕತೆಯ ಸಂಕೇತ. ಇದು ಭವಿಷ್ಯದ ಒತ್ತಡ ಅಥವಾ ನಿರಾಶೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಾದರೆ ಚಾಣಕ್ಯ ನೀತಿ ಪ್ರಕಾರ ಯಾವ್ಯಾವಾಗ ʼನೋʼ ಎನ್ನಬೇಕು?
1) ನಯವಂಚಕರಿಗೆ
ನಯವಂಚಕರು ಯಾರೆಂದು ನಿಮಗೆ ಗೊತ್ತೇ ಇರುತ್ತದೆ. ಇವರು ನಿಮ್ಮ ಮುಂದೆ ಒಂದು ಮಾತನಾಡಿ, ಹಿಂದೆ ಇನ್ನೊಂದು ಮಾಡುವವರು. ಒಳಗೊಳಗೇ ನಿಮ್ಮ ಅಹಿತವನ್ನು ಬಯಸಿ, ಹೊರಗೆ ನಿಮ್ಮ ಹಿತೈಷಿಗಳಂತೆ ತೋರಿಸಿಕೊಳ್ಳುವವರು. ಇವರ ಜೊತೆ ಸ್ಪಷ್ಟವಾದ ಬಾರ್ಡರ್ ಲೈನ್ ಹಾಕಿಕೊಳ್ಳುವುದು ಅಗತ್ಯ. ಇಲ್ಲಿಂದೀಚೆಗೆ ನಿಮಗೆ ಪ್ರವೇಶವಿಲ್ಲ ಎಂದು ನೀವು ಹೇಳಿಬಿಟ್ಟರೆ ಆಮೇಲೆ ಭಯವಿಲ್ಲ.
2) ಭರವಸೆ ಈಡೇರಿಸಲು ಆಗದಿದ್ದಾಗ
ಅತಿಯಾದ ಮಟ್ಟದ ಭರವಸೆ ನೀಡಿ ನಂತರ ಅದನ್ನು ಸರಿಯಾಗಿ ಮಾಡಲು ಸಾಧ್ಯವಾಗದಿರುವುದು ನಿಮ್ಮ ಇಮೇಜ್‌ಗೆ ಹಾನಿಯುಂಟು ಮಾಡುತ್ತದೆ. ಮತ್ತು ಇದು ಒತ್ತಡಕ್ಕೆ ಕಾರಣವಾಗಬಹುದು. ನೀವು ನಿಮ್ಮ ಬದ್ಧತೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ ಮೊದಲೇ ನಯವಾಗಿ ನಿರಾಕರಿಸುವುದು ಉತ್ತಮ.
3) ಸ್ವಾಭಿಮಾನ ಕಾಪಾಡಿಕೊಳ್ಳಲು
ಕೆಲವು ಸಲ ನಿಮಗೆ ಅವಮಾನವಾಗುವಂಥ ಸಂದರ್ಭಗಳು ಒದಗಬಹುದು. ಕೊಟ್ಟ ಮಾತು ಪೂರೈಸಲಾಗದೆ ಅವಮಾನವಾಗಬಹುದು. ಆಗ "ಇಲ್ಲ" ಎಂದು ಹೇಳುವುದು ನಿಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ಅಗತ್ಯ. ಇದು ನಿಮ್ಮ ಮಿತಿ ನಿಮಗೆ ಗೊತ್ತಿದ್ದರೆ ಸಾಧ್ಯ. ನಿರಾಕರಿಸುವುದು ಸ್ವಾರ್ಥವಲ್ಲ, ಬದಲಿಗೆ ನಿಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸುವ ಒಂದು ಮಾರ್ಗ.
4) ಹಿಂತಿರುಗಿಸದ ಸಾಲಗಾರರಿಗೆ
ಪ್ರಾಮಾಣಿಕ ಸಾಲಗಾರರು ಹೇಳಿದ ಅವಧಿಗೆ ನಿಮಗೆ ಹಣ ಹಿಂದಿರುಗಿಸುತ್ತಾರೆ. ಅಪ್ರಾಮಾಣಿಕರು ಒಂದಲ್ಲ ಒಂದು ಕಾರಣ ಹೇಳುತ್ತ ಕಾಲಹರಣ ಮಾಡುತ್ತಿರುತ್ತಾರೆ. ಸುಳ್ಳು ಕಾರಣಗಳನ್ನೂ ಹೇಳಬಹುದು. ಇಂಥವರು ಮತ್ತೊಮ್ಮೆ ಸಾಲ ಕೇಳುವಾಗ ನೋ ಎಂದು ಹೇಳದಿದ್ದರೆ ನಿಮಗೆ ದ್ರವ್ಯನಷ್ಟ, ಮನಶ್ಶಾಂತಿಹರಣ ಖಂಡಿತ.
ರಾಶಿ ತತ್ವ: ಕೋಟಿ ಕೋಟಿ ದುಡ್ಡಿದ್ರೂ ದರಿದ್ರರಂತೆ ಬದುಕ್ತಾರಲ್ಲ, ಅವರದ್ದು ಯಾವ ರಾಶಿ?
5) ವೈಯಕ್ತಿವಾಗಿ ಬಳಸಿಕೊಳ್ಳುವವರು
ನಿಮ್ಮನ್ನು ಅವರ ವೈಯಕ್ತಿಕ ಸಮಸ್ಯೆ ಪರಿಹಾರಕರಂತೆ ನಡೆಸಿಕೊಳ್ಳುವ ಜನರನ್ನು ನೀವು ಬಲ್ಲಿರಿ. ಅವರ ಸಮಸ್ಯೆಗಳನ್ನು ನಿಮ್ಮ ಸಮಸ್ಯೆಗಳಂತೆ ತಿಳಿಯುವುದನ್ನು ನಿಲ್ಲಿಸಿ. ನಿಮ್ಮ ಬದುಕುವ ಇಚ್ಛೆಯನ್ನು ಕುಗ್ಗಿಸುವ ಜನರ ಬದಲು, ನಿಮ್ಮನ್ನು ಮೇಲಕ್ಕೆತ್ತುವ ಜನರೊಂದಿಗೆ ಇರಿ. ನಿರಂತರ ಬೇಡಿಕೆಗಳಿಂದ ನಿಮ್ಮನ್ನು ಕುಗ್ಗಿಸುವವರೊಂದಿಗೆ ಅಲ್ಲ. ಯಾರಾದರೂ ನಿಮ್ಮ ದಯೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿದ್ದರೆ ಅಥವಾ ಸಹಾಯ ಮಾಡಲು ನಿಮ್ಮನ್ನು ಹಿಂಸಿಸುತ್ತಿದ್ದರೆ ರಪ್ ಅಂತ ಒಂದು ಗಡಿರೇಖೆಯನ್ನು ಎಳೆದುಬಿಡಿ.
ಗಮನಿಸಿ:
"ನೋ" ಎಂದು ಹೇಳುವುದು ಕಠಿಣವಾಗಿರಬೇಕಿಲ್ಲ. ಅಥವಾ ಜಗಳದ ಭಾವನೆಯನ್ನು ಹೊಂದಿರಬೇಕಾಗಿಲ್ಲ. ಇದರ ಸಂವಹನದಲ್ಲಿ ಚಾತುರ್ಯ ಅಗತ್ಯ. ನೀವು ನಯವಾಗಿ ನಿರಾಕರಿಸಬಹುದು. ಹೆಚ್ಚಿನ ಜನರು ನಿಮ್ಮ ಪ್ರಾಮಾಣಿಕತೆಯನ್ನು ಗೌರವಿಸುತ್ತಾರೆ. ಇಲ್ಲ ಎಂದು ಹೇಳುವಾಗ, ಪ್ರಾಮಾಣಿಕವಾಗಿ ಮತ್ತು ನೇರವಾಗಿರಿ. ತಪ್ಪಿತಸ್ಥ ಭಾವನೆಯಿಲ್ಲದೆ ನೀವು ವಿನಂತಿಯನ್ನು ಏಕೆ ಪೂರೈಸಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿ.
ನೀಮ್ ಕರೋಲಿ ಬಾಬಾ ತಿಳಿಸಿದ ಈ ನಿಯಮ ಪಾಲಿಸಿದ್ರೆ ಜೀವನದಲ್ಲಿ ಭರ್ಜರಿ ಯಶಸ್ಸು


