ಒಂದೇ ಮಾಸದಲ್ಲಿ ಎರಡು ಗ್ರಹಣ.. ವಿಶ್ವಕ್ಕೆ ಒಳಿತಲ್ಲ, ಭಾರತಕ್ಕೆ?
ಜೂನ್ 10ರಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಭಾರತದಲ್ಲಿ ಈ ಗ್ರಹಣದ ಆಚರಣೆ ಇರುವುದಿಲ್ಲ. ಇದರಿಂದಾಗಿ ಯಾವುದೇ ವಿಧಧ ಗ್ರಹಣದ ಸೂತಕವನ್ನು ಆಚರಿಸುವ ಅಗತ್ಯವೂ ಇರುವುದಿಲ್ಲ. ಅಷ್ಟೇ ಅಲ್ಲದೆ ರಾಶಿ ಚಕ್ರಗಳ ಮೇಲೆ ಗ್ರಹಣದ ಪ್ರಭಾವವಿರುವುದಿಲ್ಲ. ಜಗತ್ತಿನ ದೃಷ್ಟಿಯಿಂದ ಈ ಗ್ರಹಣವು ಅಷ್ಟಾಗಿ ಒಳಿತನ್ನು ಮಾಡುವುದಿಲ್ಲ. ಈ ಗ್ರಹಣದಿಂದ ಜಗತ್ತಿನಲ್ಲಿ ಅನೇಕ ಸಮಸ್ಯೆಗಳು ಎದುರಾಗಲಿವೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುವುದೇ ಸೂರ್ಯ ಗ್ರಹಣ. ಸೂರ್ಯ ಗ್ರಹಣವು ಅಮಾವಾಸ್ಯೆಯ ದಿನದಂದೇ ಬರುತ್ತದೆ. ಈ ಎರಡೂ ಗ್ರಹಣವು ಒಂದೇ ಮಾಸದಲ್ಲಿ ಬಂದರೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ಬಾರಿ ಮೇ 26ರಂದು ಚಂದ್ರ ಗ್ರಹಣ ಸಂಭವಿಸಿತ್ತು. ಈಗ ಜೂನ್ 10ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಇದು ಒಂದೇ ಮಾಸದ ಅಂತರದಲ್ಲಿ ಸಂಭವಿಸಿದಂತೆ ಆಗಿದೆ. ಇದನ್ನು ವಲಯಾಕಾರ ಸೂರ್ಯ ಗ್ರಹಣವೆಂದು ಹೇಳಲಾಗುತ್ತಿದೆ. ಒಂದೇ ಮಾಸದಲ್ಲಿ ಎರಡು ಗ್ರಹಣಗಳು ವಿಶ್ವದ ದೃಷ್ಟಿಯಿಂದ ಒಳಿತಲ್ಲವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಅಂದರೆ ಜೂನ್ 10 ಗುರುವಾರದಂದು ಸೂರ್ಯ ಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವು ವೃಷಭ ರಾಶಿ, ಮೃಗಶಿರ ನಕ್ಷತ್ರದಲ್ಲಿ ಸಂಭವಿಸಲಿದ್ದು, ಈ ರಾಶಿ ನಕ್ಷತ್ರದವರಿಗೆ ಕೆಡುಕೆಂದು ಹೇಳಲಾಗುತ್ತದೆಯಾದರೂ ಭಾರತದಲ್ಲಿರುವವರಿಗೆ ಇದರ ಯಾವುದೇ ಪರಿಣಾಮವಾಗದು. ಕಾರಣ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಗ್ರಹಣದ ಆಚರಣೆಯು ಭಾರತದಲ್ಲಿ ಇರುವುದಿಲ್ಲ. ಆದ್ದರಿಂದ ಗ್ರಹಣ ಸೂತಕವನ್ನು ಆಚರಿಸುವ ಅಗತ್ಯವಿರುವುದಿಲ್ಲ. ಈ ಗ್ರಹಣದ ಪ್ರಭಾವವು ಯಾವುದೇ ರಾಶಿಗಳ ಮೇಲೆ ಸಹ ಆಗುವುದಿಲ್ಲ. ಆದರೆ, ಇದು ಜಗತ್ತಿಗೆ ಮಾರಕವಾಗಲಿದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರಿಗೆ ಶುಕ್ರ ದೆಸೆ, ಐಷಾರಾಮಿ ಜೀವನ ನಡೆಸ್ತಾರೆ!
ಗ್ರಹಣ ಗೋಚಾರ ಎಲ್ಲೆಲ್ಲಿ?
ಈ ಗ್ರಹಣವು ಆಸ್ಟ್ರಿಯಾ, ಬೆಲ್ಜಿಯಮ್, ಚೀನಾ, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಜೆರ್ಮನಿ, ಇಟಲಿ, ಮಂಗೋಲಿಯಾ, ನಾರ್ವೆ, ರೋಮಾನಿಯಾ, ಇಗ್ಲೆಂಡ್ ಮತ್ತ ಅಮೆರಿಕಗಳಲ್ಲಿ ಗೋಚರಿಸಲಿದೆ. ಇದರಿಂದ ಅನೇಕ ವೈಪರೀತ್ಯಗಳುಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಈ ಭಾಗದ ರಾಜಕೀಯ ವ್ಯಕ್ತಿಗಳಿಗೆ ಅನೇಕ ಸಮಸ್ಯೆಗಳು ಎದುರಾಗಲಿವೆ. ಜನಗಳಿಗೆ ನೋವು, ಧನಹಾನಿ, ಪ್ರಾಕೃತಿಕ ವಿಕೋಪಗಳು ಉಂಟಾಗಲಿವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಚಂಡಮಾರುತ ಮತ್ತು ಭೂಕಂಪಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಜಗತ್ತಿಗೆ ಹಲವು ರೀತಿಯ ನಷ್ಟವನ್ನುಂಟು ಮಾಡುವ ಸಂಭವ ಹೆಚ್ಚಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಇದನ್ನು ಓದಿ: ಸಾವಿನ ಮುನ್ಸೂಚನೆ ಕೊಡುತ್ತಂತೆ ಈ ಕನಸುಗಳು!
ವಲಯಾಕಾರ ಸೂರ್ಯ ಗ್ರಹಣ ಎಂದರೇನು?
ಜೂನ್ 10ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ವಲಯಾಕಾರ ಸೂರ್ಯ ಗ್ರಹಣವೆಂದು ಹೇಳಲಾಗುತ್ತಿದೆ. ಸೂರ್ಯ ಗ್ರಹಣದಲ್ಲಿ ಪೂರ್ಣ, ವಲಯಾಕಾರ ಮತ್ತು ಅಂಶಿಕ ಎಂಬ ಮೂರು ವಿಧಗಳಿವೆ.
ಚಂದ್ರನು ಪೂರ್ಣವಾಗಿ ಸೂರ್ಯನನ್ನು ಮರೆಯಾಗಿಸಿದಾಗ ಭೂಮಿಯಲ್ಲಿ ಪೂರ್ಣ ಕತ್ತಲೆ ಆವರಿಸಿಕೊಳ್ಳುತ್ತದೆ. ಇದನ್ನು ಪೂರ್ಣ ಸೂರ್ಯ ಗ್ರಹಣವೆಂದು ಹೇಳಲಾಗುತ್ತದೆ. ಅದೇ ರೀತಿ ಚಂದ್ರನು ಸೂರ್ಯನನ್ನು ಪೂರ್ಣ ರೀತಿಯಲ್ಲಿ ಕಾಣದಂತೆ ಮಾಡಲು ಸಾಧ್ಯವಾಗದೇ ಇದ್ದಾಗ ಅದನ್ನು ಖಂಡಗ್ರಾಸ ಅಥವಾ ಅಂಶಿಕ ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ. ವಲಯಾಕಾರ ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಶೇಕಡ 99ರಷ್ಟು ಭಾಗವನ್ನು ಮರೆಯಾಗಿಸುತ್ತದೆ. ಅಂಥ ಸಮಯದಲ್ಲಿ ಸೂರ್ಯನ ಹೊರಭಾಗ ಕಾಣಿಸಿಕೊಳ್ಳುತ್ತದೆ. ಇದು ಒಂದು ವೃತ್ತಾಕಾರ ರೂಪವನ್ನು ಪಡೆಯುವುದಲ್ಲದೆ, ಸೂರ್ಯನ ಈ ದೃಶ್ಯವನ್ನು ಹೊಳೆಯುವ ಉಂಗುರಕ್ಕೆ ಹೋಲಿಸಲಾಗಿದೆ. ಸೂರ್ಯನ ಮಧ್ಯಭಾಗವು ಛಾಯೆಯಿಂದ ಆವರಿಸಿಕೊಂಡಿರುತ್ತದೆ. ಹಾಗಾಗಿ ಇದನ್ನು ವಲಯಾಕಾರ ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ.
ಧಾರ್ಮಿಕವಾಗಿ ಸೂರ್ಯ ಗ್ರಹಣದ ಮಹತ್ವ
ಪುರಾಣಗಳಲ್ಲಿ ಹೇಳುವಂತೆ ಸಮುದ್ರ ಮಂಥನದ ಕಾಲದಲ್ಲಿ, ಅಮೃತವನ್ನು ಪಡೆಯುವುದಕ್ಕಾಗಿ ದೇವತೆಗಳು ಮತ್ತು ದಾನವರ ನಡುವೆ ವಿವಾದ ಉತ್ಪನ್ನವಾಗುತ್ತದೆ. ಈ ಪರಿಸ್ಥಿತಿಯನ್ನು ಸುಧಾರಿಸಿವುದಕ್ಕೋಸ್ಕರ ವಿಷ್ಣು ಮೋಹಿನಿಯ ರೂಪವನ್ನು ಧರಿಸುತ್ತಾನೆ. ಮೋಹಿನಿಯ ರೂಪದಿಂದ ಎಲ್ಲರನ್ನು ಮೋಹಿಸಿ, ದೇವತೆಗಳನ್ನು ಒಂದು ಪಂಕ್ತಿಯಲ್ಲಿ ಮತ್ತು ದಾನವರನ್ನು ಮತ್ತೊಂದು ಪಂಕ್ತಿಯಲ್ಲಿ ಕೂರಿಸುತ್ತಾನೆ. ಅಮೃತವನ್ನು ಹಂಚಲು ಪ್ರಾರಂಭಿಸುತ್ತಾನೆ.
ಇದನ್ನು ಓದಿ: ಕೆಲಸದಲ್ಲಿ ಪ್ರಗತಿ, ಪ್ರಮೋಶನ್ ಬೇಕಂದ್ರೆ ಹೀಗ್ ಮಾಡಿ ನೋಡಿ.
ಮೋಹಿನಿಯ ಈ ನಡೆಯು ದಾನವನೊಬ್ಬನಿಗೆ ಅನುಮಾನ ಹುಟ್ಟಿಸಿ, ಆ ರಾಕ್ಷಸ ದೇವತೆಗಳ ಪಂಕ್ತಿಯಲ್ಲಿ ಕುಳಿತು ಅಮೃತವನ್ನು ಪಡೆಯುವ ಸಮಯದಲ್ಲಿ ಸೂರ್ಯ - ಚಂದ್ರರು ಇದನ್ನು ಗಮನಿಸುತ್ತಾರೆ. ಅದನ್ನು ವಿಷ್ಣುವಿಗೆ ತಿಳಿಸುತ್ತಾರೆ. ವಿಷಯವನ್ನು ತಿಳಿದ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಆ ಅಸುರನ ಶಿರವನ್ನು ಕತ್ತರಿಸುತ್ತಾನೆ. ಅಷ್ಟರಲ್ಲಾಗಲೇ ಆ ಅಸುರನು ಕುಡಿದ ಅಮೃತ ಗಂಟಲವರೆಗೆ ಇಳಿದಿರುತ್ತದೆ. ಹಾಗಾಗಿ ಆ ಅಸುರನ ಮೃತ್ಯುವಾಗುವುದಿಲ್ಲ. ನಂತರ ಶಿರದ ಭಾಗ ರಾಹುಗ್ರಹವಾಗುತ್ತದೆ. ಮುಂಡದ ಭಾಗ ಕೇತು ಗ್ರಹವಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಸೂರ್ಯ ಮತ್ತು ಚಂದ್ರರನ್ನು ತನ್ನ ಶತ್ರುಗಳೆಂದು ಭಾವಿಸುವ ಕಾರಣ, ಅವರಿಗೆ ಗ್ರಹಣವಾಗಿ ಕಾಡುತ್ತವೆ ಎಂದು ಧಾರ್ಮಿಕವಾಗಿ ಗ್ರಹಣವನ್ನು ಉಲ್ಲೇಖಿಸಲಾಗಿರುತ್ತದೆ.