ದೇಗುಲಗಳಲ್ಲಿ ದೀಪಾವಳಿ ದಿನ ಸರ್ಕಾರಿ ಗೋಪೂಜೆ!
ರಾಜ್ಯದ ಧಾರ್ಮಿಕ ಇಲಾಖೆ ಅಡಿಯಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿ ದೀಪಾವಳಿ ಪ್ರಯುಕ್ತ ಅ.26ರಂದು ಸಂಜೆ 5.30 ಗಂಟೆಯಿಂದ 6.30 ಗಂಟೆವರೆಗಿನ ಗೋಧೂಳಿ ಲಗ್ನದಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು (ಅ.20): ರಾಜ್ಯದ ಧಾರ್ಮಿಕ ಇಲಾಖೆ ಅಡಿಯಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿ ದೀಪಾವಳಿ ಪ್ರಯುಕ್ತ ಅ.26ರಂದು ಸಂಜೆ 5.30 ಗಂಟೆಯಿಂದ 6.30 ಗಂಟೆವರೆಗಿನ ಗೋಧೂಳಿ ಲಗ್ನದಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
‘ಗೋಪೂಜೆ ಎಂಬುದು ಸನಾತನ ಹಿಂದೂ ಸಂಸ್ಕೃತಿಯಾಗಿದ್ದು, ಪಟ್ಟಣ ಹಾಗೂ ಮಹಾನಗರಗಳಲ್ಲಿ ವಾಸಿಸುವವರು ಗೋಪೂಜೆ ಮರೆಯುತ್ತಿದ್ದಾರೆ. ಗೋಮಾತೆಯನ್ನು ದೇವತೆ ಎಂದು ತಿಳಿದು ಪೂಜಿಸುವ ಸಂಪ್ರದಾಯ ಬಿಡಬಾರದು ಎಂಬ ದೃಷ್ಟಿಯಿಂದ ವರ್ಷದಲ್ಲಿ ಒಂದು ದಿನವಾದರೂ ಗೋಪೂಜೆಯನ್ನು ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ದೀಪಾವಳಿ (ಬಲಿಪಾಡ್ಯಮಿ) ದಿನದಿಂದ ಕಡ್ಡಾಯವಾಗಿ ಮಾಡಬೇಕು. ಆ ಮೂಲಕ ಗೋಪೂಜೆಯ ವಿಧಿ-ವಿಧಾನದ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು’ ಎಂದು ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Diwali 2022: ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಅವಶ್ಯ ಬಳಸಿ ಈ ವಸ್ತು
‘ಅ.26ರಂದು ದೇವಾಲಯಗಳಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ ಪೂಜಿಸಬೇಕು. ಈ ಸಂಬಂಧ ಸಾರ್ವಜನಿಕರು, ಭಕ್ತಾದಿಗಳಿಗೆ ದೇವಾಲಯದ ಸೂಚನಾಫಲಕ, ಸ್ಥಳೀಯ ಮಾಧ್ಯಮ, ಜನಪ್ರತಿನಿಧಿಗಳ ಮೂಲಕ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೋವಿನ ಮಹತ್ವ ತಿಳಿಸಲು ಪೂಜೆ: ‘ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪುರಾಣ, ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವದರ ಜತೆಗೆ ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಭಗವದ್ಗೀತೆ, ಭಾಗವತ ಮಹಾಪುರಾಣ ಮತ್ತಿತರ ಪುರಾಣಗಳಲ್ಲಿ ಗೋವುಗಳ ಮಹತ್ವದ ಬಗ್ಗೆ ಉಲ್ಲೇಖವಿದೆ.’
‘ಆದರೆ, ಇತ್ತೀಚೆಗೆ ಪಟ್ಟಣ ಹಾಗೂ ಮಹಾನಗರಗಳಲ್ಲಿ ವಾಸಿಸುವವರು ಗೋಪೂಜೆ ಮರೆಯುತ್ತಿದ್ದಾರೆ. ಹೀಗಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಗೋಪೂಜೆ ಮಾಡಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಮೂರು ದೇವರನ್ನು ಪೂಜಿಸೋರಿಗೆ ಯಾವ ಶನಿ ಕಾಟವೂ ಕಾಡೋದಿಲ್ಲ!
ಏಕೆ ಗೋಪೂಜೆ?
- ಗೋಪೂಜೆ ಎಂಬುದು ಸನಾತನ ಹಿಂದೂ ಸಂಸ್ಕೃತಿಯ ಭಾಗ
- ಈಗೀಗ ಜನರು ಗೋಪೂಜೆ ಮಾಡುವುದನ್ನು ಮರೆಯುತ್ತಿದ್ದಾರೆ
- ವರ್ಷದಲ್ಲಿ ಒಂದು ದಿನವಾದರೂ ಗೋಪೂಜೆ ಮಾಡಬೇಕು
- ಹೀಗಾಗಿ ಮುಜರಾಯಿ ದೇಗುಲಗಳಲ್ಲಿ ಪೂಜೆ: ಸರ್ಕಾರ ಆದೇಶ