ಈ ಐದು ರಾಶಿಗಿದೆ ಈ ವರ್ಷ ಕನಸಿನ ಮನೆ ಕೊಳ್ಳೋ ಯೋಗ
ಮನೆ ಕಟ್ಟೋದು ಎಲ್ಲರ ಕನಸು. ಆದರೆ, ಅದು ಅಷ್ಟೇನು ಸುಲಭವಲ್ಲ. ಅದಕ್ಕೂ ಅದೃಷ್ಟ ಬೇಕು. ಈ ವರ್ಷ ಯಾವೆಲ್ಲ ರಾಶಿಯವರಿಗೆ ಸ್ವಂತ ಮನೆ ಮಾಡಿಕೊಳ್ಳುವ ಅದೃಷ್ಟವಿದೆ ನೋಡೋಣ.
ಮನೆ ಕಟ್ಟೋ ಕನಸು ಎಲ್ಲರಿಗೂ ಇರುತ್ತದೆ. ಸಣ್ಣದೋ ದೊಡ್ಡದೋ ಸ್ವಂತ ಮನೆ ಅಂಥ ಒಂದಿದ್ದರೆ ಅಷ್ಟೇ ಸಾಕು ಎಂದು ನಿಟ್ಟುಸಿರು ಬಿಡುವವರು ಹಲವರಿದ್ದಾರೆ. ಆದರೆ, ಅದು ಅಷ್ಟೊಂದು ಸುಲಭವಲ್ಲ. ಕೆಲವರಿಗೆ ಜೀವನವಿಡೀ ಅದಕ್ಕಾಗಿ ಸವೆಸಬೇಕಾಗುತ್ತದೆ. ಮತ್ತೆ ಕೆಲವರಿಗೆ ಕಡೆಗೂ ಸಾಧ್ಯವಾಗುವುದಿಲ್ಲ. ಪ್ರತಿ ಬಾರಿಯೂ ಈ ವರ್ಷವಾದರೂ ತಮ್ಮಿಂದ ಸ್ವಂತ ಮನೆ ಕೊಳ್ಳಲಾಗುವುದೇ ಎಂದು ಎದುರು ನೋಡುವವರಿದ್ದಾರೆ. ಯುಗಾದಿ ಹೊಸ್ತಿಲಿನಲ್ಲಿರುವ ಸಂದರ್ಭದಲ್ಲಿ ಈ ವರ್ಷ ಯಾವೆಲ್ಲ ರಾಶಿ(Zodiac signs)ಗಳಿಗೆ ಸ್ವಂತ ಮನೆ ಹೊಂದುವ ಯೋಗವಿದೆ ನೋಡೋಣ.
ಜಾತಕದಲ್ಲಿ ಗ್ರಹಗಳ ಚಲನೆ, ದಶ ಭುಕ್ತಿ ಮುಂತಾದ ವಿಚಾರಗಳು ವ್ಯಕ್ತಿಯ ಮನೆ ಹೊಂದುವ ಕನಸನ್ನು ನಿರ್ಧರಿಸುತ್ತವೆ. ಪ್ರತಿಯೊಬ್ಬರ ಕುಂಡಲಿಯಲ್ಲೂ 12 ಮನೆಗಳಿರುತ್ತವೆ. ಪ್ರತಿ ಮನೆಯೂ ವಿವಾಹ, ಕುಟುಂಬ, ಮನೆ, ವಾಹನ- ಹೀಗೆ ಒಂದೊಂದು ವಿಷಯಕ್ಕೆ ಸಂಬಂಧಿಸಿದೆ. ಆ ಮನೆಯಲ್ಲಿರುವ ಗ್ರಹಗಳ ಚಲನೆಯು ಮನೆ ಖರೀದಿ ಯೋಗ ತರುತ್ತದೆ. ಈ ವರ್ಷ ಈ ಕೆಳಗಿನ ರಾಶಿಗಳಿಗೆ ಅಂಥ ಯೋಗವಿದೆ.
ಮೇಷ(Aries)
ಮೇಷ ರಾಶಿಯವರಿಗೆ ಆಸ್ತಿ ಹೂಡಿಕೆ ಮಾಡಲು ಈ ವರ್ಷ ಸಾಕಷ್ಟು ಅವಕಾಶಗಳು ಎದುರಾಗುತ್ತವೆ. ವರ್ಷಾರಂಭದಲ್ಲಿ ಮಂಗಳನ ಅನುಗ್ರಹವು ನಿಮಗೆ ಸ್ವಂತಕ್ಕಾಗಿ ಅಪಾರ್ಟ್‌ಮೆಂಟನ್ನೋ ಅಥವಾ ಜಮೀನನ್ನೋ ಕೊಳ್ಳಲು ನೆರವು ನೀಡುತ್ತದೆ. ನಾಲ್ಕನೇ ಮನೆಗೆ ಕೃಪೆ ತೋರುವ ಶನಿಯು ಈ ಡೀಲ್‌ಗೆ ಮತ್ತಷ್ಟು ಬೆಂಬಲ ನೀಡುತ್ತಿದೆ. ಇನ್ನು ವ್ಯಾಪಾರದ ಉದ್ದೇಶಕ್ಕಾಗಿ ನೀವು ಈ ವರ್ಷಾಂತ್ಯದೊಳಗೆ ನಿವೇಶನ ಖರೀದಿಸುವ ಸಾಧ್ಯತೆ ಇದೆ. ಇದಲ್ಲದೆ ದೊಡ್ಡ ಕಟ್ಟಡ ಖರೀದಿ ಯೋಗವೂ ಈ ವರ್ಷ ಇದೆ. ಒಂದೆರಡು ಫ್ಲ್ಯಾಟ್ ಖರೀದಿ ಮಾಡಿ ಬಾಡಿಗೆಗೆ ನೀಡುವ ಯೋಗವೂ ಇದೆ. ಇದ್ದಕ್ಕಿದ್ದಂತೆ ಧನಾಗಮವಾಗಿ ಅದನ್ನು ಆಸ್ತಿ(property)ಯಲ್ಲಿ ಹೂಡಿಕೆ ಮಾಡಲಿರುವಿರಿ. ಯಾವುದೇ ರೀತಿಯ ಹೂಡಿಕೆಯನ್ನು ಶನಿವಾರ(Saturday) ಮಾಡುವುದು ನಿಮಗೆ ಹೆಚ್ಚು ಲಾಭಕಾರಿಯಾಗಿರಲಿದೆ.
ವೃಷಭ(Taurus)
ವೃಷಭ ರಾಶಿಗೆ ಕೂಡಾ ಈ ವರ್ಷ ಅನುಕೂಲಕರ ಫಲಿತಾಂಶಗಳಿವೆ. ನೀವು ಆಸ್ತಿಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಜಾತಕದಲ್ಲಿ ಮಂಗಳ, ಶುಕ್ರ ಮತ್ತು ಶನಿಯ ಅನುಗ್ರಹದಿಂದಾಗಿ ನಿಮ್ಮಿಂದ ಇದು ಸಾಧ್ಯವಾಗಲಿದೆ. ವರ್ಷದ ಮೊದಲಾರ್ಧವು ನಿಮ್ಮ ಬಳಿಗೆ ಉತ್ತಮ ಹಣಕಾಸು ಮತ್ತು ಹೂಡಿಕೆಗಳನ್ನು ತರುತ್ತದೆ. ನೀವು ಈಗಾಗಲೇ ಈ ಹಿಂದೆ ಭೂಮಿಯನ್ನು ಖರೀದಿಸಿದ್ದರೆ, ಈ ವರ್ಷ ಅಲ್ಲಿ ಗೃಹ ನಿರ್ಮಾಣ ಸಾಧ್ಯವಾಗಲಿದೆ. ಹೊಸ ಮನೆಗಾಗಿ ದುಬಾರಿ ವಸ್ತುಗಳನ್ನು ಮತ್ತು ವಿಶೇಷ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ. ವರ್ಷದ ದ್ವಿತೀಯಾರ್ಧದಲ್ಲಿ ಪಿತ್ರಾರ್ಜಿತ ಆಸ್ತಿ ದೊರೆಯುತ್ತದೆ. ಅಥವಾ ಈ ಆಸ್ತಿ ರೂಪದಲ್ಲಿ ಜಮೀನು, ಮನೆ ದೊರೆಯಬಹುದು.
ವಾರದ ಯಾವ ದಿನ ಯಾವ ಕೆಲಸಕ್ಕೆ ಸೂಕ್ತ?
ವೃಶ್ಚಿಕ(Scorpio)
ಈ ವರ್ಷ ವೃಶ್ಚಿಕ ರಾಶಿಗೆ ಬಹಳ ಅನುಕೂಲಕರವಾಗಿರುತ್ತದೆ. ಮನೆ ಖರೀದಿಸುವ ಅದೃಷ್ಟವಂತರಲ್ಲಿ ನೀವೂ ಇರಲಿದ್ದೀರಿ. ಏಪ್ರಿಲ್, ಮೇ ತಿಂಗಳಿನಲ್ಲಿ ಮಂಗಳನ ಅನುಗ್ರಹ ಹೆಚ್ಚಲಿದೆ. ಇದರಿಂದಾಗಿ ಭೂಮಿಯನ್ನು ಖರೀದಿಸುವ ಅಥವಾ ನಿಮ್ಮ ಕನಸಿನ ಮನೆಯನ್ನು ಹುಡುಕುವ ವಿಷಯದಲ್ಲಿ ಸಫಲರಾಗುತ್ತೀರಿ. ಏಪ್ರಿಲ್ ಅಂತ್ಯದ ವೇಳೆಗೆ ನಿಮ್ಮ ಕುಂಡಲಿಯ ನಾಲ್ಕನೇ ಮನೆಯಲ್ಲಿ ಶನಿಯ ಸಂಚಾರವು ಮನೆಯನ್ನು ಖರೀದಿಸುವ ಸಾಧ್ಯತೆ ಹೆಚ್ಚಿಸುತ್ತದೆ. ಅಥವಾ ದೊಡ್ಡ ನಿವೇಶನ ಖರೀದಿಸುವಿರಿ. ಮನೆಗಾಗಿ ಡೀಲ್ ಮಾಡಲು ಉತ್ತಮ ದಿನ ಮಂಗಳವಾರ(Tuesday)ವಾಗಿರುತ್ತದೆ.
ಯುಗಾದಿ ವರ್ಷ ಭವಿಷ್ಯ: ಯಾವ ರಾಶಿಗೆ ಹೇಗಿರಲಿದೆ?
ಧನು(Sagittarius)
ಧನು ರಾಶಿಯವರಿಗೆ ಈ ವರ್ಷ ಬಹಳ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಸಂತೋಷವನ್ನು ತರುತ್ತದೆ. ಹಳೆಯ ನಿರ್ಮಾಣದ ಮನೆ ಅಥವಾ ಕೆಲವು ಸಾಂಪ್ರದಾಯಿಕ ಟಚ್ ಹೊಂದಿದ ಬೃಹತ್ ಮನೆಯನ್ನು ಖರೀದಿಸುವ ಸಾಧ್ಯತೆಗಳಿವೆ. ಧೀರ್ಘಕಾಲ ನೆಲೆಸಲು ಕೂಡಾ ನೀವು ಆಸ್ತಿ ಖರೀದಿಸಬಹುದು. ಜುಲೈ ಬಳಿಕ ಈ ಮನೆ ಖರೀದಿ ಸಾಧ್ಯತೆಗೆ ಶನಿಯ ಸಾಥ್ ಕೂಡಾ ಸಿಕ್ಕಲಿದೆ. ಮನೆಯ ವಿನ್ಯಾಸಕ್ಕಾಗಿ ಬಹಳಷ್ಟು ಖರ್ಚು ಮಾಡಲಿರುವಿರಿ. ಮನೆಯನ್ನು ಖರೀದಿಸಲು ನಿಮ್ಮ ತಾಯಿಯ ಬೆಂಬಲವನ್ನು ಸಹ ಪಡೆಯಲಿದ್ದೀರಿ.
ಸಿಂಹ(Leo)
ಸಿಂಹ ರಾಶಿಯವರಿಗೆ ವರ್ಷದ ದ್ವಿತೀಯಾರ್ಧದಲ್ಲಿ ಮನೆ ಖರೀದಿ ಸಾಧ್ಯತೆ ಹೆಚ್ಚಳವಾಗಲಿದೆ. ಗುರು ಹಾಗೂ ಶನಿಯ ಅನುಗ್ರಹಗಳೆರಡೂ ದೊರೆತು ಆಸ್ತಿ ಖರೀದಿ ಮಾಡುವಿರಿ. ನೀವು ಈಗಾಗಲೇ ನಿವೇಶನಗಳನ್ನು ನೋಡುತ್ತಿದ್ದರೆ ಅಥವಾ ವಾಸಕ್ಕಾಗಿ ಮನೆ ಖರೀದಿಗೆ ಹುಡುಕುತ್ತಿದ್ದರೆ ವರ್ಷದ ದ್ವಿತೀಯಾರ್ಧದಲ್ಲಿ ಅದು ಸಾಧ್ಯವಾಗಲಿದೆ. ಏಪ್ರಿಲ್‌ನಲ್ಲಿ ತಂದೆಯ ಸಹಕಾರ ಈ ಖರೀದಿಗಾಗಿ ದೊರೆಯಲಿದೆ. ಅನಿರೀಕ್ಷಿತವಾಗಿ ಎಲ್ಲಿಂದಲೋ ಹಣ ದೊರೆತು ನೀವದನ್ನು ಆಸ್ತಿಗಾಗಿ ಹೂಡಿಕೆ ಮಾಡುವ ಸಾಧ್ಯತೆಗಳೂ ಇವೆ. ಈ ವರ್ಷ ನಿಮಗೆ ಈ ಗ್ರಹಗಳ ಜಗತ್ತು ಮನೆಯ ಉಡುಗೊರೆ ನೀಡಲಿವೆ.