Asianet Suvarna News Asianet Suvarna News

ನಿಮ್ಮ ಕಲೀಗ್ ಯಾವ ರಾಶಿಯವರು? ಥಟ್ ಅಂತ ಹೇಳಿ!

ಕೆಲವು ಗುಣಲಕ್ಷಣಗಳು ಕೆಲವು ರಾಶಿಯವರಿಗೆ ಕಾಮನ್. ಅವರ ಕೆಲವು ವರ್ತನೆ, ಗುಣ ಸ್ವಭಾವಗಳನ್ನು ನೋಡಿ ಅವರು ಇಂಥದೇ ಜನ್ಮರಾಶಿಯವರು ಅಂತ ಕರಾರುವಕ್ ಆಗಿ ಹೇಳಿಬಿಡಬಹುದು. ಹಾಗೆ ತಿಳಿಯುವ ಕಲೆ ರೂಢಿಸಿಕೊಳ್ಳಲು ಇಲ್ಲಿದೆ ಒಂದು ಗುಣಸ್ವಭಾವ ಪಟ್ಟಿ.

 

How to find out your colleagues zodiac
Author
Bengaluru, First Published Jan 25, 2021, 4:21 PM IST

ಮೇಷ

ಇವರೆಷ್ಟು ಹಟವಾದಿಗಳು ಅಂದರೆ, ಅದೆಂಥ ದೊಡ್ಡ ಬಂಡೆಯಾದರೂ ತಲೆಯಲ್ಲೇ ಪುಡಿ ಮಾಡಿ ಸಿದ್ಧ ಎಂದು ನಿಂತು ಬಿಡುತ್ತಾರೆ. ತನ್ನ ಸುತ್ತಲಿನವರ ಮೇಲೆ ಹಿಡಿತ ಸಾಧಿಸುವುದಕ್ಕೆ ಸದಾ ಯತ್ನಿಸುವ ಇವರಿಗೆ, ಸೋಲು ಎದುರಾಗುವ ಸಂದರ್ಭ ಬಂದರೆ ಬಹಳ ಹತಾಶರಾಗಿ ಬಿಡುತ್ತಾರೆ. ಇನ್ನೊಬ್ಬರ ಮಾತನ್ನು ಒಬ್ಬರೇ ಇರುವಾಗ ಬಹಳ ಯೋಚಿಸಿ, ಜಾರಿಗೆ ತರುವ ಇವರು, ಹೆಚ್ಚಿನ ಪಕ್ಷ ದಾರಿ ತಪ್ಪಿ, ನಷ್ಟ ಮಾಡಿಕೊಳ್ಳುತ್ತಾರೆ. ಹೋರಾಟ ಸ್ವಭಾವವೇ ಇವರ ಹೆಗ್ಗುರುತು.

ವೃಷಭ

ವೃಷಭ ರಾಶಿಯವರು ಶ್ರಮ ಜೀವಿಗಳು. ದುಡಿಯುವ ಭರದಲ್ಲಿ ಅಕ್ಕಪಕ್ಕ ಏನಾಗುತ್ತಿದೆ ಎಂದು ಕೂಡ ಯೋಚಿಸದ ಇವರು ಅಂಥ ಅಪಾಯಕಾರಿಯೂ ಅಲ್ಲ. ಬಹುತೇಕ ಸಂದರ್ಭದಲ್ಲಿ ಕಂಫರ್ಟ್ ಜೋನ್ ನಲ್ಲೇ ಉಳಿದುಬಿಡುವ ಇವರು, ತೀರಾ ಮಹತ್ವಾಕಾಂಕ್ಷಿಗಳು, ಆಡಂಬರದ ಜೀವನ ಬಯಸುವವರು ಆಗಿರುವುದಿಲ್ಲ. ಸ್ವಭಾವತಃ ತಾಯಿ ಹೃದಯದವರಾಗಿರುತ್ತಾರೆ. ಸಂಗಾತಿ, ಮಕ್ಕಳು, ಕುಟುಂಬ ಇಷ್ಟು ಇದ್ದರೆ ನೆಮ್ಮದಿ. ಕೈಯಿಂದ ದುಡ್ಡು ಕಳೆದುಕೊಳ್ಳುತ್ತಿರುತ್ತಾರೆ.

ಮಿಥುನ

ನೇರವಂತಿಕೆ ಬಹಳ ಮುಖ್ಯ ಅಂತ ಭಾವಿಸಿ ತಾವಾಗಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಇವರು, ಕೆಲ ಬಾರಿ ವಯಸ್ಸಿಗೆ ಮೀರಿದ ಪ್ರಬುದ್ಧರಂತೆಯೂ ಮತ್ತೆ ಕೆಲ ಬಾರಿ ಬಾಲಿಶರಾಗಿಯೂ ಕಾಣಿಸಿಕೊಳ್ಳುತ್ತಾರೆ. ಗೊಂದಲಕ್ಕೆ ಕೊನೆ ಎಂಬುದು ಇರುವುದಿಲ್ಲ. ಎಲ್ಲರೂ ಇವರಿಗೆ ಬಹಳ ಬೇಗ ಬೋರ್ ಆಗಿ ಬಿಡುತ್ತಾರೆ. ಏಕಾಂಗಿಯಾಗಿ ಇರಲು ಬಯಸುತ್ತಾರೆ. ಕೆಲವು ಬಾರಿ ಇವರ ಲೆಕ್ಕಾಚಾರ, ಜುಗ್ಗತನ ಸಹಿಸುವುದು ಅಸಾಧ್ಯ ಎನಿಸುತ್ತದೆ. ಕೆಲವು ಸಲ ದುಡ್ಡಿನ ಮುಖ ನೋಡದೆ ಖರ್ಚು ಮಾಡುತ್ತಾರೆ. 

ಕಟಕ

ಇವರು ಬಲು ಚುರುಕು. ಸಮಯ ಸಂದರ್ಭ ಚೆನ್ನಾಗಿ ಬಳಸಿಕೊಳ್ಳುವವರು. ನಾಲಗೆ ಬಿರುಸು. ಲೆಕ್ಕಾಚಾರ ಜಾಸ್ತಿ. ಗಂಡಿರಲಿ, ಹೆಣ್ಣಿರಲಿ ಸ್ವಚ್ಛಂದವಾಗಿ ಇರಲು ಬಯಸುತ್ತಾರೆ. ಯಾವುದೇ ಸಂಗತಿ, ವಿಷಯಗಳ ಬಗ್ಗೆ ಆಳವಾದ, ನಿಖರವಾದ ಮಾಹಿತಿ ತಿಳಿದುಕೊಳ್ಳುತ್ತಾರೆ. ಹಲವರಿಗೆ ಯಶಸ್ಸು ಸಿಗುವುದು ಬಹಳ ನಿಧಾನ ಆಗುತ್ತದೆ. ತುಂಬ ಸಂದರ್ಭದಲ್ಲಿ ಇವರು ಡೆಡ್‌ಲೈನ್‌ನೊಳಗೆ ಕೆಲಸ ಮಾಡುವುದಿಲ್ಲ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಲೆಕ್ಕಾಚಾರದಲ್ಲಿ ಹೆಜ್ಜೆಗಳನ್ನು ಇಡುವುದಿಲ್ಲ. 

ದ್ರೌಪದಿಯನ್ನು ಐವರು ಪಾಂಡವರು ಹಂಚಿಕೊಂಡದ್ದು ಏಕೆ? ...

ಸಿಂಹ

ಸಿಂಹಕ್ಕೆ ಎಲ್ಲೇ ಹೋದರೂ ಮರ್ಯಾದೆ, ಸೌಕರ್ಯ, ಸವಲತ್ತು, ಸುಖ, ನಿದ್ರೆ, ರುಚಿಕಟ್ಟಾದ ಊಟ, ತನ್ನದೇ ಮಾತು ಕೇಳುವವರು ಬೇಕು. ಇವರ ಅಹಂಗೆ ಹೊಡೆತ ಬಿದ್ದರೆ ಇಡೀ ವಾತಾವರಣ ಕೆಡಿಸುತ್ತಾರೆ. ಗಂಡಸರು ಆಲಸಿಗಳಾಗಿರುತ್ತಾರೆ. ಇವರ ಕೆಲಸ ಕೂಡ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕೇ ಆಗಿರುತ್ತದೆ. ಏಕಾಂತವನ್ನು ಬಹುವಾಗಿ ಇಷ್ಟಪಡುವವರು. ಸಂಬಂಧಿಕರು, ಅಪ್ಪ-ಅಮ್ಮನ ಜತೆ ಕೂಡ ಎಷ್ಟೋ ಸಲ ಇಷ್ಟವಾಗುವುದಿಲ್ಲ. ಇವರ ಬಾಯಿಗೆ ಸಿಕ್ಕಿ ಬದುಕುವುದು ಕಷ್ಟ.

ಕನ್ಯಾ

ಯಾವುದರಿಂದಲೂ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ ಅನ್ನೋ ರಾಶಿ. ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕು. ಜೀವನದಲ್ಲಿ ಇವರಿಗೆ ಇರುವಷ್ಟು ದೂರುಗಳು ಯಾರಿಗೂ ಇರುವುದಿಲ್ಲ. ಸಂಬಂಧವೇ ಇಲ್ಲದ ವಿಚಾರಗಳೂ ಸಿಕ್ಕಾಪಟ್ಟೆ ಇರುತ್ತವೆ. ಇವರ ನೆನಪಿನ ಶಕ್ತಿ, ಬುದ್ಧಿವಂತಿಕೆ ಭಾರೀ ಅಪಾಯಕಾರಿ. ಎಲ್ಲಿ ನೆನಪಿಗೆ ಬರಬಾರದೋ, ಸುಮ್ಮನಿರಬೇಕೋ ಅಲ್ಲಿ ಸರಿಯಾಗಿ ಮಾತನಾಡಿ ಎಷ್ಟೋ ಸಲ ತಾವು ಅಪಾಯ ತಂದುಕೊಳ್ಳುತ್ತಾರೆ. ಇತರರಿಗೂ ಅಪಾಯ ತರುತ್ತಾರೆ.

ನಿಮಗೂ ಇದೆಯಾ ಬಾಲಗ್ರಹ ಪೀಡೆ? ಚೆಕ್ ಮಾಡ್ಕೊಳಿ. ...

ತುಲಾ

ಎಲ್ಲವನ್ನೂ ಹೋಲಿಸಿ ನೋಡುವವರು. ಎಲ್ಲದಕ್ಕೂ ಒಂದು ತಕ್ಕಡಿ. ಕೊಟ್ಟ ಎರಡು ಸ್ವೀಟಿಗೂ ಪ್ರತಿಯಾಗಿ ಎರಡು ಸ್ವೀಟು. ನಾಲ್ಕು ಏಟಿಗೂ ತಿರುಗಿ ನಾಲ್ಕೇಟು. ಲೆಕ್ಕ ಬಿಡುವ ಜನರಲ್ಲ ಇವರು. ಭಯಂಕರ ವಾಸ್ತವವಾದಿಗಳು. ಯಾರಿಂದಲೂ ಸುಖಾಸುಮ್ಮನೆ ಸಹಾಯ ಪಡೆಯಲ್ಲ. ಅಲ್ಲಿಂದ ಅಲ್ಲೇ ಲೆಕ್ಕ ಚುಕ್ತಾ. ಈಗ ಪಡೆದ ಐವತ್ತು ಪೈಸೆಗೆ ಐದು ವರ್ಷದ ನಂತರ ಹತ್ತು ರುಪಾಯಿ ಏಕೆ ಕೊಡಬೇಕು ಎಂದು ಯೋಚಿಸುವ ಜಾಣರಿವರು.

ವೃಶ್ಚಿಕ

ಇವರ ಟೀಕೆ-ಟಿಪ್ಪಣಿಯಿಂದ ಜಗತ್ತಿನಲ್ಲಿ ಯಾವುದೂ ಹೊರತಲ್ಲ. ತಂದೆ- ತಾಯಿ ಆದರೂ ಮಕಮಕ ಬೈಯ್ಯುವ ಜನ ಇವರು. ಹಾಗಂತ ಇವರು ಬಹಳ ಶಿಸ್ತು ಅಂತೇನಲ್ಲ. ನನ್ನನ್ನು ಹೀಗೇ ಒಪ್ಪಿಕೊಳ್ಳಬೇಕು. ಬೇರೆಯವರನ್ನು ನಾನು ಸಹಿಸಲ್ಲ ಅನ್ನೋ ಜನ ಇವರು. ಏನು ಸಾಧಿಸಬೇಕು ಅಂತಿದೀಯಾ ಅಂತ ಇವರನ್ನು ಕೇಳಲೇಬಾರದು. ಏಕೆಂದರೆ, ದಿನಾ ಒಂದೊಂದು ಮೆಟ್ಟಿಲನ್ನು ಆಕಾಶಕ್ಕೆ ಕಟ್ಟಿಕೊಂಡು ಹೋಗುವ ಇವರು, ಅದರಾಚೆಗೂ ಇಣುಕುವ ಅವಕಾಶ ಸಿಕ್ಕರೆ ಸೈ ಅಂತಾರೆ.

ಧನು

ಎಲ್ಲದಕ್ಕೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದಕ್ಕೂ ಮುಂಚೆ ತಮ್ಮ ಪ್ರಾಮುಖ್ಯತೆ ತಿಳಿಸುವುದಕ್ಕೆ ಕಲಿತ ವಿದ್ಯೆ ಖರ್ಚು ಮಾಡುತ್ತಾರೆ. ಇವರದು ಸ್ವಲ್ಪ ಮಟ್ಟಿಗೆ ಅನುಕೂಲಸಿಂಧು ದೈವ ಭಕ್ತಿ, ಮಾತೃ ಭಕ್ತಿ, ಪಿತೃ ಭಕ್ತಿ, ಗುರು ಭಕ್ತಿ ಆಗಿರುತ್ತದೆ. ಆಯಾ ಸನ್ನಿವೇಶಕ್ಕೆ ತಕ್ಕ ಹಾಗೆ ಅವುಗಳನ್ನು ಬಳಸಿಕೊಳ್ಳುತ್ತಾರೆ. ಇವರ ಪೈಕಿ ಹಲವರಿಗೆ ಗುರು ಹಾಗೂ ದೈವ ಭಕ್ತಿ ಹೆಚ್ಚಾಗಿರುತ್ತದೆ.

ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ! ...

ಮಕರ

ಈ ರಾಶಿಯವರು ಯಾರಿಗಾದರೂ ಮೋಸ ಮಾಡಲೇ ಬೇಕು ಎಂದು ನಿರ್ಧರಿಸಿದರೆ ಮುಗಿಯಿತು, ಅವರನ್ನು ವಂಚಿಸಿಯೇ ವಂಚಿಸುತ್ತಾರೆ. ಸಂಬಂಧಗಳ ವಿಚಾರದಲ್ಲಿ ಸ್ವಾರ್ಥ ಹೆಚ್ಚಾಗಿರುತ್ತದೆ. ತನ್ನ ಕುಟುಂಬ, ಸ್ನೇಹಿತರು, ಆಪ್ತ ಬಂಧುಗಳು ಎಂಬ ವಲಯ ಬಿಟ್ಟು ಆಚೆ ಯೋಚಿಸದ ಜನ ಇವರು. ಕೆಲ ಬಾರಿಯಂತೂ ಬಹಳ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ದುಡ್ಡು, ಸ್ಥಾನಮಾನ, ಗೌರವ, ಅಧಿಕಾರದ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ ಎಂಬಂತೆ ಕಾಣುವ ಇವರು ಒಳಗೊಳಗೆ ಅದಕ್ಕಾಗಿ ಪ್ರಯತ್ನ ಮಾಡುತ್ತಿರುತ್ತಾರೆ.

ಕುಂಭ

ಸಿಟ್ಟಾಗಿರಬಹುದು, ಪ್ರೀತಿ ಆಗಿರಬಹುದು, ಕೊನೆಗೆ ಲೈಂಗಿಕ ತೃಪ್ತಿಯೇ ಇರಬಹುದು ಪೂರ್ಣವಾಗದ ಹೊರತು, ಸಂತೃಪ್ತಿ ದೊರಕದ ಹೊರತು ಬಿಡುವ ಜಾಯಮಾನ ಇವರದಲ್ಲ. ಸಾಧನೆ ಮತ್ತೊಂದು ಅಂತೆಲ್ಲ ತುಂಬ ತಲೆ ಕೆಡಿಸಿಕೊಳ್ಳದ ಇವರಿಗೆ ತಮ್ಮ ಸಂಸಾರ ಜೀವನದ ಸಮತೋಲನ ಬಹಳ ಮುಖ್ಯ. ಲೆಕ್ಕಾಚಾರ, ಜುಗ್ಗತನ, ಸಣ್ಣ ಬುದ್ದಿ, ವಿನಯವಂತಿಕೆ, ದೊಡ್ಡವರು, ಗುರು-ಹಿರಿಯರಿಗೆ ಗೌರವ ಹೀಗೆ ಹಲವು ಒಳ್ಳೆ ಹಾಗೂ ಕೆಟ್ಟ ಗುಣಗಳ ಮಿಶ್ರಣ ಇವರಲ್ಲಿ ಇರುತ್ತದೆ.

ಮೀನ

ಎಷ್ಟೋ ಸಲ ಒಮ್ಮೆ ಇವರ ಮಾತು ಅರ್ಥವೇ ಆಗುವುದಿಲ್ಲ. ಅಥವಾ ಅದಕ್ಕೆ ತಮಗೆ ಬೇಕಾದಂತೆ ತಿರುಗಿಸಬಹುದಾದ ಅರ್ಥ ಕೊಟ್ಟು ಮಾತನಾಡಿರುತ್ತಾರೆ. ತಮ್ಮ ಬುದ್ಧಿ, ವಿದ್ಯೆ ಬಗ್ಗೆ ವಿಪರೀತವಾಗಿ ನಂಬುತ್ತಾರೆ. ಅಪರೂಪದಲ್ಲಿ ವಿದ್ಯೆ ಇಲ್ಲದಿದ್ದರೆ, ಒಂದು ವಿಶೇಷವಾದ ಕೌಶಲವನ್ನು ಸಂಪಾದಿಸಿರುತ್ತಾರೆ. ಭವಿಷ್ಯವನ್ನು ತುಂಬ ಚೆನ್ನಾಗಿ ಗುರುತಿಸಬಲ್ಲ ಇವರು, ಬಹಳ ಕ್ಷೇತ್ರಗಳಲ್ಲಿ ಯಶಸ್ಸು ಕಾಣುತ್ತಾರೆ.  ಬಹಳ ಸಲ ಸಣ್ಣ ಆಮಿಷಗಳಿಗೆ ಬಲಿಯಾಗಿ ದೊಡ್ಡ ಅವಕಾಶಗಳನ್ನು ಕಳೆದುಕೊಂಡು ಬಿಡ್ತಾರೆ.

Follow Us:
Download App:
  • android
  • ios