Asianet Suvarna News Asianet Suvarna News

ಚಿತ್ರದುರ್ಗ: ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ, ಅಗತ್ಯ ಕ್ರಮಕ್ಕೆ ಸಚಿವ ಶ್ರೀರಾಮುಲು ಸೂಚನೆ

ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ರೀತಿಯ ಮೂಲಸೌಕರ್ಯಗಳ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು: ಸಚಿವ ಬಿ.ಶ್ರೀರಾಮುಲು 

Sriramulu Instructed for Necessary Action During Shri Gurutipperudraswamy Fair in Chitradurga grg
Author
First Published Feb 5, 2023, 1:30 AM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಫೆ.05): ಮಧ್ಯ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷವು ಜಾತ್ರೆ ಆಯೋಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುವ ಬದಲಿಗೆ ಶಾಶ್ವತ ಯೋಜನೆಗಳನ್ನು ಅನುಷ್ಠಾನ ಮಾಡಲು ಸಂಕಲ್ಪ ಮಾಡಬೇಕು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಹೇಳಿದರು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರುತಿಪ್ಪೇರುದ್ರ ಸ್ವಾಮಿ ದೇವಸ್ಥಾನದ ಒಳಮಠದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ ದೊಡ್ಡ ರಥೋತ್ಸವದ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ರೀತಿಯ ಮೂಲಸೌಕರ್ಯಗಳ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.

ಶ್ರೀಗುರುತಿಪ್ಪೇರುದ್ರಸ್ವಾಮಿ ಮಹೋತ್ಸವವು ಮಾ.3 ರಿಂದ 13 ರವರೆಗೆ ನಡೆಯಲಿದ್ದು, ದೊಡ್ಡ ರಥೋತ್ಸವವು ಮಾರ್ಚ್ 10 ರಂದು ನಿಗಧಿಯಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಸೌಲಭ್ಯಗಳ ಕೊರತೆ ಎದುರಾಗಬಾರದು. ಕುಡಿಯುವ ನೀರು, ರಸ್ತೆ, ಆರೋಗ್ಯ, ನೈರ್ಮಲ್ಯ ಸೇರಿದಂತೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,  ಜಾತ್ರಾ ಮಹೋತ್ಸವಕ್ಕೆ 3 ರಿಂದ 4 ಲಕ್ಷ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ. ಕುಡಿಯುವ ನೀರು, ವಸತಿ, ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ನೀರಿನ ಅಗತ್ಯತೆಗಾಗಿ 40 ಟ್ಯಾಂಕರ್‍ಗಳನ್ನು ಒದಗಿಸಬೇಕು, ಕುಡಿಯುವ ನೀರು ಪೂರೈಸುವ ನೀರಿನ ಮೂಲಗಳ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ ಜಿಲ್ಲಾಧಿಕಾರಿಗಳು, ಈ ಬಾರಿಯ ಜಾತ್ರೆಯನ್ನು ಎಲ್ಲರ ಸಹಕಾರ ಹಾಗೂ ಸಮನ್ವಯದಿಂದ ಅದ್ಧೂರಿಯಾಗಿ ವ್ಯವಸ್ಥಿತವಾಗಿ, ಸುಗಮವಾಗಿ ಜಾತ್ರೆ ನಡೆಸೋಣ, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಬೆಳಗಾವಿ: ನಿರ್ಬಂಧದ ನಡುವೆಯೂ ಉಳವಿ, ಯಲ್ಲಮ್ಮನಗುಡ್ಡಕ್ಕೆ ಚಕ್ಕಡಿ ಯಾತ್ರೆ..!

ಚಿಕ್ಕಕೆರೆ ಜಾಲಿ ತೆರವಿಗೆ ಸಂಕಲ್ಪ: 

ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಪಾರ್ಕಿಂಗ್ ವ್ಯವಸ್ಥೆ  ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 600 ಎಕರೆ ವಿಸ್ತೀರ್ಣದ ಚಿಕ್ಕಕೆರೆಯಲ್ಲಿ ಬೆಳೆದ ಗಿಡಗಂಟಿ, ಜಾಲಿ ತೆರವಿಗೆ ಸಚಿವ ಶ್ರೀರಾಮುಲು ಸಂಕಲ್ಪ ಮಾಡಿದರು. ಒಂದು ತಿಂಗಳಲ್ಲಿ ಜಾಲಿ ತೆಗೆಸಬೇಕು.  ಸ್ವತಃ ಎರಡು ದಿನಗಳ ಕಾಲ ಜಾಲಿ ತೆಗೆಯುವ ಕೆಲಸದಲ್ಲಿ ಶ್ರಮವಹಿಸುತ್ತೇನೆ. 10 ರಿಂದ 15 ಜೆಸಿಬಿಗಳನ್ನು ನಾನೇ ನೀಡುತ್ತೇನೆ ಹಾಗೂ ಸ್ವಚ್ಛವಾದ ಕೆರೆಯಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ಅವರು ಹೇಳಿದರು.  

ಜಾತ್ರಾ ಮಹೋತ್ಸವಕ್ಕೆ 200 ವಿಶೇಷ ಬಸ್: ನಾಯಕನಹಟ್ಟಿ ಜಾತ್ರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 200 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಚಿತ್ರದುರ್ಗ, ಚಳ್ಳಕರೆ, ಬಳ್ಳಾರಿ, ದಾವಣಗೆರೆ ನಗರಗಳಿಂದ ಬಸ್‍ಗಳು ಕಾರ್ಯಾಚರಣೆ ನಡೆಸಲಿವೆ. ಚಿತ್ರದುರ್ಗ 100,  ದಾವಣಗೆರೆ 50, ಬಳ್ಳಾರಿಯಿಂದ 30 ಬಸ್‍ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿದರು. ಸರ್ಕಾರಿ ಬಸ್‍ಗಳ ಜೊತೆ ಖಾಸಗಿ ಬಸ್‍ಗಳ ಓಡಾಟಕ್ಕೂ ಅನುವು ಮಾಡಿಕೊಡಲಾವುದು ಎಂದು ಸಚಿವ ಶ್ರೀರಾಮುಲು ಹೇಳಿದರು.

ಮುಕ್ತಿ ಬಾವುಟ ಹರಾಜಿಗೆ ಕಠಿಣ ನಿಯಮ ರೂಪಿಸಿ: 

ಕಳೆದ ಬಾರಿ ಜಾತ್ರೆ ಸಂದರ್ಭದಲ್ಲಿ ಮುಕ್ತಿ ಬಾವುಟದ ಯಶಸ್ವಿ ಹರಾಜುದಾರರು ಇದುವರೆಗೂ ಪೂರ್ಣ ಮೊತ್ತ ಪಾವತಿಸಿಲ್ಲ.  ಹೀಗಾಗಿ ರಥೋತ್ಸವ ಸಂದರ್ಭದಲ್ಲಿನ ಮುಕ್ತಿ ಬಾವುಟದ ಹರಾಜಿಗೆ ಸಂಬಂಧಪಟ್ಟಂತೆ ಕಠಿಣ ನಿಯಮಾವಳಿ ರೂಪಿಸಬೇಕು. ಯಶಸ್ವಿ ಹರಾಜು ದಾರರಿಂದ ಮುಂಗಡವಾಗಿ ಚೆಕ್ ತೆಗದುಕೊಳ್ಳಬೇಕು. ಹರಾಜು ಕೂಗಿ ಹಣ ಪಾವತಿಸದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು  ಗ್ರಾಮಸ್ಥ ತಿಪ್ಪೇಶ್  ಸಭೆಯಲ್ಲಿ  ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.  ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಸಭೆ ನಡೆಸಿ ಅಭಿಪ್ರಾಯ ಪಡೆದು ಸೂಕ್ತ ನಿಯಮ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು  ಹೇಳಿದರು.

ಈ ಭಾಗದಲ್ಲಿ ಕಳದ 5 ವರ್ಷಗಳ ಪಟ್ಟಣ ಸಂಕರ್ಪ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಪಟ್ಟಣಕ್ಕೆ ಆಗಮಿಸುವವರಿಗೆ ತೊಂದರೆ ಯಾಗುತ್ತಿದೆ. ಇಲಾಖೆಯವರು ಪ್ರತಿ ವರ್ಷವೂ ಸಬೂಬು ಹೇಳುತ್ತಾರೆ. ನಮಗೆ ಸಾಕಾಗಿದೆ. ಇಲಾಖೆ ವತಿಯಿಂದ ರಸ್ತೆ ಮಾಡದಿದ್ದರೆ, ನಾವೇ ಚಂದಾ ಎತ್ತಿ ರಸ್ತೆ ನಿರ್ಮಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಭೆಯಲ್ಲೇ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ರಸ್ತೆಯಲ್ಲಿ ಅಪಘಾತವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ತಾತ್ಕಾಲಿಕವಾಗಿ ರಸ್ತೆಯನ್ನು ಡಾಂಬರೀಕರಣಗೊಳಿಸಿ ಸರಿಪಡಿಸಿ, ಜಾತ್ರೆ ನಂತರ ಶಾಶ್ವತ ಕಾಮಗಾರಿ ಕೆಲಸ ಶುರು ಮಾಡಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು..

ದೇಗುಲದ ಸಮೀಪದಲ್ಲೇ ಪಾರ್ಕಿಂಗ್‌ ವ್ಯವಸ್ಥೆ ಮಾಡಿ: 

ಭಕ್ತಾಧಿಗಳಿಗೆ ಅನುಕೂಲವಾಗುವಂತೆ ದೇಗುಲದ ಸಮೀಪದಲ್ಲಿಯೇ ಪಾಕಿರ್ಂಗ್ ವ್ಯವಸ್ಥೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ವರ್ಷ ದೂರದಲ್ಲಿ ಪಾಕಿರ್ಂಗ್ ವ್ಯವಸ್ಥೆ ಮಾಡಿದ್ದರಿಂದಾಗಿ ವಯೋವೃದ್ಧರು, ಮಹಿಳೆ, ಮಕ್ಕಳು, ಗರ್ಭಿಣಿಯರು ರಥೋತ್ಸವ ವೀಕ್ಷಣೆಗೆ ತೆರಳಲು ತುಂಬಾ ತೊಂದರೆ ಅನುಭವಿಸಿರುವುದು ಗಮನಕ್ಕೆ ಬಂದಿದೆ.  ಹಾಗಾಗಿ ಈ ಬಾರಿ ದೇಗುಲದ ಸಮೀಪದಲ್ಲಿಯೇ ಪಾರ್ಕಿಗ್ ವ್ಯವಸ್ಥೆ ಮಾಡಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದರು. ಜಾತ್ರೆ ಒಳಗಾಗಿ  ಪಟ್ಟಣ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕ ಸರಿಪಡಿಸಬೇಕು. ಇದುವರೆಗೂ ಕ್ರಮಬದ್ಧವಾಗಿ ಜಾತ್ರೆ ಮಹೋತ್ಸವ ಆಯೋಜಿಸಲಾಗಿದೆ. ಕಳೆದ ಬಾರಿ ಎದುರಿಸಿದ ತೊಂದರೆಗಳನ್ನು ಈ ಬಾರಿ ಪರಿಹರಿಸಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.

ಮಂತ್ರಕ್ಕೆ ಮಾವಿನಕಾಯಿ ಉದ್ರಿಲ್ಲವೆಂದ್ರೂ ಜೇಬಿಗೆ ಹಣ ಬರುತ್ತೆ!

ರಸ್ತೆ ಗುಂಡಿ ಮುಚ್ಚಲು ಸೂಚನೆ: 

ರಥ ಬೀದಿ ರಸ್ತೆ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಎಲ್ಲ ರಸ್ತೆ ಮಾರ್ಗಗಳಲ್ಲಿ ಬಿದ್ದಿರುವ ಗುಂಡಿಯನ್ನು ತಕ್ಷಣವೇ ಮುಚ್ಚುವ ಕೆಲಸ ಮಾಡಬೇಕು. ರಸ್ತೆಯ ಪಕ್ಕದಲ್ಲಿರುವ ಜಾಲಿಯನ್ನು ತೆರವುಗೊಳಿಸಬೇಕು, ನಗರದಾದ್ಯಂತ ಬೀದಿದೀಪದ ವ್ಯವಸ್ಥೆ ಆಗಬೇಕು  ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

7 ಕಡೆ ಚೆಕ್ ಪೋಸ್ಟ್, ಪಾರ್ಕಿಂಗ್:  

ಜಾತ್ರಾ ಮಹೋತ್ಸವ ಅಂಗವಾಗಿ 7 ಕಡೆ ಚೆಕ್ ಪೋಸ್ಟ್‌ ಹಾಗೂ ಪಾರ್ಕಿಂಗ್ ಸ್ಥಾಪಿಸಲಾಗುವುದು. 30 ಕಡೆ ಸಿಸಿ ಟಿವಿ ಕ್ಯಾಮೆರಾ, 3 ಕಡೆ ವಾಚ್ ಟವರ್, 22 ಕಡೆ ಸಹಾಯವಾಣಿ ಕೇಂದ್ರ ಸ್ಥಾಪನೆ, ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ, ಕಾನ್ಸ್‍ಟೇಬಲ್ ಸೇರಿದಂತೆ 2550 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸಭೆಗೆ ಮಾಹಿತಿ ನೀಡಿದರು. 

Follow Us:
Download App:
  • android
  • ios