Asianet Suvarna News Asianet Suvarna News

Makar Sankranti 2023: ವಿಜ್ಞಾನ-ಧಾರ್ಮಿಕತೆಯ ಸಮ್ಮಿಲನವೇ ಸಂಕ್ರಾಂತಿ

ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು-ಬೆಲ್ಲದ ಮಿಶ್ರಣ, ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

Sankranti is the Fusion of Science and Religion grg
Author
First Published Jan 15, 2023, 1:27 PM IST

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬುದು ಪ್ರಚಲಿತದಲ್ಲಿರುವ ನುಡಿಮುತ್ತು. ಇದರ ಅರ್ಥ ಎಳ್ಳು-ಬೆಲ್ಲದ ಮಿಶ್ರಣವನ್ನು ತಿನ್ನಬೇಕು ಮತ್ತು ಒಳ್ಳೆಯ ಮಾತುಗಳನ್ನು ಆಡಬೇಕು. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು-ಬೆಲ್ಲದ ಮಿಶ್ರಣ, ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಹಿಂದೂಗಳ ಪವಿತ್ರ ಹಬ್ಬ ಮಕರ ಸಂಕ್ರಾಂತಿ. ಸೂರ್ಯನು ತನ್ನ ಪಥವನ್ನು ಬದಲಿಸುವ ಈ ದಿನವನ್ನು ದೇಶದಾದ್ಯಂತ ವಿವಿಧ ಹೆಸರು, ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಆಚರಿಸಲಾಗುತ್ತದೆ. ಸೂರ್ಯ ದೇವನ ಹಬ್ಬವೆಂದು ಪರಿಗಣಿಸಲಾದ ಈ ಹಬ್ಬವನ್ನು ಪ್ರತಿವರ್ಷ ಜನವರಿ 15ರಂದು ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ದಿನವೆಂದು ಆಚರಿಸಲಾಗುತ್ತದೆ.

ಹಂಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಈ ಹಬ್ಬವು ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂತ, ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.

ಪೌರಾಣಿಕ ಹಿನ್ನೆಲೆ

ಮಹಾಭಾರತ ಕಾಲದಲ್ಲಿ ಪಿತಾಮಹ ಭೀಷ್ಮ ತನ್ನ ದೇಹ ತೊರೆಯಲು ಸೂರ್ಯ ಉತ್ತರಾಯಣಕ್ಕೆ ಬರಲು ಕಾದಿದ್ದ. ಏಕೆಂದರೆ ಉತ್ತರಾಯಣದಲ್ಲಿ ದೇಹವನ್ನು ತೊರೆಯುವ ಆತ್ಮಗಳು ಕೆಲಕಾಲ ದೇವಲೋಕಕ್ಕೆ ಹೋಗುತ್ತವೆ ಎನ್ನುವ ಉಲ್ಲೇಖವಿದೆ. ಪಿತಾಮಹರ ಶ್ರಾದ್ಧ ಸಮಾರಂಭವನ್ನು ಸೂರ್ಯನ ಉತ್ತರಾಯಣ ಚಲನೆಯಲ್ಲೂ ನಡೆಸಲಾಗುತ್ತದೆ. ಇದರ ಫಲವಾಗಿ ಇಂದಿಗೂ ಮಕರ ಸಂಕ್ರಾಂತಿಯ ದಿನದಂದು ಪೂರ್ವಜರ ಸಂತೋಷಕ್ಕಾಗಿ ಎಳ್ಳು ಮತ್ತು ನೀರನ್ನು ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಹಾಗೆಯೇ ಉತ್ತರಾಯಣದ ಮಹತ್ವವನ್ನು ವಿವರಿಸುತ್ತಾ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೀಗೆಂದು ಹೇಳಿದ್ದಾನೆ: ‘ಉತ್ತರಾಯಣದ ಆರು ತಿಂಗಳ ಮಂಗಳಕರ ಅವಧಿಯಲ್ಲಿ, ಸೂರ್ಯ ದೇವರು ಉತ್ತರಾಯಣವಾಗಿದ್ದಾಗ ಭೂಮಿಯು ಪ್ರಕಾಶಮಾನವಾಗಿ ಉಳಿಯುತ್ತದೆ. ಆಗ ದೇಹವನ್ನು ಬಿಡುವುದರಿಂದ ಪುನರ್ಜನ್ಮವನ್ನು ಪಡೆಯುವುದಿಲ್ಲ. ಅಂತಹ ಜನರು ಬ್ರಹ್ಮನಿಂದ ವರವನ್ನು ಪಡೆಯುತ್ತಾರೆ. ಇದಕ್ಕೆ ವಿರುದ್ಧವಾಗಿ, ಸೂರ್ಯನು ದಕ್ಷಿಣಾಯನದಲ್ಲಿದ್ದಾಗ, ಭೂಮಿಯು ಕತ್ತಲೆಯಾಗುತ್ತದೆ. ಮತ್ತು ಈ ಕತ್ತಲೆಯಲ್ಲಿ ದೇಹವನ್ನು ಬಿಟ್ಟನಂತರ ಮತ್ತೆ ಜನ್ಮ ಪಡೆಯಬೇಕಾಗುತ್ತದೆ.’

ವಿಜ್ಞಾನದ ಭೌಗೋಳಿಕ ಹಿನ್ನೆಲೆ

‘ಮಕರ ಸಂಕ್ರಾಂತಿ’ ಹಬ್ಬ ಒಂದು ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ. ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸಿ ಉತ್ತರ ಗೋಳಾರ್ಧದ ಕಡೆಗೆ ಚಲಿಸಲು ಪ್ರಾರಂಭಿಸುವ ದಿನ ಇದಾಗಿದೆ. ಈ ದಿನಾಂಕದಿಂದ ಜನರು ಹೆಚ್ಚು ದಿನದ ಅವಧಿಯನ್ನೂ ಮತ್ತು ಕಡಿಮೆ ರಾತ್ರಿಯ ಅವಧಿಯನ್ನೂ ಕಾಣಬಹುದು. ಜೊತೆಗೆ ಶೀತ ಗಾಳಿ ಕಡಿಮೆಯಾಗುತ್ತಾ ಹೋಗುತ್ತದೆ.

ಆಧ್ಯಾತ್ಮಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ

ಮಕರ ಸಂಕ್ರಾಂತಿಯ ಹಬ್ಬವು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಆದಿಶಕ್ತಿ ಮತ್ತು ಸೂರ್ಯನ ಪೂಜೆ ಮತ್ತು ಆರಾಧನೆಯ ಪವಿತ್ರ ದಿನವಾಗಿದೆ ಎನ್ನುವ ಉಲ್ಲೇಖವಿದೆ. ಇದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆ. ಸಂತರು ಮತ್ತು ಋುಷಿಗಳ ಪ್ರಕಾರ, ಜೀವಿಗಳ ಆತ್ಮವು ಮಕರ ಸಂಕ್ರಾಂತಿಯ ಪರಿಣಾಮದಿಂದ ಶುದ್ಧವಾಗುತ್ತದೆ. ಜ್ಞಾನದ ನರಗಳು ಅಭಿವೃದ್ಧಿಗೊಳ್ಳುತ್ತವೆ. ಹೀಗೆ ಜೀವಿಗಳಲ್ಲಿ ಪ್ರಜ್ಞೆಯನ್ನು ಬೆಳೆಸುವ ಹಬ್ಬವೇ ಮಕರ ಸಂಕ್ರಾಂತಿಯಾಗಿದೆ. ಹಾಗೆಯೇ ಎಳ್ಳಿನ ನೀರಿನಿಂದ ಸ್ನಾನ, ಎಳ್ಳಿನ ದಾನ, ಎಳ್ಳಿನಿಂದ ಮಾಡಿದ ಆಹಾರ, ಎಳ್ಳು ನೈವೇದ್ಯ ಇತ್ಯಾದಿಗಳನ್ನು ಮಕರ ಸಂಕ್ರಾಂತಿಯಲ್ಲಿ ಮಾಡಲಾಗುತ್ತದೆ.

ವಿವಿಧ ಪವಿತ್ರ ನದಿಗಳಲ್ಲಿ ಸ್ನಾನ

ಮಕರ ಸಂಕ್ರಾಂತಿಯ ದಿನದಂದು ದೇಶದ ಗಂಗಾ, ಯಮುನಾ, ಬ್ರಹ್ಮಪುತ್ರ ನದಿಗಳಲ್ಲಿ ಜನರು ಪವಿತ್ರ ಸ್ನಾನ ಮಾಡುತ್ತಾರೆ. ಅದೆ ರೀತಿ ಕರ್ನಾಟಕದಲ್ಲಿ ವರದಾ, ತುಂಗಭದ್ರಾ, ಭೀಮಾ, ಕಾವೇರಿ ಮತ್ತು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ, ಮಕರ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಭಾರತದಲ್ಲಿ ಆಧ್ಯಾತ್ಮಿಕ ಪ್ರಗತಿಗೆ ಸೂರ್ಯನ 7ನೇ ಕಿರಣವು ಸ್ಫೂರ್ತಿ ಎಂದು ಹೇಳಲಾಗುತ್ತದೆ. ಏಳನೇ ಕಿರಣದ ಪರಿಣಾಮವು ಭಾರತದಲ್ಲಿ ಗಂಗಾ ಮತ್ತು ಯಮುನಾ ನದಿಗಳ ನಡುವೆ ದೀರ್ಘಕಾಲ ಇರುತ್ತದೆ. ಈ ದಿನ ಗಂಗೆಯಲ್ಲಿ ಸ್ನಾನ ಮಾಡಿ ತರ್ಪಣ ಮಾಡುವುದಕ್ಕೆ ವಿಶೇಷವಾದ ಮಹತ್ವವಿದೆ ಎನ್ನುವ ಪ್ರತೀತಿ ಇದೆ.

ಸಂಕ್ರಾಂತಿ ಹಬ್ಬದ ಸಂಭ್ರಮ

ಇನ್ನು ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಣ್ಣಬಣ್ಣದ ಅಲಂಕಾರಗಳು, ಹಾಡುಗಾರಿಕೆ, ನೃತ್ಯ, ಗಾಳಿಪಟ ಹಾರಿಸುವುದು, ದೀಪೋತ್ಸವಗಳು, ರಂಗೋಲಿ ಬಿಡಿಸುವುದನ್ನು ಕಾಣಬಹುದಾಗಿದೆ. ಕರ್ನಾಟಕದ ಮತ್ತೊಂದು ಹಳೆಯ ಆಚರಣೆಯೆಂದರೆ, ಜನರು ತಮ್ಮ ದನ-ಕರುಗಳಿಗೆ ಹೊಳೆಯುವ ವೇಷಭೂಷಣ ಮತ್ತು ಆಭರಣಗಳಿಂದ ಅಲಂಕರಿಸುತ್ತಾರೆ. ದನಗಳ ಈ ಪ್ರದರ್ಶನವನ್ನು ಸ್ಥಳೀಯವಾಗಿ ‘ಕಿಚ್ಚು ಹಾಯಿಸೋದು’ ಎಂದು ಕರೆಯಲಾಗುತ್ತದೆ. ಈ ಚಟುವಟಿಕೆಗಳು ಸ್ನೇಹ ಮನೋಭಾವ, ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತವೆ. ಭಾರತದಲ್ಲಿ ಎಲ್ಲ ಹಬ್ಬಗಳಂತೆ ಮಕರ ಸಂಕ್ರಾಂತಿಗೂ ತನ್ನದೇ ಆದ ಆಹಾರ ಕ್ರಮಗಳಿವೆ. ಈ ಹಬ್ಬದ ಸಮಯದಲ್ಲಿ ಕೆಲವೆಡೆ ಪೊಂಗಲ್‌, ಕಾಯಿಸಿದ ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿದ ಅನ್ನ ಈ ಎಲ್ಲವನ್ನೂ ಸಿದ್ಧಪಡಿಸಿ ತಿನ್ನುತ್ತಾರೆ. ಹಾಗೆಯೇ ಕರ್ನಾಟಕದಲ್ಲಿ ಎಳ್ಳು, ಬೆಲ್ಲ, ಹುರಿಗಡಲೆ, ಕೊಬ್ಬರಿ ಚೂರುಗಳನ್ನು ಬೆರೆಸಿ ಹಂಚುವ ಪದ್ಧತಿಯೂ ಇದೆ.

ವಿವಿಧ ಭಾಗಗಳಲ್ಲಿ ವಿವಿಧ ಹೆಸರು

ಮಹಾರಾಷ್ಟ್ರದಲ್ಲಿ ಜನರು ಸಿಹಿತಿಂಡಿಗಳನ್ನು ತಯಾರಿಸುತ್ತಾರೆ ಮತ್ತು ಅದನ್ನು ತಮ್ಮ ಸ್ನೇಹಿತರಿಗೆ ಹಂಚುತ್ತಾರೆ. ಈ ಮೂಲಕ ತಮ್ಮ ಸ್ನೇಹಿತರಿಗೆ ಸಿಹಿ ತಿನ್ನಲು ಮತ್ತು ಸಿಹಿಯಾಗಿ ಮಾತನಾಡಲು ಹೇಳುತ್ತಾರೆ. ಅಂದರೆ ಅವರು ಮಕರ ಸಂಕ್ರಾಂತಿಯನ್ನು ಸೌಹಾರ್ದದ ಹಬ್ಬವೆಂದು ಪರಿಗಣಿಸುತ್ತಾರೆ.

ಗುಜರಾತಿನಲ್ಲಿ ಮಕರ ಸಂಕ್ರಾಂತಿಯನ್ನು ಗಾಳಿಪಟಗಳನ್ನು ಹಾರಿಸುವ ಮೂಲಕ ಆಚರಿಸಲಾಗುತ್ತದೆ. ವಿವಿಧ ಗಾಳಿಪಟಗಳ ನಡುವಿನ ಕಾದಾಟವನ್ನು ವೀಕ್ಷಿಸಲು ಜನರು ಛಾವಣಿಯ ಮೇಲೆ ಸೇರುತ್ತಾರೆ. ಒಂದು ಗಾಳಿಪಟ ಇನ್ನೊಂದನ್ನು ಕತ್ತರಿಸಿದಾಗ ಜನರು ಸಿಳ್ಳೆ ಊದಿ, ಡೋಲು ಬಾರಿಸಿ ಸಂತೋಷದ ಕರತಾಡನ ಮಾಡುತ್ತಾರೆ. ಜನರು ಹೊಸ ಬಟ್ಟೆಧರಿಸಿ, ಬಡವರಿಗೆ ದಾನ ಮಾಡಿ ಜೊತೆಗೆ ಸಿಹಿ ಹಂಚಿ ತಿನ್ನಬೇಕು. ಇದು ಯುವಕರು ಮತ್ತು ಹಿರಿಯರು ಸಮಾನವಾಗಿ ಕುಳಿತು ಸಂಭ್ರಮಿಸುವ ಸುಸಂದರ್ಭವಾಗಿದೆ.

ಮಕರ ಸಂಕ್ರಾಂತಿ ಹಬ್ಬವನ್ನು ದೇಶದ ಹಲವಾರು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರದಲ್ಲಿ ಖಿಚಡಿ ಅಥವಾ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ, ದಕ್ಷಿಣ ಭಾರತದಲ್ಲಿ ಪೊಂಗಲ…, ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ಅಸ್ಸಾಂನಲ್ಲಿ ಭೋಗಾಲಿ ಬಿಹು, ಗುಜರಾತ್‌ ಮತ್ತು ಉತ್ತರಾಖಂಡದಲ್ಲಿ ಉತ್ತರಾಯಣ, ಕೇರಳದಲ್ಲಿ ಮಕರ ವಿಕ್ಲು, ಕಾಶ್ಮೀರದಲ್ಲಿ ಶಿರ್ಶು ಸಂಕ್ರಾಂತ್‌, ಪಶ್ಚಿಮದಲ್ಲಿ ಪೌಷ್‌ ಸಂಕ್ರಾಂತಿ. ಬಂಗಾಳ, ಹಿಮಾಚಲದಲ್ಲಿ ಮಾಘಿಘಿಘಿಘಿ, ಹರಿಯಾಣ ಮತ್ತು ಪಂಜಾಬ… ರಾಜ್ಯದಲ್ಲಿ ಇದನ್ನು ಲೋಹ್ರಿ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ದೇಶದ ಪ್ರತಿಯೊಂದು ರಾಜ್ಯದಲ್ಲೂ ಇದನ್ನು ಆಚರಿಸುವ ವಿಧಾನವು ವಿಭಿನ್ನವಾಗಿದ್ದರೂ ಈ ಹಬ್ಬಕ್ಕೆ ಎಲ್ಲೆಡೆ ಒಂದೇ ರೀತಿಯ ಮಹತ್ವವವಿದೆ.

Makar Sankranti 2023: ಇಂದಿನ ಪುಣ್ಯಕಾಲವೇನು? ಈ ಅವಧಿಯಲ್ಲಿ ಏನು ಮಾಡಬೇಕು?

ಒಟ್ಟಾರೆಯಾಗಿ ಈ ಸಂತೋಷದ ದಿನವನ್ನು ಒಟ್ಟಿಗೆ ಸೇರಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಆಚರಿಸೋಣ. ಗಾಳಿಪಟವನ್ನು ಹಾರಿಸೋಣ ಮತ್ತು ಸಂತೋಷದ ಆಕಾಶವನ್ನು ಮುಟ್ಟೋಣ. ಸಂತೋಷ ಮತ್ತು ಸಮೃದ್ಧಿಯ ಈ ಮಂಗಳಕರ ಹಬ್ಬದಂದು, ಬಡವರು ಮತ್ತು ನಿರ್ಗತಿಕರಿಗೆ ದಾನ ಮಾಡುವುದು ಮತ್ತು ಸಹಾಯ ಮಾಡುವುದು ತನ್ನದೇ ಆದ ವಿಶಿಷ್ಟಮಹತ್ವವನ್ನು ಹೊಂದಿದೆ ಎಂದು ಹಿರಿಯರು ಹೇಳುತ್ತಾರೆ.

ಈ ಸಂತೋಷದ ದಿನವನ್ನು ಒಟ್ಟಿಗೆ ಸೇರಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಆಚರಿಸೋಣ. ಗಾಳಿಪಟವನ್ನು ಹಾರಿಸೋಣ ಮತ್ತು ಸಂತೋಷದ ಆಕಾಶವನ್ನು ಮುಟ್ಟೋಣ. ಸಂತೋಷ ಮತ್ತು ಸಮೃದ್ಧಿಯ ಈ ಮಂಗಳಕರ ಹಬ್ಬದಂದು ಬಡವರು ಮತ್ತು ನಿರ್ಗತಿಕರಿಗೆ ನಮ್ಮ ಕೈಲಾದ ಸಹಾಯ ಮಾಡೋಣ: ಬಸವರಾಜ ಎಂ. ಯರಗುಪ್ಪಿ ಲಕ್ಷ್ಮೇಶ್ವರ

Follow Us:
Download App:
  • android
  • ios