ಮುಸ್ಲಿಂ ಧರ್ಮೀಯರ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ!
- ಮುಸ್ಲಿಂ ಧರ್ಮೀಯರ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ
- ಸಂಭ್ರಮದ ಗಣೇಶೋತ್ಸವದಲ್ಲಿ ಮಿಂದೆದ್ದ ಭಕ್ತರು
- ವಿವಿಧ ರೀತಿಯ ಮೂರ್ತಿ ಪ್ರತಿಷ್ಠಾಪನೆ
ಹೂವಿನಹಡಗಲಿ (ಸೆ.2) : ಕಳೆದ 2-3 ವರ್ಷಗಳಿಂದ ಮಹಾಮಾರಿ ಕೋವಿಡ್ ಹಿನ್ನೆಲೆ ಗಣೇಶೋತ್ಸವ ಹಬ್ಬ ಕಳೆಗುಂದಿತ್ತು. ಈ ಬಾರಿ ಗಣೇಶೋತ್ಸವವು ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಬಹುತೇಕ ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, 5 ಅಡಿಯಿಂದ 12 ಅಡಿ ವರೆಗಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಖುರ್ಷಿದಸಾಬ ಎಂಬುವವರು ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಹಿಂದೂ ಧರ್ಮದ ಸಂಪ್ರದಾಯದಂತೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಕಾಫಿನಾಡಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!
ಪ್ರತಿ ವರ್ಷವೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ನಮಗೆ ಎಲ್ಲ ದೇವರು ಒಂದೇ ಆಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಶಾಂತಿ ನೆಮ್ಮದಿ ಕಂಡುಕೊಂಡಿದ್ದೇವೆ ಎನ್ನುತ್ತಾರೆ ಖುರ್ಷಿದಸಾಬ ಮಕರಬ್ಬಿ. ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಗಣೇಶ ಉತ್ಸವದಲ್ಲಿ ಶಾಂತಿಗೆ ಯಾವುದೇ ರೀತಿ ಭಂಗ ಬಾರದಂತೆ ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಪಟ್ಟಣದ ಹತ್ತಾರು ಕಡೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ, ಪಟ್ಟಣದ ತೇರು ಹನುಮಪ್ಪ ದೇವಸ್ಥಾನದ ಪಕ್ಕದಲ್ಲಿ ಹಿಂದೂ ಮಹಾ ಗಣಪನನ್ನು ಪ್ರತಿಷ್ಠಾಪಿಸಿದ್ದಾರೆ. ವಿನಾಯಕ ಮಿತ್ರ ಮಂಡಳಿಯ ಪದಾಧಿಕಾರಿಗಳು ತೋಟದ ರಸ್ತೆಯಲ್ಲಿ ಹಡಗಲಿ ಕಾ ರಾಜ ಎಂಬ ವಿಶಿಷ್ಟರೀತಿಯ 12 ಅಡಿ ಎತ್ತರದ ಮಣ್ಣಿನ ಗಣೇಶನ ಜತೆಗೆ ಚಿತ್ರನಟ ಪುನೀತ್ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ. ಪಟ್ಟಣದ ಕಲ್ಲೇಶ್ವರ ಯೂತ್ ಕ್ಲಬ್ ಸಂಘನವರು ನಾಗರಹಾವು ಮತ್ತು ಗರುಡನ ಮೇಲೆ ಕುಳಿತು ಸವಾರಿ ಮಾಡುವ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಹಿಂದೂ ಯುವ ಶಕ್ತಿ ಕಾಮನ ಕಟ್ಟೆವೃತ್ತದಲ್ಲಿ ಕೊಳಲು ಊದುವ ಕೃಷ್ಣಾವತಾರದ ಗಣೇಶ, ಗಜಾನನ ಟ್ಯಾಕ್ಸಿ ಚಾಲಕ ಮಾಲೀಕರ ಸಂಘ ಹಾಗೂ ಪಾತಾಳಲಿಂಗೇಶ್ವರ ಯುವಕ ಸಂಘದವರು ವಿಶೇಷ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಗಣಪತಿ ಭಕ್ತ PSI ಆರೀಫ್ ಮುಶಾಪುರಿಗೆ ಹನುಮಂತ ಎಂದರೆ ಅಚ್ಚುಮೆಚ್ಚು..!
ಸರ್ಕಾರ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಜತೆಗೆ ಪಟ್ಟಣದ ತೋಟದ ರಸ್ತೆಯಲ್ಲಿನ ವಿನಾಯಕ ಮಿತ್ರ ಮಂಡಳಿಯವರು 9 ದಿನಗಳ ಕಾಲ ನಿತ್ಯ ದಾಸೋಹ ಆಯೋಜಿಸಿದ್ದಾರೆ. ಜತೆಗೆ ಪಟ್ಟಣದ ಬಹುತೇಕ ಎಲ್ಲ ಗಣೇಶನನ್ನು ಪ್ರತಿಷ್ಠಾಪಿಸಿರುವ ಸಂಘ ಸಂಸ್ಥೆಗಳು ದಾಸೋಹ ಆಯೋಜಿಸಿದ್ದರು.