ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.. ಹಾಗೆ, ಈ ನಾಲ್ಕು ವಿಷಯಗಳಿಗೆ ಖರ್ಚು ಮಾಡಿದರೆ ಕಳೆದುಕೊಳ್ಳುವುದಕ್ಕಿಂತ ಗಳಿಸೋದೇ ಜಾಸ್ತಿ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಚಾಣಕ್ಯ.
ಆಚಾರ ಚಾಣಕ್ಯ(Acharya Chanakya) ಉತ್ತಮ ಅರ್ಥ ಶಾಸ್ತ್ರಜ್ಞ(economist) ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಹಣವನ್ನು ಹೇಗೆ ಗಳಿಸಬೇಕು, ಗಳಿಸಿದ್ದನ್ನು ಹೇಗೆ ಉಳಿಸಬೇಕು, ಉಳಿಸಿದ್ದನ್ನು ಯಾವುದಕ್ಕಾಗಿ ಖರ್ಚು ಮಾಡಬೇಕು ಎಲ್ಲ ವಿಚಾರಗಳ ಬಗ್ಗೆಯೂ ತಿಳಿಸಿದ್ದಾರೆ. ಚಾಣಕ್ಯ ನೀತಿ(Chanakya Niti) ಎಂಬುದು ಸಾರ್ವಕಾಲಿಕವಾಗಿ ಮೌಲ್ಯಯುತವಾಗಿ ಬಳಕೆಯಲ್ಲಿದೆ.
ಹಣದ ವಿಚಾರದಲ್ಲಿ ಚಾಣಕ್ಯ ದುಂದುವೆಚ್ಚವನ್ನು ಎಂದೂ ಬೆಂಬಲಿಸಲಿಲ್ಲ. ಹಾಗಂಥ ಖರ್ಚು ಮಾಡುವಲ್ಲಿ ಮಾಡಲೇಬೇಕು ಎಂಬುದನ್ನೂ ಹೇಳಿದ್ದಾರೆ. ಹಣದ ಉಳಿತಾಯ ಬಹಳ ಮಹತ್ವದ್ದಾಗಿದೆ. ಅಂತೆಯೇ, ಕೆಲ ವಿಷಯಗಳಿಗಾಗಿ ಖರ್ಚು ಮಾಡುವುದು, ಅಂದರೆ 'ಅರ್ಥ'ಪೂರ್ಣ ಖರ್ಚುಗಳು ಕೂಡಾ ಅಷ್ಟೇ ಮಹತ್ವದ್ದಾಗಿದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಹೌದು, ದೊಡ್ಡವರು ಕೂಡಾ ತಮ್ಮ ಅನುಭವದಲ್ಲಿ ಹೇಳುವುದನ್ನು ನೀವು ಕೇಳಿರಬಹುದು- ಅಗತ್ಯ ಬಿದ್ದಲ್ಲಿ ಖರ್ಚು ಮಾಡಲೇಬೇಕು. ಹಾಗೆಯೇ ಕಷ್ಟ ಕಾಲಕ್ಕಾಗಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಲೂಬೇಕು ಎಂದು. ಆದರೆ, ಹೀಗೆ ಖರ್ಚು ಮಾಡುವಾಗ ಕೆಲವೊಂದು ನೈತಿಕ ಮೌಲ್ಯಗಳನ್ನಿಟ್ಟುಕೊಳ್ಳಬೇಕು ಎನ್ನುತ್ತಾರೆ ಚಾಣಕ್ಯ. ಹೀಗೆ ಮೌಲ್ಯಗಳ ಆಧಾರದಲ್ಲಿ ಖರ್ಚು ಮಾಡಿದಾಗ, ನಮ್ಮ ಗಳಿಕೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹಾಗಾದರೆ, ಹಣ ಕೊಟ್ಟಷ್ಟೂ ಹೆಚ್ಚುವುದು ಯಾವೆಲ್ಲ ಸಂದರ್ಭಗಳಲ್ಲಿ ನೋಡೋಣ.
ಧಾರ್ಮಿಕ ವಿಷಯಗಳಿಗೆ(work of religion)
ಚಾಣಕ್ಯ ನೀತಿಯ ಪ್ರಕಾರ, ಧಾರ್ಮಿಕ ವಿಷಯಗಳಿಗಾಗಿ ಕೊಟ್ಟ ಹಣ ಯಾವತ್ತೂ ಫಲದಾಯಕವಾಗಿರುತ್ತದೆ. ಹಾಗೆ ಧರ್ಮ ಸಂಬಂಧಿ ವಿಷಯಗಳಿಗಾಗಿ ಖರ್ಚು ಮಾಡಿದರೆ ಅದರ ಫಲವನ್ನು ಜನ್ಮಜನ್ಮಗಳಲ್ಲೂ ಅನುಭವಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಕೈಲಾದಷ್ಟು ಧರ್ಮ ಕರ್ಮಗಳನ್ನು ಮಾಡಬೇಕು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಸಾಧ್ಯವಾದಾಗಲೆಲ್ಲ ನಡೆಸಬೇಕು. ಇದರಿಂದ ನಿಮ್ಮ ಪ್ರಸಿದ್ಧಿ ಕೂಡಾ ಹೆಚ್ಚುತ್ತದೆ.
ಸ್ನೇಹಿತನಂಥ ಮೈದುನ ಯಾವ ರಾಶಿಯವನಾಗಿರುತ್ತಾನೆ ಗೊತ್ತಾ?
ಶಿಕ್ಷಣಕ್ಕಾಗಿ
ಅಸಹಾಯಕರಿಗೆ, ಬಡವರಿಗೆ ಸಹಾಯ ಮಾಡಬೇಕಾಗಿ ಬಂದಾಗ ಎಂದಿಗೂ ಹಿಂದೆ ಬೀಳಬೇಡಿ. ಕಷ್ಟದಲ್ಲಿದ್ದವರ ಸಹಾಯಕ್ಕಾಗಿ ಖರ್ಚು ಮಾಡುವುದು ಕೂಡಾ ಅತ್ಯಂತ ಹೆಚ್ಚು ಲಾಭದಾಯಕವಾಗಿದೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಸಮಾಜ ಕಟ್ಟಲು ನೆರವಾದಂತಾಗುತ್ತದೆ. ಆಹಾರ ಹಾಗೂ ಶಿಕ್ಷಣಕ್ಕಾಗಿ ಸಹಾಯ ಬೇಡಿ ಬಂದವರಿಗಾಗಿ ಖರ್ಚು ಮಾಡುವುದು ಬಹಳ ಉತ್ತಮ ಕಾರ್ಯವಾಗಿದೆ. ಇದು ಉತ್ತಮ ಭವಿಷ್ಯದ ತಲೆಮಾರನ್ನು ಕಟ್ಟುವ ಕಾರ್ಯವಾಗಿದೆ. ಹಾಗಾಗಿ, ನಿಮ್ಮ ಆದಾಯದ ಒಂದು ಭಾಗವನ್ನು ಇಂಥ ಕಾರ್ಯಕ್ಕಾಗಿ ತೆಗೆದಿಡಿ. ಮಕ್ಕಳ ಶಿಕ್ಷಣದ ವಿಷಯದಲ್ಲೂ ಅಷ್ಟೇ, ಖರ್ಚಿಗೆ ಹಿಂದೆ ಬೀಳಬೇಡಿ. ಶಿಕ್ಷಣ, ಕಲಿಕೆ ಕೊಟ್ಟಷ್ಟೂ ಪಡೆಯುವುದೇ ಹೆಚ್ಚು ಎಂಬುದು ತಾಳ್ಮೆಯಿಂದ ನೋಡಿದಾಗ ತಿಳಿಯುತ್ತದೆ.
ಆರೋಗ್ಯಕ್ಕಾಗಿ
ಆರೋಗ್ಯದ ವಿಷಯ ಬಂದಾಗ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡಬಾರದು. ಆರೋಗ್ಯವಿದ್ದರೆ, ಖರ್ಚು ಮಾಡಿದ್ದರ ದುಪ್ಪಟ್ಟು ದುಡಿಯಬಹುದು. ಆರೋಗ್ಯವೇ ಇಲ್ಲದಿದ್ದರೆ, ದುಡಿಯುವುದಾದರೂ ಹೇಗೆ? ಕೇವಲ ನಿಮ್ಮ ಹಾಗೂ ಕುಟುಂಬದವರ ಆರೋಗ್ಯವಲ್ಲ, ಬಡವರ, ಅಸಹಾಯಕರ ಆರೋಗ್ಯಕ್ಕಾಗಿಯೂ ಸಾಧ್ಯವಾದಷ್ಟು ಸಹಾಯ ಮಾಡಿ. ಅವರು ಬದುಕು ಕಟ್ಟಿಕೊಳ್ಳಲು ನೆರವಾಗಿ. ಇದರಿಂದ ದೇವರು ಕೂಡಾ ನಿಮ್ಮ ವಿಷಯದಲ್ಲಿ ಕರುಣಾಮಯಿಯಾಗುತ್ತಾನೆ.
ಹಕ್ಕಿಗಳಿಗೆ ಆಹಾರ ನೀಡಿ ಅದೃಷ್ಟ ಹೆಚ್ಚಿಸ್ಕೊಳೋದು ಹೇಗೆ?
ಸಾಮಾಜಿಕ ಕಾರ್ಯ(social work)
ಚಾಣಕ್ಯ ನೀತಿಶಾಸ್ತ್ರದ ಪ್ರಕಾರ, ಸಾಮಾಜಿಕ ಕಾರ್ಯಕ್ಕಾಗಿ ಹಣ ಖರ್ಚು ಮಾಡುವುದರಿಂದ ಅದು ಗೌರವ, ಹೆಸರು ನೀಡುವುದರೊಂದಿಗೆ ಪ್ರಗತಿಯನ್ನು ಕೂಡಾ ನೀಡುತ್ತದೆ. ನಮಗೆ ಸಮಾಜ ಎಷ್ಟೊಂದೆಲ್ಲವನ್ನು ಕೊಟ್ಟಿರುತ್ತದೆ, ನಾವದರಲ್ಲಿ ಸಣ್ಣ ಭಾಗವೊಂದನ್ನು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮ ಕರ್ತವ್ಯವೂ ಆಗಿದೆ. ಇದರಿಂದ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
