Jyotirling Series: ಪಾರ್ವತಿಯ ಅನ್ನದಾನಕ್ಕೆ ಭಿಕ್ಷಾಪಾತ್ರೆ ಹಿಡಿದು ಹೋಗುತ್ತಿದ್ದ ವಿಶ್ವೇಶ್ವರ!
ಪ್ರಸಿದ್ಧ ಕಾಶಿ ವಿಶ್ವೇಶ್ವರ ಕೂಡಾ ಜ್ಯೋತಿರ್ಲಿಂಗವೇ ಆಗಿದ್ದಾನೆ. ಕಾಶಿಯಲ್ಲಿ ವಿಶ್ವನಾಥ ಪಾರ್ವತಿಯ ಪ್ರೇಮಿಯಾಗಿ ಬಂದುಳಿದ ಕತೆ ಆಸಕ್ತಿದಾಯಕವಾಗಿದೆ..
ಜ್ಯೋತಿರ್ಲಿಂಗಗಳು ಶಿವನ ಪವಿತ್ರ ಕ್ಷೇತ್ರಗಳಾಗಿವೆ; ಶಿವನು ಸ್ವತಃ ಈ ಸ್ಥಳಗಳಿಗೆ ಭೇಟಿ ನೀಡಿದ್ದಾನೆ ಮತ್ತು ಆದ್ದರಿಂದ ಈ ಸ್ಥಳಗಳು ಭಕ್ತರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಅವುಗಳಲ್ಲಿ 12 ಭಾರತದಲ್ಲಿವೆ.
12 ಜ್ಯೋತಿರ್ಲಿಂಗಗಳಲ್ಲಿ, ವಿಶ್ವೇಶ್ವರ ಅಥವಾ ವಿಶ್ವನಾಥ ಜ್ಯೋತಿರ್ಲಿಂಗವು ಅತ್ಯಂತ ಪ್ರಸಿದ್ಧವಾಗಿದೆ. ಏಕೆಂದರೆ ಇದು ವಿಶ್ವದ ಅತ್ಯಂತ ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ. ವಿಶ್ವನಾಥ ಎಂದರೆ 'ಜಗತ್ತಿನ ಅಧಿಪತಿ ಅಥವಾ ಬ್ರಹ್ಮಾಂಡ.'
ವಿಶ್ವೇಶ್ವರ ಜ್ಯೋತಿರ್ಲಿಂಗ ಎಲ್ಲಿದೆ?
ಇದು ಭಾರತದ ಉತ್ತರ ಪ್ರದೇಶದ ವಾರಣಸಿಯಲ್ಲಿ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ವಾರಣಾಸಿಯನ್ನು ಹಿಂದೆ ಕಾಶಿ ಎಂದು ಕರೆಯಲಾಗುತ್ತಿತ್ತು ಮತ್ತು ಆದ್ದರಿಂದ ಈ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಲಯ ಎಂದು ಕರೆಯಲಾಗುತ್ತದೆ.
ವಿಶ್ವೇಶ್ವರ ಜ್ಯೋತಿರ್ಲಿಂಗದ ಇತಿಹಾಸ
ಈ ದೇವಾಲಯದ ಬಗ್ಗೆ ಪ್ರಾಚೀನ ಉಲ್ಲೇಖವು ಪುರಾಣಗಳಲ್ಲಿದೆ. 1194 ADಯಲ್ಲಿ ಕುತುಬ್-ಉದ್-ದಿನ್-ಐಬಕ್ ಮತ್ತು ನಂತರ 1669ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಸೇರಿದಂತೆ ಆಕ್ರಮಣಕಾರರ ಹೊಡೆತಕ್ಕೆ ಈ ದೇವಾಲಯ ನಲುಗಿದೆ. ಅವರು ಅದರ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದರು. ಮೊಘಲ್ ಚಕ್ರವರ್ತಿ ಅಕ್ಬರನ ಸೇನಾಪತಿ ರಾಜಾ ಮಾನ್ ಸಿಂಗ್ ಮತ್ತು ಅವನ ಹಣಕಾಸು ಮಂತ್ರಿ ರಾಜಾ ತೋಡರ್ ಮಾಲ್ ಸೇರಿದಂತೆ ವಿವಿಧ ಆಡಳಿತಗಾರರು ಇದನ್ನು ಮರು ನಿರ್ಮಿಸಿದರು. 1777ರಲ್ಲಿ ಇಂದೋರ್‌ನ ಮರಾಠ ದೊರೆ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಪಕ್ಕದ ಸ್ಥಳದಲ್ಲಿ ವಿಶ್ವನಾಥ ದೇವಾಲಯ ನಿರ್ಮಿಸಿದರು.
ಶ್ರಾವಣ ಸೋಮವಾರ ಅವಿವಾಹಿತೆಯರು ಈ ಕೆಲ್ಸ ಮಾಡ್ಬೇಡಿ
ವಿಶ್ವೇಶ್ವರ ದೇವಸ್ಥಾನದ ವಿಶೇಷತೆಗಳು
ಜ್ಯೋತಿರ್ಲಿಂಗವು ಬೆಳ್ಳಿಯ ಬಲಿಪೀಠದ ಮೇಲೆ ಗರ್ಭಗುಡಿಯ ಮಧ್ಯದಲ್ಲಿದೆ. ವಿಷ್ಣು, ವಿನಾಯಕ, ಕಾಲಭೈರವ ಮತ್ತು ಶನೀಶ್ವರ ಮುಂತಾದ ಇತರ ದೇವರುಗಳ ಗುಡಿಗಳು ಇಲ್ಲಿವೆ. ದೇವಾಲಯದ ಒಳಗೆ ಒಂದು ಬಾವಿ ಇದೆ, ಇದನ್ನು ಜ್ಞಾನ ವಾಪಿ ಎಂದು ಕರೆಯಲಾಗುತ್ತದೆ. ಮೊಘಲರು ದೇವಾಲಯವನ್ನು ಧ್ವಂಸ ಮಾಡಲು ಬಂದಾಗ ಇಲ್ಲಿ ಲಿಂಗವನ್ನು ಮರೆಮಾಡಲಾಯಿತು ಎಂದು ನಂಬಲಾಗಿದೆ.
1835ರಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ದಾನ ಮಾಡಿದ ಗೋಪುರ ಅಥವಾ ಶಿಖರವನ್ನು ಚಿನ್ನದಿಂದ ಲೇಪಿತಗೊಳಿಸಲಾಯಿತು. ಅದರ ಮೂರು ಗುಮ್ಮಟಗಳು ಚಿನ್ನದ ಲೇಪಿತವಾಗಿರುವುದರಿಂದ, ಪ್ರವಾಸಿಗರು ಇದನ್ನು 'ವಾರಣಾಸಿಯ ಗೋಲ್ಡನ್ ಟೆಂಪಲ್' ಎಂದು ಕರೆಯುತ್ತಾರೆ.
ವಿಶ್ವೇಶ್ವರ ಜ್ಯೋತಿರ್ಲಿಂಗದ ಹಿಂದಿನ ಕಥೆ ಏನು?
ಭಗವಾನ್ ಶಿವನ ವಾಸಸ್ಥಾನದ ಬಗ್ಗೆ ಪಾರ್ವತೀ ದೇವಿಯ ತಾಯಿಗೆ ಅಸಮಾಧಾನವಿತ್ತು. ಹೀಗಾಗಿ ಶಿವನು ಕಾಶಿಗೆ ಬಂದು ವಾಸಿಸಲು ನಿರ್ಧರಿಸಿದನು. ತನ್ನ ಸಂಗಾತಿಯಾದ ಪಾರ್ವತಿ ದೇವಿಯನ್ನು ಮೆಚ್ಚಿಸಲು, ಶಿವನು ರಾಕ್ಷಸನಾದ ನಿಕುಂಭನನ್ನು ಕಾಶಿಯಲ್ಲಿ ತನ್ನ ಕುಟುಂಬಕ್ಕೆ ಸೂಕ್ತವಾದ ಸ್ಥಳವನ್ನು ಸಿದ್ಧ ಮಾಡಿಕೊಡುವಂತೆ ವಿನಂತಿಸಿದನು. ಪಾರ್ವತಿಯು ಈ ವಾಸಸ್ಥಾನದಿಂದ ತುಂಬಾ ಸಂತೋಷಪಟ್ಟಳು. ಆ ಸಂದರ್ಭದಲ್ಲಿ ಅವಳು ಎಲ್ಲರಿಗೂ ಅನ್ನದಾನ ಮಾಡುತ್ತಿದ್ದಳು. ಆದ್ದರಿಂದ ಅವಳನ್ನು ಇಲ್ಲಿ ಅನ್ನಪೂರ್ಣ ಎಂದು ಪೂಜಿಸಲಾಗುತ್ತದೆ. ಭಗವಾನ್ ಶಿವ ಸಹ ಆಕೆಯ ಮುಂದೆ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಆಹಾರಕ್ಕಾಗಿ ಹೋಗುತ್ತಿದ್ದ ಎಂಬ ಕತೆಯಿದೆ.
ಜ್ಯೋತಿರ್ಲಿಂಗ ಸರಣಿ: ಗೂಳಿ ಬೆನ್ನಿನಿಂದ ಜ್ಯೋತಿರ್ಲಿಂಗವಾಗಿ ಕಾಣಿಸಿದ ಕೇದಾರನಾಥ!
ವಿಶ್ವೇಶ್ವರ ಜ್ಯೋತಿರ್ಲಿಂಗದ ಬಗ್ಗೆ ಆಸಕ್ತಿದಾಯಕ ಸಂಗತಿಗಳು
ಕಾಶಿಯಲ್ಲಿ ವಾಸಿಸುವ ಅಥವಾ/ಮರಣ ಹೊಂದಿದವರು ಮೋಕ್ಷ ಅಥವಾ ಜ್ಞಾನೋದಯವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಇಲ್ಲಿ ನಡೆಸುವ ಯಾವುದೇ ಪುಣ್ಯ ಕಾರ್ಯವು ಎಲ್ಲ ಪಾಪಗಳನ್ನು ನಿವಾರಿಸುತ್ತದೆ.
ಕಾಶಿ ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ.
ನೀವು ಚಿನ್ನದ ಶಿಖರವನ್ನು ನೋಡಿದ ನಂತರ ನಿಮ್ಮ ಕೋರಿಕೆ ಹೇಳಿಕೊಂಡರೆ ಅದು ನಿಜವಾಗುತ್ತದೆ ಎಂದು ನಂಬಿಕೆ ಇದೆ.
ವರ್ಷದಲ್ಲಿ ಯಾವುದೇ ಸಮಯದಲ್ಲಿ ನೀವು ಈ ಆಧ್ಯಾತ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದಾದರೂ, ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಚಳಿಗಾಲದಲ್ಲಿ ಭೇಟಿ ನೀಡುವುದು ಉತ್ತಮ.
ಮಹಾಶಿವರಾತ್ರಿಯ ಸಮಯದಲ್ಲಿ ಈ ಪುರಾತನ ಮತ್ತು ದೈವಿಕ ಗಮ್ಯಸ್ಥಾನಕ್ಕೆ ಭೇಟಿ ನೀಡುವುದು ಯಾವುದೇ ಭಕ್ತನಿಗೆ ಉತ್ತಮ ಸತ್ಕಾರವಾಗಿರುತ್ತದೆ!