ರಾಯಚೂರು: ಎರಡು ವರ್ಷಗಳ ಬಳಿಕ ಮುದಗಲ್‌ನಲ್ಲಿ ಮೊಹರಂ ಸಂಭ್ರಮ..!
ಎರಡು ವರ್ಷಗಳಿಂದ ಸಂಭ್ರಮದಿಂದ ಆಚರಣೆ ಮಾಡಲು ಆಗದ ಮುದಗಲ್ ಮೊಹರಂ, ಈ ವರ್ಷ ಸಂಭ್ರಮದಿಂದ ಆಚರಿಸಲು ದರ್ಗಾ ಕಮೀಟಿ ತೀರ್ಮಾನಿಸಿದೆ.
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ , ರಾಯಚೂರು
ರಾಯಚೂರು(ಜು.31): ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆಯುವ ಮೊಹರಂ ಐತಿಹಾಸಿಕ ಮತ್ತು ಭಾವೈಕ್ಯತೆ ಕೂಡಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸಡಗರ ಸಂಭ್ರಮದಿಂದ ಮೊಹರಂ ಆಚರಣೆ ಮಾಡಿರಲಿಲ್ಲ. ಹೀಗಾಗಿ ಈ ವರ್ಷ ಸಂಭ್ರಮದಿಂದ ಮೊಹರಂ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದಿನಿಂದ ಜುಲೈ 31ರಿಂದ ಆ.9ರವರೆಗೆ 10 ದಿನಗಳ ಕಾಲ ಮುದಗಲ್‌ನಲ್ಲಿ ಮೊಹರಂ ಸಂಭ್ರಮ ಮನೆ ಮಾಡಲಿದೆ.
ಮುದಗಲ್ ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ:
ವಿಜಯಪುರದ ಆದಿಲ್ ಶಾಹಿ ಯುದ್ಧದಲ್ಲಿ ಮುದಗಲ್ ಕೋಟೆ ವಶಪಡಿಸಿಕೊಂಡರು. ಆಗ ಆದಿಲ್ ಶಾಹಿ ತನ್ನೊಂದಿಗೆ ತಂದಿದ್ದ ಆಲಂ (ದೇವರು) ಗಳನ್ನು ಮುದಗಲ್ ನಲ್ಲಿ ಸ್ಥಾಪಿಸಿ ಪೂಜಿಸಿದ್ದ ಎಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೆ ಮುದಗಲ್ ಪಟ್ಟಣದಲ್ಲಿ ಮೊಹರಂ ಸಗಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಮೊಹರಂ ಆಚರಣೆ ವೇಳೆಯಲ್ಲಿ ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಸರ್ವ ಧರ್ಮದವರು ಸೇರಿ ಮೊಹರಂ ಆಚರಣೆ ಮಾಡುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೇ ಮುದಗಲ್ ನಲ್ಲಿ ಇರುವ ಆಲಂ (ದೇವರುಗಳಿಗೆ) ಕಲ್ಯಾಣದ ರಾಜ ದತ್ತಿಗಳನ್ನು ಕಳಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ. ಹೀಗಾಗಿ ಪ್ರತಿ ವರ್ಷವೂ ಮುದಗಲ್ ನಲ್ಲಿ ಮೊಹರಂ ಆಚರಣೆ ನಡೆಯುತ್ತಿದೆ. ಆದ್ರೆ ಕೋವಿಡ್ ಕಾರಣಕ್ಕಾಗಿ ಎರಡು ವರ್ಷಗಳಿಂದ ಸಡಗರದಿಂದ ಮೊಹರಂ ಆಚರಣೆ ಆಗಿರಲಿಲ್ಲ.
Jyotirling Series: ಪಾರ್ವತಿಯ ಅನ್ನದಾನಕ್ಕೆ ಭಿಕ್ಷಾಪಾತ್ರೆ ಹಿಡಿದು ಹೋಗುತ್ತಿದ್ದ ವಿಶ್ವೇಶ್ವರ!
ಮುದಗಲ್ ನಲ್ಲಿ ಈಗ ಹಬ್ಬದ ಸಂಭ್ರಮ:
ಮೊಹರಂ ನಿಮಿತ್ಯ ಮುದಗಲ್ ಪಟ್ಟಣದಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರು ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಿ ಹಬ್ಬ ಆಚರಿಸುತ್ತಾರೆ. ಹರಕೆ ಹೊತ್ತವರು ಆಲಂಗಳಿಗೆ ಮುಡಿಪು ಅರ್ಪಿಸುತ್ತಾರೆ. ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪಟ್ಟಣದ ಕೋಟೆ ಹೊರಭಾಗದಲ್ಲಿ ನಡೆಯುವ ಹಸನ್-ಹುಸೇನ್ ಸಹೋದರರ ಬೆಳ್ಳಿ ಪಾಂಜಾಗಳ ಮುಖಾಮುಖಿ ದೃಶ್ಯ ಕಣ್ತುಂಬಿಕೊಳ್ಳಲು ದೇಶ-ವಿದೇಶದ ಜನರು ಮುದಗಲ್ ಗೆ ಆಗಮಿಸುತ್ತಾರೆ.
ಹಿಜರಿ ಸಂವತ್ಸರದ ಮೊದಲನೇ ತಿಂಗಳು ಹತ್ತು ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ. 10 ದಿನಗಳ ಕಾಲ ನಡೆಯುವ ಈ ಮೊಹರಂನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. 1ರಿಂದ 5ನೇ ದಿನ ಮೊಹರಂ ಎಂದು ಆಚರಿಸಿದರೆ. 5ನೇ ದಿನ ಜಿಹಾಲ್ ಎಂದು, 7ನೇ ದಿನ ಖಾಸಿಂ ಪೀರಾ ಸವಾರಿ, 8ನೇ ದಿನ ಮೌಲಾಲಿ ಪೀರಾ ಸವಾರಿ, 9ನೇ ದಿನ ಹಸನ್-ಹುಸೇನ್ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್ ಆಚರಿಸಲಾಗುತ್ತೆ..ಅದರಲ್ಲೂ 10ನೇ ದಿನದ ಆಲಂ(ದೇವರು)ಗಳ ಕೊನೆಯ ಭೇಟಿ ಅತ್ಯಂತ ರೊಮಾಂಚನಕಾರಿ ಆಗಿರುತ್ತೆ. ಈ ವೇಳೆ ಸಾವಿರಾರು ಜನರು ಸೇರುತ್ತಾರೆ.
ಮೊಹರಂ ಆಚರಣೆಗಾಗಿ ವಿಶೇಷ ಭದ್ರತೆ:
ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಮುದಗಲ್ ಮೊಹರಂ ನೋಡಲು ದೇಶದ ನಾನಾ ರಾಜ್ಯಗಳ ಹಾಗೂ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಜನರು ಮುದಗಲ್ ಗೆ ಆಗಮಿಸುತ್ತಾರೆ. ಹೀಗಾಗಿ ಮುದಗಲ್ ಪಟ್ಟಣದ ಐತಿಹಾಸಿಕ ಕೋಟೆಯ ಕಿಲ್ಲಾದಲ್ಲಿ ಸಾವಿರಾರು ಜನರ ಓಡಾಟ ಇರುತ್ತದೆ. ಹೀಗಾಗಿ ಪೊಲೀಸ್ ಇಲಾಖೆ ಈಗಾಗಲೇ ಮೂರು ಸುತ್ತಿನ ಸಭೆ ನಡೆಸಿದೆ. ಅಲ್ಲದೇ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗುವ ಮೊಹರಂ ಹಬ್ಬದಲ್ಲಿ ನಾಡಿನ ಭಕ್ತಾಧಿಗಳು ದೇವರುಗಳ ಭೇಟಿಯಾಗಿ ಬಂದು- ಹೋಗುವ ವೇಳೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಹತ್ತಾರು ಮುಂಜ್ರಾಗತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಿಲ್ಲಾದ ನಿವಾಸಿಗಳು ವಾಹನಗಳಲ್ಲಿ ಓಡಾಟಕ್ಕೆ ನಿರ್ಬಂಧ:
ಮುದಗಲ್ ಮೊಹರಂ ನೋಡಲು ಜನರು ನಾನಾ ಕಡೆಗಳಿಂದ ಬರುತ್ತಾರೆ. ಬಂದ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಹತ್ತಾರು ನಿರ್ಬಂಧಗಳನ್ನು ಹೇರುವುದರ ಜೊತೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಾತ್ರೆಯಲ್ಲಿ ಯಾರಿಗೂ ತೊಂದರೆಯಾಗದಂತೆ 150 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅದರ ಜೊತೆಗೆ 100 ಜನ ಸ್ವಯಂ ಸೇವಕರು ಸಹ ಭದ್ರತೆಗೆ ಸಾಥ್ ನೀಡಲಿದ್ದಾರೆ .
ಜ್ಯೋತಿರ್ಲಿಂಗ ಸರಣಿ: ಗೂಳಿ ಬೆನ್ನಿನಿಂದ ಜ್ಯೋತಿರ್ಲಿಂಗವಾಗಿ ಕಾಣಿಸಿದ ಕೇದಾರನಾಥ!
ಜಾತ್ರೆಯಲ್ಲಿ ಅಂಗಡಿ ಮುಗ್ಗಟ್ಟು ಹಾಕುವರು, ಸಹ ರಸ್ತೆಯಲ್ಲಿ ಅಂಗಡಿಗಳು ಹಾಕಬಾರದು. ಸಾರ್ವಜನಿಕರು ಸಹ ವಿನಾಕಾರಣ ರಸ್ತೆಯಲ್ಲಿ ಓಡಾಟ ಮಾಡಬಾರದು. ಅದರಲ್ಲೂ ಕಿಲ್ಲಾದಲ್ಲಿ ಜರಗುವ 9ನೇ ದಿನದ ಖತಲ್ ರಾತ್ರಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದ್ದು, ಆ ದಿನ ಕಿಲ್ಲಾದ ಒಳಗಡೆ, ಹೊರಗಡೆ ಸಂಚರಿಸಲು ಕಟ್ಟು ನಿಟ್ಟಿನ ಕರಾರುಗಳನ್ನು ಪೊಲೀಸರು ವಿಧಿಸಿದ್ದಾರೆ. ಅನಗತ್ಯವಾಗಿ ವಾಹನಗಳನ್ನು ಚಲಾಯಿಸುವುದು ಕಂಡು ಬಂದರೆ ವಾಹನ ಮಾಲೀಕರು ಲೈಸನ್ಸ್ ಹಾಗೂ ಕಿಲ್ಲಾದಲ್ಲಿರುವವರು ಆಧಾರ್ ಕಾರ್ಡ್ ತೋರಿಸಬೇಕು ಓಡಾಟ ಮಾಡಬಹುದು. ಅದು ಕೂಡ ತುರ್ತು ಸೇವೆಗಾಗಿ ಮಾತ್ರ ಅನಗತ್ಯವಾಗಿ ಓಡಾಟ ಮಾಡಿದ್ರೆ ಅಂತವರ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಭೆಯಲ್ಲಿ ಪೊಲೀಸರು ತಿಳಿಸಿದರು.
ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಸಂಭ್ರಮದಿಂದ ಆಚರಣೆ ಮಾಡಲು ಆಗದ ಮುದಗಲ್ ಮೊಹರಂ, ಈ ವರ್ಷ ಸಂಭ್ರಮದಿಂದ ಆಚರಿಸಲು ದರ್ಗಾ ಕಮೀಟಿ ತೀರ್ಮಾನಿಸಿದೆ. 10 ದಿನಗಳ ಕಾಲ ನಡೆಯುವ ಮುದಗಲ್ ಮೊಹರಂನಲ್ಲಿ 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ಸಾಧ್ಯತೆ ಇದ್ದು, ಮೂಲಸೌಕರ್ಯಕ್ಕಾಗಿ ಮುದಗಲ್ ಪುರಸಭೆ ಹಾಗೂ ಜಿಲ್ಲಾಡಳಿತ ತಯಾರಿ ನಡೆಸಿದೆ.