ಈಗ ಪಿತೃಪಕ್ಷ ಆರಂಭವಾಗಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಇಟ್ಟುಕೊಳ್ಳಬಾರದು, ಆಚರಣೆ ಮಾಡಬಾರದು ಎಂಬುದು ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ನಿಯಮ. ಆದರೆ, ಕೆಲವೊಂದು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಎಂದೂ ಹೇಳಿಕೊಳ್ಳಬಹುದು. ಕಾರಣ, ಇದೇ ಸಂದರ್ಭದಲ್ಲಿ ಈ ಒಂದು ವ್ರತವನ್ನು ಕೈಗೊಂಡರೆ ಅದು ಫಲಿಸಿದ್ದೇ ಆದಲ್ಲಿ ನಿಮ್ಮನ್ನು ಹಿಡಿಯುವವರೇ ಇರುವುದಿಲ್ಲ, ನೀವು ಮುಟ್ಟಿದ್ದೆಲ್ಲ ಚಿನ್ನವೆಂದೇ ಹೇಳಬಹುದು. 

ಪಿತೃಪಕ್ಷದಲ್ಲಿ ಬರುವ ಅಷ್ಟಮಿಯ ದಿನ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಇದಕ್ಕೆ ಗಜಲಕ್ಷ್ಮೀ ವ್ರತ, ಆನೆ ಪೂಜೆ ಇಲ್ಲವೇ ಮಹಾಲಕ್ಷ್ಮೀ ವ್ರತ ಎಂದೂ ಕರೆಯಲಾಗುತ್ತದೆ. ಈ ದಿನ ಚಿನ್ನ ಖರೀದಿಗೆ ವಿಶೇಷ ಮಹತ್ವವಿದೆ. ಈ ದಿನದಂದು ಚಿನ್ನ ಖರೀದಿಸಿದರೆ ಅದು 8 ಪಟ್ಟು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಸೆಪ್ಟೆಂಬರ್ 10ರಂದು ಈ ವ್ರತದ ದಿನ ಬಂದಿದ್ದು, ಆಚರಿಸಬಹುದಾಗಿದೆ. 

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..! 

ಸಂಜೆ ಸಮಯದಲ್ಲಿ ಮುಹೂರ್ತ
ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಸಂಧ್ಯಾಕಾಲದ ನಂತರವೇ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬರಲಾಗಿದೆ. ಇಲ್ಲೂ ಸಹ ಗಜಲಕ್ಷ್ಮೀ ವ್ರತದ ಪೂಜೆಯನ್ನು ಸಂಜೆ ವೇಳೆಯೇ ಮಾಡಲಾಗುತ್ತದೆ. ಸಂಜೆ ಹೊತ್ತಿಗೆ ಸ್ನಾನ ಮಾಡಿ ಪೂಜಾ ಸ್ಥಳದಲ್ಲಿ ಕೆಂಪು ವಸ್ತ್ರವನ್ನು ಹಾಸಿ, ಅಷ್ಟ ದಳದ ರಂಗವಲ್ಲಿ ಬಿಡಿಸಿ ಅದರ ಮೇಲೆ ಅಕ್ಕಿಯನ್ನಿಟ್ಟು ನೀರು ತುಂಬಿದ ಕಲಶವನ್ನು ಪ್ರತಿಷ್ಠಾಪಿಸಬೇಕು. ಕಲಶದ ಹತ್ತಿರ ಅರಿಶಿಣದಿಂದ ಕಮಲವನ್ನು ಬಿಡಿಸಿ, ಅದರ ಮೇಲೆ ಲಕ್ಷ್ಮೀ ಮೂರ್ತಿಯನ್ನಿಡಬೇಕು. 

ಮಣ್ಣಿನಿಂದ ಮಾಡಿದ ಆನೆಯ ಮೂರ್ತಿಯನ್ನು ಅಂಗಡಿಯಿಂದಲೂ ತರಬಹುದು ಇಲ್ಲವೇ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಬಳಿಕ ಅದಕ್ಕೆ ಬಂಗಾರವನ್ನು ಹಾಕಿ ಸಿಂಗಾರವನ್ನು ಮಾಡಲಾಗುತ್ತದೆ. ಆದರೆ, ಅಂದೇ ಖರೀದಿಸಿದ ಬಂಗಾರವನ್ನು ಸಹ ಕೆಲವರು ಹಾಕುತ್ತಾರೆ. ಸ್ಥಿತಿವಂತರಿದ್ದರೆ ಬೆಳ್ಳಿ ಇಲ್ಲವೇ ಬಂಗಾರದ ಆನೆಯನ್ನು ತಂದರೆ ಇನ್ನೂ ಉತ್ತಮ ಎನ್ನಲಾಗಿದೆ. ಬಳಿಕ ಲಕ್ಷ್ಮೀ ಮಾತೆಯನ್ನು ಕಮಲದ ಹೂವಿನಿಂದ ಪೂಜೆ ಮಾಡಬೇಕು. 

ಇದನ್ನು ಓದಿ: ಸೆಪ್ಟೆಂಬರ್‌ನಲ್ಲಿ ಜನಿಸಿದವರು ಹೀಗಿರ್ತಾರೆ..! 

ಲಕ್ಷ್ಮೀ ಪೂಜೆ ವೇಳೆ ಈ ವಸ್ತುಗಳು ಇರಲೇಬೇಕು
ಲಕ್ಷ್ಮೀ ಪೂಜೆಯನ್ನು ನೆರವೇರಿಸುವ ವೇಳೆ ಈ ಕೆಲವು ವಸ್ತುಗಳು ಇರಲೇಬೇಕಾಗುತ್ತದೆ. ಅವುಗಳಾದ ಬಂಗಾರ ಇಲ್ಲವೇ ಬೆಳ್ಳಿಯ ನಾಣ್ಯ ಬೇಕೇ ಬೇಕು. ಒಮ್ಮೆ ಸಾಧ್ಯವಾಗದಿದ್ದರೆ ರೂಪಾಯಿ ನಾಣ್ಯವನ್ನೇ ಇಡಬಹುದು. ಇದರ ಜೊತೆಗೆ ಸಿಹಿ ಮತ್ತು ಹಣ್ಣುಗಳನ್ನು ಇಟ್ಟು ಲಕ್ಷ್ಮೀ ಮಂತ್ರವನ್ನು ಜಪಿಸಬೇಕು. ಓಂ ಯೋಗ ಲಕ್ಷ್ಮೈ ನಮಃ, ಓಂ ಆದ್ಯ ಲಕ್ಷ್ಮೈ ನಮಃ, ಓಂ ಸೌಭಾಗ್ಯ ಲಕ್ಷ್ಮೈ ನಮಃ ಎಂಬ ಮಂತ್ರಗಳನ್ನು 108 ಬಾರಿ ಶ್ರದ್ಧೆ ಮತ್ತು ನಿಷ್ಠೆಯಿಂದ ಜಪ ಮಾಡಬೇಕು. ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ ಕಥಾ ಶ್ರವಣ ಮಾಡಬೇಕು. ನಂತರ ಲಕ್ಷ್ಮೀಗೆ ಆರತಿ ಮಾಡಿ ನೈವೇದ್ಯವನ್ನು ಸಮರ್ಪಣೆ ಮಾಡಬೇಕು. ಪ್ರಸಾದವನ್ನು ಹೆಚ್ಚು ಹೆಚ್ಚು ಮಂದಿಗೆ ಹಂಚಿಕೆ ಮಾಡುವುದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗಿ, ಧನಪ್ರಾಪ್ತಿಯಾಗುವಂತೆ ಮಾಡುತ್ತಾಳೆ. ಜೊತೆಗೆ ಧನ-ಧಾನ್ಯಗಳು ವೃದ್ಧಿಯಾಗುತ್ತವೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. 

ಗಜಲಕ್ಷ್ಮೀ ವ್ರತದ ಕಥೆ
ಒಂದು ಹಳ್ಳಿಯಲ್ಲಿ ಬಡವ ಬ್ರಾಹ್ಮಣನಿದ್ದು, ಆತ ಶ್ರದ್ಧೆಯಿಂದ ಸದಾ ವಿಷ್ಣುವನ್ನು ಆರಾಧಿಸುತ್ತಿದ್ದ. ಅವನ ಭಕ್ತಿಗೆ ಮೆಚ್ಚಿದ ವಿಷ್ಣು ಪ್ರತ್ಯಕ್ಷನಾಗಿ ನಿನಗೇನು ವರಬೇಕು ಎಂದು ಬ್ರಾಹ್ಮಣನ ಬಳಿ ಕೇಳುತ್ತಾನೆ. ಆಗ ವರವನ್ನು ಕೇಳುವ ಬ್ರಾಹ್ಮಣನು, ಲಕ್ಷ್ಮೀ ನಮ್ಮ ಮನೆಯಲ್ಲಿ ಸದಾ ವಾಸವಾಗಿರಲಿ ಎಂದು ಬೇಡಿಕೊಳ್ಳುತ್ತಾನೆ. ಆಗ ವಿಷ್ಣುವು ಲಕ್ಷ್ಮೀಯನ್ನು ಒಲಿಸಿಕೊಳ್ಳುವ ಮಾರ್ಗವನ್ನು ಹೇಳುತ್ತಾನೆ. ದೇವಸ್ಥಾನದ ಎದುರಿಗೆ ಸಗಣಿ ತಟ್ಟುತ್ತಿರುವ ಒಬ್ಬ ಮಹಿಳೆ ಇರುತ್ತಾಳೆ, ಆಕೆಗೆ ನಿಮ್ಮ ಮನೆಗೆ ಬರುವಂತೆ ಆಮಂತ್ರಣ ಕೊಡಬೇಕು. ಆ ಮಹಿಳೆಯೇ ಲಕ್ಷ್ಮೀ ದೇವಿಯಾಗಿರುತ್ತಾಳೆ ಎಂದು ಹೇಳುತ್ತಾನೆ. 

ಇದನ್ನು ಓದಿ: ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..? 

ಹೀಗೆ ಬ್ರಾಹ್ಮಣನು ದೇವಸ್ಥಾನವೊಂದರ ಮುಂದೆ ಕುಳಿತಾಗ ಅಲ್ಲಿ ಸಗಣಿ ತಟ್ಟುತ್ತಿರುವ ಮಹಿಳೆ ಕಾಣುತ್ತಾಳೆ. ಆಕೆಯೇ ಲಕ್ಷ್ಮೀ ಎಂದು ಅರಿತು ಮನೆಗೆ ಆಹ್ವಾನಿಸುತ್ತಾನೆ. ಲಕ್ಷ್ಮೀ ದೇವಿಗೆ ಇದು ಮಹಾವಿಷ್ಣುವಿನ ಕೆಲಸ ಎಂದು ಅರಿವಾಗಿ, ಬಡ ಬ್ರಾಹ್ಮಣ ಬಳಿ ಹೀಗೆ ಹೇಳುತ್ತಾಳೆ, ನಾನು ಹೇಳುವ ವ್ರತವನ್ನು ಮಾಡಿದರೆ ನಾನು ನಿಮ್ಮ ಮನೆಗೆ ಬಂದು ನೆಲೆಸುವೆ ಎಂದು ಹೇಳುತ್ತಾಳೆ. ಲಕ್ಷ್ಮೀ ದೇವಿ ಹೇಳಿದಂತೆ 16 ದಿನ ವ್ರತ ಮಾಡಿ, ಕೊನೆಯ ದಿನ ಚಂದ್ರನನ್ನು ನೋಡಿ ಅರ್ಘ್ಯ ಕೊಟ್ಟು ಮನಸ್ಸಿನ ಇಚ್ಛೆಯನ್ನು ಬೇಡಿಕೊಳ್ಳುತ್ತಾನೆ. ಹೀಗೆ ಗಜಲಕ್ಷ್ಮೀ ವ್ರತದ ಪರಂಪರೆ ಆರಂಭವಾಯಿತು.