ಇಂದು ಅಕ್ಷಯ ತೃತೀಯಾ: ಈ ದಿನ ಏನು ಕೊಟ್ಟರೂ ಅಕ್ಷಯವಾಗುವ ದಿನ!

ವೈಶಾಖಮಾಸದ ಶುಕ್ಲಪಕ್ಷದ ತೃತೀಯಾ ದಿನವೇ ಅಕ್ಷಯ ತೃತೀಯಾ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯವೇ ಇಲ್ಲ ಎಂಬ ಕಾರಣಕ್ಕೆ ಇದನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗಿದೆ.

Special Article By Ganesha Bhatta Over Akshaya Tritiya gvd

ಗಣೇಶ ಭಟ್ಟ, ಕುಮಟಾ

ವಿಷ್ಣುವಿನ ದಶಾವತಾರಗಳಲ್ಲಿ ಆರನೇ ಅವತಾರವಾದ ಜನ್ಮತಃ ಬ್ರಾಹ್ಮಣ ಹಾಗೂ ಕರ್ಮದಿಂದ ಕ್ಷತ್ರಿಯನಾದ ಪರಶುರಾಮರ ಅವತಾರವಾದ ದಿನ ಅಕ್ಷಯ ತೃತೀಯಾ. ಅಂದರೆ ಇಂದು ಪರಶುರಾಮ ಜಯಂತಿಯೂ ಹೌದು. ಹಾಗೆಯೇ ಇದು ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ದಿನ. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯಪಾತ್ರ ನೀಡಿದ ದಿನ. ಹಿಂದೂ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಜನಿಸಿದ ದಿನವೂ ಹೌದು. ಕಲ್ಯಾಣ ಕ್ರಾಂತಿಯ ರೂವಾರಿ ಬಸವೇಶ್ವರರ ಜನ್ಮದಿನವೂ ಹೌದು. ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯೆಯು ವರ್ಷದ ಮೂರುವರೆ ಶುಭದಿನಗಳಾದ ಅಕ್ಷಯ ತೃತೀಯೆ, ವಿಜಯದಶಮಿ, ದೀಪಾವಳಿ ಹಾಗೂ ಬಲಿಪಾಡ್ಯದ ಅರ್ಧ ದಿನಗಳಲ್ಲಿ ಒಂದಾಗಿದೆ. ಆ ಕಾರಣಕ್ಕಾಗಿ ಈ ದಿನದಂದು ಯಾವುದೇ ಶುಭಕಾರ್ಯವನ್ನು ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ದಾನದ ದಿನ ಅಕ್ಷಯ ತೃತೀಯಾ: ‘ವೈಶಾಖಶುಕ್ಲತೃತೀಯಾ ಅಕ್ಷಯ್ಯತೃತೀಯೋಚ್ಯತೇ’ ಎಂದು ನಿರ್ಣಯ ಸಿಂಧು ಹೇಳುತ್ತದೆ. ಅಂದರೆ, ವೈಶಾಖಮಾಸದ ಶುಕ್ಲಪಕ್ಷದ ತೃತೀಯಾ ದಿನವೇ ಅಕ್ಷಯ ತೃತೀಯಾ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯವೇ ಇಲ್ಲ ಎಂಬ ಕಾರಣಕ್ಕೆ ಈ ದಿನವನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗಿದೆ. ಭವಿಷ್ಯ ಪುರಾಣದಲ್ಲಿ ‘ಯತ್ಕಿಂಚಿತ್‌ ದೀಯತೇದಾನಂ ಸ್ವಲ್ಪಂ ವಾ ಯದಿ ವಾ ಬಹುತತ್ಸರ್ವಂ ಅಕ್ಷಯಂ ಯಸ್ಮಾತ್‌ ತೇನೇಯಂ ಅಕ್ಷಯಾ ಸ್ಮೃತಾ’ ಎಂದು ಹೇಳಲಾಗಿದೆ. ಈ ದಿನದಂದು ಸ್ವಲ್ಪವಾಗಲಿ, ಬಹಳವಾಗಲಿ ಅಥವಾ ಎಷ್ಟೇ ದಾನ ಮಾಡಿದರೂ ಅದರ ಫಲ ಅಕ್ಷಯವಾಗುವುದು.

ಇಂದು ಬಸವ ಜಯಂತಿ: ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ

ಅಕ್ಷಯ ಫಲದಾಯಿನಿಯಾದ ಈ ದಿನ ದೇವ-ಪಿತೃಪೂಜೆಗೆ ಪ್ರಶಸ್ತವಾಗಿದೆ. ಗಂಗಾದಿ ಪುಣ್ಯನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ, ಭಗವಂತನ್ನು ಉದ್ದೇಶಿಸಿ ಹೋಮ,ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸಲ್ಪಡುವ ನೀರಿನ ಪಾತ್ರೆ, ಬಂಗಾರ, ಹಸಿವು ಹೋಗಲಾಡಿಸುವ ವಿವಿಧ ಬಗೆಯ ಆಹಾರಗಳು, ಬಾಯಾರಿಕೆ ನೀಗಿಸುವ ಕಬ್ಬಿನರಸ ಮುಂತಾದ ಪಾನೀಯಗಳು, ಅಕ್ಕಿ, ಗೋದಿ, ಕಡಲೆ ಮುಂತಾದ ಧಾನ್ಯಗಳು, ಹಿಟ್ಟು, ಮೊಸರು, ಅನ್ನ, ಸಸ್ಯ ಒಟ್ಟಿನಲ್ಲಿ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ಆಹಾರ, ವಸ್ತು ಮೊದಲಾದವುಗಳನ್ನು ಸತ್ಪಾತ್ರರಿಗೆ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ಬಳಿಕ ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ ಅನಂತಫಲ ದೊರಕುವುದು ಎಂಬ ನಂಬಿಕೆ.

ಬೃಹತ್ಪರಾಶರ ಸಂಹಿತೆಯಲ್ಲಿ​ ‘ದಾನಮೇಕಂಕಲೌಯುಗೇ’ ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಧಿ ಮುಂತಾದವುಗಳ ಸಹಾಯದ ಅವಶ್ಯಕತೆಯಿದೆಯೋ ಅವರಿಗೆ ತನು-ಮನ-ಧನಗಳ ಸಹಾಯ ಮಾಡಿದರೆ ಸರ್ವಪುಣ್ಯಗಳೂ ಲಭಿಸುವವು. ಅದೇ ನಿಜವಾದ ಭಗವಂತನ ಪೂಜೆಯಾಗಿದೆ. ದಾನದಿಂದಲೇ ಮನಸ್ಸಂತೋಷ, ಚಿತ್ತಶುದ್ಧಿ ದೊರಕುವುದು. ಹಾಗೆಯೇ, ‘ಅಕ್ಷಯಮೋಕ್ಷಸ್ಯಕಾರಣಮ್‌’ ಎನ್ನುವಂತೆ ಈ ದಿನ ಇವೆಲ್ಲವನ್ನು ಮಾಡುವುದರಿಂದ ಮೋಕ್ಷವೂ ಲಭಿಸುತ್ತದೆಯಂತೆ.

ಈ ದಿನದ ಬಗ್ಗೆ ಪುರಾಣದ ಕತೆ: ಅಕ್ಷಯ ತೃತೀಯಾ ವ್ರತದ ಕುರಿತಾಗಿ ಪ್ರಸಿದ್ಧ ಪುರಾಣ ಕಥೆಯೊಂದಿದೆ. ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಸದಾಚಾರಿಯಾದ ಆತ ದೇವತೆಗಳನ್ನು ಸದಾ ಶ್ರದ್ಧೆಯಿಂದ ಪೂಜಿಸುತ್ತಿದ್ದ. ಅಕ್ಯಯ ತೃತೀಯಾ ವ್ರತದ ಮಹತ್ವ ಅರಿತ ಆತ ಈ ದಿನದಂದು ಗಂಗಾನದಿಯಲ್ಲಿ ಸ್ನಾನ ಮಾಡಿ, ಭಗವಂತನ್ನು ಪೂಜಿಸಿ, ಸತ್ಪಾತ್ರರಿಗೆ ಬಂಗಾರ, ವಸ್ತ್ರ, ಆಹಾರ ಧಾನ್ಯಗಳನ್ನು ದಾನ ಮಾಡಿದ. ವರ್ಷ ಕಳೆದಂತೆ ಅಶಕ್ತನಾದರೂ ಅವನು ಈ ದಿನ ಉಪವಾಸ-ದಾನ-ಧರ್ಮಗಳನ್ನು ಕೈಗೊಂಡ. ಅದೇ ವೈಶ್ಯನು ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದ. ರಾಜನಾದಾಗಲೂ ಹಿಂದಿನ ಜನ್ಮಸಂಸ್ಕಾರ ವಿಶೇಷದಿಂದ ಅಕ್ಷಯ ತೃತೀಯಾ ವ್ರತವನ್ನು ಆಚರಿಸಿದ. ಆಗ ಸಾಕ್ಷಾತ್‌ ದೇವೆಂದ್ರನೇ ವೇಷ ಮರೆಸಿ ವಿಪ್ರವೇಷ ತೊಟ್ಟು ಅಕ್ಷಯ ತೃತೀಯಾದಂದು ರಾಜನ ದಾನಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದ. ರಾಜನಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯ ಕುರಿತಾಗಿ ಸ್ವಲ್ಪವೂ ಅಹಂಕಾರವಿರಲಿಲ್ಲ. ಈ ವ್ರತದ ಪ್ರಭಾವದಿಂದ ರಾಜ ಅತ್ಯಂತ ವೈಭವಶಾಲಿಯಾಗಿ ರಾಜ್ಯವಾಳಿದ. ಕೊನೆಗೆ ಧನವಂತ ಹಾಗೂ ಪ್ರತಾಪಿ ರಾಜನೆನಿಸಿಕೊಂಡು ಸದ್ಗತಿ ಹೊಂದಿದ.

ಆಚರಣೆ ಹೇಗೆ ಮಾಡಬೇಕು?: ಎಲ್ಲಾ ಹಬ್ಬಗಳಂತೆ ಈ ದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮ ಮಂಗಲಸ್ನಾನ, ನವವಸ್ತ್ರಧಾರಣೆ ಮಾಡಿ, ಲಕ್ಷ್ಮೀನಾರಾಯಣನನ್ನು ಪೂಜಿಸಿ ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ದಾನ ಮಾಡಿ, ಅಥವಾ ದಾನ ಮಾಡುವೆ ಎಂದು ಸಂಕಲ್ಪಿಸಬೇಕು. ಫಲಾಹಾರ ಸೇವಿಸಿ, ಅಕ್ಷಯ ತೃತೀಯಾದ ಮಹತ್ವ ಸಾರುವ ಪುರಾಣಕಥೆ ಶ್ರವಣ ಮಾಡಬೇಕು.

ಸತ್ಕಾರ್ಯಗಳಿಗೆ ಪ್ರೇರಣೆ ನೀಡುವ ಪವಿತ್ರವಾದ ರಂಜಾನ್‌ ಹಬ್ಬ: ಬನ್ನೂರು ಕೆ. ರಾಜು

ಚಿನ್ನ ಖರೀದಿಸುವ ಸಡಗರ: ಯಾವ ಪುರಾಣದಲ್ಲೂ ಅಕ್ಷಯ ತೃತೀಯಾದಂದು ಚಿನ್ನ ಖರೀದಿಸಬೇಕು ಎಂದು ಹೇಳಿಲ್ಲ. ಬಂಗಾರ ಅಥವಾ ಯಾವುದೇ ಅಮೂಲ್ಯವಾದ ವಸ್ತುಗಳನ್ನು ಅವಶ್ಯಕತೆ ಇದ್ದಾಗ ಯಾವಾಗ ಬೇಕಾದರೂ ಖರೀದಿಸಬಹುದು. ನಮ್ಮ ಸನಾತನ ಗ್ರಂಥಗಳಲ್ಲಿ ಈ ದಿನದಂದು ಬಂಗಾರ ಇತ್ಯಾದಿ ಸುವಸ್ತುಗಳನ್ನು ದಾನ ಮಾಡಲು ಹೇಳಿದ್ದಾರೆ. ಏಕೆಂದರೆ ಕೊಟ್ಟರೆ ಪುಣ್ಯ ಅಕ್ಷಯವಾಗುವುದು. ಈ ದಿನದಂದು ಚಿನ್ನ ಖರೀದಿಸುವ ಪರಿಪಾಠ ಬಂದ್ದದ್ದು ತೀರಾ ಇತ್ತೀಚಿಗೆ. ಮೌಲ್ಯವರ್ಧನೆ ವಸ್ತುಗಳನ್ನು ಖರೀದಿಸುವುದು, ಸಂಗ್ರಹಿಸುವುದು ಕಾಲಾಂತರದಲ್ಲಿ ಆರ್ಥಿಕವಾಗಿ ಲಾಭದ ದೃಷ್ಟಿಯಿಂದ. ಎಲ್ಲಾ ಹಬ್ಬಗಳೂ ನಮ್ಮ ಜೀವನಕ್ಕೆ ಅಮೂಲ್ಯ ಸಂದೇಶ-ಪಾಠಗಳನ್ನು ಸಾರುತ್ತವೆ. ಅಕ್ಷಯ್ಯ ತೃತೀಯಾ ಕೂಡ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿ ಎನ್ನುವ ಬಹುದೊಡ್ಡ ಸಂದೇಶವನ್ನು ಹೇಳಿದೆ. ಈ ಹಿನ್ನಲೆಯಲ್ಲಿ ಹಬ್ಬದ ಮಹತ್ವವನ್ನು ಅರಿತು ಆಚರಿಸಿದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿದೆ.

Latest Videos
Follow Us:
Download App:
  • android
  • ios