Asianet Suvarna News Asianet Suvarna News

ಕೆಲಸದಲ್ಲಿ ಪ್ರಗತಿ, ಪ್ರಮೋಶನ್ ಬೇಕಂದ್ರೆ ಹೀಗ್ ಮಾಡಿ ನೋಡಿ...

ಕೆಲಸವನ್ನು ನಿರ್ವಹಿಸುತ್ತಾ ಕೆಲವು ವರ್ಷಗಳು ಕಳೆದರೂ ಇನ್ನೂ ಪ್ರಮೋಶನ್ ದೊರೆತಿಲ್ಲ, ಸಂಬಳ ಹೆಚ್ಚಿಲ್ಲ ಎಂಬ ಚಿಂತೆ ಹಲವರನ್ನು ಕಾಡುತ್ತಿರುತ್ತದೆ. ಪರಿಶ್ರಮದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ, ಪದೋನ್ನತಿ ಸಿಗುತ್ತಿಲ್ಲವೆಂದಾದರೆ, ಅದಕ್ಕೆ ಜ್ಯೋತಿಷ್ಯದಲ್ಲಿ ಅನೇಕ ಸರಳ ಪರಿಹಾರೋಪಾಯಗಳನ್ನು ತಿಳಿಸಿದ್ದಾರೆ. ಶ್ರದ್ಧೆ ಮತ್ತು ಭಕ್ತಿಯಿಂದ ಪರಿಹಾರದಲ್ಲಿ ತಿಳಿಸಿದಂತೆ ಮಾಡಿದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಹಾಗಾದರೆ ಪ್ರಮೋಶನ್ ಪಡೆಯಲು ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿದ ಉಪಾಯಗಳ ಬಗ್ಗೆ ತಿಳಿಯೋಣ.

Vaastu tips to get promoted in occupation and have prosperity
Author
Bangalore, First Published Jun 5, 2021, 1:18 PM IST

ಗ್ರಹ, ನಕ್ಷತ್ರಗಳ ಚಲನ ಸ್ಥಿತಿಯ ಆಧಾರದ ಮೇಲೆ ಮನುಷ್ಯ ಜೀವನದ ಸುಖ-ದುಃಖಗಳು ನಿರ್ಧರಿತವಾಗಿರುತ್ತವೆ. ಅದರಂತೆ ಕೆಲವು ದಿನ ಸುಖದ ದಿನಗಳನ್ನು ಕಳೆದರೆ, ಮತ್ತೆ ಕೆಲವು ಸಮಯ ಕಷ್ಟಗಳನ್ನು ಎದುರಿಸುವಂಥ ಸಂದರ್ಭ ಎದುರಾಗುತ್ತದೆ. ಹಾಗಾಗಿ ಜೀವನದಲ್ಲಿ ಪ್ರತಿನಿತ್ಯ ಪರಿಶ್ರಮದಿಂದ ಕಾರ್ಯ ನಿರ್ವಹಿಸುವ ಅವಶ್ಯಕತೆ ಇರುತ್ತದೆ.

ಪರಿಶ್ರಮದಿಂದ ಕೆಲಸ ನಿರ್ವಹಿಸುತ್ತಿದ್ದರೂ ಸಹ ಕೆಲಸದಲ್ಲಿ ಯಶಸ್ಸು ಲಭಿಸುವುದಿಲ್ಲ. ಸತತ ಪರಿಶ್ರಮ ಮತ್ತು ಶ್ರದ್ಧೆಯಿದ್ದರೂ ಸಫಲತೆ ಸಿಗದಿದ್ದಾಗ ಆತ್ಮಸ್ಥೈರ್ಯ ಕುಗ್ಗುವುದು ಸಹಜವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಜ್ಯೋತಿಷ್ಯದಲ್ಲಿ ಹೇಳಿರುವ ಉಪಾಯಗಳಿಂದ ಸಮಸ್ಯೆಗಳನ್ನು ಪರಿಹರಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತದೆ.

ಹೌದು. ಸನಾತನ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹಲವಾರು ರೀತಿಯ ಪರಿಹಾರಗಳನ್ನು ತಿಳಿಸಿದ್ದಾರೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸದುಪಯೋಗ ಪಡೆದುಕೊಂಡಲ್ಲಿ ಕಾರ್ಯದಲ್ಲಿ ಯಶಸ್ಸು ಸಿಗುವುದು ಖಚಿತವಾಗಿರುತ್ತದೆ. ಹಾಗಾಗಿ ಉದ್ಯೋಗದಲ್ಲಿ ಪ್ರಮೋಶನ್ ಪಡೆಯಬೇಕೆಂದಿದ್ದಲ್ಲಿ ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿರುವ ಸರಳ ಉಪಾಯಗಳನ್ನು ತಿಳಿಯೋಣ..

ಇದನ್ನು ಓದಿ: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಗೆ ಉದ್ಯೋಗ ಬಡ್ತಿ ಗ್ಯಾರಂಟಿ! 

ಶನಿ ದೇವರ ಆರಾಧನೆ 
ಕರ್ಮಕ್ಕೆ ತಕ್ಕ ಫಲವನ್ನು ನೀಡುವಾತ ಶನಿದೇವ. ನ್ಯಾಯದ ಮಾರ್ಗದಲ್ಲಿ ನಡೆದರೆ ನ್ಯಾಯಯುತ ಫಲವನ್ನು, ಅಧರ್ಮದ ಮಾರ್ಗದಲ್ಲಿ ನಡೆಯುತ್ತಿರುವವರಿಗೆ ಶಿಕ್ಷೆಯನ್ನು ನೀಡುವ ದೇವರು ಶನಿದೇವ. ಹಾಗಾಗಿ ಕೆಲಸದಲ್ಲಿ ಬಡ್ತಿಯನ್ನು ಬಯಸುವವರು ಶನಿದೇವರ ಆರಾಧನೆ ಮಾಡುವುದು ಅವಶ್ಯಕ. ಅದಕ್ಕಾಗಿ ಶನಿವಾರದಂದು ಸರಿಯಾದ ವಿಧಿ-ವಿಧಾನಗಳಿಂದ ಶನಿದೇವರನ್ನು ಪೂಜಿಸಬೇಕು. ಶನಿ ಮಂತ್ರವನ್ನು ಜಪಿಸಬೇಕು ಮತ್ತು ಏಳು ಮುಖಿ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ. ಇವುಗಳಿಂದ ಕೆಲಸದಲ್ಲಿ ಬೇಗ ಪ್ರಮೋಶನ್ ಸಿಗುವ ಸಂಭವವಿರುತ್ತದೆ.

Vaastu tips to get promoted in occupation and have prosperity


ಸೂರ್ಯನ ಆರಾಧನೆ
ಸಮಸ್ತ ಗ್ರಹಗಳ ರಾಜ ಸೂರ್ಯದೇವನಾಗಿದ್ದಾನೆ. ಸೂರ್ಯನು ಉಚ್ಚ ಪದವಿ, ಯಶಸ್ಸು, ಸಫಲತೆ, ಏಳಿಗೆ ಇವುಗಳ ಕಾರಕಗ್ರಹನಾಗಿದ್ದಾನೆ. ಹಾಗಾಗಿ ಸೂರ್ಯನನ್ನು ಆರಾಧಿಸಿದಲ್ಲಿ ಜಾತಕದಲ್ಲಿ ಸೂರ್ಯಗ್ರಹವು ಬಲಗೊಳ್ಳುವುದರಿಂದ ಉದ್ಯೋಗದಲ್ಲಿ ಯಶಸ್ಸು ಲಭಿಸುತ್ತದೆ. ಪ್ರತಿ ಭಾನುವಾರದಂದು ಸೂರ್ಯನಿಗೆ ಅರ್ಘ್ಯ ನೀಡುವ ಮೂಲಕ ಸೂರ್ಯದೇವನನ್ನು ಆರಾಧಿಸಿದಲ್ಲಿ ಸಫಲತೆ ಲಭಿಸುತ್ತದೆ. ಅಷ್ಟೇ ಅಲ್ಲದೆ ದ್ವಾದಶ ಮುಖಿ ರುದ್ರಾಕ್ಷಿಯನ್ನು ಧರಿಸುವುದು ಒಳ್ಳೆಯದು.

ಇದನ್ನು ಓದಿ:  ಈ ನಕ್ಷತ್ರದವರು ಆಗುತ್ತಾರೆ ಸಂಪತ್ತಿಗೆ ಒಡೆಯರು, ನಿಮ್ಮ ನಕ್ಷತ್ರ ಯಾವುದು..? 

ಹನುಮಂತನ ಆರಾಧನೆ ಮಾಡಬೇಕು
ವೈದಿಕ ಜ್ಯೋತಿಷ್ಯದಲ್ಲಿ ಹೇಳಿರುವ ಪ್ರಕಾರ ನೌಕರಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಪ್ರಮೋಶನ್‌ಗೆ ಎದುರು ನೋಡುತ್ತಿರುವವರು ರಾಮಭಕ್ತ ಹನುಮಂತನನ್ನು ಆರಾಧಿಸಬೇಕು. ಮಂಗಳವಾರದಂದು ಹನುಮಂತನನ್ನು ಆರಾಧಿಸಿ, ಹನುಮಾನ್ ಚಾಲೀಸಾವನ್ನು ಪಠಿಸಬೇಕು.

ಕಾಳಿದೇವಿಯನ್ನು ಆರಾಧಿಸಬೇಕು
ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಲು ಕಾಳಿದೇವಿಯನ್ನು ಆರಾಧಿಸುವುದು ಒಳ್ಳೆಯದೆಂದು ಸಹ ಹೇಳಲಾಗುತ್ತದೆ. ಉದ್ಯೋಗದಲ್ಲಿ ಉನ್ನತ ಪದವಿಯನ್ನು ಗಳಿಸಬೇಕೆಂದಿದ್ದಲ್ಲಿ, ಕಾಳಿದೇವಿಯ ಕೃಪೆ ಅತ್ಯಗತ್ಯ. ಹಾಗಾಗಿ ಸೋಮವಾರದಂದು ಶ್ವೇತ ವಸ್ತ್ರದಲ್ಲಿ ಕಪ್ಪು ಅಕ್ಕಿಯನ್ನು ಕಟ್ಟಿ ಅದನ್ನು ಕಾಳಿದೇವಿಗೆ ಅರ್ಪಿಸಬೇಕು.

ಈಶ್ವರನ ಆರಾಧನೆ
ಪ್ರತಿನಿತ್ಯ ಶಿವಲಿಂಗಕ್ಕೆ ಜಲಾಭಿಷೇಕ ಮಾಡುವುದು ಮತ್ತು ಅಕ್ಷತೆಯನ್ನು ಅರ್ಪಿಸುವುದರ ಮೂಲಕ ಈಶ್ವರನನ್ನು ಆರಾಧಿಸಬೇಕು. ಅಷ್ಟೇ ಅಲ್ಲದೆ ಹಾಲಿನಿಂದ ಸಹ ಅಭಿಷೇಕ ಮಾಡಬೇಕು. ಶಿವನಿಗೆ ಪ್ರಿಯವಾದ  ಬಿಲ್ವಪತ್ರೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಶಿವನ ಕೃಪೆ ಸಿಗುವುದಲ್ಲದೆ, ಮನೋವಾಂಛಿತ ಪದೋನ್ನತ್ತಿ ಲಭಿಸುತ್ತದೆ.

ವಿಷ್ಣುವಿನ ಆರಾಧನೆ
ಸಾಮಾನ್ಯವಾಗಿ ಉದ್ಯೋಗದ ವಿಚಾರ ಬಂದಾಗ ವಿಷ್ಣುವನ್ನು ಆರಾಧಿಸಿದಲ್ಲಿ ಅಥವಾ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಠಣ ಮಾಡಿದರೆ ಮನಸ್ಸಿಗೆ ಹಿಡಿಸುವ ಉದ್ಯೋಗ ಲಭಿಸುತ್ತದೆ ಹಾಗೂ ಪ್ರಮೋಶನ್ ನಿರೀಕ್ಷೆಯಲ್ಲಿರುವವರಿಗೆ ಪ್ರಮೋಶನ್ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಗುರುವಾರದಂದು ವಿಷ್ಣುವನ್ನು ಆರಾಧಿಸುವುದಲ್ಲದೆ, ಬಾಳೆ ಮರಕ್ಕೆ ಪೂಜೆ ಮಾಡುವುದು ಮತ್ತು ಜಪವನ್ನು ಅರ್ಪಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆಂದು ಹೇಳಲಾಗುತ್ತದೆ.

ಇದನ್ನು ಓದಿ: ನಿಮ್ಮ ದೇವರ ಕೋಣೆಯ ದಿಕ್ಕು ಬದಲಾಯಿಸಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ...! 

ಗೋಮಾತೆಯ ಸೇವೆ ಮಾಡಬೇಕು
ಗೋ ಮಾತೆಯಲ್ಲಿ ದೇವತೆಗಳು ವಾಸವಿದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ಗೋವನ್ನು ಪೂಜಿಸಿ, ಅದರ ಸೇವೆ ಮಾಡುವುದರಿಂದ ಸಮಸ್ತ ದೇವತೆಗಳ ಕೃಪೆ ಸಿಗುವುದಲ್ಲದೆ, ಉದ್ಯೋಗದಲ್ಲಿ ಬಯಸಿದ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಗೋವಿನ ಸೇವೆ ಮಾಡುವುದರಿಂದ ಉತ್ತಮ ಸ್ವಾಸ್ಥ್ಯ ಸಹ ದೊರೆಯುತ್ತದೆ. ಪ್ರತಿನಿತ್ಯ ಗೋವನ್ನು ಪೂಜಿಸಿ ಅದಕ್ಕೆ ಗೋಗ್ರಾಸ (ಆಹಾರ) ವನ್ನು ನೀಡುವುದರಿಂದ ಇಷ್ಟಾರ್ಥ ಸಿದ್ಧಿಸುವುದರಲ್ಲಿ ಸಂಶಯವಿಲ್ಲ.

Follow Us:
Download App:
  • android
  • ios