Asianet Suvarna News Asianet Suvarna News

ಜೂ.21ರ ಖಂಡಗ್ರಾಸ ಸೂರ್ಯ ಗ್ರಹಣ: ರಾಶಿ ಫಲ ಹೇಗಿದೆ?

ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ ಅಥವಾ ಖಂಡ ಗ್ರಾಸ ಗ್ರಹಣ ಎಂದೂ ಕರೆಯುವ ಸೂರ್ಯ ಗ್ರಹಣ ಇದೇ ಜೂನ್ 21ರಂದು ಸಂಭವಿಸಲಿದೆ. ವಿದ್ಯಾ ವರ್ಗದವರಿಗೆ ಬಾಧೆ ಕೊಡುವ ಈ ಗ್ರಹಣದಿಂದ ಮತ್ಯಾರಿಗೆ ಶುಭ, ಅಶುಭ? ಓದಿ ಈ ಗ್ರಹಣದ ಶುಭ ಫಲಗಳನ್ನು.....

Effects of June 21 solar eclipse on sun signs as astrology
Author
Bengaluru, First Published Jun 15, 2020, 2:59 PM IST

ಭಾರತೀಯ ಜ್ಯೋತಿಷ ಶಾಸ್ತ್ರದ ಪಿತಾಮಹ, ಪ್ರಾಚೀನ ಖಗೋಳ ವಿಜ್ಞಾನಿ ಅಂತ ವಿಶ್ವ ಮಾನ್ಯತೆ ಪಡೆದಿರುವ ವರಾಹಮಿಹಿರರು ಆಕಾಶದಲ್ಲಿ ಸಂಭವಿಸುವ ಗ್ರಹ ಕಾಯಗಳ ವಿಸ್ಮಯಗಳನ್ನ ಬಗೆದು ತಿಳಿಸುವಲ್ಲಿ ಪ್ರಸಿದ್ಧರು. ಅಂಥ ಮಹನೀಯರು ಬರೆದ ಅನೇಕ ಗ್ರಂಥಗಳಲ್ಲಿ ಬೃಹತ್ಸಂಹಿತಾ ಗ್ರಂಥ ಅಪೂರ್ವವಾದದ್ದು. ಆ ಗ್ರಂಥದಲ್ಲೇ ಗ್ರಹಣಗಳ ಕುರಿತಾದ ವಿಸ್ತಾರ ಮಾಹಿತಿಯನ್ನ ಒದಗಿಸಿದ್ದಾರೆ. ಸೂರ್ಯಗ್ರಹಣ, ಚಂದ್ರ ಗ್ರಹಣ, ಅವುಗಳ ಭಿನ್ನತೆ, ರಾಹುವಿನ ಆಕಾರ, ಗ್ರಹಣ ಆವರಿಸುವ ರೀತಿ, ಗ್ರಹಣ ಕಾಲ, ಕಾಲದ ಫಲ, ಗ್ರಹಣ ಮಾಸ, ಮಾಸ ಫಲ ಹೀಗೆ ವಿಸ್ತಾರವಾದ ಮಾಹಿತಿಯನ್ನು ಒದಗಿಸಿದ್ದಾರೆ. ಆ ಗ್ರಂಥದ ಉಲ್ಲೇಖದಂತೆ ಈ ಜ್ಯೇಷ್ಠ ಮಾಸದ ಅಮಾವಾಸ್ಯೆಯ ದಿನ ಸಂಭವಿಸುವ ಗ್ರಹಣ ಫಲ ಹೇಗಿದೆ..? ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುದನ್ನ ತಿಳಿಯುವ ಪ್ರಯತ್ನ ಮಾಡೋಣ.

21 - ಭಾನುವಾರ - ಜೂನ್
ಸಮಯ - 10.04 ರಿಂದ 01.32


ಜೂ21ರ ಸೂರ್ಯಗ್ರಹಣದಿಂದ ಈ ರಾಶಿಗಳಿಗೆ ಗಜಕೇಸರಿ ಯೋಗ

ಶಾರ್ವರಿ ಸಂವತ್ಸರದ ಜ್ಯೇಷ್ಠ ಮಾಸದಲ್ಲಿ ಸಂಭವಿಸುತ್ತಿರುವ ಗ್ರಹಣವಿದು. ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ. ಖಂಡ ಗ್ರಾಸ ಗ್ರಹಣ ಅಂತಲೂ ಅಂತಾರೆ. 100 ರಲ್ಲಿ 40 ಅಂಶದ ಭಾಗವೇ ಈ ಖಂಡಗ್ರಾಸ. ವರಾಹ ಮಿಹಿರರು ವಿವರಿಸುವ ಪ್ರಕಾರ ಜ್ಯೇಷ್ಠ ಮಾಸದ ಗ್ರಹಣದಲ್ಲಿ ರಾಜರಿಗೆ, ಬ್ರಾಹ್ಮಣರಿಗೆ, ಬಾಲಕರಿಗೆ, ವಿದ್ವಾಂಸರಿಗೆ ಪೀಡೆ ಸಂಭವಿಸುತ್ತದೆ ಎನ್ನುತ್ತಾರೆ. ಇದು ನಿಜವಾ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ನೋಡಿ ಶಾಸ್ತ್ರದಲ್ಲಿ ಸೂರ್ಯನನ್ನು  ರಾಜ ಗ್ರಹ ಎಂದು ಕರೆಯುತ್ತಾರೆ. ಇಂಥ ಸೂರ್ಯನಿಗೆ ಗ್ರಹಣ ಸಂಭವಿಸುತ್ತಿರುವುದು ಕಾಲ ಪುರುಷನ ಮೂರನೇ ಭಾಗದಲ್ಲಿ ಅಂದರೆ ಅದನ್ನು ಉತ್ಸಾಹ, ಶೌರ್ಯ ಸ್ಥಾನ ಎಂದು ಕರೆಯಲಾಗುತ್ತೆ. ಅಂಥ ಸ್ಥಳದಲ್ಲಿ ಗ್ರಹಣವಾದಾಗ ರಾಜರ ಪೌರುಷ ಅಡಗುವುದು ಸಹಜ. ರಾಜರು ಎಂದರೆ ವರ್ತಮಾನದಲ್ಲಿ ಜನ ಪ್ರತಿನಿಧಿಗಳು, ಶಾಸಕರು, ಮಂತ್ರಿಗಳು ಅಂತಲೇ ಅರ್ಥ. ಇನ್ನು ಗ್ರಹಣದ ಸಂದರ್ಭದಲ್ಲಿ ರವಿ ಗ್ರಹದ ಜೊತೆ ಬುದ್ಧಿ ದಾತ ಬುಧ ಗ್ರಹವೂ ಸೇರಿರುವುದರಿಂದ ಬ್ರಾಹ್ಮಣರಿಗೆ ಸಹಜವಾಗಿ ತೊಂದರೆಗಳಾಗುತ್ತವೆ, ಬುಧ ಜ್ಯೋತಿಷ, ಶಾಸ್ತ್ರ, ಪೌರೋಹಿತ್ಯ, ಶಿಕ್ಷಣ ಹೀಗೆ ವಿದ್ಯಾ ಪ್ರಸಾರ ಮಾಡುವ ಸರ್ವರನ್ನೂ ಪ್ರತಿನಿಧಿಸುತ್ತಾನೆ. 

ರಾಶಿ ಅನುಸಾರ ನಿಮ್ಮಲ್ಲಿರುವ ಕೆಟ್ಟ ಗುಣಗಳೇನು?

ಪ್ರಾಥಮಿಕ ಶಿಕ್ಷಕ ವರ್ಗದವರಿಂದ ಹಿಡಿದು ಪತ್ರಕರ್ತರ ತನಕ ಜ್ಞಾನ ಪ್ರಸಾರ ಮಾಧ್ಯಮಗಳೆಲ್ಲವನ್ನೂ ಬುಧ ಪ್ರತಿನಿಧಿಸುವ ಕಾರಣ ವಿದ್ಯಾ ವರ್ಗದವರಿಗೆ ಬಾಧೆ ಇದೆ. ಇನ್ನು ಅಮಾವಾಸ್ಯೆ ಅಂದ್ರೆ ಅಲ್ಲಿ ಚಂದ್ರನಿಗೆ ಪಕ್ಷದ ಬಲವಿರುವುದಿಲ್ಲ. ಚಂದ್ರ ಸ್ತ್ರೀ ಕಾರಕ ಗ್ರಹ ಹೀಗಾಗಿ ಸ್ತ್ರೀಯರಿಗೂ ಬಾಧೆ ತಪ್ಪಿದ್ದಲ್ಲ. ಇನ್ನೂ ಸೂಕ್ಷ್ಮವಾಗಿ ಗಮನಿಸುವುದಾದರೆ ಗ್ರಹಣ ಸಂಭವಿಸುತ್ತಿರುವುದು ಮಿಥುನ ರಾಶಿಗೆ. ಮಿಥುನ ರಾಶಿಯನ್ನು ಸ್ತ್ರೀ-ಪುರುಷ ಸಂಯೋಗ ರಾಶಿ ಅಂತಾರೆ. ವರಾಹ ಮಿಹಿರರೇ ತಿಳಿಸುವಂತೆ ಮಿಥುನ ರಾಶಿಯ ಸ್ವರೂಪ 'ಸಗದಂ ಸವೀಣಂ' ಎಂದಿದೆ.  ಗದೆ ಹಿಡಿದ ಪುರುಷ, ವೀಣಾಪಾಣಿಯಾದ ಸ್ತ್ರೀ ಅಂತ ಅರ್ಥ. ಹೀಗಾಗಿ ಸ್ತ್ರೀ-ಪುರುಷರ ನಡುವೆ ಮನಸ್ತಾಪಗಳು, ಘರ್ಷಣೆಗಳು, ಉತ್ತಮ ಕುಲದವರ ಗೌರವಕ್ಕೆ ಕುಂದು, ಗಣ್ಯರ ಮಾನ, ಕಲಾವಿದರಿಗೆ ಸಂಕಟ ಸಂಭವಿಸುವ ಸಾಧ್ಯತೆಯನ್ನು ಇದು ತಿಳಿಸುತ್ತದೆ. ಜೊತೆಗೆ ಈ ಮಿಥುನ ರಾಶಿಗೆ ಕ್ರೂರ ಗ್ರಹವಾದ ಕುಜ ಗ್ರಹದ ದೃಷ್ಟಿ ಇದೆ. ಹೀಗಾಗಿ ಬೇಡದ ಸಂಬಂಧಗಳು ದೇಹ-ಮನಸ್ಸುಗಳಲ್ಲಿ ವಿಚಿತ್ರ ಭಾವಗಳನ್ನು ಕೆರಳಿಸಿ ಜನರನ್ನು ಹಾದಿ ತಪ್ಪಿಸುವ ಸಾಧ್ಯತೆಯನ್ನು ಹೇಳುತ್ತಿದೆ. ಅಷ್ಟೇ ಅಲ್ಲ ಈ ಕುಜ ಗ್ರಹದ ದೃಷ್ಟಿ ದೇಶದಲ್ಲಿ ಯುದ್ಧ ಭಯ, ಅಗ್ನಿ ಅವಘಡ, ಚೋರರ ಹಾವಳಿಯನ್ನೂ ಹೆಚ್ಚಿಸಲಿದೆ. ಬೃಹತ್ಸಂಹಿತಾ ಗ್ರಂಥ ಅಧ್ಯಯನದಿಂದ ಇನ್ನೂ ವಿಸ್ತಾರ ಮಾಹಿತಿ ಲಭ್ಯ. ಸದ್ಯಕ್ಕೆ ಈ ಗ್ರಹಣ ಸಂದರ್ಭದಲ್ಲಿ ನಾವು ಮಾಡಬೇಕಾದದ್ದೇನು ಮಾಡಬಾರದ್ದೇನು ಎಂಬುದರ ಕಡೆ ಗಮನಹರಿಸೋಣ.

ಗ್ರಹಣ ಕಾಲದಲ್ಲಿ  ಆಚರಿಸಬೇಕಾದದ್ದು: 
ಗ್ರಹಣ ಸ್ಪರ್ಶಕಾಲದಲ್ಲಿ, ಮಧ್ಯ ಕಾಲದಲ್ಲಿ, ಮೋಕ್ಷಕಾಲದಲ್ಲಿ ಸಚೈಲ ಸ್ನಾನ ಮಾಡಬೇಕು ಎಂಬುದು ಶಾಸ್ತ್ರವಾಣಿ. ಸಚೈಲ ಸ್ನಾನವೆಂದರೆ ಉಟ್ಟ ಬಟ್ಟೆಯಲ್ಲೇ ಸ್ನಾನ ಮಾಡಬೇಕು ಅಂತ.

ಗ್ರಾಸಮಾನೇ ಭವೇತ್ ಸ್ನಾನಂ ಗ್ರಸ್ತೇ ಹೋಮೋ ವಿಧೀಯತೇ
ಮುಷ್ಯಮಾನೇ ಭವೇದ್ದಾನಂ ಮುಕ್ತೇ ಸ್ನಾನಂ ವಿಧೀಯತ

ಇದು ನಿರ್ಣಯ ಸಿಂಧುವಿನ ಆಧಾರ ವಚನ.  ಇದರ ಪ್ರಕಾರ ಗ್ರಹಣ ಸ್ಪರ್ಶದಲ್ಲಿ ಸ್ನಾನ, ಗ್ರಹಣ ಮಧ್ಯಕಾಲದಲ್ಲಿ ಹೋಮ, ಮೋಕ್ಷಕಾಲದಲ್ಲಿ ದಾನ ಮಾಡಬೇಕು ಎಂದಿದೆ. ಗಂಗಾ, ಕಾಶಿ, ಪ್ರಯಾಗದಂಥ ಕ್ಷೇತ್ರಗಳ ಸ್ನಾನಕ್ಕೆ ಅತ್ಯಂತ ಮಹತ್ವ ಫಲ ಹೇಳಿದೆ. ಆ ಅವಕಾಶ ಈಗ ಇಲ್ಲ . ಕಾರಣ ದೇಶಕ್ಕೆ ವ್ಯಾಪಿಸಿರುವ ಕೊರೋನಾ ಭಯ. ಹಾಗಾಗಿ ಇರುವ ಸ್ಥಳದಲ್ಲೇ ಗಂಗಾ ಸ್ಮರಣೆ ಮಾಡಿ ಸ್ನಾನ ಮಾಡಬೇಕು, ಉದ್ಧೃತ ಜಲ ( ಮೇಲೆತ್ತಿದ ನೀರು ), ಕೂಪ ಜಲ ( ಬಾವಿ ನೀರು ) ಇತ್ಯಾದಿಗಳಿಂದಲೂ ಮಾಡಿದ ಸ್ನಾನ ಶ್ರೇಷ್ಠ ಫಲವನ್ನೇ ಕೊಡಲಿದೆ. ಮುಖ್ಯವಾಗಿ ಸಮುದ್ರ ಸ್ನಾನ ಪ್ರಶಸ್ತ ಎಂದಿದೆ ಶಾಸ್ತ್ರ. ಉಳಿದಂತೆ ನಾವು ಆಚರಿಸಬೇಕಾದದ್ದೇನು..? ಉಪದೇಶಿತ ಮಂತ್ರಗಳನ್ನು ಜಪಿಸಿ, ಇಲ್ಲವೇ ಸೂರ್ಯ ಮಂತ್ರ ಜಪ, ನವಗ್ರಹ ಮಂತ್ರಗಳ ಜಪವೂ ಫಲದಾಯಕವಾಗಿವೆ. ಸಾಮರ್ಥ್ಯ ಇರುವವರು ಗೋದಾನ, ಭೂದಾನ, ಹಿರಣ್ಯ ದಾನಗಳನ್ನು ಮಾಡಬಹುದು, ಇದರ ಹೊರತಾಗಿ ತಿಲದಾನ, ಗೋಧಿ ದಾನ, ಘೃತದಾನ, ವಸ್ತ್ರ ದಾನ, ದಕ್ಷಿಣೆಗಳನ್ನೂ ದಾನ ಮಾಡಬಹದು. ಸಾಮರ್ಥ್ಯಕ್ಕನುಸಾರವಾಗಿ ದಾನ ಮಾಡಬಹುದು. ಇನ್ನು

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ

ಗ್ರಹಣ ಸಂದರ್ಭದಲ್ಲಿ ಮಾಡಬಾರದ್ದೇನು..?

ಆಹಾರ ಸೇವನೆ ಮಾಡಬಾರದು
ಪ್ರಯಾಣ ಮಾಡಬೇಡಿ
ದುಶ್ಚಟಗಳಿಂದ ದೂರವಿರಬೇಕು
ಸ್ತ್ರೀ ಸಂಗದಿಂದ ದೂರವಿರಬೇಕು
ವೃಥಾ ಕಾಲಹರಣ ಮಾಡಬಾರದು
ಮಾಟ-ಮಂತ್ರಾದಿ ಕ್ಷುದ್ರ ಪ್ರಯತ್ನ ಮಾಡಬಾರದು

ಮೃಗಶಿರ, ಆರ್ದ್ರಾ, ನಕ್ಷತ್ರದವರು ಎಚ್ಚರವಾಗಿರಬೇಕು. ಈ ಸಂದರ್ಭದಲ್ಲಿ ಹನ್ನೆರಡೂ ರಾಶಿಗಳ ಮೇಲಾಗುವ ಪರಿಣಾಮಗಳೇನು..?

ಎಚ್ಚರಿಕೆಯ ರಾಶಿಗಳು
ವೃಷಭ ರಾಶಿ
ಮಿಥುನ ರಾಶಿ
ಕರ್ಕಟಕ ರಾಶಿ
ಧನಸ್ಸು ರಾಶಿ

ಯಾವ ರಾಶಿಗೆ ಯಾವ ಫಲ?
ಮೇಷ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಂಜಿಕೆಯ ದಿನ, ಬುದ್ಧಶಕ್ತಿ ಮಂಕಾಗಲಿದೆ, ಶತ್ರುಗಳ ಭಯ, ಸಾಲಬಾಧೆ, ಆತ್ಮಶಕ್ತಿ ಕುಗ್ಗಲಿದೆ.
ಪರಿಹಾರ - ಸುಬ್ರಹ್ಮಣ್ಯ ಪ್ರಾರ್ಥನೆ ಹಾಗೂ ಗೋಧಿ-ಉದ್ದಿನ ದಾನ ಮಾಡಿ

ವೃಷಭ - ಕುಟುಂಬದಲ್ಲಿ ಒಡಕು ಮೂಡಲಿದೆ, ಆರ್ಥಿಕ ನಷ್ಟ, ಮಾತಿನಿಂದ ಕಾರ್ಯ ವಿಘ್ನ, ಮರೆವು ನಿಮ್ಮನ್ನು ಕಾಡುತ್ತದೆ, ವಿದ್ಯಾರ್ಥಿಗಳಿಗೆ ಮಂಕು ಕವಿಯುವ ಸಾಧ್ಯತೆ ಇದೆ.
ಪರಿಹಾರ - ಗೋಧಿ - ಉದ್ದಿನ ದಾನ ಮಾಡಿ

ಮಿಥುನ - ರವಿ-ರಾಹು ಸಂಯೋಗದಿಂದ ಮನಸ್ಸಿಗೆ ಆಘಾತವಾಗಲಿದೆ, ಆರೋಗ್ಯ ಹಾಳಾಗಲಿದೆ, ಮನಸ್ಸು ಚಂಚಲವಾಗಲಿದೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಬುದ್ಧಿ ಮಂಕಾಗಲಿದೆ.
ಪರಿಹಾರ - ವಿಷ್ಣು ಸಹಸ್ರನಾಮ  ಪಠಿಸಿ, ಗೋಧಿ-ಉದ್ದು ದಾನ ಮಾಡಿ.

Effects of June 21 solar eclipse on sun signs as astrology

ಕಟಕ - ಮನಸ್ಸು ಮಂಕಾಗಲಿದೆ, ಆತ್ಮಬಲವೂ ಕುಸಿಯಲಿದೆ, ಹಣ ವ್ಯಯ, ಕಾರ್ಯಗಳಲ್ಲಿ ವಿಘ್ನ ಸಂಭವ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಬಾಯಿ ಹುಣ್ಣಾಗುವ ಸಾಧ್ಯತೆ.
ಪರಿಹಾರ - ಅಕ್ಕಿ-ಗೋಧಿ-ಉದ್ದಿನ ದಾನ ಮಾಡಿ, ಹ್ರೀಂ ಮಹಾಲಕ್ಷ್ಮೈ ನಮ: ಮಂತ್ರ ಪಠಿಸಿ

ಸಿಂಹ - ಆತ್ಮ ಶಕ್ತಿ ಕುಗ್ಗಲಿದೆ, ಲಾಭದಲ್ಲಿ ಕತ್ತರಿ ಬೀಳಲಿದೆ, ದೇವರ ಪ್ರಾರ್ಥನೆ ಮಾಡದೆ ಯಾವ ಕೆಲಸವನ್ನೂ ಮಾಡಬೇಡಿ. ಮಕ್ಕಳ ವಿದ್ಯಾಭ್ಯಾದಲ್ಲಿ ತೊಡಕು ಸಂಭವ, ಮನಸ್ಸು ಚಂಚಲವಾಗಲಿದೆ.
ಪರಿಹಾರ - ಅಕ್ಕಿ-ಗೋಧಿ-ಉದ್ದಿನ ದಾನ ಜೊತೆಗೆ ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಕಾರ್ಯ ಕ್ಷೇತ್ರದಲ್ಲಿ ಕೊರತೆ, ನಷ್ಟ ಸಂಭವ, ಕೆಲ ಘಟನೆಗಳನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿ, ಒತ್ತಡಕ್ಕೆ ಸಿಲುಕುವ ಸಾಧ್ಯತೆ, ತಾಯಿಯ ಆರೋಗ್ಯದ ಕಡೆ ಗಮನವಹಿಸಿ, ಬುದ್ಧಿ ಮಂಕಾಗುತ್ತದೆ.
ಪರಿಹಾರ - ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಗೋಧಿ-ಉದ್ದಿನ ದಾನ ಮಾಡಿ

ತುಲಾ - ಉನ್ನತ ಶಿಕ್ಷಣ ಅಭ್ಯಾಸಿಗರಿಗೆ ಅನಾನುಕೂಲ, ಕೆಲಸದಲ್ಲಿ ವಿಘ್ನಗಳು, ಕಾರ್ಯ ಭಾರ ಹೆಚ್ಚಾಗಲಿದೆ, ಸ್ತ್ರೀಯರು ಎಚ್ಚರದಿಂದಿರಬೇಕು, ಪ್ರಯಾಣ ನಿಷಿದ್ಧ ಮಾಡಿ.
ಪರಿಹಾರ - ದುರ್ಗಾ ಸ್ತುತಿ ಮಾಡಿ ಹಾಗೂ ಉದ್ದು - ಗೋಧಿ ದಾನ ಮಾಡಿ

ವೃಶ್ಚಿಕ - ಆರೋಗ್ಯದ ಕಡೆ ಸ್ವಲ್ಪ ಹೆಚ್ಚಿನ ಕಾಳಜಿ ಬೇಕು, ಇಷ್ಟ ವಸ್ತು ನಷ್ಟವಾಗುವ ಸಾಧ್ಯತೆ ಹೆಚ್ಚು, ವೃದ್ಧರು ಹೆಚ್ಚು ಎಚ್ಚರವಾಗಿರಬೇಕು, ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ, ಪ್ರಯಾಣ ಬೇಡ.
ಪರಿಹಾರ - ಸುಬ್ರಹ್ಮಣ್ಯ ಪ್ರಾರ್ಥನೆ ಹಾಗೂ ಗೋಧಿ - ಉದ್ದಿನ ದಾನ ಮಾಡಿ

ಧನಸ್ಸು - ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ದುಷ್ಟ ಜನರ ಸಹವಾಸದಿಂದ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ, ಮನಸ್ಸಿನ ಮೇಲೆ ಪರಿಣಾಮ ಬೀರುವ ಸಂಗತಿಗಳು ನಡೆಯಲಿವೆ, ವ್ಯಾಪಾರಿಗಳು ತುಂಬ ಎಚ್ಚರಿಕೆಯಿಂದಿರಬೇಕು.
ಪರಿಹಾರ - ಗುರು ಪ್ರಾರ್ಥನೆ, ಉದ್ದು-ಅಕ್ಕಿ-ಗೋಧಿ ದಾನ ಮಾಡಿ

ಮಕರ - ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು, ಮನಸ್ಸಿನ ಮೇಲೆ ಪರಿಣಾಮ ಬೀರುವಂಥ ಘಟನೆಗಳು ನಡೆಯಬಹುದು, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರ ಜೊತೆ ಎಚ್ಚರವಾಗಿರಿ.
ಪರಿಹಾರ - ಶಿವಾರಾಧಮೆ, ಗೋಧಿ-ಉದ್ದಿನ ದಾನ ಮಾಡಿ

ಈ ರಾಶಿ ಹುಡುಗರಿಗೆ ಈ ರಾಶಿಯ ಹುಡುಗರೇ ಬೇಕು

ಕುಂಭ - ಮಕ್ಕಳ ವಿಷಯದಲ್ಲಿ ಎಚ್ಚರವಾಗಿರಬೇಕು, ಮನಸ್ಸಿನಲ್ಲಿ ಚಿಂತೆಗಳು ಕಾಡುತ್ತವೆ, ಉನ್ನತ ಅಭ್ಯಾಸ ಮಾಡುವವರಿಗೆ ಮನಸ್ಸಿನಲ್ಲಿ ಆಘಾತವಾಗುವ ಸಾಧ್ಯತೆ ಇದೆ, ತಂದೆ-ಮಕ್ಕಳ ಬಾಂಧವ್ಯ ಹದಗೆಡುವ ಸಾಧ್ಯತೆ ಇದೆ. ಸಂಗಾತಿಯಿಂದ ಕೊಂಚ ಆಘಾತ. ಗರ್ಭಿಣಿಯರು ಎಚ್ಚರವಾಗಿರಿ.
ಪರಿಹಾರ - ಶಿವ ಸ್ತೋತ್ರ ಪಠಣ, ಗೋಧಿ - ಉದ್ದು ದಾನ ಮಾಡಿ

ಮೀನ - ಪ್ರಯಾಣ ಬೇಡ, ಗೃಹದಲ್ಲಿ ತೊಡಕುಗಳುಂಟಾಗುವ ಸಾಧ್ಯತೆ ಇದೆ ಎಚ್ಚರವಾಗಿದೆ, ಸ್ತ್ರೀಯರ ಜೊತೆ ಮಾತನಾಡುವಾಗ ಎಚ್ಚರ ಬೇಕು, ಉದ್ಯೋಗದಲ್ಲಿ ಎಚ್ಚರಿಕೆ ಬೇಕು. ಸಂಗಾಯಿಂದ, ಮಕ್ಕಳಿಂದ ಆಘಾತ.
ಪರಿಹಾರ - ಅಕ್ಕಿ-ಉದ್ದು - ಗೋಧಿ ದಾನ ಮಾಡಿ

- ಶ್ರೀಕಂಠ ಶಾಸ್ತ್ರಿ ಸುವರ್ಣ ನ್ಯೂಸ್.
 

Follow Us:
Download App:
  • android
  • ios