ಪ್ರತಿಯೊಂದೂ ರಾಶಿಯನ್ನು ಅಗ್ನಿ, ಪೃಥ್ವಿ, ಜಲ ಮತ್ತು ವಾಯು ತತ್ವಗಳಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಂಗಡಿಸಲಾಗಿದೆ. ಅಗ್ನಿ ತತ್ವದವರು ಹಣವನ್ನು ಖರ್ಚು ಮಾಡುವವರಾದರೂ, ಸೂಕ್ತ ರೀತಿಯಲ್ಲಿ ಹೂಡುವ ಜಾಣ್ಮೆ ಇವರಿಗಿರುತ್ತದೆ. ಹಾಗೆಯೇ ಬೇರೆ ಬೇರೆ ತತ್ವದಡಿಯಲ್ಲಿ ಬರುವ ರಾಶಿಯವರು ಹಣವನ್ನು ಖರ್ಚು ಮಾಡುವ ವಿಚಾರದಲ್ಲಿ ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಯಾವ ರಾಶಿಯವರ ಸ್ವಭಾವ ಹಣದ ವಿಚಾರದಲ್ಲಿ ಹೇಗಿರುತ್ತದೆ? 

ಒಬ್ಬರಿಗಿಂತ ಮತ್ತೊಬ್ಬರು ವ್ಯಕ್ತಿತ್ವದಲ್ಲಿ ಭಿನ್ನ. ಅದಕ್ಕೇ ಹೇಳುವುದಲ್ವಾ, ಐದೂ ಬೆರಳು ಸಮಾನವಾಗಿರೋಲ್ಲ ಅಂತ. ರಾಶಿಯಲ್ಲೂ ಹಾಗೆಯೇ, ಒಂದು ರಾಶಿಯ ಗುಣ ಸ್ವಭಾವ ಬೇರೆ ರಾಶಿಗಿಂತ ಭಿನ್ನವಾಗಿರುತ್ತದೆ. ಕೆಲವು ರಾಶಿಯವರು ದುಡ್ಡಿನ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರೆ, ಮತ್ತೆ ಕೆಲವು ರಾಶಿಯವರು ಹಣವನ್ನು ಧಾರಾಳವಾಗಿ ವ್ಯಯಿಸುತ್ತಾರೆ. ಹಾಗಂಥ ಎಲ್ಲರಿಗೂ ಜೇಬಲ್ಲಿ ಭರ್ತಿ ದುಡ್ಡಿರಬೇಕೆಂಬ ಆಸೆ ಇದ್ದೇ ಇರುತ್ತದೆ. ಇದ್ದುದರಲ್ಲೇ ಕೆಲವರು ತೃಪ್ತಿಪಟ್ಟುಕೊಂಡು, ಯಾವುದಕ್ಕೂ ಕಡಿಮೆ ಮಾಡಿಕೊಳ್ಳದೇ ಪ್ಲ್ಯಾನ್ ಮಾಡಿ ಜೀವನ ನಡೆಸುತ್ತಾರೆ. ಬೇರೆ ಬೇರೆ ರಾಶಿಯ ವ್ಯಕ್ತಿಗಳು ಹಣವನ್ನು ವ್ಯಯಿಸುವುದರಲ್ಲಾಗಲಿ, ಹೂಡಿಕೆ ಮಾಡುವುದರಲ್ಲಾಗಿ ಅಥವಾ ಕೂಡಿಡುವುದರಲ್ಲಾಗಲಿ ವ್ಯತ್ಯಾಸವಿರುತ್ತದೆ.

ಕೆಲವರು ದುಡಿಮೆಯಿಂದ ಗಳಿಸಿದ್ದರಲ್ಲಿ ಸ್ವಲ್ಪ ಹಣವನ್ನು ದಾನ ಮಾಡುತ್ತಾರೆ, ಮತ್ತೆ ಕೆಲವರು ಎಷ್ಟೇ ದುಡಿದರೂ ಖರ್ಚು ಮಾಡಲು ಹಿಂದು ಮುಂದು ನೋಡುತ್ತಾರೆ. ನೋಡಿದ್ರೆ ಎಂಥದ್ದೋ ದರಿದ್ರ ಬಟ್ಟೆ ಹಾಕ್ಕೊಂಡು, ಹೊಟ್ಟೆಗೂ ಕಟ್ಕೊಂಡು ಬಾಳುತ್ತಿರುತ್ತಾರೆ. ಆದರೆ, ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ತುಂಬಿ ತುಳುಕುತ್ತಿರುತ್ತದೆ. ದುಡ್ಡಿನ ವಿಷಯದಲ್ಲಿ ಯಾವ ರಾಶಿಯವರ ಸ್ವಭಾವ ಹೇಗೆ? 12 ರಾಶಿಗಳನ್ನು 4 ಭಾಗವಾಗಿ ಅಂದರೆ ಅಗ್ನಿ (Fire), ಪೃಥ್ವಿ (Earth), ವಾಯು (Air) ಮತ್ತು ಜಲತತ್ವ (Water) ರಾಶಿಗಳಾಗಿ ವಿಂಗಡಿಸುತ್ತಾರೆ.

ಹಣ ನೀರಿನಂತೆ ಚೆಲ್ಲುವ ಅಗ್ನಿ ತತ್ವ ರಾಶಿಗಳು (Water Element)
ಮೇಷ, ಸಿಂಹ ಮತ್ತು ಧನು ರಾಶಿಗಳು ಅಗ್ನಿ ತತ್ವ ರಾಶಿಗಳು. ಈ ಅಗ್ನಿ ತತ್ವ ರಾಶಿಯವರು ದುಡ್ಡು ಖರ್ಚು ಮಾಡುವುದ್ರಲ್ಲಿ ಎತ್ತಿದ ಕೈ. ಹಾಗಂತ ಯೋಚಿಸದೇ ಖರ್ಚು ಮಾಡುವುದಿಲ್ಲ. ಪ್ಲ್ಯಾನ್ ಹಾಕ್ಕೊಂಡು ಎಲ್ಲಿ ಎಷ್ಟು ಬೇಕೋ ಅಷ್ಟನ್ನೇ ಹೂಡಿಕೆ ಮಾಡುತ್ತಾರೆ. ಹಾಗೆ ಮಾಡುವಾಗ ಎಲ್ಲಿ ಎಷ್ಟು ಹೂಡಿದರೆ, ಎಷ್ಟು ಲಾಭ ಎನ್ನುವುದನ್ನು ಕರಾರುವಕ್ಕಾಗಿಯೇ ಯೋಚಿಸಿರುತ್ತಾರೆ. ಈ ಮೂರು ರಾಶಿಯವರಿಗೆ ಅವರ ರಾಶಿತತ್ವವಾದ ಅಗ್ನಿ ಹೆಚ್ಚೆಚ್ಚು ಹಣ ಗಳಿಸಲು ಉತ್ತೇಜಿಸುತ್ತಾನೆ. ಹಣದ ವಿಚಾರವಾಗಿ ಸರಿಯಾಗಿ ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ. 

ದುಡ್ಡು ಬಚ್ಚಿಡುವುದೇ ಪೃಥ್ವಿ ತತ್ವ ರಾಶಿಯವರು (Earth Element)
ವೃಷಭ, ಕನ್ಯಾ ಮತ್ತು ಮಕರ ರಾಶಿಯವರು ಪೃಥ್ವಿ ತತ್ವಕ್ಕೆ ಸೇರುವ ರಾಶಿಗಳು. ಈ ರಾಶಿಯವರು ಹಣವನ್ನು ವ್ಯಯಿಸದೇ ಉಳಿಸುವ ಪ್ರವೃತ್ತಿಯವರು. ವೆಚ್ಚದ ಬಗ್ಗೆ ಯೋಚಿಸಿ, ಯಾವುದಕ್ಕೆ ಎಷ್ಟು ಎಂಬ ಬಗ್ಗೆ ನಿರ್ಧರಿಸಿ ಖರ್ಚು ಮಾಡುತ್ತಾರೆ. Money Managmentನಲ್ಲಿ ಇವರು ನಿಸ್ಸೀಮರು. ಭವಿಷ್ಯಕ್ಕಾಗಿ ಹಣ ಕೂಡಿಡುತ್ತಾರೆ, ತುರ್ತು ಖರ್ಚುಗಳ ನಿರ್ವಹಣೆಗೆಂದೇ ಒಂದಷ್ಟು ಹಣವನ್ನು ತೆಗೆದಿಡುವ ಸ್ವಭಾವ ಈ ರಾಶಿಗಳಿಗಿರುತ್ತದೆ. ವಸ್ತುಗಳನ್ನು ಖರೀದಿಸುವಾಗ ಅಳೆದು, ತೂಗಿ ಹಣದ ಮೌಲ್ಯಕ್ಕೆ ಸರಿ ಹೊಂದುತ್ತದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾರೆ. ಹಣವನ್ನು ಸದ್ವಿನಿಯೋಗ ಮಾಡುತ್ತಾರೆ.

ಭವಿಷ್ಯಕ್ಕಾಗಿ ಹಣ ಉಳಿಸ್ತಾರೆ ವಾಯು ತತ್ವದವರು (Air Element)
ಮಿಥುನ, ತುಲಾ ಮತ್ತು ಕುಂಭ ರಾಶಿಯವರು ವಾಯು ತತ್ವ ರಾಶಿಯವರು. ಹಣದ ವಿಚಾರದಲ್ಲಿ ಭಾವನೆ ಮತ್ತು ಹಠ ಎರಡನ್ನೂ ಒಟ್ಟಿಗೇ ತೋರಿಸುವ ಗುಣವುಳ್ಳವರು ಇವರು. ಮಿಥುನ ಮತ್ತು ಕುಂಭ ರಾಶಿಯವರು ಹಣದ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಂಗಾತಿಯನ್ನು ಇಷ್ಟಪಡುತ್ತಾರೆ. ತುಲಾ ರಾಶಿಯವರು ಅವರದೇ ನಿರ್ಧಾರದಿಂದ ದುಡ್ಡು ಖಾಲಿ ಮಾಡುವ ಪ್ರವೃತ್ತಿ ಇರುತ್ತದೆ. ಈ ತತ್ವದವರು ಕೆಲವು ಬಾರಿ ಹಣದ ಬಗ್ಗೆ ಅಜಾಗರೂಕತೆಯನ್ನು ಪ್ರದರ್ಶಿಸಿದರೂ, ಭವಿಷ್ಯದ ವಿಚಾರದಲ್ಲಿ ಹೆಚ್ಚು ಗಂಭೀರತೆಯಿಂದ ದುಡ್ಡನ್ನು ಉಳಿಸುವ ಬಗ್ಗೆ ಯೋಚಿಸುತ್ತಾರೆ. 

ಜಲ ತತ್ವ (Water Element) ರಾಶಿಯವರು ದುಡ್ಡಿನ ಬಗ್ಗೆ ಜಾಗರೂಕರು
ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಜಲ ತತ್ವಕ್ಕೆ ಸೇರುವ ರಾಶಿಗಳು. ದುಡ್ಡಿನ ವಿಚಾರದಲ್ಲಿ ಹೆಚ್ಚು ಜಾಗೃತ ಸ್ವಭಾವವನ್ನು ಹೊಂದಿರುತ್ತಾರೆ. ಈ ವಿಚಾರದಲ್ಲಿ ಅಜಾಗರೂಕತೆಯನ್ನು ಎಂದೂ ಪ್ರದರ್ಶಿಸುವುದಿಲ್ಲ. ಜಲತತ್ವವಾದ ಕಾರಣ ಕಷ್ಟಕಾಲಕ್ಕೆಂದು ಕೂಡಿಡುವ ಗುಣವನ್ನು ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರು ಹಣದ ಬಗ್ಗೆ ಒಮ್ಮೊಮ್ಮೆ ಅಜಾಗರೂಕತೆ ತೋರಿದರೂ, ಸತ್ಯಸಂಗತಿ ತಿಳಿದು ಜಾಗ್ರತರಾಗಿರುತ್ತಾರೆ. ಹಠಾತ್ ಪ್ರವೃತ್ತಿಯನ್ನು ಹೊಂದಿರುವ ವೃಶ್ಚಿಕ ರಾಶಿಯವರು ಹಣ ಗಳಿಸಿ, ಕೂಡಿಡುತ್ತಾರೆ. ಹಣದ ವಿಚಾರದಲ್ಲಿ ಮೀನ ರಾಶಿಯವರು ಅದೃಷ್ಟವಂತರು.