ವೈಶಾಖ ಮಾಸ ಆರಂಭವಾಗಿದೆ. ಹಿಂದೂ ಪಂಚಾಂಗದ ಎರಡನೆ ತಿಂಗಳು ಇದಾಗಿದೆ. ವಿಷ್ಣುವಿಗೆ ಪ್ರಿಯವಾದ ವೈಶಾಖಮಾಸವನ್ನು ಪವಿತ್ರವಾದ ಮಾಸ ಎಂದು ಹೇಳಲಾಗುತ್ತದೆ. ವೈಶಾಖ ಮಾಸದಲ್ಲಿ ವಿಷ್ಣುವಿನ ಪೂಜೆ, ಅರ್ಚನೆ, ಆರಾಧನೆ ಮಾಡುವುದರಿಂದ ಭಗವಂತನ ಕೃಪೆಗೆ ಪಾತ್ರರಾಗಬಹುದಾಗಿದೆ.

ವೈಶಾಖದ ವೈಶಿಷ್ಟ್ಯವೇನು?
ಪವಿತ್ರವಾದ ಈ ಮಾಸದಲ್ಲಿ ವಿಷ್ಣು, ಬ್ರಹ್ಮ ಮತ್ತು ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ತ್ರಿಮೂರ್ತಿಗಳನ್ನು ಒಲಿಸಿಕೊಂಡು ಮನದಿಷ್ಟವನ್ನು ಸಫಲಗೊಳಿಸಿಕೊಳ್ಳುವ ತಿಂಗಳು ಇದಾಗಿದೆ. ತ್ರಿಮೂರ್ತಿಗಳಿಗೆ ಕೇವಲ ಜಲವನ್ನು ಅರ್ಪಿಸಿ ಪೂಜಿಸುವುದರಿಂದ ದೇವರು ಪ್ರಸನ್ನಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ವೈಶಾಖದಲ್ಲಿ ಏನು ಮಾಡಬೇಕು?
ತೀರ್ಥಕ್ಷೇತ್ರಗಳ ಭೇಟಿಗೆ, ದೇವಾನು ದೇವತೆಗಳ ಮಂದಿರ ದರ್ಶನಕ್ಕೆ ಇದು ಸಕಾಲ ಎಂದು ಹೇಳಲಾಗುತ್ತದೆ. ವೈಶಾಖ ಮಾಸದಲ್ಲಿ ನೀರನ್ನು ದಾನ ಮಾಡುವುದರಿಂದ ಮನಸ್ಸಿನ ಇಚ್ಛೆ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳಿನಲ್ಲಿ ಮನೆಯ ಮುಂದೆ ನೀರನ್ನು ಇಡಲಾಗುತ್ತದೆ. ದಾರಿಯಲ್ಲಿ ಓಡಾಡುವವರ ಬಾಯಾರಿಕೆಯನ್ನು ಕಳೆಯುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು. ನಿರ್ಗತಿಕರಿಗೆ ಅವಶ್ಯಕವಾದ ವಸ್ತುಗಳನ್ನು, ಅನ್ನದಾನವನ್ನು ಮಾಡುವುದರಿಂದ ಮನೋಕಾಮನೆಗಳ ಪೂರ್ಣವಾಗುತ್ತವೆ. ಪೂರ್ವ ಪಾಪಕರ್ಮಗಳನ್ನು ಕಳೆವ ತಿಂಗಳು ಇದಾಗಿದೆ. ಧರ್ಮ, ಯಜ್ಞ ಯಾಗಾದಿಗಳನ್ನು, ತಪಸ್ಸನ್ನಾಚರಿಸಲು ಪುಣ್ಯಕಾಲವಿದು. ವೈಶಾಖ ಮಾಸದ ಎಲ್ಲ ದಿನವನ್ನು ಪವಿತ್ರವೆಂದೇ ಪರಿಗಣಿಸಿದರೂ, ಏಕಾದಶಿ ಎಂದು ವಿಶೇಷ ಮಹತ್ವವಿದೆ. ಈ ದಿನದಂದು ಮಾಡಿದ ವ್ರತ, ಸ್ತೋತ್ರ, ದಾನ, ಧರ್ಮಗಳಿಗೆ ವಿಶೇಷ ಪುಣ್ಯ ಫಲವಿದೆ. ಹೀಗಾಗಿ ಈ ದಿನವನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. 

ಇದನ್ನೂ ಓದಿ: ಹುಟ್ಟಿದಬ್ಬದ ಸಂಭ್ರಮ ಅಂತ ಎಣ್ಣೆ ಪಾರ್ಟಿ ಮಾಡೋ ಮುನ್ನ ಓದಿ

ಕೇಳಿದ್ದೆಲ್ಲ ಸಿಗಲಿದೆ
ತಾಯಿ ಹೇಗೆ ಕೇಳಿದ್ದನ್ನೆಲ್ಲ ಕೊಡುವಳೋ ಹಾಗೆಯೇ ವಿಷ್ಣುವಿನ ಪೂಜೆ, ಆರಾಧನೆ ಮಾಡಿದವರಿಗೆ ಮನೋಕಾಮನೆ ಪೂರ್ಣಗೊಳ್ಳುತ್ತದೆ. ನಂಬಿದವರನ್ನು ವಿಷ್ಣು ಪರಮಾತ್ಮ ಯಾವುದೇ ಕಾರಣಕ್ಕೂ ಕೈಬಿಡುವಿದಿಲ್ಲ ಎಂಬ ನಂಬಿಕೆ ಇದೆ. ಈ ವೈಶಾಖ ಮಾಸದಲ್ಲಿಯೇ ಅಕ್ಷಯ ತೃತೀಯ, ನರಸಿಂಹ ಜಯಂತಿ ಹಬ್ಬಗಳೂ ಇವೆ.

ಪೂಜೆ ಮಾಡುವ ಬಗೆ ಹೇಗೆ?
ವೈಶಾಖ ಮಾಸದಲ್ಲಿ ಮಾಡುವ ಪೂಜೆಗೆ ವಿಶೇಷವಾದ ಮಹತ್ವವಿದೆ. ಈ ತಿಂಗಳ ಸೋಮವಾರದಂದು ಮಾಡುವ ಪೂಜೆ ವಿಶೇಷವಾದದ್ದು.   ಈ ದಿನದಂದು ಸ್ನಾನ ಮಾಡಿ, ಶುದ್ಧರಾಗಿ ಶುಚಿಯಾದ ವಸ್ತ್ರವನ್ನು ಧರಿಸಿ ಶಿವನ ದೇವಸ್ಥಾನಕ್ಕೆ ಹೋಗಿ, ಶಿವಲಿಂಗಕ್ಕೆ ನೀರು ಹಾಕಿ, ಚಂದನದ ತಿಲಕವನ್ನಿಟ್ಟು, ಪುಷ್ಪವನ್ನು ಅರ್ಪಿಸಿ. ನಂತರ ಒಂದು ದೀಪವನ್ನು ಬೆಳಗಿಸಿ ಪೂಜೆ ಮಾಡಿ.

ಇದನ್ನೂ ಓದಿ: ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ವೈಶಾಖ ಮಾಸದ ಗುರುವಾರದಂದು ವಿಷ್ಣವಿನ ಪೂಜೆ ಮಾಡಬೇಕು. ಈ ದಿನದಂದು ವಿಷ್ಣುವಿಗೆ ಪ್ರಿಯವಾದ ಹಳದಿ ವಸ್ತ್ರವನ್ನು ಧರಿಸಿ, ಪುಷ್ಪವನ್ನು ಅರ್ಪಿಸಿ ಆರತಿ ಮಾಡುವುದರಿಂದ ಸಕಲ ಸುಖ ಸಂಪತ್ತು ಲಭಿಸುತ್ತದೆ. ಇದೇ ವೇಳೆ ಬ್ರಹ್ಮ ದೇವರನ್ನು ಸಹ ಪೂಜಿಸಬಹುದು. ಬ್ರಹ್ಮ ದೇವರನ್ನು ಪೂಜಿಸುವಾಗ ಕಮಲದ ಹೂವನ್ನು ಅರ್ಪಿಸುವುದು ಒಳ್ಳೆಯದು. ಆಗ ಬ್ರಹ್ಮ ಪ್ರಸನ್ನಗೊಳ್ಳುತ್ತಾನೆಂಬ ನಂಬಿಕೆ ಇದೆ.