Chanakya Niti: ಈ 10 ವಿಚಾರಗಳನ್ನು ಜಗಜ್ಜಾಹೀರು ಮಾಡಬೇಡಿ ಅಂತಾರೆ ಆಚಾರ್ಯ ಚಾಣಕ್ಯ!

ಜಗತ್ತಿನಲ್ಲಿ ಹೇಳಿಕೊಳ್ಳುವುದಕ್ಕಿಂತ ಮೌನವಾಗಿರುವುದನ್ನು ಕಲಿಯಬೇಕು ಎನ್ನುತ್ತಾರೆ ಚಾಣಕ್ಯ. ಯಾವ ಹತ್ತು ವಿಚಾರಗಳನ್ನು ಜಗತ್ತಿನ ಮುಂದೆ ಹೇಳಿಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾನೆ ಎಂಬುದು ನಿಮಗೆ ಗೊತ್ತಿರಲಿ.

What 10 things you should not tell in front of world as per Chanakya Niti bni

ಕೆಲವು ಮಂದಿ ಖುಲ್ಲಂಖುಲ್ಲಾ. ಈ ಸೋಶಿಯಲ್‌ ಮೀಡಿಯಾ ಜಗತ್ತಿನಲ್ಲಿ ಎಲ್ಲವೂ ಜಗಜ್ಜಾಹೀರು. ಜಗತ್ತಿಗೆ ತಿಳಿಯಬೇಕಾದ್ದು, ಬೇಡದ್ದು, ತೀರಾ ಖಾಸಗಿ ಎನಿಸುವ ವಿಚಾರಗಳು, ನಾಲ್ಕು ಗೋಡೆಯೊಳಗೆ ಇರಬೇಕಾದ್ದು ಹೀಗೆ ಹತ್ತು ಹಲವು ವಿಚಾರಗಳು ಯಾವ ಕಡಿವಾಣವೂ ಇಲ್ಲದೆ ಎಲ್ಲರ ಮುಂದೆ ಬರುತ್ತವೆ. ಇಂಥ ಜಗತ್ತಿನಲ್ಲಿ ಇಂದು ಹೇಳಿಕೊಳ್ಳುವುದಕ್ಕಿಂತಲೂ ನಾವು ಮೌನವಾಗಿರುವುದನ್ನೂ ಮತ್ತೆ ಕಲಿಯಬೇಕಾಗಿದೆ. 10 ವಿಚಾರಗಳನ್ನು ನಾವು ಜಗತ್ತಿನ ಮುಂದೆ ಹೇಳಿಕೊಳ್ಳಬಾರದು ಅಂತಾರೆ ಆಚಾರ್ಯ ಚಾಣಕ್ಯ. ಬನ್ನಿ, ಅವು ಯಾವುದು ಎಂಬುದನ್ನು ನೋಡೋಣ.

1) ಗುರಿಗಳು ಹಾಗೂ ಕನಸುಗಳು ಒಂದು ಮಟ್ಟಿಗೆ ನಮ್ಮ ಖಾಸಗಿ ವಿಚಾರಗಳು. ನೀವು ದೊಡ್ಡ ಗುರಿಯನ್ನು ಹೊಂದಿದ್ದರೆ, ಅದರೆಡೆಗೆ ಪ್ರಯತ್ನ, ಆ ಗುರಿ, ಕನಸನ್ನು ನನಸು ಮಾಡಲು ಶ್ರಮ ಅತ್ಯಂತ ಅಗತ್ಯ. ಮೊದಲೇ ಇವನ್ನು ಜಗಜ್ಜಾಹೀರುಗೊಳಿಸಿದರೆ, ಕೆಲವೊಮ್ಮೆ ಸಾಮಾಜಿಕವಾಗಿ ಹಲವರ ಅಭಿಪ್ರಾಯವನ್ನು ಕೇಳಿ ನೀವು ಹಿಂದಕ್ಕೆ ಹೆಜ್ಜೆ ಇಡುವ ಸಂಭವವೂ ಇದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆಯವರಿಂದ ಇದಕ್ಕೆ ಅಡ್ಡಿ ಬರುವ ಸಂಭವವೂ ಇವೆ. ಸಂತೋಷ ಪಡುವವರ ಜೊತೆಜೊತೆಗೆ, ನಿಮ್ಮ ಬೆನ್ನ ಹಿಂದೆ ನಗುವವರೂ, ಅಸೂಯೆ ಪಡುವವರೂ ಇರುತ್ತಾರೆ. ಹೀಗಾಗಿ, ಆರಂಭವನ್ನು ಜಗಜ್ಜಾಹೀರು ಮಾಡುವುದಕ್ಕಿಂತ ಸಾಧಿಸಿ ತೋರಿಸಿ ಕೆಲಸದ ಮೂಲಕ ತೋರಿಸುವುದೇ ಉತ್ತಮ.

2) ಕೆಲವೊಮ್ಮೆ ಹೋರಾಟದ ಹಾದಿ ಮುಖ್ಯ ನಿಜ. ಆದರೆ, ಖಾಸಗಿಯಾಗಿ ಬದುಕಿನಲ್ಲಿ ಹೋರಾಡಿದ ಎಲ್ಲವನ್ನೂ ಜಗಜ್ಜಾಹೀರು ಮಾಡುವ ಅಗತ್ಯವಿಲ್ಲ. ಕಷ್ಟಪಟ್ಟು ಬಂದೆ ಎಂದು ಎಲ್ಲರ ಬಳಿ ಕಣ್ಣೀರು ಹಾಕಬೇಕಾಗಿಲ್ಲ. ಇನ್ನೊಬ್ಬರಿಂದ ಕಳಕಳಿ ಕಾಳಜಿ ಅತಿಯಾಗಿ ನಿರೀಕ್ಷೆ ಮಾಡಬಾರದು. ಸಾಧನೆಯ ಹಾದಿಯೇ ಅದನ್ನು ಲೋಕಕ್ಕೆ ಒಂದು ದಿನ ತಿಳಿಯಪಡಿಸುತ್ತದೆ. ಅಲ್ಲಿಯವರೆಗೆ ತಾಳ್ಮೆ ಅಗತ್ಯ.

3) ನಿಮ್ಮ ಹಣಕಾಸಿನ ವಿವರಗಳೂ ಕೂಡಾ ನಿಮ್ಮ ಖಾಸಗಿ ಸಂಗತಿ. ಅದನ್ನು ಎಲ್ಲರಲ್ಲಿ ಹೇಳುವ ಅಗತ್ಯವಿಲ್ಲ. ಅನಗತ್ಯ ತೊಂದರೆಗಳನ್ನೂ, ಸಮಸ್ಯೆಗಳನ್ನೂ ಎಳೆದುಹಾಕಿಕೊಳ್ಳುವ ಸಂದರ್ಭಗಳನ್ನು ನೀವೇ ಸೃಷ್ಟಿ ಮಾಡಬೇಡಿ.

4) ಹಳೆದ ಜಗಳಗಳು, ವೈಮನಸ್ಸುಗಳು, ಸೇಡು ಇತ್ಯಾದಿಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಅದನ್ನು ಸಿಕ್ಕಸಿಕ್ಕವರಲ್ಲಿ ಹೇಳುವುದೂ ಒಳ್ಳೆಯ ಅಭ್ಯಾಸವಲ್ಲ. ಇದು ಮಾನಸಿಕವಾಗಿ ನಿಮ್ಮನ್ನೂ ಹೈರಾಣು ಮಾಡುತ್ತದೆ. ಜೊತೆಗೆ, ಮತ್ತಷ್ಟು ನೆಗೆಟಿವಿಟಿಯನ್ನು ತುಂಬುತ್ತದೆ. ಅವನ್ನು ಅಲ್ಲಲ್ಲೇ ಬಿಟ್ಟು ಮುನ್ನಡೆಯುವುದನ್ನು ರೂಢಿಸಿಕೊಳ್ಳಿ.

5) ಖಾಸಗಿ ವಿಚಾರಗಳು, ಆಪ್ತರು, ಮನೆಮಂದಿಯ ಬಗ್ಗೆ ಊರಿಗೆಲ್ಲ ಹೇಳಿಕೊಂಡು ಬರುವುದು ಒಳ್ಳೆಯದಲ್ಲ. ಅವು ಖಾಸಗಿ ಸಂಗತಿಗಳು. ನಿಮ್ಮ ಆಪ್ತರಿಗೆ ಎಷ್ಟು ಬೇಕೋ ಅಷ್ಟು ಗೊತ್ತಿದ್ದರೆ ಸಾಕು. ನಾಲ್ಕು ಗೋಡೆಯ ಒಳಗಿನ ಸಮಾಚಾರಗಳು ಒಳಗೇ ಇದ್ದರೆ ಒಳ್ಳೆಯದು.

6) ನಿಮ್ಮಲ್ಲಿ ಒಳ್ಳೆಯ ಗುಣ ಇದ್ದರೆ ಒಳ್ಳೆಯದು. ನೀವು ನಾಲ್ಕು ಜನರಿಗೆ ಸಹಾಯ ಮಾಡಿದ್ದರೆ ಬಹಳ ಸಂತೋಷ. ಆದರೆ, ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ಗೊತ್ತಾಗದಿರಲಿ ಎಂಬ ಮಾತಿದೆ. ಅಂತೆಯೇ, ನೀವು ದಾನಶೂರ ಕರ್ಣ ಎಂಬಂತೆ ನಿಮ್ಮ ಗುಣಗಾನವನ್ನು, ನೀವು ಮಾಡಿದ ಉದಾತ್ತ ಕೆಲಸಗಳನ್ನು ಲೋಕಕ್ಕೆ ತಿಳಿಸುವ ಅಗತ್ಯವಿಲ್ಲ.

7) ನಿಮ್ಮ ಭಯ, ಅಸುರಕ್ಷತಾ ಭಾವ ನಿಮ್ಮಲ್ಲೇ ಇರಲಿ. ಊರಿಗೆಲ್ಲ ನಿಮ್ಮ ಅಸಹಾಯಕತೆ, ದೌರ್ಬಲ್ಯಗಳನ್ನು ಹೇಳಿಕೊಂಡು ಬರುವ ಅಗತ್ಯವಿಲ್ಲ.

8) ಹೊಗಳಿಕೆಗಳೂ ಸಹ ನಿಮ್ಮಲ್ಲೇ ಇರಲಿ. ನಿಮ್ಮನ್ನು ಯಾರಾದರೂ ಹೊಗಳಿದರೆ ಸಂತೋಷ. ಹೊಗಳಿದವರಿಗೆ ಧನ್ಯವಾದ ಹೇಳಿ. ಹೊಗಳಿಕೆ ಸಂತೋಷ ಖಂಡಿತವಾಗಿಯೂ ತರುತ್ತದೆ. ಆದರೆ, ಅದನ್ನು ಎಲ್ಲರಿಗೂ ಹೇಳಿಕೊಂಡು ಬರುವ ಅಗತ್ಯವಿಲ್ಲ.

9) ಕೌಟುಂಬಿಕ ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರ ಜೀವನದಲ್ಲಿ, ಇಂತಹ ಸಮಸ್ಯೆಗಳು ಇದ್ದಿದ್ದೇ. ಹಾಗಂತ ಅದನ್ನು ಠಾಂ ಠಾಂ ಮಾಡುವ ಅಗತ್ಯವಿಲ್ಲ. ಅವೂ ಕೂಡಾ ನಾಲ್ಕು ಗೋಡೆಯ ಒಳಗಿರಬೇಕಾದ ವಿಚಾರಗಳು. ನಿಮ್ಮ ಕುಟುಂಬದ ಗೌರವ ಕಾಪಾಡಲು ನೀವು ಬಾಯಿ ಮುಚ್ಚಿಕೊಂಡಿರುವುದು ಒಳ್ಳೆಯದು.

Chanakya Niti: ಹೆಣ್ಣೇ, ನಿನ್ನ ಗಂಡನ ಮನಸ್ಸಿನಲ್ಲೇನಿದೆ ಅಂತ ತಿಳಿದಿರಲಿ ಅಂತಾನೆ ಚಾಣಕ್ಯ!

10) ನಿಮ್ಮ ಕೆಲವು ಅಭ್ಯಾಸಗಳು, ನಿಮ್ಮನ್ನು ನೀವು ಕಾಳಜಿ ಮಾಡುವ ನಿತ್ಯದ ವಿಚಾರಗಳು ನಿಮ್ಮಲ್ಲೇ ಇರುವುದು ಒಳ್ಳೆಯದು. ಇವು ಅತ್ಯಂತ ಖಾಸಗಿ ವಿಚಾರಗಳು. ಇವುಗಳು ಮತ್ತೊಬ್ಬರಿಗೆ ತಿಳಿದರೆ ಅವರು ನಿಮ್ಮನ್ನು ಜಡ್ಜ್‌ ಮಾಡುವ ಅಪಾಯವೂ ಇದೆ. ಹಾಗಾಗಿ ನಿಮ್ಮ ಖಾಸಗಿ ಅಂತರವನ್ನು ಸದಾ ಕಾಯ್ದುಕೊಳ್ಳಿ. ನಿಮ್ಮ ಸಮಯ ನಿಮಗೆ ನೀಡಿ.

ಇವಿಷ್ಟು ಹತ್ತು ವಿಚಾರಗಳನ್ನು ನೀವು ಬದುಕಿನಲ್ಲಿ ಪಾಲಿಸಿದರೆ, ನೆಮ್ಮದಿ ನಿಮ್ಮನ್ನು ಬಿಡದು. ಬೇರೆಯವರನ್ನು ಗೌರವಿಸಿ, ನೀವೂ ಗೌರವಯುತವಾಗಿ ಬದುಕುವುದರಲ್ಲಿ ಸಂಶಯವಿಲ್ಲ.

Chanakya Niti: ಮಹಾ ಚಾಣಾಕ್ಷ ಆಚಾರ್ಯ ಚಾಣಕ್ಯ ಸತ್ತದ್ದು ಹೇಗೆ?
 

Latest Videos
Follow Us:
Download App:
  • android
  • ios