ಆರನೇ ಇಂದ್ರಿಯವು ಐದು ಇಂದ್ರಿಯಗಳಿಗಿಂತ ಮಿಗಿಲಾದ ಜ್ಞಾನವನ್ನು ನೀಡುತ್ತದೆ. ಧ್ಯಾನ ಮತ್ತು ಕುಂಡಲಿನಿ ಜಾಗೃತಿಯ ಮೂಲಕ ಇದನ್ನು ಅಭಿವೃದ್ಧಿಪಡಿಸಬಹುದು. ಇದು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದಷ್ಟೇ ಅಲ್ಲ, ಅಪಾಯಗಳಿಂದಲೂ ರಕ್ಷಿಸುತ್ತದೆ. 

ಕೆಲವೊಮ್ಮೆ ಯಾವುದೋ ಪ್ರದೇಶಕ್ಕೆ ಹೋದಾಗ ʼಈ ಪ್ರದೇಶ ಸುರಕ್ಷಿತವಲ್ಲʼ ಎಂದು ನಿಮ್ಮ ಒಳಗಿನಿಂದ ಯಾರೋ ಹೇಳಿದಂತಾಗುತ್ತದೆ. ಇನ್ನೊಮ್ಮೊಮ್ಮೆ ಮನೆಯ ತೀವ್ರ ನೆನಪಾಗುತ್ತದೆ. ಚೆಕ ಮಾಡಿ ನೋಡಿದರೆ ಅಲ್ಲಿ ಅದೇ ಹೊತ್ತಿಗೆ ನಿಮ್ಮ ಅಮ್ಮ ನಿಮ್ಮನ್ನು ನೆನೆಯುತ್ತಿರುತ್ತಾರೆ. ಕೆಲವೊಮ್ಮೆ, ಇದ್ದಕ್ಕಿದ್ದಂತೆ ಯಾರೋ ದಿಡೀರ್‌ ತಮ್ಮ ಬಸ್‌ ಪ್ರಯಾಣ ಕ್ಯಾನ್ಸಲ್‌ ಮಾಡುತ್ತಾರೆ. ಅವರು ಪ್ರಯಾಣಿಸಬೇಕಿದ್ದ ಬಸ್ಸು ಆಕ್ಸಿಡೆಂಟ್‌ ಆಗಿ ಹಲವರು ಸತ್ತಿರುತ್ತಾರೆ. ಇವರು ಅದೃಷ್ಟವಶಾತ್‌ ಬದುಕಿರುತ್ತಾರೆ. ಇದನ್ನೆಲ್ಲ ಈ ನಿಮ್ಮ ಕಿವಿಯಲಿ ಪಿಸುಗುಟ್ಟುವ ಆ ಒಳಗಿನ ವ್ಯಕ್ತಿ ಯಾರು ಅಥವಾ ಇಂದ್ರಿಯ ಯಾವುದು?

ಈ ಜಗತ್ತನ್ನು ತಿಳಿದುಕೊಳ್ಳಲು ನಾವು ಐದು ಇಂದ್ರಿಯಗಳನ್ನು ಬಳಸುತ್ತೇವೆ- ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು. ಇದಲ್ಲದೇ ಆರನೇ ಇಂದ್ರಿಯವೂ ಒಂದಿದೆ. ಅದು ಕಣ್ಣಿಗೆ ಕಾಣಿಸದು. ಅದು ಮನಸ್ಸಲ್ಲ, ಅದು ಪ್ರಜ್ಞೆಯಲ್ಲ, ಅದು ಚಿತ್ತವಲ್ಲ. ಅದೇ ಆರನೇ ಇಂದ್ರಿಯ ಅಥವಾ ಸಿಕ್ಸ್ತ್‌ ಸೆನ್ಸ್.

ಹೌದು. ಆರನೇ ಇಂದ್ರಿಯ ಎಂಬುದು ವ್ಯಕ್ತಿಯ ಐದೂ ಇಂದ್ರಿಗಳಿಂದ ಪಡೆಯುವ ಶಬ್ದ ಸ್ಪರ್ಶ ರೂಪ ರಸ ಗಂಧಗಳೆಂಬ ಅನುಭವಗಳನ್ನು ಒಟ್ಟಿಗೆ ಸೇರಿಸಿ ಪಡೆಯುವ ಜ್ಞಾನಕ್ಕಿಂತಲೂ ಮಿಗಿಲಾದ ಒಂದು ಜ್ಞಾನವನ್ನು ನಮ್ಮ ಅರಿವಿಗೆ ತಂದುಕೊಡುವ ಒಂದು ವ್ಯವಸ್ಥೆ. ಅದು ನಮ್ಮೊಳಗೇ ಇದೆ. ಈ ಆರನೇ ಇಂದ್ರಿಯದ ಮೂಲಕ ನಾವು ಬಾಹ್ಯ, ಭೌತಿಕ ಅಂಶಗಳಂತೆ ನಮ್ಮೊಳಗಿನ ಗುಪ್ತ ರಹಸ್ಯಗಳ ಕುರಿತೂ ತಿಳಿದುಕೊಳ್ಳಬಹುದು. ನಾವೆಲ್ಲರೂ ನಮ್ಮ ಈ ಸಿಕ್ಸ್ತ್‌ ಸೆನ್ಸನ್ನು ಜಾಗೃತಗೊಳಿಸಬಹುದು.

ಯೋಗಪಟುಗಳು, ಯೋಗವಿದ್ವಾಂಸರು ತಿಳಿಸುವಂತೆ ನಮ್ಮ ದೇಹದಲ್ಲಿ ಆರು ಚಕ್ರಗಳಿವೆ. ಮೂಲಾಧಾರದಿಂದ ಹಿಡಿದು ಕುಂಡಲಿನಿಯವರೆಗೆ ಇವು ಆರು. ಯೋಗಸಾಧಕನು ಇವುಗಳನ್ನು ಜಾಗೃತಗೊಳಿಸಿಕೊಂಡು ಆರನೇ ಇಂದ್ರಿಯವನ್ನು ತಾನು ನಿದ್ರಿಸಿದ್ದಾಗಲೂ ಎಚ್ಚರದಲ್ಲಿ ಇಟ್ಟುಕೊಳ್ಳುತ್ತಾನೆ. ಅದರಲ್ಲೂ ಕುಂಡಲಿನಿಯು ಪ್ರಮುಖ. ಅದು ಜಾಗೃತಗೊಂಡಾಗ ದೇಹದ ಪ್ರಜ್ಞಾಚಕ್ರವು ತಾನಾಗಿಯೇ ಜಾಗೃತಗೊಳ್ಳುತ್ತದೆ.

ನೀವು ಕುಂಡಲಿನಿಯನ್ನು ಜಾಗೃತಗೊಳಿಸಬೇಕೆಂದು ಬಯಸಿದರೆ ಪ್ರತಿದಿನ ಅರ್ಧಗಂಟೆಯಾದರೂ ಏಕಾಂತ ಸ್ಥಳದಲ್ಲಿ ಕುಳಿತು ಧ್ಯಾನ ಮಾಡಿ. ಉಸಿರನ್ನು ಒಂದೇ ಕಡೆ ಕೇಂದ್ರೀಕರಿಸಿ. ಉಸಿರನ್ನೇ ಧ್ಯಾನಿಸಿ. ಇದು ನಿಮಗೆ ಅನನ್ಯ ಶಕ್ತಿಯ ಅನುಭವವನ್ನು ನೀಡುತ್ತದೆ. ಆರನೇ ಇಂದ್ರಿಯವು ನಿಮ್ಮ ಧ್ಯಾನ, ಗ್ರಹಿಕೆ, ಸಮಾಧಿ ಅಥವಾ ಕುಂಡಲಿನಿ ಜಾಗೃತಿಯ ಮೂಲಕ ಅಭಿವೃದ್ಧಿಗೊಳ್ಳುತ್ತದೆ. ನಿರಂತರ ಅಭ್ಯಾಸವು ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆರನೇ ಇಂದ್ರಿಯವು ನಮ್ಮ ಮನಸ್ಸಿನ ಅತ್ಯದ್ಭುತ ಶಕ್ತಿಯಾಗಿದೆ. ನಾವು ನಮ್ಮ ಮನಸ್ಸನ್ನು ಧ್ಯಾನದ ಮೂಲಕ ನಿಯಂತ್ರಿಸಿದಾಗ ಆಜ್ಞಾ ಚಕ್ರವು ಜಾಗೃತಗೊಳ್ಳುತ್ತದೆ. ಯಾವ ವ್ಯಕ್ತಿಯ ಮನಸ್ಸಿನ ಆಜ್ಞಾ ಚಕ್ರ ಜಾಗೃತಗೊಂಡಿರುತ್ತದೆಯೋ ಆ ವ್ಯಕ್ತಿಯು ತನ್ನ ಎದುರಿಗೆ ಇರುವ ವ್ಯಕ್ತಿಯ ಭೂತ, ವರ್ತಮಾನ, ಭವಿಷ್ಯ ಕಾಲದ ಕುರಿತು ತಿಳಿದುಕೊಳ್ಳಬಲ್ಲ. ಕೆಲವು ಜ್ಯೋತಿಷಿಗಳು ನಿಜಕ್ಕೂ ತಮ್ಮ ಮುಂದೆ ಕುಳಿತವರ ಜಾತಕವನ್ನು ಒಂದು ಕಣ್ಣೋಟದಿಂದಲೇ ಹೇಳಬಲ್ಲರು. ಅವರಲ್ಲಿ ಕುಂಡಲಿನಿ ಜಾಗೃತವಾಗಿದೆ ಎಂದು ತಿಳಿಯಬೇಕು.

ಆರನೇ ಇಂದ್ರಿಯದ ಬಳಕೆ ಯೋಗಿಗಳಿಗೆ ಮಾತ್ರ ಎಂದು ತಿಳಿಯಬೇಡಿ. ನಿತ್ಯ ಜೀವನದಲ್ಲೂ ಅದು ನಿಮಗೆ ಅತ್ಯುತ್ತಮ ಫಲ ಕೊಡಬಲ್ಲದು. ಆರನೇ ಇಂದ್ರಿಯದ ಸಮರ್ಪಕ ಬಳಕೆ ಮಾಡುವ ಮೂಲಕ ನೀವು ಅತ್ಯುತ್ತಮ ಕೌನ್ಸೆಲರ್‌, ಬರಹಗಾರ, ಒಂದು ಕಂಪನಿಯ ಅತ್ಯುತ್ತಮ ಸಿಇಒ, ಒಳ್ಳೆಯ ಐಎಎಸ್‌ ಅಧಿಕಾರಿ ಆಗಬಲ್ಲಿರಿ. ಯಾವುದೇ ಕೋಪಿಷ್ಠ ವ್ಯಕ್ತಿಯೂ ನಿಮ್ಮ ಮುಂದೆ ಬಂದಾಗ ಶಾಂತನಾಗುತ್ತಾನೆ. ವ್ಯಗ್ರತೆಯನ್ನು ಕಡಿಮೆ ಮಾಡುವ, ಶಾಂತತೆಯನ್ನು ಹೆಚ್ಚಿಸುವ ಶಕ್ತಿ ಆರನೇ ಇಂದ್ರಿಯಕ್ಕಿದೆ. ಇದು ಸ್ವತಃ ನೀವು ಯಾವುದೇ ಸಂಕಷ್ಟದ ಸ್ಥಿತಿಯಲ್ಲಿ ಸಿಕ್ಕಿದಾಗಲೂ ಆತಂಕಗೊಳ್ಳದೇ ಅದರಿಂದ ಪಾರಾಗುವಂತೆ ನಿಮ್ಮನ್ನು ಮಾಡಬಲ್ಲುದು.

ನಿಮ್ಮ ದೇಹದಲ್ಲಿನ ಆರನೇ ಇಂದ್ರಿಯ ಪರಿಪೂರ್ಣವಾಗಿ ಜಾಗೃತಗೊಂಡಾಗ ನಮ್ಮೆದುರು ನಿಂತಿರುವ ವ್ಯಕ್ತಿಯ ವ್ಯಕ್ತಿತ್ವ ಏನೆಂಬುದು ತಿಳಿಯುತ್ತದೆ. ನಮ್ಮೊಂದಿಗಿರುವ ವ್ಯಕ್ತಿಯು ನೀಚನೇ ಅಥವಾ ಮೋಸಗಾರನೇ ಎನ್ನುವುದು ತಿಳಿಯುತ್ತದೆ. ವ್ಯಕ್ತಿಯು ಶುದ್ಧವಾದ ಭಾವನೆಯಿಂದ ಮನಸ್ಸಿನ ಆಂತರಿಕ ಪ್ರಜ್ಞೆಗೆ ಕೆಲವು ರೀತಿಯ ವಿಷಯವನ್ನು ಹೇಳಿದರೆ, ಆ ಕೆಲಸ ಆಗುತ್ತದೆ. ಈ ಕ್ರಿಯೆಯನ್ನು ನಮ್ಮ ಪುರಾಣಗಳಲ್ಲಿ ಶಾಪ ಅಥವಾ ವರ ಎಂದು ಕರೆಯಲಾಗಿದೆ. ಭವಿಷ್ಯದಲ್ಲಿ ಯಾವ ರೀತಿಯ ಘಟನೆಗಳು ಸಂಭವಿಸಬಹುದು ಎನ್ನುವುದನ್ನು ಅವರು ಅನುಭವಿಸುತ್ತಾರೆ.