ಇಂದ್ರಜಿತು ಸಾಮಾನ್ಯನಲ್ಲ! ಅವನನ್ನು ಕೊಲ್ಲೋಕೆ ಲಕ್ಷ್ಮಣ ಏನು ಮಾಡಿದ್ದ ಗೊತ್ತಾ?
ಇಂದ್ರನನ್ನೇ ಗೆದ್ದು ಹೆಡೆಮುರಿ ಕಟ್ಟಿದ ಮೇಘನಾದನನ್ನು ಸೋಲಿಸೋಕೆ ಲಕ್ಷ್ಮಣ ಹನ್ನೆರಡು ವರ್ಷಗಳ ಈ ವ್ರತ ಮಾಡಬೇಕಾಯ್ತು!
ರಾವಣನಿಗೆ ಮಂಡೋದರಿಯಲ್ಲಿ ಜನಿಸಿದ ಮಗ ಇಂದ್ರಜಿತು. ಹುಟ್ಟುವಾಗಲೇ ಇವನು ಮೋಡಗಳಂತೆ ದೊಡ್ಡದಾದ ಗುಡುಗಿನ ದನಿ ಹೊರಡಿಸಿದನಂತೆ. ಹೀಗಾಗಿ ಇವನಿಗೆ ಮೇಘನಾದ ಎಂದು ಹೆಸರಿಟ್ಟರು.
ಮುಂದೆ ರಾವಣ ರಾಕ್ಷಸ ಸೇನೆ ಕಟ್ಟಿಕೊಂಡು ದೇವಲೋಕದ ಮೇಲೆ ದಾಳಿ ಮಾಡಿದ. ಆಗ ದೇವೇಂದ್ರನಿಗೂ ಮೇಘನಾದನಿಗೂ ಖಾಡಾಖಾಡಿ ಯುದ್ಧ ನಡೆಯಿತು. ಇಂದ್ರನ ವಜ್ರಾಯುಧದ ಗುರುತು ಮೇಘನಾದನ ಎದೆಯ ಮೇಲೆ ಬಿತ್ತು. ರೋಷತಪ್ತನಾದ ಮೇಘನಾದ ಇಂದ್ರನನ್ನು ಸೋಲಿಸಿ ಅವನ ಹೆಡೆಮುರಿ ಕಟ್ಟಿ ತಂದೆಯ ಮುಂದೆ ತಂದು ನಿಲ್ಲಿಸಿದ. ಅಂದಿನಿಂದ ಅವನಿಗೆ ಇಂದ್ರಜಿತು ಎಂದು ಹೆಸರಾಯಿತು.
ಮುಂದೆ ರಾವಣ ಸೀತೆಯನ್ನು ಕದ್ದುಕೊಂಡು ಬಂದು ಅಶೋಕವನದಲ್ಲಿಟ್ಟ. ಆಗ ಆಕೆಯನ್ನು ಹುಡುಕುತ್ತ ಬಂದ ಹನುಮಂತ, ತನ್ನ ಕೆಲಸ ಮುಗಿಸಿದ ಮೇಲೆ ರಾವಣನ ಉದ್ಯಾನ ಹಾಳುಗೆಡವಿದ. ತಡೆಯಲು ಬಂದ ರಾಕ್ಷಸರನ್ನೆಲ್ಲ ಸದೆಬಡಿದ. ರಾವಣನ ಮಗ ಅಕ್ಷಕುಮಾರನನ್ನು ಕೊಂದ. ಆಗ ಅಲ್ಲಿಗೆ ಬಂದ ಇಂದ್ರಜಿತು, ಹನುಮನನ್ನು ನಿಗ್ರಹಿಸಲು ಅಸಾಧ್ಯವೆಂದರಿತು ಅವನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ. ಬ್ರಹ್ಮಾಸ್ತ್ರಕ್ಜೆ ಗೌರವ ಕೊಟ್ಟು ಹನುಮಂತ ತಾನಾಗಿಯೇ ಅದಕ್ಕೆ ತಲೆತಗ್ಗಿಸಿ ಸೆರೆಸಿಕ್ಕಿದ.
ರಾಮಾಯಣದ ದುಷ್ಟ ರಾವಣ ಹೇಳಿದ ಪಾಠಗಳಿವು
ಲಂಕಾಯುದ್ಧದ ಕೊನೆಯ ಹಂತದಲ್ಲಿ ಇಂದ್ರಜಿತು ರಂಗಕ್ಕಿಳಿದ. ರಾಮನನ್ನು ಮೋಸಗೊಳಿಸಬೇಕೆಂದು ಭಾವಿಸಿ, ರಣರಂಗದಲ್ಲೇ ಸೀತೆಯ ಹಾಗೆ ಕಾಣುವ ಒಂದು ಮಾನವಾಕೃತಿಯನ್ನು ಸೃಷ್ಟಿ ಮಾಡಿ, ಹನುಮಂತ ಬೇಡ ಬೇಡ ಎನ್ನುತ್ತಿದ್ದರೂ ಆಕೆಯ ತಲೆಯನ್ನು ಕಡಿದುಹಾಕಿದ. ರಾಮನ ಮುಂದೆ ಇದನ್ನ ತಂದಿಡಲಾಗಿ, ಆತ ಶೋಕತಪ್ತನಾದ. ಕಡೆಗೆ ವಿಭೀಷಣ ಇದು ಇಂದ್ರಜಿತುವಿನ ಮಾಯೆ ಎಂದರಿತು, ಮಾಯಾಸೀತೆಯನ್ನು ಭಸ್ಮಗೊಳಿಸಿ, ಗೊಂದಲ ಪರಿಹರಿಸಿದ.
ನಂತರ ಇಂದ್ರಜಿತು ಮಾಯಾಯುದ್ಧದ ಮೂಲಕ ಕಪಿಸೇನೆಯನ್ನು ಮೂರ್ಛಿತಗೊಳಿಸಿದ. ಲಕ್ಷ್ಮಣನೂ ಧರೆಗೆ ಒರಗುವಂತೆ ಮಾಡಿದ. ಆಗ ಕಪಿವೈದ್ಯ ಸುಷೇಣನ ಸಲಹೆಯಂತೆ ಹನುಮಂತ ಹಿಮಾಲಯದ ದ್ರೋಣಗಿರಿಗೆ ಹಾರಿ ಅಲ್ಲಿಂದ ಸಂಜೀವಿನಿ ಮೂಲಿಕೆ ತಂದು ಲಕ್ಷ್ಮಣನನ್ನು ಬದುಕಿಸಿದ.
ಅದೇ ರಾತ್ರಿ ಇಂದ್ರಜಿತು, ರಾಮ ಲಕ್ಷ್ಮಣರನ್ನು ಕೊಲ್ಲಲು ಘೋರ ವಾಮಾಚಾರ ಕ್ರಿಯೆಗೆ ಇಳಿದ. ಲಂಕೆಯ ಭೂಗತ ಪ್ರದೇಶವಾದ ನಿಕುಂಭಿಳೆಗೆ ಇಳಿದು, ಅಲ್ಲಿ ಕ್ಷುದ್ರ ಯಾಗಕ್ಕೆ ತೊಡಗಿದ. ಅಲ್ಲಿ ಹುಟ್ಟಿಕೊಂಡ ಅಸುರೀ ಶಕ್ತಿಗಳು ಕಪಿಸೇನೆಯನ್ನು ಮುತ್ತಿ ಉಸಿರುಗಟ್ಟಿಸಿ ಕೊಲ್ಲತೊಡಗಿದವು. ಥೇಟ್ ಕೊರೋನಾ ವೈರಸ್ ಥರ! ಇದು ಇಂದ್ರಜಿತುವಿನ ಕೃತ್ಯ ಎಂದರಿತ ವಿಭೀಷಣ, ರಾಮನಿಗೆ ಮಾಹಿತಿ ನೀಡಿದ.
ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ
ಇಂದ್ರಜಿತುವಿಗೆ ಬ್ರಹ್ಮನಿಂದ ದತ್ತವಾದ ಒಂದು ವರವಿತ್ತು. ಹನ್ನೆರಡು ವರ್ಷ ಬ್ರಹ್ಮಚರ್ಯ ಆಚರಿಸಿದ, ನಿದ್ದೆ ಮಾಡದ, ಆಹಾರ ಸೇವಿಸದ ವ್ಯಕ್ತಿಯಿಂದ ಮಾತ್ರ ತನಗೆ ಮರಣ ಬರಲಿ ಎಂಬುದಾಗಿ. ಇಂಥವರು ನಿನ್ನ ಸೇನೆಯಲ್ಲಿದ್ದರೆ ಮುಂದೆ ಬರಲಿ ಎಂಬುದಾಗಿ ವಿಭೀಷಣ ರಾಮನಿಗೆ ಹೇಳಿದಾಗ ಅಂಥವರ್ಯಾರೂ ಇಲ್ಲಿ ಇಲ್ಲವಲ್ಲಾ ಎಂದು ರಾಮ ಚಿಂತಿತನಾದ. ಆಗ ಲಕ್ಷ್ಮಣ ಮುಂದೆ ಬಂದ. ರಾಮನಿಗೆ ಅಚ್ಚರಿಯಾಯಿತು. ಲಕ್ಷ್ಮಣ ಹನ್ನೆರಡು ವರ್ಷಗಳಿಂದ ಅರಣ್ಯದಲ್ಲಿ ಏಕಾಂಗಿಯಾಗಿ ಇರುವುದರಿಂಧ ಆತ ಬ್ರಹ್ಮಚಾರಿ ಆಗಿದ್ದುದರಲ್ಲಿ ವಿಶೇಷವೇನೂ ಇರಲಿಲ್ಲ. ಆತನ ಪತ್ನಿ ಊರ್ಮಿಳೆ ಅಯೋಧ್ಯೆಯಲ್ಲಿದ್ದಳು. ಆದರೆ ಹನ್ನೆರಡು ವರ್ಷ ಊಟ, ನಿದ್ರೆ? ಲಕ್ಷ್ಮಣ ಮುಗುಳುನಗುತ್ತಾ ಉತ್ತರಿಸಿದ: ಅಣ್ಣಾ, ನೀವಿಬ್ಬರೂ ಕುಟೀರದಲ್ಲಿ ರಾತ್ರಿ ಮಲಗಿದ್ದಾಗ ನಾನು ರಾಕ್ಷಸರಿಂದ ಬಾಧೆ ಬರದಿರಲಿ ಅಂತ ಎಚ್ಚರದಿಂದ ಕಾಯುತ್ತಿದ್ದೆ. ಹಾಗಾಗಿ ಹನ್ನೆರಡು ವರ್ಷ ನಿದ್ರೆ ಮಾಡಲಿಲ್ಲ. ಇನ್ನು, ನಿನಗೂ ಅತ್ತಿಗೆಗೂ ಕಾಡಿನಿಂದ ಹಣ್ಣುಗಳನ್ನು ತಂದು ಕೊಡುತ್ತಿದ್ದೆ. ನೀನಾಗಿ ಒಂದು ದಿನವೂ ನನಗೆ ಹಣ್ಣನ್ನು ಕೊಡಲಿಲ್ಲ. ನೀನು ಕೊಡದೆ ಇದ್ದ ಕಾರಣ ನಾನು ಸೇವಿಸಲೂ ಇಲ್ಲ. ಹಾಗಾಗಿ ಆಹಾರವೂ ಸೇವಿಸಲಿಲ್ಲ. ಈ ಮಾತನ್ನು ಕೇಳಿ ರಾಮನಿಗೆ ಕಣ್ಣೀರು ಬಂತು.
ರಾಮನ ಅಕ್ಕ ಶಾಂತಾ ಕಿಗ್ಗ ಋಷ್ಯಶೃಂಗರ ಮಡದಿ ಎಂಬುವುದು ಗೊತ್ತಾ?
ಹೀಗಾಗಿ ಇಂದ್ರಜಿತುವನ್ನು ನಾನೇ ನಿಗ್ರಹಿಸಿ ಬರುತ್ತೇನೆಂದು ಅಣ್ಣನಿಗೆ ಅಭಯ ನೀಡಿ ಲಕ್ಷ್ಮಣ ವಿಭೀಷಣನೊಂದಿಗೆ ಹೊರಟ. ನಿಕುಂಭಿಳೆಗೆ ಇಳಿದು, ಅಲ್ಲಿ ಯಾಗದಲ್ಲಿ ತೊಡಗಿದ್ದ ಇಂದ್ರಜಿತುವನ್ನು ಎಬ್ಬಿಸಿದ. ಇಬ್ಬರಿಗೂ ಘೋರ ಯುದ್ಧವಾಯಿತು. ಇಂದ್ರಜಿತುವನ್ನು ಲಕ್ಷ್ಮಣ ಸಂಹರಿಸಿದ.