ಸತ್ಕಾರ್ಯಗಳಿಗೆ ಪ್ರೇರಣೆ ನೀಡುವ ಪವಿತ್ರವಾದ ರಂಜಾನ್‌ ಹಬ್ಬ: ಬನ್ನೂರು ಕೆ. ರಾಜು

ರಂಜಾನ್‌ ಆಚರಣೆಯ ಸಂದರ್ಭದಲ್ಲಿ ಶ್ರೀಮಂತರು ಬಡವರಿಗೆ ಸಾಕಷ್ಟುದಾನ-ಧರ್ಮ ಮಾಡುತ್ತಾರೆ. ಹಣವಂತರಾದ ಮುಸ್ಲಿಮರು ಇಂತಿಷ್ಟುಮೊತ್ತದ ಹಣವನ್ನು ಬಡವರಿಗೆ ಅಂದು ಅಥವಾ ಹಿಂದಿನ ದಿನ ಕೊಡುವಂತೆ ಪ್ರವಾದಿ ಮಹಮ್ಮದರೇ ಆಜ್ಞಾಪಿಸಿದ್ದಾರೆ. ಇದನ್ನು ಸದಾಕಾ ಉಲ್‌ ಫಿತರ್‌ ಎನ್ನುತ್ತಾರೆ. ಈ ಹಣ ಧಾನ್ಯದ ಬೆಲೆಯನ್ನು ಅವಲಂಬಿಸಿರುತ್ತದೆ.

Special Article By Bannur K Raju Over Ramadan Festival gvd

ಬನ್ನೂರು ಕೆ. ರಾಜು, ಮೈಸೂರು

ಓ ... ಸತ್ಯ ವಿಶ್ವಾಸಿಗಳೇ! ನೀವು ಧರ್ಮನಿಷ್ಠರಾಗಬೇಕೆಂದು
ನಿಮಗಿಂತ ಹಿಂದಿನವರಿಗೆ ಕಡ್ಡಾಯಗೊಳಿಸಿದಂತೆ
ನಿಮಗೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ
- ಪವಿತ್ರ ಕುರ್‌ಆನ್‌ (2:183)

ರಂಜಾನ್‌ ಜಗತ್ತಿನೆಲ್ಲೆಡೆ ಮುಸಲ್ಮಾನರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸುವ ಪವಿತ್ರವಾದ ಹಬ್ಬ. ರಂಜಾನ್‌ ಎಂಬುದು ಇಸ್ಲಾಮಿ ಪಂಚಾಂಗದ 9ನೇ ತಿಂಗಳ ಹೆಸರೂ ಹೌದು. ಜಗತ್ತಿನಾದ್ಯಂತ ಆಚರಿಸಲ್ಪಡುವ ರಂಜಾನ್‌ ಹಬ್ಬದಲ್ಲಿ ರಾಮ ಮತ್ತು ರಹೀಮ ಒಂದಾಗಿ ಶುಭಾಶಯ ಹಂಚಿಕೊಳ್ಳುವ ಹಾಗೂ ರೆಹಮಾನ್‌ ಮತ್ತು ರಾಬರ್ಚ್‌ ಸೇರಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸದ್ಭಾವನೆಯ ಸಂತಸವನ್ನು ಕಾಣಬಹುದು. ಹಾಗಾಗಿ ರಂಜಾನ್‌ಗೆ ಭಾವೈಕ್ಯತೆಯ ಬೆಳಕಿನ ಪ್ರಭಾವಳಿಯೂ ಉಂಟು. ಧರ್ಮ ಯಾವುದಾದರೇನು? ಹಬ್ಬ ಯಾವುದಾದರೇನು? ಒಟ್ಟಾರೆ ಇವೆಲ್ಲವೂ ಪ್ರತಿಪಾದಿಸುವುದು ಮಾನವಕುಲದ ಒಳಿತನ್ನು ಹಾಗೂ ಸಂಭ್ರಮವನ್ನು. ಈ ನಿಟ್ಟಿನಲ್ಲಿ ರಂಜಾನ್‌ ಸಹ ಎಲ್ಲರಿಗೂ ಒಳಿತು ತರುವ, ಒಂದಾಗಿ ಬಾಳಿ ಎನ್ನುವ, ಸಮಬಾಳು ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬ.

ಇಮಾನ್‌, ನಮಾಜ್‌, ರೋಜಾ, ಜಕಾತ್‌ ಹಾಗೂ ಹಜ್‌ ಎಂಬ ಇಸ್ಲಾಂ ಧರ್ಮದ ಪ್ರಮುಖ ಪಂಚತತ್ವಗಳ ಮಹತ್ವ ಹಾಗೂ ಇವುಗಳ ಆಚರಣೆಯಿಂದಾಗುವ ಪ್ರಯೋಜನ ಕುರಿತು ಜನರಲ್ಲಿ ಹೆಚ್ಚು ಅರಿವು ಮೂಡಿಸುವಂಥ ವಿಶೇಷ ಸಂದರ್ಭ ರಂಜಾನ್‌ ಹಬ್ಬದ್ದಾಗಿದೆ. ನಿರಾಕಾರ ಏಕದೇವೋಪಾಸನೆಯ ಇಮಾನ್‌, ಮಾನಸಿಕವಾಗಿ ನೆಮ್ಮದಿ ನೀಡಿ ಶಾಂತಿ ಸಮೃದ್ಧಿ ತರುವ ಪ್ರಾರ್ಥನೆ ನಮಾಜ್‌, ದೈಹಿಕ ಸ್ವಾಸ್ಥ್ಯ-ಮನಃಶುದ್ಧಿ-ಕಷ್ಟಸಹಿಷ್ಣುತೆಗೆ ಸಹಕಾರಿಯಾಗುವ ರೋಜಾ, ಬಡವ-ದೀನ-ಅಶಕ್ತರೆಲ್ಲರಿಗೂ ಈ ಸಮಾಜದೊಳಗೆ ಬದುಕಿ ಬಾಳುವ ಹಕ್ಕು ಇದೆಯೆಂದು ಹೇಳುವ ಜಕಾತ್‌ ಹಾಗೂ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಸ್ಥಳ ಕಾಬಾ ದರ್ಶನ ಕಲ್ಪಿಸುವ ಹಜ್‌ ಯಾತ್ರೆ ಇವು ಮುಸಲ್ಮಾನರು ಆಚರಿಸಬೇಕಾದ ಪಂಚ ಮಹಾಪುಣ್ಯತತ್ವಗಳು. ಜಕಾತ್‌ ಹಾಗೂ ಹಜ್‌ ಯಾತ್ರೆ ಹೊರತುಪಡಿಸಿ ಉಳಿದ ಮೂರೂ ಆಚರಣೆಗಳು ಎಲ್ಲರಿಗೂ ಕಡ್ಡಾಯ.

ಗುಡ್ ಫ್ರೈಡೆ ಏಕೆ ಆಚರಿಸಲಾಗುತ್ತೆ? ಅದರ ಪ್ರಾಮುಖ್ಯತೆ ಏನು?

ರಂಜಾನ್‌ ಉಪವಾಸದ ಮಹತ್ವ: ವಿಶೇಷವೆಂದರೆ ರಂಜಾನ್‌ ಹಬ್ಬ ಆರಂಭವಾಗುವುದೇ ಉಪವಾಸ ವ್ರತದಿಂದ. ವರ್ಷದ ಹನ್ನೊಂದು ತಿಂಗಳು ನಮ್ಮ ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ಒಂದು ತಿಂಗಳು ಉಪವಾಸ ಮಾಡಿ ಶುದ್ಧೀಕರಿಸುವ ಧಾರ್ಮಿಕ ಕ್ರಿಯೆಯಿದು. ಇದರ ಕಠಿಣ ಆಚರಣೆ ಪ್ರತಿಯೊಬ್ಬ ಮುಸಲ್ಮಾನರಿಗೂ ಒಂದು ಸವಾಲೇ ಸರಿ. ರಂಜಾನ್‌ ಆಚರಣೆಯ ಇಸ್ಲಾಂ ಧರ್ಮದಲ್ಲಿ ನಂಬಿಕೆಯುಳ್ಳವರೆಲ್ಲರೂ ಸರ್ವಶಕ್ತನಾದ ಅಲ್ಲಾಹನನ್ನು ಈ ಉಪವಾಸ ವ್ರತದ ಮೂಲಕ ಪ್ರಾರ್ಥಿಸುತ್ತಾರೆ. ಅದೇ ರೀತಿ, ಮುಸ್ಲಿಮರ ಪವಿತ್ರ ಧಾರ್ಮಿಕ ಗ್ರಂಥ ಕುರಾನ್‌ ಅವತೀರ್ಣಗೊಂಡ ಪುನೀತ ತಿಂಗಳಿದು. ಹಾಗೆಯೇ ಮಾನವಕುಲದ ವಾರ್ಷಿಕ ಬಜೆಟ್‌ ಅನ್ನು ಮಂಜೂರು ಮಾಡುವ ಲೈಲತುಲ್‌ಕದ್‌್ರ ಎಂಬ ಪವಿತ್ರ ರಾತ್ರಿಯು ಈ ತಿಂಗಳಲ್ಲಿ ಅಡಕಗೊಂಡಿದೆ.

ಇಸ್ಲಾಂ ಧರ್ಮದ ಪ್ರವರ್ತಕ ಪ್ರವಾದಿ ಮಹಮ್ಮದರು ಕೆಡುಕಿನಿಂದ ಸಮಾಜವನ್ನು ಮುಕ್ತಗೊಳಿಸಲು ತಮ್ಮದೇ ಆದ ತತ್ವಾದರ್ಶಗಳ ಒಳಿತಿನ ತಳಹದಿಯ ಮೇಲೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಈ ಧರ್ಮದ ಅರ್ಥಾತ್‌ ಈ ಸಮಾಜದ ಪಾವಿತ್ರ್ಯತೆಯನ್ನು ಕಾಪಾಡಲು ಸೂಕ್ತ ವ್ಯಕ್ತಿತ್ವವನ್ನು, ವ್ಯಕ್ತಿಗಳನ್ನು ನಿರ್ಮಿಸಲು ರಂಜಾನ್‌ ಎಂಬ ಈ ಪವಿತ್ರ ತಿಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದೊಂದು ರೀತಿ ಪಾಪ ಕಳೆದು ಪುಣ್ಯ ಗಳಿಸಲು ತರಬೇತುಗೊಳಿಸುವ ಒಂದು ತಿಂಗಳ ಕಾರ್ಯಾಗಾರವೆನ್ನಬಹುದು. ಇಲ್ಲಿ ಉಪವಾಸವೇ ಬ್ರಹ್ಮಾಸ್ತ್ರ. ಇದರಿಂದ ಏನನ್ನು ಬೇಕಾದರೂ ಗೆಲ್ಲಬಹುದು. ಎಂಥಾ ಪಾಪಗಳನ್ನೂ ದಹಿಸಬಹುದೆಂಬುದು ರಂಜಾನ್‌ನಲ್ಲಡಗಿರುವ ಹೂರಣ. ಅಷ್ಟೇ ಅಲ್ಲ ಎಂಥಾ ಕಾಠಿಣ್ಯವನ್ನೂ ಕಾರುಣ್ಯಗೊಳಿಸುವ ಪವಾಡ ಇಲ್ಲಿದೆ. 

ಉಪವಾಸ ವ್ರತಾನುಷ್ಠಾನಕ್ಕೆ ಅಲ್ಲಾಹು ಆಯ್ಕೆ ಮಾಡಿರುವ ಈ ತಿಂಗಳಿಗೆ ರಂಜಾನ್‌ ಹೆಸರು ಬಂದಿರುವುದು ಕೂಡ ಬಹು ಅರ್ಥಪೂರ್ಣವಾಗಿದೆ. ಅರಬ್ಬರು ತಿಂಗಳುಗಳಿಗೆ ಹೆಸರು ಹಾಕುತ್ತಿದ್ದ ವೇಳೆ ಈ ತಿಂಗಳಲ್ಲಿ ಕಠಿಣ ತಾಪವಿತ್ತಂತೆ. ಹಾಗಾಗಿ ರಮಜಾನ್‌ ಅರ್ಥಾತ್‌ ಕಠಿಣ ಎಂಬ ಅನ್ವರ್ಥನಾಮವನ್ನು ಈ ತಿಂಗಳಿಗೆ ಇರಿಸಿದರೆಂದು ಹೇಳಲಾಗುತ್ತದೆ. ಇದಕ್ಕೆ ದಹನ ಎಂಬ ಅರ್ಥವೂ ಉಂಟು. ಪಾಪ ಕರ್ಮಗಳನ್ನು ದಹಿಸಿ ಬಿಡುವ ತಿಂಗಳು ಎಂಬ ಅರ್ಥದಲ್ಲಿ ಈ ಹೆಸರನ್ನು ಇಡಲಾಗಿದೆಯೆಂಬ ಅಭಿಪ್ರಾಯವೂ ಇದೆ. ಒಟ್ಟಿನಲ್ಲಿದು ಸಾರ್ಥಕ ಕಾರ್ಯದ ಪುಣ್ಯ ಮಾಸ. ರಂಜಾನ್‌ಗೆ ಮತ್ತೂ ಒಂದು ಮಹತ್ವವಿದೆ. ಅದೆಂದರೆ ಜಗತ್ತಿನ ಮುಂದೆ ಮುಸ್ಲಿಂ ಸಮುದಾಯದ ಕೀರ್ತಿಯನ್ನು ಎತ್ತಿ ಹಿಡಿದ ಇತಿಹಾಸ ಪ್ರಸಿದ್ಧ ಬದ್‌್ರ ಯುದ್ಧ ನಡೆದದ್ದು ಈ ಮಾಸದಲ್ಲೇ. 

ಈ ತಿಂಗಳ ಸತ್ಕರ್ಮಕ್ಕೆ ಯಥೇಚ್ಛ ಪ್ರತಿಫಲಗಳನ್ನು ನೀಡಲು ಅಲ್ಲಾಹನು ವಾಗ್ದಾನ ಮಾಡಿದ್ದಾನೆಂಬುದು ಇಸ್ಲಾಂ ಧರ್ಮದ ನಂಬಿಕೆ. ಹಾಗಾಗಿ ರಂಜಾನ್‌ಗೆ ಮತ್ತು ಈ ಮಾಸದಲ್ಲಿ ಮುಸಲ್ಮಾನರು ನಡೆಸುವ ಉಪವಾಸಕ್ಕೆ ಬಹಳ ಮಹತ್ವವಿದೆ. ಈ ಒಂದು ನಿರ್ದಿಷ್ಟಉಪವಾಸ ವ್ರತದ ಕಾಲದಲ್ಲಿ ಈ ಧರ್ಮದಲ್ಲಿ ನಂಬಿಕೆಯುಳ್ಳವರಾರೂ ಕಾನೂನು ಬಾಹಿರವಾದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಅಕ್ರಮ, ಅವ್ಯವಹಾರ, ಅನಾಚಾರ, ಅಪಪ್ರಚಾರ, ಅವಹೇಳನ, ಅನೈತಿಕತೆ, ಕ್ರೌರ್ಯ, ಮೋಸ, ವಂಚನೆ, ಸುಳ್ಳು, ಕಳ್ಳತನ, ಪರನಿಂದನೆ, ಚಾಡಿ ಮುಂತಾದ ಕೆಟ್ಟತನಗಳನ್ನು ತೊರೆಯಬೇಕು. ಈ ಧರ್ಮದಲ್ಲಿ ನಂಬಿಕೆಯುಳ್ಳವರೆಲ್ಲ ಅಲ್ಲಾಹನನ್ನು ತೃಪ್ತಿಪಡಿಸಲು ಅತ್ಯಂತ ಸಂತೋಷವಾಗಿ ಈ ಆಜ್ಞೆಗಳನ್ನು ಪಾಲಿಸುತ್ತಾರೆ.

ಉಪವಾಸವನ್ನು ಅರಬ್ಬೀ ಭಾಷೆಯಲ್ಲಿ ಸೌಮ್‌ಸ್ಟಿಯಾಮ್‌ ಎಂದು ಕರೆಯಲಾಗುತ್ತದೆ. ಉಪವಾಸವೆನ್ನುವುದು ಅಲ್ಲಾಹನು ಮಾನವಕುಲದ ಮೇಲೆ ಕಡ್ಡಾಯಗೊಳಿಸಿದ ಕರ್ಮಗಳಲ್ಲೊಂದು. ಇದು ಮಾನವನನ್ನು ಸನ್ಮಾರ್ಗದಲ್ಲಿ ಕರೆದೊಯ್ಯುತ್ತದೆಂಬ ಸಂದೇಶ ರಂಜಾನ್‌ನದ್ದು. ಉಪವಾಸ ವ್ರತ ಎಲ್ಲ ದೇಶಗಳಲ್ಲೂ ಎಲ್ಲ ಧರ್ಮಗಳಲ್ಲೂ ಎಲ್ಲಾ ಕಾಲಗಳಲ್ಲೂ ಇದೆ. ಆಚರಣೆ ಮಾತ್ರ ಭಿನ್ನವಾಗಿರುತ್ತದಷ್ಟೆ. ರಂಜಾನ್‌ ಹಬ್ಬದ ಆಚರಣೆಯೇ ಸಮಾನತೆಯ ಆಧಾರದ ಮೇಲೆ ಸ್ಥಾಪಿತವಾದ ಇಸ್ಲಾಂ ಸಮಾಜಕ್ಕೆ ಒಂದು ಮಾದರಿ. ಪ್ರವಾದಿ ಮಹಮ್ಮದರು ಇದನ್ನು ತಮ್ಮ ಸ್ವಂತ ತತ್ವಾದರ್ಶಗಳ ಮೂಲಕ ವಿವರಿಸಿದ್ದಾರೆ. ಪ್ರವಾದಿಗಳು ಈ ಸಂದರ್ಭದಲ್ಲಿ ವಿಶೇಷವಾದ ಉಡುಪನ್ನು ತೊಡುತ್ತಿದ್ದರೆಂದು ಹೇಳಲಾಗುತ್ತದೆ. ಆದರಿದು ದುಬಾರಿ ಬೆಲೆಯದ್ದಾಗಿರದೆ ಎಲ್ಲರೂ ಕೊಳ್ಳುವಂತದ್ದಾಗಿರುತ್ತಿತ್ತು.

ಪ್ರವಾದಿ ನೀಡಿದ ಸಂದೇಶ: ರಂಜಾನ್‌ನ ಪ್ರಾಮುಖ್ಯತೆಯನ್ನು ಪ್ರವಾದಿ ಮಹಮ್ಮದರ ಅಮೃತವಾಣಿಯಲ್ಲೇ ಹೇಳುವುದಾದರೆ- ‘ಓ ಬಾಂಧವರೇ, ಒಂದು ಮಹತ್ವದ ತಿಂಗಳು, ಒಂದು ಪೂಜ್ಯವಾದ ತಿಂಗಳು ಬಂದಿದೆ. ಅಲ್ಲಾಹನು, ದಿನದಲ್ಲಿ ಉಪವಾಸವಿರುವಂತೆ, ರಾತ್ರಿ ಪ್ರಾರ್ಥನೆ ಮಾಡುವಂತೆ ವಿಧಿಸಿರುವ ತಿಂಗಳು ಇದು. ಯಾರೇ ಆಗಲಿ ಈ ತಿಂಗಳು ತಾವಾಗಿಯೇ ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ಬೇರೆಯವರು ಬೇರೆಯ ಕಾಲದಲ್ಲಿ ಮಾಡಲೇಬೇಕಾದ ಕಾರ್ಯಗಳನ್ನು ಮಾಡಿ ಗಳಿಸುವಷ್ಟೇ ಪುಣ್ಯವನ್ನು ಗಳಿಸಿ ಅಲ್ಲಾಹನಿಗೆ ಹತ್ತಿರವಾಗುತ್ತಾರೆ. ಈ ತಿಂಗಳಲ್ಲಿ ಪ್ರತಿಯೊಬ್ಬರೂ ತಾಳ್ಮೆಯನ್ನು ವ್ಯಕ್ತಪಡಿಸುತ್ತಾರೆ. ತಾಳ್ಮೆಯ ಪ್ರತಿಫಲವೇ ಸ್ವರ್ಗ. ಇದು ದಾನದ ತಿಂಗಳು ಮತ್ತು ಎಲ್ಲ ಭಕ್ತರ ಧಾರಣ ಶಕ್ತಿಯನ್ನು ವೃದ್ಧಿಗೊಳಿಸುವ ತಿಂಗಳು.’

ಧಾರ್ಮಿಕ ನಂಬಿಕೆ ಪ್ರಕಾರ ಹನುಮಾನ್ ಜಯಂತಿ ಅನ್ನಬಾರದೇಕೆ?

ದಾನ ಮಾಡುವ ಹಬ್ಬ ರಂಜಾನ್‌: ರಂಜಾನ್‌ ಹಬ್ಬ, ದಾನದ ಹಬ್ಬವೂ ಹೌದು. ರಂಜಾನ್‌ ಆಚರಣೆಯ ಸಂದರ್ಭದಲ್ಲಿ ಇರುವವರು ಇಲ್ಲದವರಿಗೆ ಸಾಕಷ್ಟುದಾನ-ಧರ್ಮ ಮಾಡುತ್ತಾರೆ. ಹಣವಂತರಾದ ಮುಸ್ಲಿಮರು ಇಂತಿಷ್ಟುಮೊತ್ತದ ಹಣವನ್ನು ಬಡವರಿಗೆ ಅಂದು ಅಥವಾ ಹಿಂದಿನ ದಿನ ಕೊಡುವಂತೆ ಪ್ರವಾದಿ ಮಹಮ್ಮದರೇ ಆಜ್ಞಾಪಿಸಿದ್ದಾರೆ. ಇದನ್ನು ಸದಾಕಾ ಉಲ್‌ ಫಿತರ್‌ (ಫಿತ್ರಾ) ಎನ್ನುತ್ತಾರೆ. ಈ ಹಣ ಧಾನ್ಯದ ಬೆಲೆಯ ಮೇಲೆ ಅವಲಂಬಿಸಿರುತ್ತದೆ. ಈ ಹಣದ ಬಹುಭಾಗವನ್ನು ಹಬ್ಬದ ದಿನ ಬಡವರಿಗಾಗಿ ಖರ್ಚು ಮಾಡಲಾಗುವುದು. ಉಳಿದುದನ್ನು ಇತರೆ ಕಷ್ಟಕಾಲದಲ್ಲಿ ಬಡವರ ಸಹಾಯಕ್ಕೆ ಬಳಸಲಾಗುತ್ತದೆ. ಜಗತ್ತಿನ ಜನತೆಗೆ ಸನ್ಮಾರ್ಗದ ದಾರಿದೀವಿಗೆ ತೋರಿಸುವ ಮೂಲಕ ಕತ್ತಲು ಕವಿದ ಮನುಷ್ಯ ಬಾಳಿನಲ್ಲಿ ಜ್ಞಾನದ ಪ್ರಭೆ ಚೆಲ್ಲುವ ರಂಜಾನ್‌ ಹಬ್ಬದ ಸಂದರ್ಭದಲ್ಲಿ ದೇಶ ವಿದೇಶಗಳಲ್ಲಿ ವಿವಿಧ ಧಾರ್ಮಿಕ ಸೇವಾ ಸ್ಪರ್ಧೆಗಳನ್ನು ನಡೆಸುವುದೂ ಉಂಟು. ಇಂಥ ಸ್ಪರ್ಧೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ದುಬೈನಲ್ಲಿ ನಡೆದು ಬರುತ್ತಿರುವ ಕುರ್‌ ಆನ್‌ ಅವಾರ್ಡ್‌ ಕಾರ್ಯಕ್ರಮ ಬಹುಮುಖ್ಯವಾದದ್ದು. 

ಈ ಸ್ಪರ್ಧೆ ದುಬೈ ದೊರೆಯ ನೇತೃತ್ವದಲ್ಲಿಯೇ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಪ್ರತಿವರ್ಷ ಸುಮಾರು 75ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸುತ್ತವೆ. ಆಯಾ ದೇಶದ ಓರ್ವ ಸ್ಪರ್ಧಾಳು ಅವರ ಜೊತೆಗೆ ಗುರುಗಳು ಅಥವಾ ಪೋಷಕರು ಇರುತ್ತಾರೆ. ಇವರುಗಳ ಖರ್ಚು ವೆಚ್ಚಗಳನ್ನೆಲ್ಲಾ ದುಬೈ ಸರ್ಕಾರವೇ ಭರಿಸುತ್ತದೆ. ಈ ಸ್ಪರ್ಧೆಯ ವಿಜೇತರಿಗೆ ಹತ್ತು ಸ್ಥಾನದವರೆಗೂ ಭಾರಿ ಬಹುಮಾನವಿದ್ದು, ಪ್ರಥಮ ಬಹುಮಾನ 90 ಲಕ್ಷ ರುಪಾಯಿ. ಕುರ್‌ ಆನ್‌ ಕಂಠಪಾಠ ಮಾಡುವವರ ಸಂಖ್ಯೆ ಬೆಳೆಯಬೇಕೆಂಬುದು ಈ ಸ್ಪರ್ಧೆಯ ಸದಾಶಯವಾಗಿದೆ. ಒಟ್ಟಾರೆ ರಂಜಾನ್‌ ಜಗತ್ತಿನ ಆಕರ್ಷಣೆಯ ಸಾತ್ವಿಕ ಭಾವದ ಹಬ್ಬ. ಹಾಗೆಯೇ ಉಪವಾಸದ ಮಹತ್ವವನ್ನು ಜಗತ್ತಿಗೇ ಸಾರುವ ಪವಿತ್ರ ಮಾಸವೂ ಹೌದು. ಇಂಥ ರಂಜಾನ್‌ ಎಲ್ಲರಿಗೂ ಒಳಿತನ್ನುಂಟು ಮಾಡಲೆಂಬುದೇ ನಮ್ಮ ಆಶಯ. ಸರ್ವರಿಗೂ ರಂಜಾನ್‌ ಹಬ್ಬದ ಶುಭಾಶಯಗಳು ಸಲ್ಲಲಿ.

Latest Videos
Follow Us:
Download App:
  • android
  • ios