Asianet Suvarna News Asianet Suvarna News

ಜ್ಯೇಷ್ಠ ಮಾಸದ ಸೂಪರ್ ಮೂನ್; ಈ ಖಗೋಳ ಕೌತುಕ ನೋಡಿ ಸಂತೋಷಪಡಿ

ಈ ವರ್ಷದ ಮೊದಲ ಸೂಪರ್ ಮೂನ್ ಜೂನ್ 14ರಂದು ಗೋಚರಿಸಲಿದೆ. ಈ ಸಂದರ್ಭದಲ್ಲಿ ಬಲು ದೊಡ್ಡ ಗಾತ್ರದಲ್ಲಿಯೂ, ಕೆಂಪಾಗಿಯೂ ಕಾಣಿಸಿಕೊಳ್ಳಲಿದ್ದಾನೆ ಚಂದ್ರ. ಇದಕ್ಕೇನು ಕಾರಣ ನೋಡಿ.

This years first super moon will be visible on Tuesday night skr
Author
Bangalore, First Published Jun 13, 2022, 4:31 PM IST

ಡಾ.ಎ.ಪಿ.ಭಟ್, ಖಗೋಳ ಶಾಸ್ತ್ರಜ್ಞ, ಉಡುಪಿ

ಜೂನ್ 14 ಜ್ಯೇಷ್ಠ ಮಾಸದ ಹುಣ್ಣಿಮೆ. ಆ ದಿನವೇ ಸೂಪರ್ ಮೂನ್(Super Moon) ! ಚಂದ್ರ ಭೂಮಿಯ ಸುತ್ತ 28 ದಿನಗಳಿಗೊಮ್ಮೆ ಸುತ್ತುವ ತಿರುಗಾಟದಲ್ಲಿ ಈ ದಿನ ಪೆರಿಜಿ(Perigee)ಯಲ್ಲಿ, ಅಂದರೆ ಭೂಮಿಗೆ ಸಮೀಪ ಬರುತ್ತಾನೆ. ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿಲೋಮೀಟರ್ ಹತ್ತಿರ ಬರುವುದರಿಂದ ಈ ದಿನದ ಚಂದ್ರ ವಿಶೇಷವಾಗಿ ಕಾಣುತ್ತಾನೆ. ಮೊದಲೇ ಚಂದ್ರನನ್ನು ನೋಡುವುದು ಮಕ್ಕಳಿಂದ ಹಿರಿಯರವೆರೆಗೊಂದು ಸಂಭ್ರಮ. ಈ ದಿನವಂತೂ ಚಂದ್ರನನ್ನು ಮಿಸ್ ಮಾಡುವ ಹಾಗೇ ಇಲ್ಲ. 

ಚಂದ್ರ ತನ್ನ ದೀರ್ಘ ವೃತ್ತಾಕಾರದ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಸಮೀಪ, ಪೆರಿಜಿಯಲ್ಲಿ ಹಾಗೂ ದೂರದ ಅಪೊಜಿ(Apogee)ಯಲ್ಲಿ ಬರುವುದು ವಾಡಿಕೆ. ಈ ಪೆರಿಜಿಗೆ ಬಂದಾಗ ಹುಣ್ಣುಮೆಯಾದರೆ ಸೂಪರ್ ಚಂದ್ರ ದರ್ಶನವಾಗುತ್ತೆ. ಹತ್ತಿರ ಬರುವುದರಿಂದ ಈ ದಿನ ಚಂದ್ರ ಎಂದಿಗಿಂತ ಸುಮಾರು 15 ಅಂಶ ಗಾತ್ರ ದಲ್ಲಿ ದೊಡ್ಡದಾಗಿ 25 ಅಂಶ  ಹೆಚ್ಚಿನ ಬೆಳಕಿಂದ ಖುಷಿ ಕೊಡುತ್ತಾನೆ, ಆಗಸದಲ್ಲಿ ಕಂಗೊಳಿಸುತ್ತಾನೆ. ಬರಿಯ ಕಣ್ಣಿಗೆ ಮುದ ನೀಡುತ್ತಾನೆ.

ಲಕ್ಷ್ಮೀ ನಾರಾಯಣ ಯೋಗದಿಂದ ಈ ನಾಲ್ಕು ರಾಶಿಗಳಿಗೆ ಬಂಪರ್ ಅದೃಷ್ಟ

ಚಂದ್ರ ಭೂಮಿಗಳ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ. ಆದರೆ ಈ ಹುಣ್ಣಿಮೆ(Full moon)ಗೆ ಕೇವಲ  3 ಲಕ್ಷದ 57 ಸಾವಿರ ಕಿ.ಮೀ ಬರುವುದರಿಂದ ಚಂದ್ರನನ್ನು ನೋಡುವುದೇ ಒಂದು ವಿಶಿಷ್ಟ ಅನುಭವ . ಈ ದಿನ ಆತ ಗುಲಾಬಿ ಬಣ್ಣದಲ್ಲಿ ಕಾಣುವುದರಿಂದ ಆತನನ್ನು ಸ್ಟ್ರಾಬೆರಿ ಸೂಪರ್ ಮೂನ್ ಎನ್ನಲಾಗುತ್ತದೆ. ಸಾಮಾನ್ಯ ಚಂದ್ರನಿಗಿಂತ ಶೇ. 15 ರಷ್ಟು ಹೆಚ್ಚು ಪ್ರಕಾಶವಾಗಿ  ಈ ದಿನ ಚಂದ್ರ ಕಾಣಿಸಲಿದ್ದಾನೆ. 

ಈಗ ಜ್ಯೇಷ್ಠ ಮಾಸ. ಭಾರತೀಯರ ಮಾಸಗಳ ಕಲ್ಪನೆಯೇ ಬಲು ಚಂದ. ಹುಣ್ಣಿಮೆಯ ಚಂದ್ರ ಆ ದಿನ ಯಾವ ನಕ್ಷತ್ರದ ಜೊತೆಗಿರುವನೋ ಆ ನಕ್ಷತ್ರದ ಹೆಸರನ್ನು ಆ ತಿಂಗಳಿಗೆ ನಮ್ಮ ಹಿರಿಯರು ಇಟ್ಟಿರುವುದು ಅವರ ಆಕಾಶ ವೀಕ್ಷಣಾ  ಪ್ರೌಢ ಜ್ಞಾನವನ್ನು ತಿಳಿಸುತ್ತದೆ. ವೃಶ್ಚಿಕ ರಾಶಿ(Scorpio)ಯ ಸುಂದರ ನಕ್ಷತ್ರ ಜ್ಯೇಷ್ಠ, ಅಂಟಾರಸ್ ನ ಪಕ್ಕದಲ್ಲಿ ಚಂದ್ರ ಉದಯಿಸುತ್ತದೆ.  ಹಾಗಾಗಿ ಈ ತಿಂಗಳಿನ ಹೆಸರು ಜ್ಯೇಷ್ಠ ಮಾಸವಾಗಿದೆ.

ಅದೇನು ಕಾಕತಾಳೀಯವೋ, ಸತ್ಯ ದರ್ಶನವೋ ತಿಳಿಯದು. ನಮ್ಮ ಭಾರತೀಯ ಪೂರ್ವಿಕರು 27 ನಕ್ಷತ್ರಗಳಲ್ಲಿ ಈ ಅಂಟಾರಸ್ ನ್ನು  ಜ್ಯೇಷ್ಠ ಎಂದು ನಾಮಕರಣ ಅದ್ಹೇಗೆ ಮಾಡಿದರೋ ತಿಳಿಯದು. ಜ್ಯೇಷ್ಠ ಅಂದರೆ ಹಿರಿದು, ದೊಡ್ಡದು ಎಂದರ್ಥ. ಇಂದಿನ ಖಗೋಳ ವಿಜ್ಞಾನವೂ ಈಗ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಈ ಅಂಟಾರಸ್ ತುಂಬಾ ದೊಡ್ಡದೆಂದು ಸಾರಿದ್ದಾರೆ.

ಮಗುಗೆ ಓದಿನಲ್ಲಿ ಆಸಕ್ತಿ ಇಲ್ವಾ? ಸ್ಟಡಿ ರೂಂ ವಾಸ್ತು ಬದಲಿಸಿ..

ಈ ನಕ್ಷತ್ರ ನಮ್ಮ ಸೂರ್ಯನ ವ್ಯಾಸಕ್ಕಿಂತ ಸುಮಾರು 700  ಪಟ್ಟು ದೊಡ್ಡದು.  ಭೂಮಿಗೆ ಚಂದ್ರ ಹತ್ತಿರ ಬಂದಾಗಲೆಲ್ಲಾ ಸಮುದ್ರದ ಭರತ ಇಳಿತಗಳ ಅಬ್ಬರ ಜೋರು. ಇದೀಗ ಮುಂಗಾರು ಅಬ್ಬರಿಸುವ ಸೂಚನೆಯೂ ಇದೆ. ಇದರೊಂದಿಗೆ  ಹುಣ್ಣಿಮೆ ಹಾಗೂ ಸೂಪರ್ ಮೂನ್ ಗಳಿಂದ ಸಮುದ್ರದ ತೆರೆಗಳ ನರ್ತನ ಈ ಸಂದರ್ಭದಲ್ಲಿ ಜೋರಿರಬಹುದು ಎಂದು ಅಂದಾಜಿಸಲಾಗಿದೆ. ಈಗಂತೂ ಎಲ್ಲೆಲ್ಲೂ ಪ್ರಕೃತಿಯ ನರ್ತನವೇ. ನಾವು ಕೇವಲ ಪ್ರೇಕ್ಷಕರು ಮಾತ್ರ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios