ಇದ್ದದ್ದು ಇದ್ದ ಹಾಗೆ ಹೇಳಿ ನಿಬ್ಬೆರಗಾಗಿಸುತ್ತಿದ್ದ ಜ್ಯೋತಿಷಿ ಎಸ್.ಕೆ. ಜೈನ್
S K Jain ಅಂದ್ರೆ ಉದಯ ಟಿವಿ ನೋಡಿಕೊಂಡು ಬೆಳೆದ ಪ್ರತಿಯೊಬ್ಬರಿಗೂ ಗೊತ್ತು. ಅವರ ವಾರ ಭವಿಷ್ಯ ಕಾರ್ಯಕ್ರಮ ಜಗತ್ಪ್ರಸಿದ್ಧ.
ಶ್ರೀಕಂಠ ಶಾಸ್ತ್ರಿಗಳು, ಸುವರ್ಣ ನ್ಯೂಸ್
ಅಂದು ಮನೆಯಲ್ಲಿ ಉಂಗುರ ಕಳೆದಿತ್ತು. ಮನೆಯೆಲ್ಲಾ ಜಾಲಾಡಿದ್ರೂ ಉಂಗುರ ಸಿಗಲಿಲ್ಲ. ಹಾಸಿಗೆ, ದಿಂಬು, ಬಚ್ಚಲಮನೆ, ಬೀರು, ದೇವರ ಮನೆ, ಅಡುಗೆ ಮನೆ ಹೀಗೆ ಸಾಮಾನ್ಯವಾಗಿ ಹುಡುಕುವ ಎಲ್ಲಾ ಸ್ಥಳಗಳನ್ನೂ ಜಾಲಾಡಿದ ಆ ವ್ಯಕ್ತಿ ಉಂಗುರ ಸಿಗದೆ ಕಂಗಾಲಾಗಿದ್ದ. ಆತನ ಪೇಚಾಟ ಕಂಡು ಪರಿಚಿತರೊಬ್ಬರು ಒಂದು ಸಲಹೆ ಕೊಟ್ರು. ನೋಡಪ್ಪಾ ನಾನು ಕಂಡಹಾಗೆ ಒಬ್ಬ ಮಹಾನ್ ಜ್ಯೋತಿಷಿ ಇದಾರೆ. ಅವ್ರ ಹತ್ರ ಕೇಳಿನೋಡು ಬಹುಶಃ ನಿನಗೆ ಉತ್ತರ ಸಿಗಬಹುದು ಅಂದ್ರು. ಹೌದಾ ಸರಿ ನೋಡೋಣ ಅಂತ ಪರೀಕ್ಷಾ ದೃಷ್ಟಿಯಿಂದ ಆತ, ಪರಿಚಿತರು ಹೇಳಿದ ಜ್ಯೋತಿಷಿ ಬಳಿಗೆ ಬಂದ. ತನ್ನ ಸಮಸ್ಯೆ ಹೇಳಿಕೊಂಡ. ಈ ಜ್ಯೋತಿಷ ಪಂಡಿತರು ಲಗ್ನ, ನವಾಂಶ ಇತ್ಯಾದಿ ಎಲ್ಲ ಗಮನಿಸಿಕೊಂಡು ನೋಡಪ್ಪಾ ಇದು ಇಲಿ ತಗೊಂಡೋಗಿದೆ. ನಿಮ್ಮ ಮನೆಯಲ್ಲಿ ಒಂದು ಬಿಲ ಇದೆ, ಅಲ್ಲೇ ಇದೆ ನೋಡು ಅಂದ್ರು. ಪ್ರಶ್ನೆಗೆ ಬಂದಿದ್ದ ವ್ಯಕ್ತಿ ಫಳ್ ಅಂತ ಹಲ್ಕಿರಿದ. ನಗ್ಬೇಡಯ್ಯ ಹೋಗಿ ನೋಡು ಅಂದ್ರು ಈ ಜ್ಯೋತಿಷಿ.
ಎದ್ದವನೇ ಬಿಲ ಅಂತೆ, ನಮ್ಮ ಮನೆ ಏನು ದಿನಸಿ ಅಂಗಡಿ ಕೆಟ್ಟೋಯ್ತಾ ಅಂದ್ಕಂಡ್ ಬರಬರ ಬಂದ, ಬಂದವನಿಗೆ ಅದೇನೋ ಆ ಜ್ಯೋತಿಷಿಯ ಮಾತಲ್ಲಿ ಒಂದು ಕುತೂಹಲ ಹುಟ್ಟಿತು. ನೋಡೋಣ ಅಂತ ಬಿಲ ಹುಡುಕಾಡಿದ. ಮೂಲೆಯಲ್ಲಿ ಬಿಲ ಕಂಡಿತು. ಹತ್ರ ಹೋದ ಉಂಗುರ ಬಿದ್ದಿತ್ತು. ಎಂಥ ಆಶ್ಚರ್ಯ ಅಂದ್ರೆ! ಕ್ಷಣಕಾಲ ತಲೆ ತಿರುಗಿತು ಈತನಿಗೆ. ಓಡಿದ ಆ ಜ್ಯೋತಿಷಿಗಳ ಬಳಿಗೆ. ಹೋದವನೆ ಧಬಾರನೆ ಕಾಲಿಗೆ ಬಿದ್ದ. ಉಂಗುರ ತೋರಿಸಿದ. ಅಯ್ಯಾ ಇದು ನಾನಲ್ಲಪ್ಪ ಭೃಗು ಸಂಹಿತಾ ರಹಸ್ಯ. ಜ್ಯೋತಿಷ ಅಂದ್ರೆ ಸುಳ್ಳಲ್ಲ, ಅನುಷ್ಠಾನ ಇದ್ದವನಿಗೆ, ಶಾಸ್ತ್ರ ಶ್ರದ್ಧೆ ಇದ್ದವನಿಗೆ ಅದು ಗೋಚರಿಸತ್ತೆ ಅಂದರು ಆ ಪಂಡಿತರು. ಹಾಗೆ ಹೇಳಿದವರು ದಿ ಗ್ರೇಟ್ ಇಂಡಿಯನ್ ಆಸ್ಟ್ರೋಲಜರ್ B G ಶಶಿಕಾಂತ ಜೈನ್. ಬಿ ವಿ ರಾಮನ್ ಅವರ ಸಮಕಾಲೀನ ವ್ಯಕ್ತಿ.
ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಖ್ಯಾತ ಜ್ಯೋತಿಷಿ ಎಸ್‌ಕೆ ಜೈನ್ ನಿಧನ!
ಭಾರತದ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿಂದ ಕರ್ನಾಟಕದ ವೀರೇಂದ್ರ ಪಾಟೀಲರವರೆಗೆ ಎಲ್ಲರೂ ಕಾದಿದ್ದು ಸಲಹೆ ಕೇಳ್ತಿದ್ದದ್ದು ಈ ಶಶಿಕಾಂತ್ ಜೈನರ ಬಳಿಯೇ. ಇವರಿಗೆ 5 ಜನ ಮಕ್ಕಳು ಧರ್ಮೇಂದ್ರ ಕುಮಾರ್ ಜೈನ್, ಚಂದ್ರಕುಮಾರ್ ಜೈನ್, ಜಿನೇಂದ್ರ ಕುಮಾರ್ ಜೈನ್, ಸುರೇಂದ್ರಕುಮಾರ್ ಜೈನ್ ಹಾಗೂ ಮಹೇಂದ್ರಕುಮಾರ್ ಜೈನ್.
ಇವರಲ್ಲಿ ಐವರೂ ಜ್ಯೋತಿಷಿಗಳೇ.
ಆದರೆ ಶಶಿಕಾಂತ್ ಜೈನರ ತರುವಾಯ ಪ್ರಸಿದ್ಧಿಗೆ ಬಂದವರು ಸುರೇಂದ್ರಕುಮಾರ್ ಜೈನ್. ಹೀಗಂದ್ರೆ ಹೆಚ್ಚಿನ ಜನಕ್ಕೆ ಗೊತ್ತಾಗಲ್ಲ. ಕನ್ನಡ ಮಾಧ್ಯಮ ಲೋಕ ಇವರನ್ನ ಜನರಿಗೆ ಪರಿಚಯಿಸಿದ್ದು S K Jain ಅಂತ.
S K Jain ಅಂದ್ರೆ ಉದಯ ಟಿವಿ ನೋಡಿಕೊಂಡು ಬೆಳೆದ ಪ್ರತಿಯೊಬ್ಬರಿಗೂ ಗೊತ್ತು. ಅವರ ವಾರ ಭವಿಷ್ಯ ಕಾರ್ಯಕ್ರಮ ಜಗತ್ಪ್ರಸಿದ್ಧ. ನಮ್ಮ ನಾಡಿನ ಅನೇಕ ರಾಜಕಾರಣಿಗಳು ಇವರ ಸಲಹೆ ಪಡೆದಿದ್ದಾರೆ. ದೇವೇಗೌಡರಿಂದ ಮೊದಲುಗೊಂಡು ಎಸ್ ಎಂ ಕೃಷ್ಣ ಆದಿಯಾಗಿ ಅನೇಕ ರಾಜಕಾರಣಿಗಳು ಇವರ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದರು. ತಂದೆಯಂತೆಯೇ ರಾಷ್ಟ್ರಮಟ್ಟದ ಖ್ಯಾತಿ ಕೂಡ ಇತ್ತು. ಎಸ್ ಕೆ ಜೈನ್ ಅವರು ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಎಷ್ಟೋ ಜನಕ್ಕೆ ಜ್ಯೋತಿಷ ಮಾರ್ಗದರ್ಶನವನ್ನೂ ಮಾಡಿದ್ದಾರೆ. ಇವರ ವಿಶೇಷತೆ ಅಂದ್ರೆ ಅಲ್ಲಿಗೆ ಹೋದ ಪೃಚ್ಚಕರಿಗೆ (ಪ್ರಶ್ನೆ ಕೇಳುವವರಿಗೆ) ಒಂದು ಚೀಟಿಯಲ್ಲಿ 3 ಪ್ರಶ್ನೆಗಳನ್ನು ಬರೆಯುವಂತೆ ಹೇಳುತ್ತಿದ್ದರು. ಬರೆದ ಪ್ರಶ್ನೆಗಳನ್ನ ತೋರಿಸಬೇಡಿ, ನೀವೇ ಮಡಚಿಟ್ಟುಕೊಳ್ಳಿ ಅಂತಿದ್ರು. ಅವರು ಯಾವ ಪ್ರಶ್ನೆಗಳನ್ನ ಬರೆದಿದ್ದಾರೆ, ಯಾವ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ ಎಂಬುದನ್ನ ಪ್ರಶ್ನಾಶಾಸ್ತ್ರದ ಮೇಲೆ ಮೊದಲ ಪ್ರಶ್ನೆ ಇದು, ಎರಡನೇ ಪ್ರಶ್ನೆ ಇದು ಅಂತ ಬಂದ ವ್ಯಕ್ತಿ ನಿಬ್ಬೆರಗಾಗುವ ಹಾಗೆ ಹೇಳಿಬಿಡುತ್ತಿದ್ದರು.
ನೀವೇನ್ ಕೆಲ್ಸ ಮಾಡಿದ್ರೂ ಯಾರೂ ಗುರುತಿಸೋಲ್ವಾ? ಹಾಗಿದ್ರೆ ನಿಮ್ಮ ರಾಶಿ ಈ 4ರಲ್ಲಿ ಒಂದಿರ್ಬೇಕು..
ಮೂರ್ನಾಲ್ಕು ಬಾರಿ ನಾನೂ ಇವರ ಮನೆಗೆ ಹೋಗಿದ್ದೆ.ಮೊದಲಬಾರಿ ಹೋದಾಗ ನನಗೂ ಒಮ್ಮೆ 3 ಪ್ರಶ್ನೆ ಬರೆಯಲು ಹೇಳಿದ್ದರು. ಬರೆದಿದ್ದೆ. ಯಾವುದು ಬರೆದಿದ್ದೆನೋ ಅದನ್ನೇ ಯಥಾವತ್ ಹೇಳಿದ್ದರು. ನಮಸ್ಕಾರ ಮಾಡಿ ಫಲ ತಾಂಬೂಲ ಸಮರ್ಪಿಸಿ ಬಂದಿದ್ದೆ. ತುಂಬಾ ಸಜ್ಜನರು. ಮೃದು ಮಾತು. ಅಪಾರ ಪ್ರೀತಿ ತೋರುವ ಸರಳ ವ್ಯಕ್ತಿ.
ಮನೆಗೆ ಹೋದಾಗೆಲ್ಲ ವರಾಹ ಮಿಹಿರರ ಬಗೆಗೆ, ಭೃಗು ಸಂಹಿತೆ, ಬೃಹತ್ಸಂಹಿತಾ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು. ನಮ್ಮ ಪೂಜ್ಯ ಗುರುಗಳಾದ ವಿದ್ವಾನ್ ಮಂಜುನಾಥ ಶರ್ಮಾಜಿಯವರ ಬಗ್ಗೆ ತಿಳಿಸಿದ್ದೆ. ತುಂಬ ಗೌರವಿಸಿದ್ದರು. ತಂದೆಯ ವಿದ್ಯೆಯನ್ನ ಶ್ರದ್ಧೆಯಿಂದ ಕಲಿತವರು SK Jain. ದಶಕಗಳ ಕಾಲ ಮಾಧ್ಯಮ ಲೋಕದಲ್ಲಿ ಜ್ಯೋತಿಷ ಫಲವನ್ನು ಹಂಚಿದ ಇವರು ಉದಯ ಟಿ ವಿ ನಂತರ ಹೆಚ್ಚಾಗಿ ಬೇರೆ ಚಾನೆಲ್ ಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
ಆನಂತರ ನಮ್ಮ ಸುವರ್ಣ ನ್ಯೂಸ್ ನಲ್ಲಿ ಕೆಲವು ಬಾರಿ ವಿಶೇಷ ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮಗಳಲ್ಲಿ ಅವರ ಜತೆಯಾಗಿದ್ದು ನನ್ನ ಪಾಲಿಗೆ ಒಂದು ವಿಶೇಷ ಫಲ. ವಿದ್ವತ್ತಿನ ಜೊತೆ ಸರಳತೆ, ಒಳ್ಳೆಯತನ ಇರುವುದು ವಿರಳ. ಆ ಸಾಲಿಗೆ ಸೇರುವ ಈ ಮಹೋದಯರು ನೆನ್ನೆ ಸಂಜೆ ನಮ್ಮನ್ನು ಅಗಲಿದ್ದಾರೆ. ಜ್ಯೋತಿಷ ಶಾಸ್ತ್ರದ ಓರ್ವ ಸಜ್ಜನ ವಿದ್ವಾಂಸರು ಆಗಸದಲ್ಲಿ ಯಾವ ನಕ್ಷತ್ರವಾಗಿದ್ದಾರೋ ತಿಳಿಯದು ಆದರೆ ಅವರ ಪ್ರೀತಿ, ಅವರ ಮಾರ್ಗದರ್ಶನಗಳು ಮಾತ್ರ ಬದುಕಿಗೆ ದಾರಿದೀಪವಾಗಿರುವುದು ಸತ್ಯ.