ನೀವು ರಾಮಾಯಣದ ಕತೆ ಹತ್ತು ಹಲವರ ಬಾಯಲ್ಲಿ ಕೇಳಿರಬಹುದು, ಚಲನಚಿತ್ರ, ಧಾರಾವಾಹಿಗಳಲ್ಲಿ ನೋಡಿರಬಹುದು. ಹಾಗಿದ್ದೂ ಪ್ರತಿ ಬಾರಿ ಅದರ ಕುರಿತ ಹೊಸ ಹೊಸ ಕತೆಗಳು ಕೇಳಿಬಂದು ಅಯ್ಯೋ ನಾನು ಸಂಪೂರ್ಣ ರಾಮಾಯಣ ತಿಳಿದುಕೊಂಡೇ ಇಲ್ವಲ್ಲ ಎನಿಸುವಂತೆ ಮಾಡುತ್ತವೆ. ರಾಮನ ಅಕ್ಕನ ಕತೆಯೂ ಹಾಗೆ, ಬಹುತೇಕರಿಗೆ ತಿಳಿದಿಲ್ಲದ ವಿಷಯ ಇದು. ಹೌದು, ಶ್ರೀರಾಮನ ತಂದೆತಾಯಿ ದಶರಥ ಮತ್ತು ಕೌಸಲ್ಯಾದೇವಿಯ ಮೊದಲ ಮಗು ಹೆಣ್ಣು- ಅವಳೇ ಶಾಂತ. 

ಕೆಲವೊಮ್ಮೆ ಕೆಲವೊಂದು ಕತೆ ಹೇಳುವಾಗ ಕೆಲ ಪಾತ್ರಗಳನ್ನು ಹೈಲೈಟ್ ಮಾಡುವ ಸಲುವಾಗಿ ಮತ್ತೆ ಕೆಲ ಪಾತ್ರಗಳು ಹಿನ್ನೆಲೆಯಲ್ಲಿ ಉಳಿಯಬೇಕಾಗುತ್ತದೆ. ಅಥವಾ ಅವು ಬದಿಗೆ ಸರಿದು ಬಿಡುತ್ತವೆ. ಅಂಥದೊಂದು ಪಾತ್ರ ಶಾಂತಳದ್ದು. ಆಕೆಯ ಹುಟ್ಟು, ನಂತರದ ಕತೆಗಳೆಲ್ಲ ಎಲ್ಲಿಯೂ ಹೈಲೈಟ್ ಆಗಿಲ್ಲವಾದರೂ ಇತ್ತೀಚೆಗೆ ಜನಪ್ರಿಯ ಟಿವಿ ಶೋವೊಂದು ಈ ಪಾತ್ರದ ಗುಟ್ಟು ಬಿಡಿಸಲು ಪ್ರಯತ್ನಿಸಿದೆ. ರಾಮಾ ಹಾಗೂ ಆತನ ಸಹೋದರರಿಗೆ ಅವರ ಅಕ್ಕ ಶಾಂತಾಳ ಬಗ್ಗೆ ಹೇಳದೆ ಮುಚ್ಚಿಟ್ಟಿದ್ದರ ಹಿಂದೊಂದು ಕಾರಣವಿದೆ. ಅಷ್ಟೇ ಅಲ್ಲ, ರಾಣಿ ಕೌಸಲ್ಯಾ ತನ್ನ ಪತಿಯಿಂದ ಮಾನಸಿಕವಾಗಿ ನಿರ್ಲಿಪ್ತತೆ ಹೊಂದಿದ್ದಕ್ಕೂ ಒಂದು ಕಾರಣವಿದೆ. ಈ ಎಲ್ಲಕ್ಕೂ ಉತ್ತರ ಇಲ್ಲಿದೆ. 

ರಾಮಾಯಣದ ದುಷ್ಟ ರಾವಣ ಹೇಳಿದ ಜೀವನ ಪಾಠಗಳು

ದಶರಥ- ಅಸಹಾಯಕ ತಂದೆ
ಇವೆಲ್ಲವೂ ಶುರುವಾದದ್ದು ದಶರಥರ ಜನನದಿಂದ. ತನ್ನ ತಂದೆತಾಯಿಯರನ್ನು ದಶರಥ ಕಳೆದುಕೊಳ್ಳುವಾಗ ಇನ್ನೂ 8 ತಿಂಗಳ ಮಗು. ಹಾಗಾಗಿ, ದಶರಥ ಮಹರ್ಷಿ ಮರುಧನ್ವ ಅವರೊಂದಿಗೆ ಬೆಳೆಯುತ್ತಾರೆ. ಅವರ ಬಳಿಯೇ ಬಿಲ್ವಿದ್ಯೆಯಿಂದ ಹಿಡಿದು ಸರ್ವ ವಿದ್ಯಾ ಪಾರಂಗತರಾಗುತ್ತಾರೆ. ನಂತರದಲ್ಲಿ ದಕ್ಷಿಣ ಕೋಸಲ ದೇಶದ ಬುದ್ದಿವಂತ ಹಾಗೂ ಬಲವಂತ ರಾಜನಾಗಿ ದಶರಥ ಬೆಳೆಯುತ್ತಾರೆ. 

ಕೌಸಲ್ಯಾ- ಶಾಂತಿ, ಪ್ರೀತಿ, ಬಲದ ರೂಪ
ಉತ್ತರ ಕೋಸಲ ದೇಶದ ರಾಜ ಸುಕೌಶಲನಿಗೆ ಬಹಳ ಸುಂದರವಾದ ಮಗಳಿರುತ್ತಾಳೆ. ಆಕೆಯೇ ಕೌಸಲ್ಯ. ಅವಳನ್ನು ನೋಡಿ ಇಷ್ಟಪಟ್ಟ ದಶರಥ ಆಕೆಯ ತಂದೆ ಬಳಿ ವಿವಾಹ ಮಾಡಿಕೊಡುವಂತೆ ಕೋರುತ್ತಾನೆ. ಹೆಸರಾಂತ ರಾಜನಾಗಿದ್ದ ದಶರಥನಿಗೆ ಖುಷಿಯಿಂದಲೇ ವಿವಾಹ ಮಾಡಿಕೊಡುತ್ತಾನೆ ಉತ್ತರ ಕೋಸಲ ದೇಶದ ರಾಜ. 

ದಿಗ್ಬಂಧನ ದಿನಗಳಲ್ಲಿ ಮನಸ್ಸಿಗೊಂದಷ್ಟುಮದ್ದು; ಲಾಕ್‌ಡೌನ್‌ ಹೇಗೆ ಕಳೆಯ ...

ಶಾಂತಾಳ ಜನನ
ದಶರಥ ಹಾಗೂ ಕೌಸಲ್ಯಗೆ ಹುಟ್ಟುವ ಮೊದಲ ಮಗುವೇ ಶಾಂತಾ. ಆಕೆ ಬಹಳ ಸುಂದರ ರಾಜಕುಮಾರಿಯಾಗಿರುವ ಜೊತೆಗೆ ಕ್ಷತ್ರಿಯ ಧರ್ಮಕ್ಕೆ ಸರಿಯಾಗಿ ಬಹಳ ಧೈರ್ಯದಿಂದ ಹೋರಾಡಬಲ್ಲ ಛಾತಿಯನ್ನೆಲ್ಲ ಮೈಗೂಡಿಸಿಕೊಂಡು ಬೆಳೆಯುತ್ತಿರುತ್ತಾಳೆ. ಅವಳನ್ನು ಅಂಗದೇಶದ ರಾಜ ಲೊಂಪದ ಹಾಗೂ ಪತ್ನಿ ವರ್ಷಿಣಿಗೆ ಮಕ್ಕಳಿಲ್ಲವೆಂಬ ಕಾರಣಕ್ಕೆ ದತ್ತು ನೀಡುತ್ತಾರೆ. ರಾಣಿ ವರ್ಷಿಣಿ ಕೌಸಲ್ಯಾಳ ಸಹೋದರಿಯೇ ಆಗಿರುವುದು ಇದಕ್ಕೆ ಕಾರಣ. ಆದರೆ, ರಾಜಾ ದಶರಥನಿಗೆ ಆ ನಂತರ ಮಕ್ಕಳಾಗುವುದಿಲ್ಲ. ತನ್ನ ನಂತರ ಉತ್ತರಾಧಿಕಾರಿಯಾಗಿ ರಾಜ್ಯ ನಡೆಸಲು ಒಬ್ಬ ಮಗ ಬೇಕು ಎಂಬ ಆಸೆ ಇರುತ್ತದೆ. ಇದೇ ಕಾರಣಕ್ಕಾಗಿ ಆತ ನಂತರದಲ್ಲಿ ಸುಮಿತ್ರಾ, ಕೈಕೇಯಿಯರನ್ನು ಮದುವೆಯಾಗುತ್ತಾನೆ. ವರ್ಷಗಳು ಉರುಳಿದರೂ ಮಗನನ್ನು ಕಾಣುವ ಆತನ ಬಯಕೆ ಈಡೇರುವುದಿಲ್ಲ. 

ತನ್ನ ಈ ಆಸೆ ಈಡೇರದ್ದರಿಂದ ನೊಂದ ದಶರಥ ಈ ಬಗ್ಗೆ ಉತ್ತರ ನೀಡುವಂತೆ ಮಹರ್ಷಿ ವಶಿಷ್ಠರ ಮೊರೆ ಹೋಗುತ್ತಾನೆ. ವಶಿಷ್ಠರು ಈ ಸಂದರ್ಭದಲ್ಲಿ ದಶರಥನಿಗೆ ಮಹರ್ಷಿ ವಿಭಾಂಡಕರ ಕತೆ ಹೇಳುತ್ತಾರೆ. ಹೆಚ್ಚು ಶಕ್ತಿಗಳನ್ನು ಹೊಂದಲು ವಿಭಾಂಡಕರು ನಡೆಸುವ ಕಠಿಣ ತಪಸ್ಸಿನಿಂದ ಬೆದರಿದ ಇಂದ್ರ ಅವರ ತಪೋಭಂಗ ಮಾಡಲು ಊರ್ವಶಿಯನ್ನು ಕಳುಹಿಸಿರುತ್ತಾನೆ. ವಿಭಾಂಡಕರ ತಪೋಭಂಗವಾಗಿ ಅವರು ಊರ್ವಶಿಗೆ ಮನಸೋತದ್ದರಿಂದ ಋಷ್ಯಶೃಂಗರ ಜನನವಾಗುತ್ತದೆ. ಆದರೆ, ತನ್ನ ಕೆಲಸ ಮುಗಿಯಿತೆಂದು ಊರ್ವಶಿ ಋಷಿ ಹಾಗೂ ಮಗನನ್ನು ಬಿಟ್ಟು ಹೋಗುತ್ತಾಳೆ. ಇದರಿಂದ ಮಹಿಳೆಯರ ಮೇಲೆ ದ್ವೇಷ ಬೆಳೆಸಿಕೊಂಡ ವಿಭಾಂಡಕರು ತಮ್ಮ ಈ ಮಗನನ್ನು ಮಹಿಳೆಯೇ ಇಲ್ಲದ ಸ್ಥಳದಲ್ಲಿ ಏಕಾಂಗಿಯಾಗಿ ಬೆಳೆಸುವ ಪ್ರತಿಜ್ಞೆ ಮಾಡುತ್ತಾರೆ. ಋಷ್ಯಶೃಂಗರು ಅಪ್ಪನ ಹೊರತಾಗಿ ಬೇರೊಬ್ಬ ಮನುಷ್ಯನ ಸಂಪರ್ಕವೇ ಇಲ್ಲದೆ ಬೆಳೆಯುತ್ತಾರೆ. ಆದರೆ ಅವರು ಮಳೆ ತರಿಸುವುದರಿಂದ ಹಿಡಿದು ಬಹಳಷ್ಟು ಅಪರಿಮಿತ ಶಕ್ತಿಗಳನ್ನು ಮೈಗೂಡಿಸಿಕೊಂಡಿರುತ್ತಾರೆ. 

ಪುತ್ರಕಾಮೇಷ್ಠಿ ಯಾಗ
ಇಂಥ ಋಶ್ಯಶೃಂಗರ ಬದುಕಿನಲ್ಲಿ ಮಹಿಳೆಯನ್ನು ತಂದು ಅವರನ್ನು ಕೌಟುಂಬಿಕ ಜಗತ್ತಿಗೆ ಎಳೆದು ಅವರಿಂದ ಪುತ್ರಕಾಮೇಷ್ಠಿ ಯಾಗ ಮಾಡಿಸಿದರೆ ದಶರಥನಿಗೆ ಪುತ್ರ ಜನನವಾಗುತ್ತದೆ ಎಂದು ಮಹರ್ಷಿ ವಶಿಷ್ಠರು ಹೇಳುತ್ತಾರೆ. ಹಾಗಾಗಿ, ದಶರಥ ತನ್ನ ಮಗಳಿಗೆ ಋಷ್ಯಶೃಂಗರಲ್ಲಿ ಹೋಗಿ ಅವರನ್ನು ಸಾಂಸಾರಿಕ ಜೀವನಕ್ಕೆಳೆಯುವಂತೆ ಬೇಡಿಕೊಳ್ಳುತ್ತಾನೆ. ಋಷ್ಯಶೃಂಗರನ್ನು ವಿವಾಹವಾಗುವುದೆಂದರೆ ರಾಜವೈಭೋಗವನ್ನೆಲ್ಲ ಬಿಟ್ಟು ಕಾಡಿಗೆ ಹೋಗಬೇಕು. ಹಾಗಾಗಿ, ದಶರಥನ ಬೇಡಿಕೆಗೆ ಒಪ್ಪದಂತೆ ಕೌಸಲ್ಯಾ ಮಗಳಲ್ಲಿ ಗೋಗರೆಯುತ್ತಾಳೆ. ಅಷ್ಟಾದರೂ ಶಾಂತ ಅಪ್ಪನ ಮಾತಿನಂತೆ ಕಾಡಿಗೆ ಹೋಗುತ್ತಾಳೆ. ಎಂದೂ ಮಹಿಳೆಯನ್ನೇ ನೋಡಿರದ ಋಷ್ಯಶೃಂಗರು ಶಾಂತಾಳ ರೂಪ ಹಾಗೂ ಬುದ್ಧಿವಂತಿಗೆ ಮನಸೋತು ವಿವಾಹವಾಗುತ್ತಾರೆ. ನಂತರ ಋಷ್ಯಶೃಂಗರು ನಡೆಸಿದ ಯಾಗದಿಂದಾಗಿ ಕೌಸಲ್ಯೆಗೆ ರಾಮಾ, ಸುಮಿತ್ರಾಗೆ ಲಕ್ಷ್ಮಣ ಹಾಗೂ ಶತೃಘ್ನ, ಕೈಕೇಯಿಗೆ ಭರತ ಹುಟ್ಟುತ್ತಾರೆ. ಒಟ್ಟಿನಲ್ಲಿ ಶಾಂತಾಳ ತ್ಯಾಗದಿಂದ ದಶರಥನಿಗೆ ಗಂಡುಮಕ್ಕಳ ಜನನವಾಗುತ್ತದೆ.