Asianet Suvarna News Asianet Suvarna News

Shivamogga: ಈ ಗಣಪತಿ ಸಮಿತಿಗೆ ಮುಸ್ಲಿಂ ಅಧ್ಯಕ್ಷ, ಕ್ರಿಶ್ಚಿಯನ್ ಪ್ರಧಾನ ಕಾರ್ಯದರ್ಶಿ, ಹಿಂದೂ ಉಪಾಧ್ಯಕ್ಷ

ಇತ್ತೀಚೆಗೆ ಚಿಕ್ಕಪುಟ್ಟ ವಿಷಯಗಳಿಗೂ ಕೋಮುಬಣ್ಣ ತಗುಲಿ ರಕ್ತದೋಕುಳಿ ಹರಿಯುವ ಮೂಲಕ ಘಟ್ಟ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲ ಹೆಸರಾದ ಶಿವಮೊಗ್ಗಕ್ಕೆ ಶಾಪ ತಟ್ಟಿದಂತಾಗಿದೆ. 

Ganapati Samiti Muslim President Christian General Secretary and Hindu Vice President at Shivamogga gvd
Author
First Published Sep 1, 2022, 11:26 PM IST

ವಿಶೇಷ ವರದಿ 

ಶಿವಮೊಗ್ಗ (ಸೆ.01): ಇತ್ತೀಚೆಗೆ ಚಿಕ್ಕಪುಟ್ಟ ವಿಷಯಗಳಿಗೂ ಕೋಮುಬಣ್ಣ ತಗುಲಿ ರಕ್ತದೋಕುಳಿ ಹರಿಯುವ ಮೂಲಕ ಘಟ್ಟ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲ ಹೆಸರಾದ ಶಿವಮೊಗ್ಗಕ್ಕೆ ಶಾಪ ತಟ್ಟಿದಂತಾಗಿದೆ. ರಾಷ್ಟ್ರಮಟ್ಟದಲ್ಲಿ ಇದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಈ ಕಾರಣದಿಂದ ಸಾಮಾನ್ಯರ ಬದುಕು ಕೂಡ ತಲ್ಲಣಗೊಳ್ಳುವ ಹೊತ್ತಿಗೆ ಸಮಾಜದ ಹಲವೆಡೆಯಿಂದ ಸಾಮರಸ್ಯ ಮೂಡಿಸುವ ‘ಶಾಂತಿಗಾಗಿ ನಡಿಗೆ’ ಕಾರ್ಯಕ್ರಮ ರೂಪುಕೊಳ್ಳುತ್ತಿರುವ ಹೊತ್ತಿಗೆ ಶಿವಮೊಗ್ಗದಲ್ಲಿಯೇ ಇರುವ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ (ಎಚ್‌ಎಂಸಿ) ಗಣಪ ಮತ್ತೆ ಮುನ್ನಲೆಗೆ ಬರುತ್ತಿದ್ದಾನೆ. 

ನಿಜ, ಇದೊಂದು ಅಪರೂಪದ ಸಾಮರಸ್ಯದ ಸಂಗತಿ.  ಇಡೀ ಊರಿಗೆ ಈತನೊಬ್ಬನೇ ಗಣಪ.  ಆತನ ಕಾವಲಿಗೆ ಒಬ್ಬ ಪೊಲೀಸ್ ಮಾತ್ರ.  22 ವರ್ಷಗಳಿಂದ ಈ ಸಾಮರಸ್ಯದ ಗಣಪ ನಮ್ಮ ನಡುವೆ ರೂಪುಗೊಳ್ಳುತ್ತಿದ್ದಾನೆ.  ವಿಸರ್ಜನಾ ಪೂರ್ವ ಮೆರವಣಿಗೆಗೆ ಕಾವಲಿಗೆಂದು ಪೊಲೀಸರು ಹೆಚ್ಚುವರಿ ತುಕಡಿಗಳನ್ನು ಕಳುಹಿಸಬೇಕೆ ಎಂದರೆ ಊರಿನವರ ಉತ್ತರ ಬೇರೆಯದೇ ಆಗಿರುತ್ತದೆ.  ಬನ್ನಿ, ಆದರೆ ಬಂದೋಬಸ್ತಿಗಲ್ಲ, ಊಟಕ್ಕೆ! ಎನ್ನುವುದು ಇಲ್ಲಿನ ಜನರ ಮನಃಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ವಿಘ್ನವಿನಾಶಕ ಗಣಪತಿಗೆ ಎಲ್ಲೆಡೆಯೂ ವಿಘ್ನವೇ ಜಾಸ್ತಿ.  

ಎರೆಹುಳು ಗೊಬ್ಬರ ಬಳಕೆಗೆ ರೈತರು ಗಮನಹರಿಸಲಿ: ಸಂಸದ ರಾಘವೇಂದ್ರ

ಅದರಲ್ಲಿಯೂ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಗೆ ಭರ್ಜರಿ ಭದ್ರತೆ ಬೇಕಾಗಿದ್ದರೆ, ಈ ಎಚ್‌ಎಂಸಿ ಗಣಪನಿಗೆ ಮಾತ್ರ ಕೇವಲ ಒಬ್ಬ ಪೊಲೀಸ್ ಸಾಕು.  ಅದು ಸಾಂಕೇತಿಕ ಮತ್ತು ಅನಿವಾರ್ಯತೆಯಲ್ಲಿ. ಇಲ್ಲಿರುವ ಕೋಮು ಸಾಮರಸ್ಯದ ವಿಘ್ನವಿನಾಶಕ ಗಣೇಶನಿಗೆ ವಿಘ್ನವೇ ಇಲ್ಲ. ಎಲ್ಲ ಸುಲಗ್ನ!  ಈ ಗಣಪ ಸರ್ವಧರ್ಮದ ಸಮನ್ವಯದ ಪ್ರತೀಕ. ಈ (ಎಚ್‌ಎಂಸಿ) ವಿನಾಯಕ ಮಂಡಳಿ ಅಧ್ಯಕ್ಷ ಒಬ್ಬ ಮುಸ್ಲಿಂ, ಕಾರ್ಯದರ್ಶಿ ಕ್ರಿಶ್ಚಿಯನ್ ಮತ್ತು ಉಪಾಧ್ಯಕ್ಷ ಹಿಂದೂ!!  ಹೇಗಿದೆ ನೋಡಿ.  ಗಿಲಾನಿ ಅಧ್ಯಕ್ಷರಾದರೆ, ನವೀನ್ ಉಪಾಧ್ಯಕ್ಷ, ಕ್ರೈಸ್ತ ನರೇಂದ್ರ ಬಾಬು ಕಾರ್ಯದರ್ಶಿ.  

ಇಲ್ಲಿ ಯಾರೂ, ಯಾರಿಗೂ ಪಾಠ ಹೇಳಬೇಕಾಗಿಲ್ಲ. ಊರವರೇ ಕಲಿತ ಪಾಠ. ಕಲಿತದ್ದನ್ನು ವಾಸ್ತವತೆಯಲ್ಲಿ ಜಗತ್ತಿಗೆ ತೋರಿಸುತ್ತ ಪಾಠ ಹೇಳುತ್ತಿದ್ದಾರೆ. ಇದೆಲ್ಲ ಇರುವುದು ಭದ್ರಾವತಿ ಬೊಮ್ಮನಕಟ್ಟೆಯಲ್ಲಿ. ಇದೀಗ ಈ (ಎಚ್‌ಎಂಸಿ) ಗಣಪತಿ ಇದೇ ಕಾರಣಕ್ಕೆ ಪ್ರಸಿದ್ಧಿ ಆಗತೊಡಗಿದ್ದಾನೆ.  ಬೊಮ್ಮನಕಟ್ಟೆಯ ವಾರ್ಡ್ ನಂಬರ್ 22, 24 ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳು ವಾಸವಿರುವ ಪ್ರದೇಶವಾಗಿದೆ. ಇಲ್ಲಿನ ಚರ್ಚ್ ಮತ್ತು ಮಸೀದಿಯ ನಡುವೆ ಎಚ್‌ಎಂಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.  ಸ್ವತಃ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಗಣಪತಿ ಉತ್ಸವದ ಉಸ್ತುವಾರಿಯನ್ನು ಇಲ್ಲಿ ಹೊತ್ತುಕೊಳ್ಳುತ್ತಾರೆ. 

ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ: ಸಾಹಿತಿ ಭಗವಾನ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಅಷ್ಟೇ ಅಲ್ಲದೇ, ಈ ಸಮುದಾಯದ ಯುವಕರು ಯಾವ ಪೂರ್ವಾಗ್ರಹಪೀಡಿತ ಮನಸ್ಸಿಲ್ಲದೇ ‘ಗಣಪತಿ ಬಪ್ಪಾ ಮೋರೆಯಾ’ ಎಂದು ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕುತ್ತ ಸಂಭ್ರಮಿಸುತ್ತಾರೆ.  ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಇದು ಅತಿದೊಡ್ಡ ಗಣಪತಿಯಾಗಿದೆ.  ವಿಸರ್ಜನಾಪೂರ್ವ ಮೆರವಣಿಗೆಗೆ ಸುತ್ತಲಿನ ಹತ್ತೂರ ಮಂದಿ ಸೇರುತ್ತಾರೆ, ಸಂಭ್ರಮಿಸುತ್ತಾರೆ. ಇಲ್ಲಿ ಗಣೇಶನ ಹಬ್ಬ ಮಾತ್ರವಲ್ಲ, ಊರಿನಲ್ಲಿ ಯಾವುದೇ ಹಬ್ಬ ನಡೆಯಲಿ, ಎಲ್ಲರೂ ತಮ್ಮ ಬಂಧುಗಳನ್ನು ಹಬ್ಬಕ್ಕೆ ಕರೆಯುತ್ತಾರೆ. ಊರವರು ಇಡೀ ಊರಿಗೇ ತೋರಣಕಟ್ಟಿ ಬಂಧು ಬಾಂಧವರನ್ನು ಕರೆಯುತ್ತಾರೆ. ಗಣೇಶನಿಗೆ ಮುಸ್ಲಿಂರು, ಕ್ರೈಸ್ತರು ಜೊತೆಯಾದರೆ, ಈದ್ ಮಿಲಾದ್, ಬಕ್ರೀದ್, ಕ್ರಿಸ್ಮಸ್‌ಗೆ ಹಿಂದೂಗಳು ಜೊತೆಯಾಗಿ ಹೆಗಲು ಕೊಡುತ್ತಾರೆ. ಇಲ್ಲಿಗೆ ದೇಣಿಗೆ ನೀಡುವ ರಸೀದಿಯಲ್ಲಿಯೂ ಎಚ್‌ಎಂಸಿ ಗಣಪ ಎಂದೇ ಮುದ್ರಿಸಲಾಗಿದೆ. 

Follow Us:
Download App:
  • android
  • ios