Chikkaballapur: ಮೈಸೂರು ಜಂಬೂ ಸವಾರಿಗೆ ನಂದಿಗಿರಿ ಸ್ತಬ್ಧಚಿತ್ರ
ನಾಡ ಹಬ್ಬ ಮೈಸೂರು ದಸರಾಗೆ ದಿನಗಣನೆ ಶುರುವಾಗಿದ್ದು ಸತತ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದ ಕಾರಣಕ್ಕೆ ಸ್ಥಗಿತಗೊಂಡಿದ್ದ ಜಂಬೂ ಸವಾರಿಯ ಸ್ತಬ್ಧ ಚಿತ್ರಗಳ ಮೆರವಣಿಗೆ ಈ ಬಾರಿ ನಾಡ ಹಬ್ಬಕ್ಕೆ ಕಳೆ ತರಲಿವೆ.
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.30): ನಾಡ ಹಬ್ಬ ಮೈಸೂರು ದಸರಾಗೆ ದಿನಗಣನೆ ಶುರುವಾಗಿದ್ದು ಸತತ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದ ಕಾರಣಕ್ಕೆ ಸ್ಥಗಿತಗೊಂಡಿದ್ದ ಜಂಬೂ ಸವಾರಿಯ ಸ್ತಬ್ಧ ಚಿತ್ರಗಳ ಮೆರವಣಿಗೆ ಈ ಬಾರಿ ನಾಡ ಹಬ್ಬಕ್ಕೆ ಕಳೆ ತರಲಿವೆ. ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ದೇಶ, ವಿದೇಶಿಗರ ಗಮನ ಸೆಳೆಯುವ ಮೈಸೂರು ದಸರಾದ ಜಂಬೂ ಸವಾರಿಯ ಸ್ತಬ್ದಚಿತ್ರಗಳ ಮೆರವಣಿಗೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಈ ಬಾರಿ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗರಿಧಾಮ ಹಾಗೂ ನಂದಿಯ ಐತಿಹಾಸಿಕ ಬೋಗನಂದೀಶ್ವರ ಆಲಯ ಸ್ತಬ್ಧಚಿತ್ರ ರಾರಾಜಿಸಲಿದೆ.
ಸ್ತಬ್ಧಚಿತ್ರ ಮೆರವಣಿಗೆಗೆ ಅವಕಾಶ: ಮೈಸೂರು ದಸರಾ ಆಚರಣೆಗೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿನ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಜೊತೆಗೆ ಆಯಾ ಜಿಲ್ಲೆಗಳ ಐತಿಹಾಸಿಕ ಹಿನ್ನಲೆಗಳನ್ನು ಸಾರುವ ಸ್ತಬ್ದಚಿತ್ರಗಳ ಮೆರವಣಿಗೆ ಪ್ರತಿ ವರ್ಷ ಸಂಪ್ರದಾಯ ಬದ್ದವಾಗಿ ನಡೆದುಕೊಂಡು ಬರುತ್ತಿದೆ. ಕೋವಿಡ್ ಕಾರಣಕ್ಕೆ ಎರಡು ವರ್ಷದಿಂದ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸರ್ಕಾರ ಬ್ರೇಕ್ ಹಾಕಿತ್ತು. ಆದರೆ ಈ ಬಾರಿ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸರ್ಕಾರ ಅವಕಾಶ ಕಲ್ಪಿಸಿದೆ.
ಸತ್ಯಸಾಯಿ ಗ್ರಾಮದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ: ಚಂಡಿಕಾಯಾಗ ಆರಂಭ
ನಂದಿಬೆಟ್ಟ, ಬೋಗನಂದೀಶ್ವರ: ಸ್ತಬ್ಧ ಚಿತ್ರಗಳ ಮೇರವಣಿಗೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಪಂ ವತಿಯಿಂದ ಕಳುಹಿಸಿದ್ದ ಹಲವು ಪ್ರಸ್ತಾವನೆಗಳ ಪೈಕಿ ಸ್ತಬ್ಧ ಚಿತ್ರಗಳ ಆಯ್ಕೆ ಸಮಿತಿಯು ಜಿಲ್ಲೆಯ ನಂದಿಗಿರಿಧಾಮ ಹಾಗೂ ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಪರಂಪರೆವುಳ್ಳ ನಂದಿ ಬೋಗನಂದೀಶ್ವರ ದೇವಾಲಯ ಸ್ತಬ್ಧಚಿತ್ರ ಸಿದ್ಧಪಡಿಸಲು ಗ್ರೀನ್ ಸಿಗ್ನಿಲ್ ನೀಡಿದೆ.
ಸ್ತಬ್ಧಚಿತ್ರ ನಿಮಾಣ ಕಾರ್ಯ ಮೈಸೂರಿನ ನಂಜನಗೂಡು ಬಳಿ ನಡೆಯಲಿದೆ ಎಂದು ಸ್ತಬ್ಧ ಚಿತ್ರದ ಉಸ್ತುವಾರಿ ನೋಡಲ್ ಅಧಿಕಾರಿ ಆಗಿರುವ ಜಿಲ್ಲೆಯ ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಕೇಶವರೆಡ್ಡಿ ಕನ್ನಡಪ್ರಭಗೆ ಸೋಮವಾರ ತಿಳಿಸಿದರು. ಸುಮಾರು 10 ರಿಂದ 12 ಲಕ್ಷ ರು, ವೆಚ್ಚದಲ್ಲಿ ಸ್ತಬ್ಧಚಿತ್ರ ನಿರ್ಮಾಣವಾಗಲಿದೆ. ಸ್ತಬ್ಧಚಿತ್ರದ ಮುಂದೆ ನಂದಿಯ ಬಸವಣ್ಣ ಇರಲಿದ್ದು ಬಳಿಕ ನಂದಿಯ ಬೋಗನಂದೀಶ್ವರ ದೇವಾಲಯ ಕಲಾಕೃತಿ ಇರಲಿದೆ. ಹಿಂದೆ ವಿಶ್ವ ವಿಖ್ಯಾತ ನಂದಿಬೆಟ್ಟಇರಲಿದೆಂದರು.
ಹಿಂದೆ ಪ್ರದರ್ಶನಗೊಂಡಿದ್ದ ಸ್ತಬ್ಧಚಿತ್ರಗಳು ಇವು: ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸಿ ಮೈಸೂರು ದಸರಾ ಜಂಬೂ ಸವಾರಿಗೆ ಜಿಪಂ ವತಿಯಿಂದ ಸಿದ್ದಪಡಿಸಿ ಕಳುಹಿಸಿದ್ದ ಹಲವು ಸ್ತಬ್ದಚಿತ್ರಗಳಿಗೆ ದ್ವಿತೀಯ, ತೃತೀಯ ಬಹುಮಾನ ಬಂದಿವೆ, ವಿಶೇಷವಾಗಿ ದಕ್ಷಿಣ ಭಾರತ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದ ವಿದುರಾಶ್ವತ್ಥದ ಹುತಾತ್ಮರ ವೀರಸೌಧ, ವಿದುರಾಶ್ವತ್ಥ ದೇಗುಲ ಸ್ತಬ್ದಚಿತ್ರಗಳಿಗೆ ಪ್ರಶಸ್ತಿ ಬಂದಿದೆ.
Udupi: ಈ ಬಾರಿ ಮೊದಲ ಬಾರಿಗೆ ಉಚ್ಚಿಲ ದಸರಾ ವೈಭವ
ಅಲ್ಲದೇ ಈ ಹಿಂದೆ ಕೈವಾರ ತಾತ್ಯನವರ ಜೀವನ ಚರಿತ್ರೆ ಸಾರುವ ಸ್ತಬ್ದಚಿತ್ರದ ಜೊತೆಗೆ ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ, ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಹಾಗೂ ಕೈವಾರದ ಬಕಾಸುರ ವಧೆ, ಜಿಲ್ಲೆಯ ಭಾರತ ರತ್ನಗಳಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್.ರಾವ್ ರವರ ಕುರಿತು ಸ್ತಬ್ದಚಿತ್ರಗಳು ಆಕರ್ಷಿತವಾಗಿ ರಚನೆಗೊಂಡು ಮೈಸೂರ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಜಿಲ್ಲೆಯ ಕಲೆ, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟಗಾದ ಹೆಜ್ಜೆ ಗುರುತುಗಳನ್ನು ಆನಾರವಣಗೊಳಿಸಿದ್ದವು.