ಶುಭಕೃತ್ ನಾಮ ಸಂವತ್ಸರ (Shubhakruth Nama Samvatsara) ಏಪ್ರಿಲ್ 2, 2022ರಿಂದ ಆರಂಭವಾಗುತ್ತದೆ. ಪ್ರತಿ ಸಂವತ್ಸರ ಬದಲಾವಣೆಯಲ್ಲೂ ದ್ವಾದಶ ರಾಶಿಗಳ ಫಲ ಏನು? ಯುಗಾದಿ ಭವಿಷ್ಯ 2022ರಲ್ಲಿ ಖ್ಯಾತ ಜ್ಯೋತಿಷಿ ಶ್ರೀಕಂಠ ಶಾಸ್ತ್ರಿ ಅವರಿಂದ ದ್ವಾದಶ ರಾಶಿಗಳ ಭವಿಷ್ಯವೇನು ತಿಳಿಯೋಣ.

ಈ ಸಂವತ್ಸರದಲ್ಲಿ ಹನ್ನೆರಡೂ ರಾಶಿಗಳ ಫಲಾಫಲ ಹೇಗಿರಲಿವೆ..?

ಮೇಷ - ವರ್ಷದ ಆದಿಯಲ್ಲಾಗುವ ಗುರು ಪರಿವರ್ತನೆಯಿಂದ ಕೊಂಚ ವ್ಯಯ ಉಂಟಾಗಬಹುದು. ಹೂಡಿಕೆ ಚಿಂತನೆಗಳು ಮೊಳೆಯಬಹುದು. ಗುರು ಸ್ಥಾನದಲ್ಲಿರುವವರು ದೂರಾಗುವ ಸಾಧ್ಯತೆ ಇದೆ. ವಾಗ್ವಾದ-ಘರ್ಷಣೆಗಳಿಂದ ಹೈರಾಣಾಗುವ ಸಾಧ್ಯತೆ ಇದೆ. ರಾಹುವು ಜನ್ಮ ಸ್ಥಾನವನ್ನು ಪ್ರವೇಶಿಸುವುದರಿಂದ ಸಂಚಾರ ಹೆಚ್ಚಾಗಲಿದೆ, ಮುಖ ಭಾಗದಲ್ಲಿ ಕಲೆ-ಮಚ್ಚೆಗಳಂಥ ಸಮಸ್ಯೆಗಳುಂಟಾಗಬಹುದು, ತಲೆ ಭಾಗದಲ್ಲಿ ನೀವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಪ್ತಮದ ಕೇತುವಿನಿಂದ ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ, ಅನುಮಾನಗಳಿಂದ ಭಾವನೆಗಳು ವ್ಯತ್ಯಾಸವಾಗಲಿವೆ. ವಿದ್ಯಾರ್ಥಿಗಳೂ ಕೂಡ ಚಿಂತಾಕ್ರಾಂತವಾಗಿರುವ ಸಾಧ್ಯತೆ ಹೆಚ್ಚು. ಇಷ್ಟೆಲ್ಲಾ ಬೇವಿನಂಥ ಸಮಸ್ಯೆಗಳ ಮಧ್ಯೆ ಈ ವರ್ಷದಲ್ಲಾಗುವ ಶನಿ ಪರಿವರ್ತನೆಯಿಂದ ಕೊಂಚ ಬೆಲ್ಲದ ಫಲವನ್ನೂ ಕಾಣುತ್ತೀರಿ ಎಂಬುದರಲ್ಲಿ ಸಂಶಯವಿಲ್ಲ. ಶನೈಶ್ಚರ ಕುಂಭ ರಾಶಿಯನ್ನು ಪ್ರವೇಶ ಮಾಡಿದಾಗ ‘‘ಸ್ಥಿರಸಂಪದಾಯಸಹಿತ: ಶೂರೋ ವಿರೋಗೋ ಧನೀ’’ ಎಂಬ ಶಾಸ್ತ್ರವಾಣಿಯಂತೆ ಸ್ಥಿರ ಸಂಪತ್ತನ್ನೂ, ಶೂರತ್ವವನ್ನೂ, ಧನಿಕತ್ವವನ್ನೂ ದೀರ್ಘಾಯಸ್ಸನ್ನೂ ತಂದುಕೊಡಲಿದ್ದಾನೆ. ಅಷ್ಟೇ ಅಲ್ಲದೆ ಕಬ್ಭಿಣ, ಸೀಮೆಂಟ್, ಮರಳು, ಇಟ್ಟಿಗೆಯ ಜೊತೆ ಸಿವಿಲ್, ಹಾಗೂ ಶ್ರಮ ದಾಯಕ ಜೀವಿಗಳಿಗೆ ಉತ್ಕೃಷ್ಟ ಫಲಗಳಿದ್ದಾವೆ. ರಾಜಕಾರಣಿಗಳಿಗೆ ಲಾಭಫಲವಿದೆ. ಉಳಿದಂತೆ ಜನ್ಮ ರಾಶಿಯ ಅಧಿಪತಿ ಕುಜ ಸುಸ್ಥಾನಗಳಿದ್ದಾಗ ಧೈರ್ಯ, ಸಾಹಸ, ಜಯಗಳನ್ನು ತಂದುಕೊಂಡುತ್ತಾನೆ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಪೆಟ್ರೋಲಿಯಂ, ಹಾಗೂ ತತ್ಸಂಬಂಧಿ ಕಾರ್ಯದಲ್ಲಿರುವವರಿಗೆ ಈವರ್ಷ ವೃತ್ತಿಯಲ್ಲಿ ಲಾಭ, ಬಡ್ತಿ ಇತ್ಯಾದಿ ಶುಭಫಲಗಳನ್ನು ಕಾಣುವುದು ದಿಟ. ಕೋರ್ಟ್-ಕಚೇರಿ ಕೆಲಸಗಳಲ್ಲೂ ಜಯವಿದೆ. ಅಂತೂ ಶುಭಕೃತ್ ಸಂವತ್ಸರ ನಿಮ್ಮ ಪಾಲಿಗೆ ಬೇವು-ಬೆಲ್ಲದ ಹಾಗೆ ಮಿಶ್ರಫಲ ವರ್ಷವಾಗಿರಲಿದೆ.

ಪರಿಹಾರ - ಗುರು ಪ್ರಾರ್ಥನೆ, ಕಡಲೆ-ಬೆಲ್ಲ ದಾನ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ
ಶುಭ ರತ್ನ - ಹವಳ
ಶುಭ ಸಂಖ್ಯೆ - 10
ಶುಭ ವರ್ಣ - ಕೆಂಪು-ಹಳದಿ
=====================

ವೃಷಭ - ವರ್ಷದ ಆದಿಯಲ್ಲಾಗುವ ಗ್ರಹಗಳ ಸ್ಥಾನ ಪಲ್ಲಟದಿಂದ ನೀವು ಸ್ವರ್ಗಫಲವನ್ನು ಅನುಭವಿಸುತ್ತೀರಿ. ಈ ವರ್ಷ ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಲಾಭ ಸ್ಥಾನವನ್ನು ಪ್ರವೇಶಿಸುವ ಗುರುವು ಲಾಭ-ಬಡ್ತಿ, ಧನ ಸಮೃದ್ಧಿಯಂಥ ಫಲಗಳ ಜೊತೆಗೆ ಬರಲಿರುವ ಗುರುಬಲ ವರ್ಷ ಪೂರ್ತಿ ಮಂಗಳಕಾರ್ಯಗಳಿಗೆ ಶುಭ ಸೂಚಕನಾಗಿರುತ್ತಾನೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಹಣಕಾಸಿನ ವ್ಯವಹಾರ-ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರಿಗೆ ಲಾಭ ಸಮೃದ್ಧಿ, ಇನ್ನು ವ್ಯಯ ಸ್ಥಾನವನ್ನು ಪ್ರವೇಶಿಸುವ ರಾಹುವು ಬಂದ ಹಣವನ್ನು ಹಾಗೇಯೇ ಕರಗಿಸುವ ಸಾಧ್ಯತೆಯೂ ಇದೆ. ಮಾಯೆಯ ರೀತಿಯಲ್ಲಿ ಧನ ವ್ಯಯವಾದೀತು. ಷಷ್ಠ ಸ್ಥಾನ ಪ್ರವೇಶಿಸುವ ಕೇತುವಿನಿಂದ ದೃಢಕಾಯ ಇರಲಿದೆ, ಆದರೆ ಶತ್ರುಗಳ ಕಾಟ ಹೆಚ್ಚಾಗಲಿದೆ, ಹತ್ತಿರದವರೇ ಹಗೆ ಸಾಧಿಸುವ ಸಾಧ್ಯತೆ. ಎಚ್ಚರವಾಗಿರಬೇಕು. ಇನ್ನು ಭಾಗ್ಯ ಸ್ಥಾನದ ಶನೈಶ್ಚರನ ಪರಿವರ್ತನೆಯಿಂದ ಉದ್ಯೋಗದಲ್ಲಿ ಬದಲಾವಣೆ, ಹೊಸ ಅವಕಾಶಗಳ ಸಾಧ್ಯತೆಯೂ ಹೆಚ್ಚಾಗಿದೆ. ಕೆಲಸದ ಒತ್ತಡದಿಂದ ಹೈರಾಣಾಗುತ್ತೀರಿ, ಆದರೆ ಶ್ರಮಿಕರಿಗೆ ನಿಸ್ಸಂಶಯವಾಗಿ ಶನೈಶ್ಚರನಿಂದ ಶುಭಲಾಭವಿದ್ದೇ ಇದೆ. ಕಲಾ ರಂಗದಲ್ಲಿರುವವರಿಗೆ ವಿಶೇಷ ಸ್ಥಾನ-ಮಾನಗಳು, ಗೌರವಗಳು ಸಮರ್ಪಣೆಯಾಗಲಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಕೊಂಚ ಅಸಮಧಾನದ ಫಲಗಳಿದ್ದಾವೆ. ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಕೊಂಚ ಶುಭಫಲ ಇರಲಿದೆ. ಹಾಲು-ಹೈನು- ಕೋಳಿ-ಕುರಿಯಂಥ ಕ್ಷೇತ್ರದಲ್ಲಿರುವವರಿಗೆ ಲಾಭವಿದೆ. ರಾಜ ಸನ್ಮಾನಗಳು ದೊರೆಯುವ ಸಾಧ್ಯತೆ ಇದೆ. ಶುಭಕೃತ್ ಸಂವತ್ಸರ ನಿಮ್ಮ ಪಾಲಿಗೆ ಶುಭಫಲವನ್ನೇ ಅಧಿಕವಾಗಿ ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಪರಿಹಾರ - ನಾಗ ಪ್ರಾರ್ಥನೆ, ನಾಗ ಕ್ಷೇತ್ರಗಳ ದರ್ಶನ ಮಾಡಿ
ಶುಭ ರತ್ನ - ಮರಕತ-ನೀಲ
ಶುಭ ಸಂಖ್ಯೆ - 9
ಶುಭ ವರ್ಣ - ಬಿಳಿ-ನೀಲಿ
====================

ಮಿಥುನ - ವರ್ಷಾದಿಯಲ್ಲಿ ಆಗುವ ಗ್ರಹಗಳ ಸ್ಥಾನ ಪಲ್ಲಟದಿಂದ ಅತ್ಯಂತ ಶುಭಫಲವನ್ನೇ ಹೊಂದುತ್ತೀರಿ. ಗುರು ಪರಿವರ್ತನೆಯಿಂದ ‘‘ಸ್ವಾಚಾರಸ್ಸುಯಶಾ ನಭಸಿ ಅತೀಧನಿ’’ ಎಂಬ ಶಾಸ್ತ್ರವಾಕ್ಯದಂತೆ ಭಯರಹಿತತೆಯೂ, ಧನಲಾಭವೂ ಉಂಟಾಗಲಿದೆ. ವರ್ಷಾರಂಭದಲ್ಲಿ ವಿವಾಹಾದಿ ಫಲಗಳಿದ್ದಾವೆ. ಉದ್ಯೋಗದಲ್ಲಿ ಮುಂಬಡ್ತಿ ದೊರೆಯಲಿದೆ, ಧನ ಸ್ಥಾನಕ್ಕೆ ಗುರು ದೃಷ್ಟಿ ಇರುವುದರಿಂದ ಹಣಕಾಸಿಗೆ ಕೊರತೆಯಾಗದು. ರಾಹು ಪರಿವರ್ತನೆಯಿಂದ ವಿದೇಶ ವ್ಯವಹಾರಗಳಲ್ಲಿ ಲಾಭವುಂಟಾಗಲಿದೆ, ಆದರೆ ಕಿವಿಗಳಿಗೆ ಸಂಬಂಧಿಸಿದಂತೆ ಕೊಂಚ ತೊಡಕುಗಳುಂಟಾಗಬಹುದು, ಪಂಚಮದ ಕೇತು ಕೊಂಚ ಉದರ ಸಂಬಂಧಿ ತೊಂದರೆಗಳನ್ನುಂಟುಮಾಡುವ ಸಾಧ್ಯತೆ ಇರಲಿದೆ, ಉನ್ನತ ಶಿಕ್ಷಣದಲ್ಲಿ ತೊಡಕುಗಳು, ಉತ್ತಮ ಮಾರ್ಗದರ್ಶನ ಸಿಗದೆಹೋಗಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚರವಾಗಿರಿ, ತಂದೆ-ಮಕ್ಕಳ ಮಧ್ಯೆ ಅಸಮಧಾನಗಳುಂಟಾಗಬಹುದು. ಶನೈಶ್ಚರನಿಂದ ವರ್ಷಾದಿಯಲ್ಲಿ ಕಾಲಿನ ಸಂಬಂಧಿ ತೊಡಕುಗಳುಂಟಾಗುವ ಸಾಧ್ಯತೆ ಇರಲಿದೆ, ವರ್ಷದ ಮಧ್ಯ ಭಾಗದಿಂದ ಉತ್ತಮೋತ್ತಮ ಫಲಗಳನ್ನು ಹೊಂದಲಿದ್ದೀರಿ. ಕೆಲವೊಮ್ಮೆ ಮನಸ್ಸು ವೈರಾಗ್ಯದ ಕಡೆ ಹೊರಳುತ್ತದೆ, ಜೀವನದ ಗುರು, ಗಮ್ಯ ಇವುಗಳ ಕುರಿತಾದ ಚಿಂತನೆ ಕಾಡಲಿದೆ. ಆದರೆ ಸಪ್ತಮಾಧಿಪತಿ ಗುರುವು ಚತುರ್ಥ ಸ್ಥಾನವನ್ನು ವೀಕ್ಷಿಸುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರಲಿದೆ, ಪರಸ್ಪರ ಸಹಕಾರ-ಅನುರಾಗಗಳಿಂದ ಕೂಡಿರುತ್ತದೆ. ಗೃಹ ಸೌಖ್ಯವನ್ನು ಕಾಣಲಿದ್ದೀರಿ. ಗೃಹ ನಿರ್ಮಾಣದಂಥ ಶುಭಫಲವನ್ನೂ ಕಾಣುವ ಸಾಧ್ಯತೆ ಇದೆ. ಏತನ್ಮಧ್ಯೆ ಕೋರ್ಟು-ಕಚೇರಿಗಳಲ್ಲಿ ಗೆಲುವು ಸಿಗಲಿದೆ. ಧಾರ್ಮಿಕ ಕ್ಷೇತ್ರದಲ್ಲಿರುವವರಿಗೂ ಸತ್ಫಲಗಳಿದ್ದಾವೆ.

ಪರಿಹಾರ - ಗಣಪತಿ ಪ್ರಾರ್ಥನೆ, ವಿಷ್ಣು ಕ್ಷೇತ್ರ ದರ್ಶನ ಮಾಡಿ
ಶುಭ ರತ್ನ - ಪಚ್ಚೆ
ಶುಭ ಸಂಖ್ಯೆ - 05
ಶುಭ ವರ್ಣ - ಹಸಿರು, ನೀಲಿ, ಬಿಳಿ

==========================

Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ

ಕರ್ಕಟಕ - ವರ್ಷಾದಿಯಲ್ಲಾಗುವ ಗುರು ಪರಿವರ್ತನೆ ನಿಮ್ಮ ಪಾಲಿಗೆ ಸಾಕ್ಷಾತ್ ಬಂಗಾರ ಫಲವನ್ನೇ ತರುತ್ತಾನೆ. ಮನೆಯಲ್ಲಿ ವಿವಾಹಾದಿ ಶುಭ ಕಾರ್ಯಗಳು ನಡೆಯಲಿವೆ, ಮನಸ್ಸಿನ ಭಾರ ಕಡಿಮೆಯಾಗಲಿದೆ. ‘‘ಅರ್ಥಸುತವಾನ್ ಸ್ಯಾದ್ಧರ್ಮಕಾರ್ಯೋತ್ಸುಕ: ’’ ಎಂಬ ಮಾತಿನಂತೆ ಕೀರ್ತಿಯನ್ನೂ, ಹಣವನ್ನೂ, ಲಾಭವನ್ನೂ, ಧರ್ಮ ಕಾರ್ಯಗಳಲ್ಲಿ ಆಸಕ್ತಿಯನ್ನೂ ಉಂಟುಮಾಡುತ್ತಾನೆ. ತೀರ್ಥಕ್ಷೇತ್ರಗಳ ದರ್ಶನ ಸಾಧ್ಯವಾಗುತ್ತದೆ. ರಾಹುವಿನ ಬದಲಾವಣೆಯಿಂದ ನಿರ್ಭಯತೆ ಉಂಟಾಗುತ್ತದೆ, ಆದರೆ ಬೇರೆಯವರ ಕೆಲಸಗಳಿಗೆ ನಿಮ್ಮ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತದೆ. ಚತುರ್ಥದ ಕೇತು ಭೂ ಸಂಬಂಧಿ ವ್ಯವಹಾರಗಳಲ್ಲಿ ತೊಡಕುಂಟುಮಾಡಬಹುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಪ್ರಯಾಣದಲ್ಲಿ ತೊಂದರೆ ತರಬಹುದು. ವಿದ್ಯಾರ್ಥಿಗಳು ಸಹವಾಸ ದೋಷದಿಂದ ಹಾದಿತಪ್ಪುವ ಸಾಧ್ಯತೆ ಇದೆ. ಶನೈಶ್ಚರ ಕುಂಭರಾಶಿಯನ್ನು ಪ್ರವೇಶ ಮಾಡಿದಮೇಲೆ ಕಾಲಿನ ಬಾಧೆ ಉಂಟಾಗುವ ಸಾಧ್ಯತೆ ಇದೆ. ಅನ್ಯರ ಸಲುವಾಗಿ ಧನವ್ಯಯ ಉಂಟಾಗಲಿದೆ, ಹಿತಶತ್ರುಗಳ ಕಾಟ ಶುರುವಾಗಲಿದೆ. ಆರೋಗ್ಯದಲ್ಲಿ ತೊಡಕುಂಟಾಗಲಿದೆ. ಮರ-ಮಟ್ಟು-ಮರಳು-ಸೀಮೆಂಟ್-ಕಬ್ಬಿಣದಂಥ ಶನಿ ಸಂಬಂಧಿ ವ್ಯವಹಾರಗಳಲ್ಲಿ ನಷ್ಟಫಲವಿದೆ. ಕಾರ್ಯ ಸ್ಥಳದಲ್ಲಿ ತುಂಬ ಜಾಗ್ರತರಾಗಿರಬೇಕು. ವಾತ ಸಂಬಂಧಿ ತೊಂದರೆಗಳುಂಟಾಗಬಹುದು. ಜನವರಿ ನಂತರ ಮತ್ತೆ ಕೊಂಚ ಸಮಾಧಾನದ ಫಲಗಳು ಉಂಟಾಗಲಿವೆ. ಹೀಗಾಗಿ ಸಹನೆ ವಜ್ರದ ಕವಚ ಮಂಕುತಿಮ್ಮ ಎಂಬ ಮಾತು ಮರೆಯದಿರಿ. ಈ ಶುಭಕೃತ್ ಸಂವತ್ಸರದಲ್ಲಿ ಗುರುಬಲವೇ ಶ್ರೀರಕ್ಷೆಯಾಗಿರುವುದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

ಪರಿಹಾರ - ಶನೈಶ್ಚರ ಪ್ರಾರ್ಥನೆ. ಸಾಧ್ಯವಾದರೆ ತಿರುನಲ್ಲಾರ್ ಕ್ಷೇತ್ರ ದರ್ಶನ ಮಾಡಿ
ಶುಭ ರತ್ನ - ಮುತ್ತು, ಪುಷ್ಯರಾಗ
ಶುಭ ಸಂಖ್ಯೆ - 7
ಶುಭ ವರ್ಣ - ಬಿಳಿ, ಕೆಂಪು

========================

ಸಿಂಹ - ಶುಭಕೃತ್ ಸಂವತ್ಸರ ನಿಮ್ಮ ಪಾಲಿಗೆ ಕೊಂಚ ಬೇವಿನ ಫಲವನ್ನು ನೀಡುತ್ತದೆ. ಬೇವು ಕಹಿಯಾದರೂ ಆರೋಗ್ಯವರ್ಧಕ ಎಂಬ ಮಾತು ನೆನಪಿಟ್ಟುಕೊಳ್ಳಬೇಕು. ವಾರ್ಷಾದಿಯಲ್ಲೇ ಗುರುಬಲ ಸರಿದುಹೋಗುವುದರ ಜೊತೆಗೆ ಅಸಮಧಾನದ ಫಲಗಳು ಶುರುವಾಗಲಿವೆ. ಮುಖ್ಯವಾಗಿ ಆರೋಗ್ಯ ಬಾಧೆಗೆ ತುತ್ತಾಗುತ್ತೀರಿ. ಅತಿಯಾದ ಕೆಲಸದ ಒತ್ತಡ, ಮಾನಸಿಕ ಅಸಮಧಾನಗಳಂಥ ಫಲಗಳಿದ್ದಾವೆ. ರಾಹುವಿನ ಸ್ಥಾನಪಲ್ಲಟದಿಂದ ತಂದೆ-ಮಕ್ಕಳಲ್ಲಿ ಅಸಮಧಾನ, ಏಕಾಗ್ರತೆಯಲ್ಲಿ ಭಂಗ, ಧನವ್ಯಯವನ್ನುಂಟುಮಾಡುತ್ತಾನೆ. ತೃತೀಯದ ಕೇತು ಸಹೋದರರಲ್ಲಿ ಅಸಮಧಾನ ಫಲವನ್ನು ತರಲಿದ್ದಾನೆ. ಶನೈಶ್ಚರ ಪರಿವರ್ತನೆ ನಿಮ್ಮ ಪಾಲಿಗೆ ದಾಂಪತ್ಯ ಜೀವನದಲ್ಲಿ ಅಸಮಧಾನವನ್ನು ತರಲಿದ್ದಾನೆ. ಆದರೆ ಶ್ರಮ ಜೀವಿಗಳಿಗೆ, ಕಬ್ಬಿಣ, ಮಣ್ಣು, ಮರಳು ಇಂಥಾ ಕೆಲಸಗಳಲ್ಲಿರುವವರಿಗೆ ಉತ್ತಮ ಫಲವನ್ನು ಕೊಡಲಿದ್ದಾನೆ. ವರ್ಷಾದಿಯಲ್ಲಿ ರವಿ ಬಲ ಇರುವುದರಿಂದ ಸ್ವಲ್ಪಕಾಲ ದೈವಾನುಕೂಲದಿಂದ ಶುಭಫಲವನ್ನು ಹೊಂದುತ್ತೀರಿ, ರವಿ ಶುಭ ಸ್ಥಾನಗಳಲ್ಲಿ ಸಂಚರಿಸುವಾಗ ನೆಮ್ಮದಿಯ ಜೀವನಕಾಣುತ್ತೀರಿ. ಹೆದರುವ ಅವಶ್ಯಕತೆ ಇಲ್ಲ. ಬುದ್ಧಿ ಚಂಲತೆಯಿಂದ ವ್ಯವಹಾರಗಳಲ್ಲಿ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ, ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಆಸ್ತಿ ಪಾಸ್ತಿ ವಿಚಾರಗಳಲ್ಲಿ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಜಕಾರಣಿಗಳು ಎಚ್ಚರದಿಂದಿರಬೇಕು. ಅಪಖ್ಯಾತಿಗಳುಂಟಾಗುವ ಸಾಧ್ಯತೆಯೂ ಇದೆ. ಇಷ್ಟೆಲ್ಲಾ ಬೇವಿನ ಫಲದ ಜೊತೆ ಬೆಲ್ಲವೇನು ಎಂದರೆ ರವಿ ಸಂಚಾರದ ಕಾಲ. ರವಿ ಆತ್ಮಕಾರಕ ಗ್ರಹ. ಹೀಗಾಗಿ ಏನೇ ಸಮಸ್ಯೆಗಳಿದ್ದರೂ ಆತ್ಮಬಲವೆಂಬ ಊರುಗೋಲಮೇಲೆ ನೀವು ಜೀವನಕಟ್ಟಿಕೊಳ್ಳುತ್ತೀರಿ. ಮತ್ತೂ ರವಿ ತನ್ನ ಮಿತ್ರ ರಾಶಿಗಳಾದ ಮೇಷ, ಮಿಥುನ, ಕರ್ಕಟಕ, ಸಿಂಹ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಗಳಲ್ಲಿ ಸಂಚರಿಸುವಾಗ ನಿಸ್ಸಂಶಯವಾಗಿ ಶುಭಫಲ ತರಲಿದ್ದಾನೆ ಆತಂಕ ಬೇಡ.

ಪರಿಹಾರ - ಈಶ್ವರನಿಗೆ ಭಸ್ಮಾರ್ಚನೆ ಮಾಡಿಸಿ, ಧರ್ಮಸ್ಥಳ ಮಂಜುನಾಥ ದರ್ಶನ ಮಾಡಿ
ಶುಭ ರತ್ನ - ಮಾಣಿಕ್ಯ, ಹವಳ
ಶುಭ ಸಂಖ್ಯೆ - 04

==================

ಕನ್ಯಾ - ಶುಭಕೃತ್ ಸಂವತ್ಸರ ನಿಮ್ಮ ಪಾಲಿಗೆ ಬೆಲ್ಲದ ಹೋಳಿಗೆಯನ್ನೇ ಉಣಬಡಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ವರ್ಷಾದಿಯಲ್ಲಿ ಬರುವ ಗುರುಬಲ ಇಡೀ ವರ್ಷದುದ್ದಕ್ಕೂ ನಿಮ್ಮನ್ನು ಸಮಾಧಾನದಿಂದಿಟ್ಟಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ, ವ್ಯಾಪಾರ ವಹಿವಾಟುಗಳು ಚಿಗುರಿಕೊಳ್ಳಲಿವೆ. ವಿದೇಶ ಪ್ರಯಾಣ-ವಹಿವಾಟಿನಲ್ಲಿ ಅನುಕೂಲ ಫಲ, ಭೂಮಿ ಸಂಬಂಧಿ ಕೆಲಸಗಳಲ್ಲಿ ಜಯ, ಸಿಹಿ ಪದಾರ್ಥಗಳಿಂದ ಲಾಭ, ಕೋರ್ಟ್ ಕಚೇರಿಗಳಲ್ಲಿ ಜಯ ಕಾಣಲಿದ್ದೀರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ. ಆದರೆ ಅಷ್ಟಮಕ್ಕೆ ರಾಹು ಪ್ರವೇಶವಾದಾಗ ಆರೋಗ್ಯದಲ್ಲಿ ತೊಂದರೆ ಉಂಟುಮಾಡುತ್ತಾನೆ, ವಾಗ್ವಾದ - ಸೋಲುಗಳುಂಟಾಗುವ ಸಾಧ್ಯತೆ ಇರುತ್ತದೆ. ಆಸ್ಪತ್ರೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಚ್ಚರವಾಗಿರಿ. ಮನೆಯಲ್ಲಿ ಕಲಹ-ಘರ್ಷಣೆಗಳುಂಟಾಗುತ್ತವೆ. ವಾತ ಸಂಬಂಧಿ-ನರ ಸಂಬಂಧಿ ತೊಂದರೆಗಳಾಗಬಹುದು. ದ್ವಿತಿಯದ ಕೇತುವು ಜಿಹ್ವಾ ಚಾಪಲ್ಯದಿಂದ ಅತಿಯಾಗಿ ತಿನ್ನುವ ಆಸೆ ಹುಟ್ಟಿಸುತ್ತಾನೆ. ವಿದ್ಯಾರ್ಥಿಗಳು ಕಠಿಣ ಮಾತುಗಳಿಂದ ಕೆಟ್ಟವರಾಗುತ್ತಾರೆ. ಹಣಕಾಸಿಗೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇರುತ್ತದೆ. ಆದರೆ ಶುಕ್ರ ಶುಭ ಸ್ಥಾನಗಳಲ್ಲಿ ಸಂಚರಿಸುವಾಗ ಭಯಪಡುವ ಅಗತ್ಯವಿಲ್ಲ. ಶನೈಶ್ಚರ ನಿಮ್ಮ ಪಾಲಿಗೆ ಪ್ರಾರಂಭದಲ್ಲಿ ಕೊಂಚ ಭಯವನ್ನು ಉಂಟುಮಾಡಿದರೂ ಪೀಡಕನಾಗಲಾರ. ಕೃಷಿಕರಿಗೆ ಸಮಾಧಾನದ ಫಲಗಳಿದ್ದಾವೆ. ಐ.ಎ.ಎಸ್, ಕೆ.ಎ.ಎಸ್ ನಂಥ ಆಡಳಿತ ಕಾರ್ಯಸ್ಥಳದಲ್ಲಿರುವವರಿಗೆ ಅನುಕೂಲದ ಫಲಗಳಿದ್ದಾವೆ. ಅಂತೂ ಸಂತೋಷ ಫಲಗಳಲ್ಲಿ ತೇಲಿಹೋಗುವಾಗ ಒಂದೆರಡು ಬಾರಿ ಸುಳಿಯೂ ಸಿಗಬುದು ಎಚ್ಚರವಾಗಿರಿ.
ಪರಿಹಾರ - ದುರ್ಗಾ ಕವಚ ಪಠಿಸಿ, ವಿಷ್ಣು ಸಹಸ್ರನಾಮ ಪಠಿಸಿ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ
ಶುಭ ರತ್ನ - ಪಚ್ಚೆ, ಮಾಣಿಕ್ಯ
ಶುಭ ಸಂಖ್ಯೆ - 5
ಶುಭ ವರ್ಣ - ಹಸಿರು-ಬಿಳಿ-ನೀಲಿ

==================

ತುಲಾ - ಶುಭಕೃತ್ ಸಂವತ್ಸರ ನಿಮ್ಮ ಪಾಲಿಗೆ ಕೊಂಚ ಸಪ್ಪೆಯಾಗಿರುತ್ತದೆ. ಪ್ರಾರಂಭದಲ್ಲಿ ಅನುಕೂಲ ವಾತಾವರಣ ಇರಲಿದೆ. ಗುರುಬಲ ಕಳೆದುಹೋಗುವುದರ ಜೊತೆಗೆ ಧೈರ್ಯವನ್ನೂ ಕೊಂಡುಹೋಗುತ್ತದೆ. ಆರೋಗ್ಯದ ಕಡೆ ಎಚ್ಚರವಹಿಸಬೇಕಾಗುತ್ತದೆ. ಶಗರ್-ಬಿಪಿ ಯಂಥ ಸಣ್ಣಪುಟ್ಟವೂ ಕೂಡ ತುಂಬ ಯಾತನೆಕೊಡುವ ಸಾಧ್ಯತೆ ಇದೆ. ತಂದೆಯ ಬಂಧುಗಳ ಜೊತೆ ವಿರೋಧ ಸಾಧ್ಯತೆ, ಆದರೆ ಗೆಲವಿರಲಿದೆ. ಕಳ್ಳಕಾಕರ ಭಯ ಉಂಟಾಗಲಿದೆ. ಸಂದರ್ಭನಿಮ್ಮನ್ನು ಸಾಲದ ಸುಳಿಗೆ ಸಿಲುಕಿಸಬಹುದು ಎಚ್ಚರವಾಗಿರಿ. ಸಪ್ತಮ ಸ್ಥಾನಕ್ಕೆ ರಾಹುವಿನ ಪ್ರವೇಶವಾದಾಗ ದಾಂಪತ್ಯದಲ್ಲಿ ಅಸಮಧಾನಗಳುಂಟಾಗುತ್ತವೆ, ವ್ಯಾಪಾರದಲ್ಲಿ ನಂಬಿಸಿ ಮೋಸಹೋಗುವ ಸಾಧ್ಯತೆ ಇದೆ. ಸ್ನೇಹ ಮುರಿದುಬೀಳುವ ಸಾಧ್ಯತೆ ಇದೆ. ದೂರ ಪ್ರಯಾಣಗಳಲ್ಲಿ ತೊಂದರೆ, ವಿಳಂಬದಂಥ ಫಲಗಳಿದ್ದಾವೆ. ಶನೈಶ್ಚರ ಪರಿವರ್ತೆನೆಯಿಂದ ಗೃಹ ಸಂಬಂಧಿ ಕೆಲಸಗಳಲ್ಲಿ ಅತಿ ವ್ಯಯ ಉಂಟಾಗಬಹುದು. ಲೋನ್-ಮಾಡಿದ ಸಾಲ ಇವುಗಳು ಹೊರೆ ಎನ್ನಿಸಬಹುದು. ಮಕ್ಕಳು ತಿರುಗಿಬೀಳುವ ಸಾಧ್ಯತೆ ಇದೆ. ಮಕ್ಕಳ ವಿಚಾರದಲ್ಲಿ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಕೊಂಚ ಆಲಸ್ಯ, ಪಾಠ-ಪ್ರವಚನಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ ಮತ್ತೆ ಶನೈಶ್ಚರ ಮಕರ ರಾಶಿಗೆ ಬಂದಾಗ ಕಾರ್ಯಗಳು ವೇಗಗತಿಯನ್ನು ಪಡೆಯಲಿವೆ. ಮನೆಯಲ್ಲಿ ಕೊಂಚ ಸೌಖ್ಯಕಾಣುತ್ತೀರಿ. ಸಿವಿಲ್, ಮಣ್ಣು-ಮರಳು-ಕಬ್ಬಿಣ ತತ್ಸಂಬಂಧಿ ವ್ಯಾಪಾರಗಳು ಮತ್ತೆ ಚಿಗುರೊಡೆಯುತ್ತವೆ. ಹಿರಿಯರ ಆರೋಗ್ಯ ಸುಧಾರಿಸುತ್ತದೆ. ಆತಂಕ ಬೇಡ.

ಪರಿಹಾರ - ಗಣಪತಿ ಪ್ರಾರ್ಥನೆ - ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ
ಶುಭ ರತ್ನ - ವಜ್ರ-ನೀಲ
ಶುಭ ಸಂಖ್ಯೆ - 09
ಶುಭ ವರ್ಣ - ಬಿಳಿ-ನೀಲಿ

==================

ವೃಶ್ಚಿಕ - ಶುಭಕೃತ್ ಸಂವತ್ಸರ ನಿಮ್ಮ ಪಾಲಿಗೆ ಸಮೃದ್ಧಿಯ ಕಾಲ. ಗುರುವಿನ ಪರಿವರ್ತನೆ ನಿಮ್ಮ ಬದುಕಲ್ಲಿ ಬೆಳಕು ಹೊತ್ತಿಸಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರಲಿವೆ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ, ವಿದ್ಯಾರ್ಥಿಗಳ ಜೀವನ ಸುಧಾರಿಸುತ್ತದೆ. ಸಂತಾನಾಪೇಕ್ಷಿಗಳಿಗೂ ಶುಭಫಲವಿದೆ. ‘‘ಮಹೀಶ ಸಚಿವೋ ಧೀಮಾನ್ ಸುತಸ್ಥೇ ಗುರೌ’’ ಎಂಬ ಮಾತಿನಂತೆ ರಾಜತ್ವವೂ-ರಾಜ ಸಮಾನತ್ವವೂ ಉಂಟಾಗಲಿದೆ. ಬುದ್ಧಿ ಬಲದಿಂದ ಕಾರ್ಯ ಸಾಧಸುತ್ತೀರಿ. ಶನೈಶ್ಚರ ಪರಿವರ್ತನೆಯಿಂದ ಗೃಹ ನಿರ್ಮಾಣ, ನಿವೇಶನ ಖರೀದಿಯಂಥ ಕೆಲಸಗಳು ಚುರುಕಾಗುತ್ತವೆ. ಸಿವಿಲ್ ಕೆಲಸಗಾರರಿಗೆ ಶುಭಫಲವಿದೆ. ಕೃಷಿಕರಿಗೂ ಶ್ರಮ ಕೊಂಚ ಕಡಿಮೆಯಾಗಲಿದೆ. ಸೇವಕರ ಸಹಾಯದಿಂದ ಸಮಾಧಾನ ಸಿಗಲಿದೆ. ರಾಹು ಪರಿವರ್ತೆನೆಯ ನಂತರ ಕೊಂಚ ಆರೋಗ್ಯದ ಕಡೆ ಗಮನಹರಿಸಬೇಕು. ಹೊಟ್ಟೆ, ಕಿಬ್ಬೊಟ್ಟೆ, ನರ ಸಂಬಂಧಿ ತೊಡಕುಗಳಾಗುವ ಸಾಧ್ಯತೆ ಇದೆ. ಕೇತುವು ವ್ಯಯ ಹೆಚ್ಚಿಸಲಿದ್ದಾನೆ. ಅನಗತ್ಯ ಖರ್ಚುಗಳಿಂದ ಹೈರಾಣಾಗುತ್ತೀರಿ. ಕಾಲಿನ ಉರಿ, ನೋವುಗಳು ಬಾಧಿಸುತ್ತವೆ. ಜನ್ಮಾಧಿಪತಿ ಕುಜನಿಗೆ ಸ್ಥಾನಬಲವಿದ್ದಾಗ ಎಲೆಕ್ಟ್ರಾನಿಕ್ಸ್, ಪೆಟ್ರೋಲಿಯಮ್, ಬೆಂಕಿ ಸಂಬಂಧಿ ಕೆಲಸಗಳಲ್ಲಿರುವವರಿಗೆ ಉತ್ಕೃಷ್ಟಫಲಗಳಿದ್ದಾವೆ. ಪ್ಯಾರಾಮೆಡಿಕಲ್ ಕ್ಷೇತ್ರದವರಿಗೂ ಅನುಕೂಲ ಫಲಗಳಿದ್ದಾವೆ. ಲಾಭವೂ ಇದೆ. ಉನ್ನತ ಶಿಕ್ಷಣ ಮಾಡುವವರಿಗೆ ಉತ್ತಮ ಮಾರ್ಗದರ್ಶನ, ಉನ್ನತ ಸ್ಥಾನಗಳು ಲಭ್ಯವಾಗಲಿವೆ. ಏಕಾಗ್ರತೆಯಿಂದ ಕಾರ್ಯ ಸಾಧನೆಯಾಗಲಿದೆ. ನ್ಯಾಯಾಲಯ ಸಂಬಂಧಿ ಕೆಲಸಗಳಲ್ಲಿ ಸಮಾಧಾನ ಸಿಗಲಿದೆ. ಪತ್ರಿಕೆ-ಮಾಧ್ಯಮದಲ್ಲಿರುವವರಿಗೆ ಅನುಕೂಲ ಫಲಗಳಿದ್ದಾವೆ. ಅಂತೂ ಈ ವರ್ಷ ಹೆಚ್ಚಿನ ಶುಭಫಲವಿದೆ.

ಪರಿಹಾರ - ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ, ಕೊಲ್ಲೂರು ದರ್ಶನ ಮಾಡಿ.
ಶುಭ ರತ್ನ - ಹವಳ-ಮಾಣಿಕ್ಯ
ಶುಭ ಸಂಖ್ಯೆ - 10
ಶುಭ ವರ್ಣ - ಕೆಂಪು-ಹಳದಿ

==================

ಧನಸ್ಸು - ರಾಶಿಯ ಅಧಿಪತಿಯಾಗಿರುವ ಗುರುವು ಈ ವರ್ಷ ನಿಮ್ಮ ಪಾಲಿಗೆ ಸೌಖ್ಯವನ್ನು ಕರುಣಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ‘‘ಮಾತೃ ಸುಹೃತ್ಪರಿಚ್ಛದಸುತ ಸ್ತ್ರೀ ಸೌಖ್ಯಧಾನ್ಯಾನ್ವಿತ: ’’ ಎಂಬ ಮಾತಿನಂತೆ ತಾಯಿ ಸೌಖ್ಯ, ಪತ್ನಿ-ಸ್ನೇಹಿತರಿಂದ ಅನುಕೂಲ ಫಲವನ್ನು ಹೊಂದುತ್ತೀರಿ. ಪ್ರೀತಿ-ಪ್ರೇಮಗಳಲ್ಲಿ ವಿಶ್ವಾಸ ಹೆಚ್ಚಲಿದೆ. ಧನ-ಧಾನ್ಯ ಸಮೃದ್ಧಿ ಉಂಟಾಗಲಿದೆ. ನಿವೇಶನ ಖರೀದಿ, ಮನೆ ನಿರ್ಮಾಣದಂಥ ಕೆಲಸಗಳು ಸಲೀಸಾಗಿ ನೆರವೇರಲಿವೆ. ಕೃಷಿ-ಫಲ ಸಂಬಂಧಿ ವ್ಯವಹಾರಗಳಲ್ಲಿ ಲಾಭ ಇರಲಿದೆ. ವೃತ್ತಿಯಲ್ಲಿ ಬದಲಾವಣೆ, ಹೊಸ ಅವಕಾಶ, ಬಡ್ತಿ, ಕಾರ್ಯ ಸಾಧನೆಯಂಥ ಶುಭಫಲಗಳಿದ್ದಾವೆ. ಶನೈಶ್ಚರನ ಪರಿವರ್ತನೆ ಕೂಡ ನಿಮ್ಮಲ್ಲಿ ಧೈರ್ಯವನ್ನ, ಸಹೋದರರ ಸಹಕಾರವನ್ನು ತರಲಿದೆ. ಉದಾರತೆ ಉಂಟಾಗಲಿದೆ. ಆದರೆ ತಂದೆ-ಮಕ್ಕಳಲ್ಲಿ ಕೊಂಚ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಎಚ್ಚರವಾಗಿರಿ. ರಾಹು-ಕೇತುಗಳ ಪರಿವರ್ತೆಯಿಂದ ಬುದ್ಧಿ ಮಂದವಾಗುವ ಸಾಧ್ಯತೆ ಇದೆ. ಆಲೋಚನೆಗಳು ವ್ಯತಿರಿಕ್ತವಾಗುತ್ತವೆ. ನೀವು ಮಾಡಿದ ಶ್ಯೂರಿಟಿ, ನೀವು ಹಾಕಿನ ಸಹಿ ಇತ್ಯಾದಿಗಳು ಆತಂಕವನ್ನು ತರಬಹುದು. ಉದರ ಸಂಬಂಧಿ ತೊಂದರೆಗಳುಂಟಾಗುತ್ತವೆ. ಮಕ್ಕಳ ನಡುವಿನ ಬಾಂಧವ್ಯ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರವಾಗಿ ನಿರ್ಧಾರ ತೆಗೆದುಕೊಳ್ಳಿ. ಲಾಭದ ಕೇತು ವಿದೇಶ ಸಂಬಂಧಿ ಲಾಭವನ್ನು ತರುತ್ತಾನೆ. ಆಧ್ಯಾತ್ಮದ ಕಡೆ ಒಲವುಂಟಾಗಲಿದೆ. ವೈರಾಗ್ಯದ ಭಾಷಣಗಳನ್ನಾಡಿಸುತ್ತದೆ. ನ್ಯಾಯಾಲಯ-ಕೋರ್ಟ್ ಕೇಸ್ ಗಳಲ್ಲಿ ಸಮಾಧಾನದ ಫಲಗಳಿದ್ದಾವೆ. ಕೊಂಚ ಕಾಲ ಸಾಡೇಸಾತ್ ಶನೈಶ್ಚರ ಕಾಟದಿಂದ ಮುಕ್ತರಾಗಿ ನಿರಾಳತೆ ಹೊಂದಿತ್ತೀರಿ. ಶನೈಶ್ಚರ ಮತ್ತೆ ಮಕರ ರಾಶಿಯನ್ನು ಪ್ರವೇಶಿಸಿದಾಗಲೂ ಧನ ಲಾಭ, ಕುಟುಂಬದಲ್ಲಿ ಹಿರಿಯರಿಗೆ ಗೌರವ ಇತ್ಯಾದಿ ಕೌಟುಂಬಿಕ ಲಾಭ ಪಡೆಯುತ್ತೀರಿ.
ಪರಿಹಾರ - ದುರ್ಗಾ ಪ್ರಾರ್ಥನೆ, ಸುಬ್ರಹ್ಮಣ್ಯ ದರ್ಶನ ಮಾಡಿ
ಶುಭ ರತ್ನ - ಪುಷ್ಯರಾಗ, ಮಾಣಿಕ್ಯ
ಶುಭ ಸಂಖ್ಯೆ - 09
ಶುಭ ವರ್ಣ - ಹಳದಿ-ಕೇಸರಿ
======================

ಮಕರ - ಈ ವರ್ಷ ನಿಮ್ಮ ಪಾಲಿಗೆ ಕೊಂಚ ಅಸಮಧಾನದ ಫಲವನ್ನು ಬಂಗಾರದ ಹರಿವಾಣದಲ್ಲಿಟ್ಟು ಕೊಡಲಿದೆ. ಹರಿವಾಣ ಬಂಗಾರದ್ದೇ ಆದರೂ ಫಲ ಅಸಮಧಾನವಾಗಿರಲಿದೆ. ಗುರು ಬಲ ಕಳೆದುಹೋಗುಲಿದೆಯಾದರೂ ಧೈರ್ಯಗುಂದದೆ ಎದುರಿಸುವ ಆತ್ಮಬಲ ಇರಲಿದೆ. ಬುದ್ಧಿಗೆಡುವ ಸಾಧ್ಯತೆ ಇದೆ. ದುರಾಸೆ ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡಬಹುದು. ಕೃಪಣತೆ ಉಂಟಾಗಲಿದೆ. ಸಹೋದರರಲ್ಲಿ ಕೊಂಚ ಅಸಮಧಾನವನ್ನುಂಟುಮಾಡುತ್ತದೆ. ಆದರೆ ಸ್ವಕ್ಷೇತ್ರದ ಗುರುವು ಅಷ್ಟಾಗಿ ಕಾಡುವುದಿಲ್ಲ ಆತಂಕ ಬೇಡ. ರಾಹು-ಕೇತುಗಳ ಪರಿವರ್ತನೆ ನಿಮ್ಮ ಮಿತ್ರರಲ್ಲಿ ಸಂಶಯ ಹುಟ್ಟಿಸುತ್ತದೆ. ಆಪ್ತರಲ್ಲಿ ಸಂದೇಹ ಮೂಡಲಿದೆ. ಪ್ರಯಾಣದಲ್ಲಿ ಕೊಂಚ ತೊಡಕುಗಳುಂಟಾಗಬಹುದು. ಗೃಹ ನಿರ್ಮಾಣ, ನಿವೇಶನ ಕಾರ್ಯಗಳಲ್ಲಿ ತೊಡಕುಂಟಾಗಲಿದೆ. ವೃತ್ತಿಯಲ್ಲೂ ಕೊಂಚ ಅಸಮಧಾನದ ಫಲಗಳುಂಟಾಗಲಿವೆ. ಅವಕಾಶಗಳು ತಪ್ಪಿಹೋಗುವ ಸಾಧ್ಯತೆಗಳೂ ಇದ್ದಾವೆ. ನಿರೀಕ್ಷೆಗಳು ಪೂರ್ಣವಾಗುವುದಿಲ್ಲ. ಆದರೆ ತೃತಿಯದ ಗುರು ಎಲ್ಲವನ್ನೂ ಎದುರಿಸುವ ಧೈರ್ಯವನ್ನು ತಂದುಕೊಡಲಿದ್ದಾನೆ. ಸಂಗಾತಿಯ ಸಹಕಾರ, ಮಾರ್ಗದರ್ಶನದಿಂದ ಆಪತ್ತಿನಿಂದ ಪಾರಾಗುತ್ತೀರಿ ಎಂಬುದರಲ್ಲಿ ಸಂಶಯವಿಲ್ಲ. ವ್ಯಾಪಾರದಲ್ಲಿ ಶ್ರಮದಿಂದ ಅಧಿಕ ಫಲಗಳಿಸುತ್ತೀರಿ, ಇತರೆ ಗ್ರಹಗಳು ಸ್ವಸ್ಥಾನ, ಶುಭ ಸ್ಥಾನಗಳಲ್ಲಿ ಸಂಚರಿಸುವಾಗ ಎಲ್ಲರೀತಿಯ ಅನುಕೂಲ, ಲಾಭ ಫಲಗಳು ಇದ್ದೇ ಇವೆ ಎಂಬುದನ್ನು ಮರೆಯಬೇಡಿ. ಮೂರ್ಕಯವಾಗಿ ತೃತೀಯದ ಗುರು ಧೈರ್ಯವನ್ನು ಇಮ್ಮಡಿಗೊಳಿಸಿ ಸಂದರ್ಭಗಳನ್ನು ನಿಭಾಯಿಸುವ ಶಕ್ತಿಯನ್ನು ಕೊಡುತ್ತಾನೆ. ಆತಂಕಪಡಬೇಡಿ. ಶನೈಶ್ಚರ ಸ್ವಕ್ಷೇತ್ರದಲ್ಲಿದ್ದಾಗ ಶಶ ಯೋಗದ ಬಲದಿಂದ ರಾಜತ್ವ, ರಾಜ ಸಮಾನದ ಫಲವನ್ನು ತಂದುಕೊಡಲಿದ್ದಾನೆ ಎಂಬುದು ದಿಟ.
ಪರಿಹಾರ - ಈಶ್ವರ ಪ್ರಾರ್ಥನೆ, ಗುರು ಕ್ಷೇತ್ರಗಳ ದರ್ಶನ ಮಾಡಿ
ಶುಭ ರತ್ನ - ನೀಲ-ಪಚ್ಚೆ
ಶುಭ ಸಂಖ್ಯೆ - 1
ಶುಭ ವರ್ಣ - ನೀಲಿ, ಹಳದಿ, ಹಸಿರು

==================
ಕುಂಭ - ಈ ವರ್ಷದ ಯುಗಾದಿಯ ಪ್ರಾರಂಭ ನಿಮ್ಮ ಪಾಲಿಗೆ ಬೆಲ್ಲದ ಹೂರಣದಂತಿರುತ್ತದೆ. ವರ್ಷಾದಿಯಲ್ಲಾಗುವ ಗುರುವಿನ ಪರಿವರ್ತನೆ ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಏರ್ಪಾಡು ಮಾಡುತ್ತದೆ. ‘‘ವಾಗ್ಮೀ ಭೋಜನಾಸಾರವಾಂಶ್ಚ ಸುಮುಖೋ ವಿತ್ತೇ ಧನೀ ಕೋವಿದ: ’’ ಎಂಬ ಶಾಸ್ತ್ರವಚನದಂತೆ ವಾಕ್ಚಾತುರ್ಯದಿಂದ ನಿಮ್ಮ ಬಲ ವೃದ್ಧಿಸಲಿದೆ. ಹಿತವಾದ ಹಾಗೂ ಇಷ್ಟ ಭೋಜನ ನಿಮ್ಮ ಪಾಲಿಗೆ ಎಥೇಚ್ಚವಾಗಿ ಲಭಿಸುತ್ತದೆ. ಧನಸ್ಥಾನದ ಗುರು ಧನ ಸಮೃದ್ಧಿಯನ್ನೂ, ಬುದ್ಧಿಬಲವನ್ನೂ ಹೆಚ್ಚಿಸುತ್ತಾನೆ. ವಿದ್ಯಾರ್ಥಿಗಳಿಗೆ ಈ ವರ್ಷ ಸಾಧನೆಯ ವರ್ಷವಾಗಿರಲಿದೆ. ಧಾರಣ-ಗ್ರಹಣ ಶಕ್ತಿ ಹೆಚ್ಚಾಗಲಿದ್ದು ಪ್ರಶಂಸೆಗೆ ಗುರಿಯಾಗುತ್ತೀರಿ. ಕುಟುಂಬದಲ್ಲಿ ಗೌರವ ಹೆಚ್ಚಾಗಲಿದೆ. ಬ್ಯಾಂಕ್- ಫೈನಾನ್ಸ್ ಇತ್ಯಾದಿ ಹಣಕಾಸಿನ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಶುಭಫಲವಿದೆ. ಹೋಟೆಲ್ ಇಂಡಸ್ಟ್ರಿಯಲ್ಲಿರುವವರಿಗೂ ಉತ್ಕೃಷ್ಟ ಫಲಗಳಿದ್ದಾವೆ ಎಂಬುದರಲ್ಲಿ ಸಂಶಯವಿಲ್ಲ. ತತ್ಕಾಲದಲ್ಲಿ ಶನೈಶ್ಚರ ವ್ಯಯದಲ್ಲಿರುವುದರಿಂದ ಕೊಂಚ ವ್ಯಯವೂ ಇದೆ ಎಂಬುದನ್ನು ಮರೆಯಬಾರದು. ಶನೈಶ್ಚರ ಜನ್ಮಕ್ಕೆ ಅಂದರೆ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ಆರೋಗ್ಯದಲ್ಲಿ ಏರುಪೇರಾಗಲಿದೆ. ಮೂಳೆ ಸಂಬಂಧಿ, ಸ್ನಾಯು ಸಂಬಂಧಿ ಹಾಗೂ ವಾತ ಸಂಬಂಧಿ ತೊಂದರೆಗಳುಂಟಾಗಲಿವೆ. ರಾಹು-ಕೇತುಗಳ ಪರಿವರ್ತನೆ ಆದಾಗ ಧೈರ್ಯ ಕುಂದಲಿದೆ. ಆತಂಕದ ವಾತಾವರಣ ಸೃಷ್ಟಿಯಾಗಬಹುದು. ಸಹೋದರರಲ್ಲಿ ಅಸಹಕಾರ ಉಂಟಾಗಲಿದೆ. ಹಿಡಿದ ಕಾರ್ಯಗಳಲ್ಲಿ ವಿಘ್ನಗಳು, ಆಗಂತುಕವಾಗಿ ಬರುವ ಸಮಸ್ಯೆಗಳಿಂದ ಕಂಗಾಲಾಗುತ್ತೀರಿ. ತಂದೆ-ಮಕ್ಕಳಲ್ಲಿ ವಿರೋಧ, ಹಿರಿಯಲ್ಲಿ ಅಸಮಧಾನ ಉಂಟಾಗಲಿದೆ. ಏಕಾಗ್ರತೆ ಭಂಗವಾಗಲಿದೆ. ಕರ್ಮಾಧಿಪತಿ ಕುಜನು ಶುಭ ಕ್ಷೇತ್ರಗಳಲ್ಲಿ, ಮಿತ್ರ ಕ್ಷೇತ್ರಗಳಲ್ಲಿ ಸಂಚರಿಸುವಾಗ ಉತ್ಕೃಷ್ಟಫಲವನ್ನು ಹೊಂದುತ್ತೀರಿ, ಅಗ್ನಿ ಸಂಬಂಧಿ ಕೆಲಸಗಳಲ್ಲಿರುವವರಿಗೆ ಶುಭ ಫಲ ಇದ್ದೇ ಇದೆ. ಸಂಗಾತಿಯ ಸಹಕಾರ, ಮಾರ್ಗದರ್ಶನದಿಂದ ಕಷ್ಟವನ್ನು ದಾಟುವ ಶಕ್ತಿ ಬರಲಿದೆ. ಶುಕ್ರ-ಬುಧ ಇತ್ಯಾದಿ ಗ್ರಹಗಳ ಶುಭ ಸಂಚಾರ ಕಾಲದಲ್ಲೂ ದೈವಾನುಕೂಲ, ಬಂಧುಗಳ ಸಹಕಾರದಂಥ ಶುಭಫಲವಿದೆ. ಅಂತೂ ಈ ವರ್ಷ ಶುಭಾಶುಭ ಮಿಶ್ರವಾಗಿರಲಿದೆ.
ಪರಿಹಾರ - ಶನೈಶ್ಚರ ಸನ್ನಿಧಾನದಲ್ಲಿ ತಿಲ ತೈಲಾಭಿಷೇಕ ಮಾಡಿಸಿ, ದುರ್ಗಾ ದರ್ಶನ ಮಾಡಿ
ಶುಭ ರತ್ನ - ನೀಲ-ಪಚ್ಚೆ
ಶುಭ ಸಂಖ್ಯೆ - 1
ಶುಭ ವರ್ಣ - ನೀಲಿ, ಹಳದಿ, ಹಸಿರು

==================
ಮೀನ - ಮೀನ ರಾಶಿ ಗುರು ಗ್ರಹದ ಸ್ವಕ್ಷೇತ್ರ. ಸ್ವಕ್ಷೇತ್ರದ ಗುರುವಿಗೆ ದಿಗ್ಬಲವೂ ಇದೆ. ಈ ಪ್ರಮುಖ ಅಂಶಗಳನ್ನು ಗಮನಿಸಿಕೊಂಡಾಗ ‘‘ ಸ್ವರ್ಕ್ಷೇ ಮಾಂಡಲಿಕೋ ನರೇಂದ್ರಸಚಿವ: ಸೇನಾಪತಿರ್ವಾ ಧನೀ’’ ಎಂಬ ಆಧಾರದಂತೆ ರಾಜ ಸಮಾನದ ಫಲ, ಮಂತ್ರೀ ಸಮಾನ ಫಲ, ಧನ ಲಾಭದಂಥ ಶುಭಫಲಗಳಿದ್ದಾವೆ ಎಂಬುದನ್ನು ಮರೆಯಬೇಡಿ. ಕುಜನು ಸ್ವಕ್ಷೇತ್ರಕ್ಕೆ ಬಂದಾಗ ಶುಭ ಕ್ಷೇತ್ರಗಳಲ್ಲಿ ಸಂಚರಿಸಯುವಾಗ ಎಲೆಕ್ಟ್ರಾನಿಕ್ಸ್, ಪೆಟ್ರೋಲಿಯಮ್, ಇತ್ಯಾದಿ ಅಗ್ನಿ ಸಂಬಂಧಿ ಯಾವುದೇ ಕಾರ್ಯಕ್ಷೇತ್ರದಲ್ಲಿರುವವರಿಗೂ ಅತ್ಯಂತ ಶುಭಫಲವನ್ನು ಕೊಡುತ್ತಾನೆ. ಹಣ ಸಮೃದ್ಧಿ, ಕುಟುಂಬ ಬಲವನ್ನು ತಂದುಕೊಡಲಿದ್ದಾನೆ. ಇಂಥ ಫಲಗಳ ಜೊತೆಗೆ ‘ಜೀವೇ ಜನ್ಮನಿ ದೇಶನಿರ್ಗಮನಮ್ ಅರ್ಥಚ್ಯತಿಂ’ ಎಂಬ ಅಸಮಧಾನದ ಫಲಗಳೂ ಫಲಗಳೂ ಇದ್ದಾವೆ. ದೇಶ ಪರ್ಯಟನೆ, ಹಣವ್ಯಯ, ಆರೋಗ್ಯದಲ್ಲಿ ಕೊಂಚ ಅಸಮಧಾನದ ಫಲಗಳನ್ನು ಗುರು ತರಲಿದ್ದಾನೆ. ಶನೈಶ್ಚರನ ಪರಿವರ್ತನೆ ನಿಮಗೆ ಸಾಡೇಸಾತ್ ಪ್ರಾರಂಭ ಪ್ರಭಾವವನ್ನು ಸೂಚಿಸಲಿದೆ. ಆರೋಗ್ಯ ಬಾಧೆ, ವೃಥಾ ವ್ಯಯ, ಸಂಕಟಕ್ಕೆ ಗುರಿಯಾಗುವ ಸಾಧ್ಯತೆಗಳೂ ಇವೆ. ರಾಹು-ಕೇತುಗಳ ಪರಿವರ್ತನೆಯಿಂದ ಕುಟುಂಬದಲ್ಲಿ ಕೊಂಚ ಅಸಮಧಾನಗಳು, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಮಾತಿನಿಂದ ದ್ವೇಷ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಹಾದಿತಪ್ಪುವ ಸಾಧ್ಯತೆ ಇದೆ. ಸಹವಾಸ ದೋಷದಿಂದ ವ್ಯಕ್ತಿತ್ವ ಹಾಳಾಗಲಿದೆ. ಆಪ್ತರ ಜೊತೆ ವಿರೋಧ ಕಟ್ಟಿಕೊಳ್ಳಬೇಕಾದ ಸಂದರ್ಭ ಎದುರಾಗಲಿದೆ. ಶನೈಶ್ಚರ ಮಕರ ರಾಶಿಯನ್ನು ಪ್ರವೇಶ ಮಾಡಿದಾಗ ಲಾಭ ಫಲವನ್ನು ಕಾಣಲಿದ್ದೀರಿ, ವಿದೇಶ ವಹಿವಾಟು, ಸಿವಿಲ್ ಕ್ಷೇತ್ರಗಳಿಗೆ ಸಂಬಂಧಿಸಿದಹಾಗೆ ಹೆಚ್ಚಿನ ಅನುಕೂಲ ಫಲಗಳುಂಟಾಗಲಿವೆ. ಅಂತೂ ಈ ಶುಭಕೃತ್ ಸಂವತ್ಸರ ಶುಭಾಶುಭ ಮಿಶ್ರಫಲವಾಗಿರಲಿದೆ.

ಪರಿಹಾರ - ಕಡಲೆ ಧಾನ್ಯ ದಾನ, ದತ್ತ ಕ್ಷೇತ್ರ ದರ್ಶ ಮಾಡಿ
ಶುಭ ರತ್ನ - ಮಾಣಿಕ್ಯ, ಪುಷ್ಯರಾಗ
ಶುಭ ಸಂಖ್ಯೆ - 09
ಶುಭ ವರ್ಣ - ಕೆಂಪು-ಹಳದಿ

==================

ವಿಶೇಷ ಸೂಚನೆ :
ಯದ್ಭಾವಗೋ ಗೋಚರತೋ ವಿಲಗ್ನಾದ್ದಶೇಶ್ವರ: ಸ್ವೋಚ್ಚಸುಹ್ಯದ್ಗೃಹಸ್ಥ: |
ತದ್ಭಾವಪುಷ್ಟಿಂ ಕುರುತೇ ತದಾನೀಂ ಬಲಾನ್ವಿತಶ್ಚೇಜ್ಜನನೇ ಪಿತಸ್ಯ ||
ಎಂಬ ಶಾಸ್ತ್ರಾಧಾರದಂತೆ ನಿಮ್ಮ ಜಾತಕದ ಗ್ರಹಸ್ಥಿತಿ ಬಹಳ ಮುಖ್ಯ. ಜೊತೆಗೆ ಜಾತಕಗಳಲ್ಲಿ ದಶಾಧಿಪತಿ-ಭುಕ್ತಿನಾಥರು ಬಲಿಷ್ಠರಾಗಿ(ಉಚ್ಚ, ಸ್ವಕ್ಷೇತ್ರ, ಮೂಲತ್ರಿಕೋಣ, ಮಿತ್ರಸ್ಥಾನ ಗಳಲ್ಲಿದ್ದರೆ ) ಲಗ್ನಾದಿ ಯಾವ ಭಾವಗಳಲ್ಲಿ ಗೋಚಾರದಲ್ಲಿ ಸಂಚರಿಸುವರೋ ಆ ಭಾವದ ಫಲಗಳನ್ನು ವೃದ್ಧಿಸುತ್ತಾರೆ. ಹೀಗಾಗಿ ರಾಶಿಫಲ ನೋಡಿ ಆತಂಕಕ್ಕೆ ಒಳಗಾಗಬೇಕಿಲ್ಲ. ಹತ್ತಿರದ ಬಲ್ಲ ಜ್ಯೋತಿಷಿಗಳಿಂದ ಜಾತಕ ಪರಾಮರ್ಶಿಸಿಕೊಳ್ಳಿ. 

ಶ್ರೀಕಂಠ ಶಾಸ್ತ್ರಿ -ಜ್ಯೋತಿಷಿಗಳು
ಸುವರ್ಣ ನ್ಯೂಸ್.