ಜಪಾನಿನ ಬಾಬಾ ವಂಗಾ ಹೆಸರಾಗಿರುವ ಈ ಮಾಂಗಾ ಕಲಾವಿದೆಯ ಭವಿಷ್ಯವಾಣಿಗಳು ಜನಪ್ರಿಯ ಆಗುತ್ತಿವೆ. ಜೊತೆಗೆ ಭಯ ಕೂಡ ಹುಟ್ಟಿಸುತ್ತಿವೆ. ಇದೇ ಭಯ ಇದೀಗ ಜಪಾನಿನಲ್ಲಿ ಪ್ರವಾಸೋದ್ಯಮದ ಮೇಲೆ ಕರಾಳ ಪರಿಣಾಮ ಬೀರಿದೆ. ಅದು ಹೇಗೆ ಅಂತ ನೋಡಿ.

ಹಿಂದೊಮ್ಮೆ 2000ನೇ ಇಸವಿಯಲ್ಲಿ ಪ್ರಳಯ ಸಂಭವಿಸುತ್ತೆ ಎಂದು ಯಾರೋ ಜ್ಯೋತಿಷಿಗಳು ಹೇಳಿದ್ದರು, ನಾಸ್ಟ್ರಡಾಮಸ್‌ ಕೂಡ ಹೀಗೆ ಹೇಳಿದ್ದಾನೆ ಎಂದು ಸುದ್ದಿಯಾಗಿತ್ತು. ಇದರಿಂದ ಹಾಹಾಕಾರವೇ ಎದ್ದು, ಬಹಳ ಮಂದಿ ಸಾಲ ಸೋಲ ಮಾಡಿ 2000 ಇಸವಿಯೊಳಗೆ ಮಜಾ ಮಾಡಿ ಸಾಯೋಣ ಎಂದು ಮುಂದಾಗಿದ್ದರು. ಕೊನೆಗೆ ಏನೂ ಆಗಿರಲಿಲ್ಲ. ಅದು ಬೇರೆ ಮಾತು. ಆದರೆ ಇಂಥ ಭವಿಷ್ಯವಾಣಿಗಳು ಎಬ್ಬಿಸುವ ಕೋಲಾಹಲಗಳು ಸಣ್ಣದಲ್ಲ. ಇದೀಗ ಜಪಾನ್‌ನಲ್ಲಿ ಇಂಥದೊಂದು ಭವಿಷ್ಯವಾಣಿ ಕೋಲಾಹಲ ಎಬ್ಬಿಸಿದೆ. ಜನ ಗಾಬರಿಯಾಗಿದ್ದಾರೆ. ʼಜಪಾನಿನ ಬಾಬಾ ವಂಗಾʼ ಎಂದೇ ಹೆಸರಾದ ಮಹಿಳೆಯೊಬ್ಬಳು ಹೇಳಿದ ಭವಿಷ್ಯವಾಣಿಯಿಂದ ಆತಂಕಿತರಾದ ಜಪಾನಿನ ಜನ ತಮ್ಮ ಟೂರ್‌ ಪ್ಲಾನ್‌ಗಳನ್ನೆಲ್ಲ ಕ್ಯಾನ್ಸಲ್‌ ಮಾಡುತ್ತಿದ್ದಾರೆ.

ಆಗಿರುವುದು ಇಷ್ಟೆ. ಈಕೆ ಜುಲೈನಲ್ಲಿ ಜಪಾನ್‌ನಲ್ಲಿ ಭೂಕಂಪ ಹಾಗೂ ಸುನಾಮಿ ಆಗುತ್ತೆ, ದೊಡ್ಡ ವಿಪತ್ತು ಸಂಭವಿಸುತ್ತೆ ಅಂತ ಎಚ್ಚರಿಕೆ ನೀಡಿದ್ದಳು. ಜನ ಭಯಭೀತರಾಗಿ ತಮ್ಮ ಪ್ರವಾಸಗಳನ್ನು ರದ್ದುಗೊಳಿಸುತ್ತಿದ್ದಾರೆ. ಅಂದ ಹಾಗೆ ಯಾರು ಈಕೆ? 

ಇವಳು ಜಪಾನಿನ ಮಾಂಗಾ ಕಲಾವಿದೆ. ಮಾಂಗಾ ಎಂಬುದು ಒಂದು ಬಗೆಯ ಜಪಾನಿನ ಚಿತ್ರಕಲೆ. ಇವಳ ಹೆಸರು ರಿಯೊ ತತ್ಸುಕಿ. ಈಕೆಗೆ ಭವಿಷ್ಯ ಹೇಳುವ ಹವ್ಯಾಸ. ಹೇಳಿರುವುದರಲ್ಲಿ ಹಲವು ನಿಜವಾಗಿರುವುದೂ ಉಂಟು. ಹೀಗಾಗಿ ಜನ ಈಕೆಯನ್ನು "ಜಪಾನಿನ ನ್ಯೂ ಬಾಬಾ ವಂಗಾ" ಎಂದು ಕರೆಯಲು ಶುರು ಮಾಡಿದರು. ಮಾರ್ಚ್ 2011 ರ ಟೊಹೊಕು ಭೂಕಂಪ ಮತ್ತು ಸುನಾಮಿ, 1995 ರ ಕೋಬ್ ಭೂಕಂಪ ಮತ್ತು ಗಾಯಕ ಫ್ರೆಡ್ಡಿ ಮರ್ಕ್ಯುರಿಯ ಮರಣದಂತಹ ಘಟನೆಗಳನ್ನು ಈ ಹಿಂದೆ ಊಹಿಸಿದ್ದರಂತೆ. ಅವರು ಮೊದಲು ತಮ್ಮ ಭವಿಷ್ಯವಾಣಿಗಳನ್ನು 1999 ರಲ್ಲಿ "ದಿ ಫ್ಯೂಚರ್ ಐ ಸಾ" ಎಂಬ ಪುಸ್ತಕದಲ್ಲಿ ಪ್ರಕಟಿಸಿದರು.

ದಿ ಫ್ಯೂಚರ್ ಐ ಸಾನ 2021 ರ ಪರಿಷ್ಕೃತ ಆವೃತ್ತಿಯಲ್ಲಿ, ಟಾಟ್ಸುಕಿ ಜುಲೈ 2025 ರಲ್ಲಿ ಒಂದು ಪ್ರಮುಖ ಘಟನೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸಿಎನ್ಎನ್ ಮತ್ತು ಇತರ ಮಾಧ್ಯಮಗಳ ಪ್ರಕಾರ, ಅವರ ಮುನ್ಸೂಚನೆಯಲ್ಲಿ ಜಪಾನ್ ಮತ್ತು ಫಿಲಿಪೈನ್ಸ್ ನಡುವೆ ಸಮುದ್ರದೊಳಗೆ ಭೂಕಂಪ ಆಗುತ್ತದೆ. ಅದರ ಪರಿಣಾಮ 2011 ರಲ್ಲಿ ಸಂಭವಿಸಿದ ಸುನಾಮಿಗಳಿಗಿಂತ ಮೂರು ಪಟ್ಟು ದೊಡ್ಡದಾದ ಸುನಾಮಿಗಊ ಉಂಟಾಗುತ್ತವೆ. ಸಮುದ್ರದ ನೀರು "ಕುದಿಯುತ್ತ"ದಂತೆ. ಇದು ಕೆಲವು ಓದುಗರು ನಂಬುವ ಪ್ರಕಾರ ನೀರೊಳಗಿನ ಜ್ವಾಲಾಮುಖಿ ಸ್ಫೋಟವನ್ನು ಸೂಚಿಸುತ್ತದೆ. ಈ ವಲಯದಲ್ಲಿ ಜಪಾನ್, ಇಂಡೋನೇಷ್ಯಾ, ತೈವಾನ್ ಮತ್ತು ಹೆಚ್ಚಿನ ಭೂಕಂಪನ ಚಟುವಟಿಕೆಗೆ ಹೆಸರುವಾಸಿಯಾದ ಉತ್ತರ ಮರಿಯಾನಾ ದ್ವೀಪಗಳು ಬರುತ್ತವೆ. 

ಇದೀಗ ಈ ವಿಪತ್ತು ಸಂಭವಿಸುವ ಬಗ್ಗೆ ಆಕೆ ನುಡಿದಿರುವ ಭವಿಷ್ಯ ಜಪಾನ್‌ನ ಪ್ರವಾಸೋದ್ಯಮ ವಲಯದಲ್ಲಿ ವ್ಯಾಪಕ ಕಳವಳ ಉಂಟುಮಾಡಿದೆ. ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಜಪಾನ್‌ಗೆ ಪ್ರವಾಸದ ಬುಕಿಂಗ್‌ಗಳು ತೀವ್ರವಾಗಿ ಕುಸಿದಿವೆಯಂತೆ. ಹಲವು ಪ್ರವಾಸಿ ಏಜೆನ್ಸಿಗಳು ಪ್ರವಾಸಿಗರ ಆಸಕ್ತಿಯಲ್ಲಿ ಕುಸಿತವಾಗಿದೆ ಎಂದು ವರದಿ ಮಾಡಿವೆ. ಇತ್ತೀಚಿನ ಈಸ್ಟರ್ ರಜಾದಿನಗಳಲ್ಲಿ ರದ್ದತಿಗಳು 50% ವರೆಗೆ ತಲುಪಿವೆ ಎಂದು ಕೆಲವು ಏಜೆನ್ಸಿಗಳು ಹೇಳಿವೆ. ಅಂದರೆ ಅರ್ಧಕ್ಕರ್ಧ ಬುಕಿಂಗ್‌ ಕುಸಿದಿವೆ. ಸಮುದ್ರ ತೀರದ ಪ್ರದೇಶಗಳಿಗೆ ಹೋಗುವವರೇ ಇಲ್ಲ ಎಂಬಂತಾಗಿದೆ. 

ದಿನಕ್ಕೆರಡು ಬಾರಿ ಈ ಪದಗಳನ್ನು ಹೇಳಿಕೊಳ್ಳಿ, ಅದೃಷ್ಟವನ್ನು ಬದಲಾಯಿಸಿಕೊಳ್ಳಿ!

ಪ್ರಯಾಣಿಕರು ಜಪಾನ್‌ಗೆ ಭೇಟಿ ನೀಡುವ ಯೋಚನೆಯನ್ನೇ ಪುನರ್ವಿಮರ್ಶಿಸುತ್ತಿದ್ದಾರೆ- ವಿಶೇಷವಾಗಿ ಜುಲೈಯಲ್ಲಿ. ಹಾಂಗ್ ಕಾಂಗ್ ಮೂಲದ ಪ್ರವಾಸ ಸಂಸ್ಥೆ WWPKG, ಈಸ್ಟರ್ ಸಮಯದಲ್ಲಿ ಜಪಾನ್‌ಗೆ ಬುಕಿಂಗ್‌ಗಳು ಅರ್ಧದಷ್ಟು ಕಡಿಮೆಯಾಗಿದೆ ಎಂದಿದೆ. ಬೆಂಕಿಗೆ ತುಪ್ಪ ಸುರಿಯುವಂತೆ ಚೀನಾ, ಜಪಾನ್‌ನಲ್ಲಿರುವ ತನ್ನ ಪ್ರಜೆಗಳಿಗೆ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರದಿಂದಿರಲು ಸಲಹೆ ನೀಡಿದೆ. ಇದೂ ಭಯಕ್ಕೆ ಇನ್ನಷ್ಟು ಕಿಡಿ ತಾಕಿಸಿದೆ. 

ಟಾಟ್ಸುಕಿಯ ಭವಿಷ್ಯವಾಣಿ ಬಗ್ಗೆ ಜಪಾನಿನ ಸರಕಾರವೇನೂ ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ ಹವಾಮಾನ ಎಚ್ಚರಿಕೆ ಹಾಗೂ ಸುರಕ್ಷತಾ ಮುನ್ನೆಚ್ಚರಿಕೆಗಳನ್ನೆಲ್ಲ ತೆಗೆದುಕೊಳ್ಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಜಪಾನಿನ ಜನ ಈ ಭವಿಷ್ಯವಾಣಿಯ ಬಗ್ಗೆ ಪರ ವಿರುದ್ಧ ತೀವ್ರ ಚರ್ಚೆಯಲ್ಲಿ ನಿರತರಾಗಿದ್ದಾರೆ. ಕಳವಳಪಡುವವರೇ ಅಧಿಕ. ಅಂತೂ ಇಂತೂ ನಾಸ್ಟ್ರಾಡಾಮಸ್‌, ಬಾಬಾ ವಂಗಾ ಸಾಲಿಗೆ ಈ ಮಾಂಗಾ ಕಲಾವಿದೆ ಕೂಡ ಸೇರಿದಂತಾಗಿದೆ. 

Chanakya Niti: ಚಾಣಕ್ಯರ ಪ್ರಕಾರ, ಇಂಥ ಸಂದರ್ಭಗಳಲ್ಲಿ ʼನೋʼ ಅನ್ನಲೇಬೇಕು!