Asianet Suvarna News Asianet Suvarna News

ಚೆಲುವನಾರಾಯಣನಿಗೆ ಒಲಿದು ಮೇಲುಕೋಟೆಗೆ ಬಂದು ಪ್ರಾಣ ಬಿಟ್ಟ ಡೆಲ್ಲಿ ಸುಲ್ತಾನನ ಪುತ್ರಿ ಕತೆ ಗೊತ್ತಾ?

ದೇಶದ  ಬಹುತೇಕ ಹಿಂದೂ ದೇಗುಲಗಳನ್ನು ಅರಬ್ ಲೂಟಿಕೋರರು ನಾಶ ಮಾಡಿ ಅದರಲ್ಲಿದ್ದ ಸಿರಿವಂತಿಕೆಯನ್ನೆಲ್ಲಾ ಹೊತ್ತೊಯ್ದಿದ್ದನ್ನು  ನೀವು ಇತಿಹಾಸದಲ್ಲಿ ಓದಿರಬಹುದು. ಆದರೆ ದೆಹಲಿ ಸುಲ್ತಾನನ ಮಗಳು ಮೇಲುಕೋಟೆ ಚೆಲುವನಾರಾಯಣನ ಚಂದಕ್ಕೆ ಮರುಳಾದ ಕತೆ ನಿಮಗೆ ಗೊತ್ತಾ. ಆ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ನೋಡಿ.

Hindu Temples Do you know the story of Delhi Sultans daughter who fell in love with Melukote Cheluvanarayana and died in Melukote Mandya akb
Author
First Published Nov 30, 2023, 11:47 AM IST

ಅರಬ್ಬರ ದಾಳಿಯ ವೇಳೆ ನಮ್ಮ ಸಾಕಷ್ಟು ದೇಗುಲಗಳು ಸರ್ವನಾಶವಾದ ಕತೆ ನಿಮಗೆಲ್ಲರಿಗೂ ಗೊತ್ತೆ ಇದೇ ಅಯೋಧ್ಯೆ ರಾಮ ಮಂದಿರ, ಮಥುರಾದ ಶ್ರೀಕೃಷ್ಣ ಜನ್ಮಸ್ಥಾನವೂ ಸೇರಿದಂತೆ ಬಹುತೇಕ ಹಿಂದೂ ದೇಗುಲಗಳನ್ನು ಅರಬ್ ಲೂಟಿಕೋರರು ನಾಶ ಮಾಡಿ ಅದರಲ್ಲಿದ್ದ ಸಿರಿವಂತಿಕೆಯನ್ನೆಲ್ಲಾ ಹೊತ್ತೊಯ್ದು ಮಸೀದಿಯಾಗಿ ಪರಿವರ್ತನೆ ಮಾಡಿದ್ದನ್ನು ನೀವು ಇತಿಹಾಸದಲ್ಲಿ ಓದಿರಬಹುದು. ಆದರೆ ದೆಹಲಿ ಸುಲ್ತಾನನ ಮಗಳು ಮೇಲುಕೋಟೆ ಚೆಲುವನಾರಾಯಣನ ಚಂದಕ್ಕೆ ಮರುಳಾದ ಕತೆ ನಿಮಗೆ ಗೊತ್ತಾ. ಆ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ನೋಡಿ.

ಮೇಲುಕೋಟೆಯ ಚೆಲುವನಾರಾಯಣನ ಚೆಲುವಿ ಮೆಚ್ಚದವರು ಯಾರಿದ್ದಾರೆ ಹೇಳಿ, ಅದೇ ರೀತಿ ಮೆಲುಕೋಟೆಯ ಚೆಲುವ ನಾರಾಯಣನ ಭಕ್ತಿಗೆ ಶರಣಾಗಿ ಬಂದು ಮೇಲುಕೋಟೆಯಲ್ಲಿ ಪ್ರಾಣ ಬಿಟ್ಟ ದೆಹಲಿ ಸುಲ್ತಾನನ ಮಗಳ ಕತೆ ಇದು. ದೇಶದ ವಿವಿಧ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಂತೆ  ಮಂಡ್ಯದ ಮೇಲುಕೋಟೆಯ ದೇಗುಲವೂ ದೆಹಲಿ ಸುಲ್ತಾನನ ದಾಳಿಗೊಳಗಾಗಿತ್ತು.ದಾಳಿಯ ನಂತರ ಸಿಕ್ಕೆಲ್ಲಾ ವಸ್ತುಗಳನ್ನು ದೋಚುವಂತೆ ದೇಗುಲದಲ್ಲಿದ್ದ ಚೆಲುವನಾರಾಯಣನ ಮೂರ್ತಿಯನ್ನು ಬಿಡದೇ ಇವರು ತಮ್ಮೊಂದಿಗೆ ದೆಹಲಿಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ದೊಡ್ಡದಾದ ಒಂದು ಕೋಣೆಯಲ್ಲಿ ಹೀಗೆ ಲೂಟಿ ಮಾಡಿದ ಎಲ್ಲಾ ಮೂರ್ತಿಗಳನ್ನು ರಾಶಿ ಹಾಕಲಾಗಿತ್ತಂತೆ. 

ಪಾಕಿಸ್ತಾನ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ, ಕುಟುಂಬ ಸಮೇತ ಪಾಲ್ಗೊಂಡ ಕ್ರಿಕೆಟಿಗ!

ಸುಲ್ತಾನನ ಪುತ್ರಿ ಬೀಬಿ ನಾಚಿಯರ್‌ ಪುಟ್ಟ ಹುಡುಗಿಯಾಗಿದ್ದು, ಈ ವೇಳೆ ಆಟವಾಡಲು ಗೊಂಬೆಯಂತೆ ಈ ಮೂರ್ತಿನ್ನು ಬಳಸುತ್ತಿದ್ದಳು. ಹೀಗೆ ಆಟವಾಡಲು ಸಿಗುವ ಈ ಚೆಲುವನಾರಾಯಣನ ಮೂರ್ತಿಯನ್ನು ಬಹುವಾಗಿ ಇಷ್ಟಪಡುವ ಬೀಬಿ ನಾಚಿಯಾರ್, ಈ ಮೂರ್ತಿಯನ್ನು ಜೀವ ಇರುವ ವಸ್ತುವಂತೆ ಭಾವಿಸುತ್ತಾ ತಾನು ಆಹಾರ ತಿನ್ನುವ ಮೊದಲು ಆ ಮೂರ್ತಿಗೆ ಆಹಾರ ನೀಡುತ್ತಿದ್ದಳು, ಪ್ರತಿದಿನವೂ ಈ ಮೂರ್ತಿಗೆ ಅಲಂಕಾರ ಮಾಡುತ್ತಿದ್ದಳು, ಅದರೊಂದಿಗೆ ಆಟವಾಡುತ್ತಿದ್ದಳು, ಈ ಮೂರ್ತಿಯ ಕೈಯಲ್ಲಿ ಹಿಡಿದೇ ಆಕೆ ನಿದ್ರೆಗೆ ಜಾರುತ್ತಿದ್ದಳಂತೆ. ಆದರೆ ಈ ಮೂರ್ತಿ ರೂಪದಲ್ಲಿರುವುದು ವಿಷ್ಣು ಎಂಬುದು ತಿಳಿಯದೇ ಆಕೆ ಗೊಂಬೆಯೆಂದು ಭಾವಿಸಿ ತನ್ನ ಪ್ರೀತಿಯ ಗೊಂಬೆಗೆ ಎಲ್ಲಾ ರೀತಿಯ ಸೇವೆಯನ್ನು ಭಕ್ತಿಯಿಂದಲೇ ಮಾಡುತ್ತಿದ್ದಳು.

ಈ ನಡುವೆ ಸಂತ ಶ್ರೀರಾಮಾನಜಾಚಾರ್ಯರಿಗೆ (ಇವರದ್ದು ಶೇಷಾವತಾರ ಲಕ್ಷ್ಮಣವಾತರ ಎಂಬ ನಂಬಿಕೆ ಇದೆ) ಮೇಲುಕೋಟೆಯ್ಲಿರುವ ಚೆಲುವನಾರಾಯಣನನ್ನು ದೆಹಲಿ ಸುಲ್ತಾನ ಕೊಂಡೊಯ್ದಿರುವ ವಿಚಾರ ತಿಳಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿ ದೆಹಲಿ ಸುಲ್ತಾನರ ಬಳಿ ತಮ್ಮ ಈ ದೇವರನ್ನು ಹಿಂದಿರುಗಿಸುವಂತೆ ಕೇಳಿಕೊಳ್ಳುತ್ತಾರೆ. ಈ ವೇಳೆ ದೆಹಲಿ ಸುಲ್ತಾನ ಹಲವು ಪ್ರತಿಮೆಗಳನ್ನು ರಾಶಿ ಹಾಕಿದ್ದ ಕೋಣೆಯನ್ನು ತೋರಿಸಿ ಅಲ್ಲಿ ಹಲವು ಮೂರ್ತಿಗಳಿಗೆ, ನಿಮಗೆ ಸೇರಿದ ಮೂರ್ತಿ ಯಾವುದು ಎಂಬುದು ನನಗೆ ಗೊತ್ತಿಲ್ಲ, ನಿಮ್ಮ ದೇವರನ್ನು ನೀವು ಕರೆದು ನೋಡಿ ಆಗ ಅದು ಬಂದರೆ ಅದೇ ನಿಮ್ಮ ಮೂರ್ತಿ, ನಿಮ್ಮ ಬಳಿ ಬಂದ ಮೂರ್ತಿಯನ್ನು ನೀವು ತೆಗೆದುಕೊಂಡು ಹೋಗಬಹುದು ಎಂದು ವ್ಯಂಗ್ಯವಾಡುತ್ತಾನೆ.  ದೇವರ ಮೂರ್ತಿಯನ್ನು ಹುಡುಕಿ ಬಂದ ರಾಮಾನುಜಾಚಾರ್ಯರಿಗೆ  ದೆಹಲಿ ಸುಲ್ತಾನ ಸವಾಲು ಹಾಕುವುದರ ಜೊತೆಗೆ ಈ ರೀತಿ ವ್ಯಂಗ್ಯವಾಡುತ್ತಾನೆ. 

ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ: 183 ಎಕರೆಯಲ್ಲಿರುವ ಸ್ವಾಮಿನಾರಾಯಣ ದೇಗುಲ

ಆದರೆ ದೆಹಲಿ ಸುಲ್ತಾನನ ಮಾತಿಗೆ ತಲೆಕೆಡಿಸಿಕೊಳ್ಳದ ರಾಮಾನುಜಾಚಾರ್ಯರು ನನ್ನ ಮಗನೇ ದಯವಿಟ್ಟು ಬರೋ ಎಂದು ಪ್ರೀತಿಯಿಂದ ಚೆಲುವನಾರಾಯಣನನ್ನು ಕರೆಯುತ್ತಾರಂತೆ. ಈ ವೇಳೆ ಈ ಮೂರ್ತಿ ಸುಲ್ತಾನಳ ಪುತ್ರಿ ಬಳಿ ಇದ್ದು, ರಾಮಾನುಜಾಚಾರ್ಯರು ಕರೆದ ತಕ್ಷಣ ಸುಲ್ತಾನನ ಪುತ್ರಿ ಬಳಿ ಇದ್ದ ಮೂರ್ತಿ ಓಡೋಡಿ ಬಂದು ರಾಮಾನುಜಾಚಾರ್ಯರ ತೊಡೆಯ ಮೇಲೆ ಬಂದು ಮಗುವಿನಂತೆ ಕೂರುತ್ತದೆ. ಈ ವೇಳೆ ಅಲ್ಲಿದ್ದವವರೆಲ್ಲರೂ ಅಚ್ಚರಿಗೊಂಡು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ನಿಂತರೆ ದೆಹಲಿ ಸುಲ್ತಾನನೂ ಅಚ್ಚರಿಯಿಂದ ಆ ಮೂರ್ತಿಯನ್ನು ಮರಳಿ ರಾಮಾನುಜಾಚಾರ್ಯರಿಗೆ ಹಿಂದಿರುಗಿಸುತ್ತಾನೆ. 

ನಂತರ ಮೂರ್ತಿಯೊಂದಿಗೆ ಮೇಲುಕೋಟೆಗೆ ಬಂದ ರಾಮಾನುಜಾಚಾರ್ಯರು, ಮೇಲುಕೋಟೆಯಲ್ಲಿ ಮತ್ತೆ ಈ ಚೆಲುವನಾರಾಯಣನನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇತ್ತ ತನ್ನ ಪ್ರೀತಿಯ ಗೊಂಬೆ ತನ್ನ ಬಳಿ ಇಲ್ಲದೇ ಕಂಗೆಟ್ಟ ಬೀಬಿ ನಚಿಯಾರ್ ಆಹಾರ ಸೇವಿಸುವುದನ್ನು ನಿಲ್ಲಿಸಿ ಅನಾರೋಗ್ಯಕ್ಕೆ ಬೀಳುತ್ತಾಳೆ. ಯಾವುದೇ ಚಿಕಿತ್ಸೆ ನೀಡಿದರು ಆಕೆಯ ರೋಗ ಗುಣವಾಗುವುದಿಲ್ಲ, ನಂತರ ವೈದ್ಯರು ದೆಹಲಿ ರಾಜನಿಗೆ ಆಕೆಗೇನು ಬೇಕೋ ಅದನ್ನು ನೀಡಿ ಎಂದು ಹೇಳುತ್ತಾರೆ. ನಂತರ ದೆಹಲಿ ಸುಲ್ತಾನ ತನ್ನ ಮಗಳೊಂದಿಗೆ ದೆಹಲಿಯಿಂದ ಮೇಲುಕೋಟೆಯ ಈ ದೇಗುಲಕ್ಕೆ ಬರಲು ಹೊರಡುತ್ತಾನೆ. ಆದರೆ ಅವರು ಮೇಲುಕೋಟೆಯ ದೇಗುಲದ ಗಡಿಯನ್ನು ತಲುಪುವಷ್ಟರಲ್ಲಿ ಆಕೆ ಅಲ್ಲೇ ತನ್ನ ಉಸಿರು ಚೆಲ್ಲುತ್ತಾಳೆ. 

ಈ ವೇಳೆ ಚೆಲುವನಾರಾಯಣನ ಮಹಾಭಕ್ತೆಯೊಬ್ಬಳು ಇಲ್ಲಿ ಬಂದು ಪ್ರಾಣ ತೊರೆದಳು ಎಂದು ರಾಮಾನುಜಾಚಾರ್ಯರು ಹೇಳುತ್ತಾರೆ. ಆಕೆ ಚೆಲುವನಾರಾಯಣನ ಮೇಲೆ ಅಪಾರವಾದ ಪ್ರೀತಿ ಹಾಗೂ ಭಕ್ತಿಯನ್ನು ಹೊಂದಿದ್ದು, ಆಕೆ ಸದಾ ಕಾಲವೂ ಚೆಲುವನಾರಾಯಣನೊಂದಿಗೆ ಇರುತ್ತಾಳೆ. ಆಕೆ ಚೆಲುವನಾರಾಯಣ ಮಡದಿ ಎಂದು ರಾಮಾನುಜಾಚಾರ್ಯರು ಹೇಳುತ್ತಾರೆ. ಇದಾದ ನಂತರ ರಾಮಾನುಜಾಚಾರ್ಯರು ಆಕೆಯ ಸಣ್ಣದೊಂದು ಪ್ರತಿಮೆಯನ್ನು ಮಾಡಿ ದೇಗುಲದಲ್ಲಿ ಚೆಲುವನಾರಾಯಣನ ಪಾದದ ಕೆಳಗೆ ತಾವರೆಯ ಮೇಲೆ  ಪ್ರತಿಷ್ಠಾಪನೆ ಮಾಡುತ್ತಾರೆ. ಇಂದಿಗೂ ಇಲ್ಲಿ ಚೆಲುವನಾರಾಯಣನ ಜೊತೆಗೆ ಬೀಬಿ ನಾಚಿಯರ್‌ಗೂ ಪೂಜೆ ಮಾಡಲಾಗುತ್ತದೆ. ದೇಗುಲದ ಉತ್ಸವಗಳ ಮೇಲೆ ಚೆಲುವನಾರಾಯಣನ ಜೊತೆ ಬೀಬಿ ನಾಚಿಯರ್‌ಗೂ ಪೂಜೆ ಮಾಡಲಾಗುತ್ತದೆ.

Follow Us:
Download App:
  • android
  • ios