ವಿಷ್ಣುವಿನಂತೆಯೇ ಶಿವನೂ ಹಲವು ಅವತಾರಗಳನ್ನು ಎತ್ತಿದ್ದಾನೆ. ಲೋಕಕಲ್ಯಾಣಕ್ಕಾಗಿ ಶಿವ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆ. ಪ್ರತಿ ಅವತಾರವೂ ಅವನ ದೈವಿಕ ಸಾರದ ವಿಭಿನ್ನ ಅಂಶವನ್ನು ತೋರಿಸುತ್ತದೆ. ಹಾಗೆ ಶಿವನ ದಶಾವತಾರಗಳ ವಿವರ, ಮಹತ್ವ ಇಲ್ಲಿದೆ. 

ಶಿವರಾತ್ರಿ ಹತ್ತಿರ ಬರುತ್ತಿದೆ. ವಿಷ್ಣು ದಶಾವತಾರಗಳನ್ನು ಎತ್ತಿ ಲೋಕಕಲ್ಯಾಣ ಮಾಡಿದ್ದು ನಿಮಗೆ ಗೊತ್ತಿದೆ. ಹಾಗಾದರೆ ಶಿವನಿಗೆ ಯಾವುದೇ ಅವತಾರಗಳೇ ಇಲ್ಲವೇ? ಇವೆ. ವಿಷ್ಣುವಿನಂತೆಯೇ ಶಿವನೂ ಹಲವು ಅವತಾರಗಳ ಮೂಲಕ ಲೋಕಕಲ್ಯಾಣದ ಕಾರ್ಯಗಳನ್ನು ಮಾಡಿದ್ದಾನೆ. ಹಿಂದೂಗಳ ಅತ್ಯಂತ ಶ್ರದ್ಧಾಭಕ್ತಿಯ ದೇವರುಗಳಲ್ಲಿ ಒಬ್ಬ ಭಗವಾನ್ ಶಿವ. ಹಲವಾರು ಗುರಿಗಳನ್ನು ಸಾಧಿಸುವ ಸಲುವಾಗಿ ಶಿವ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡ. ಪ್ರತಿ ಅವತಾರವೂ ಅವನ ದೈವಿಕ ಸಾರದ ವಿಭಿನ್ನ ಅಂಶವನ್ನು ತೋರಿಸುತ್ತದೆ. ಶಿವನ ಈ ವಿವಿಧ ರೂಪಗಳು ಭಕ್ತರಿಗೆ ಆಧ್ಯಾತ್ಮಿಕ ಜ್ಞಾನೋದಯವನ್ನು ಪಡೆಯಲು ಮತ್ತು ಅವರು ಬಯಸಿದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತವೆ. ಶಿವನ 10 ಅವತಾರಗಳ ವಿವರ ಇಲ್ಲಿದೆ.

1) ಪಶುಪತಿನಾಥ

ಪಶುಪತಿನಾಥ ಎಂದರೆ ಎಲ್ಲಾ ಜೀವಿಗಳ ಒಡೆಯ. ಶಿವನ ಈ ರೂಪ ಎಲ್ಲಾ ಜೀವಿಗಳಿಗೆ ದಯೆಯನ್ನು ತೋರಿಸುತ್ತದೆ. ಪ್ರಕೃತಿಯೊಂದಿಗೆ, ಪ್ರಾಣಿಪಕ್ಷಿಗಳೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಈ ಅವತಾರ ಕಲಿಸುತ್ತದೆ. ನೇಪಾಳದಲ್ಲಿ ಪಶುಪತಿನಾಥನ ದೇವಸ್ಥಾನ ಅತ್ಯಂತ ಪ್ರಸಿದ್ಧವಾಗಿದೆ. ಅಲ್ಲಿ ಶಿವನನ್ನು ರಕ್ಷಕ ದೇವತೆ ಎಂದು ಪೂಜಿಸಲಾಗುತ್ತದೆ.

2) ನಟರಾಜ

ಭಗವಾನ್ ಶಿವನ ನಟರಾಜ ಸ್ವರೂಪವು ಆತ ಕಾಸ್ಮಿಕ್ ಡ್ಯಾನ್ಸರ್‌ ಎಂಬುದರ ಸೂಚನೆ. ಇದರಲ್ಲಿ ಆತ ತಾಂಡವನೃತ್ಯ ಪ್ರದರ್ಶಿಸುತ್ತಾನೆ. ಶಿವನ ಈ ರೂಪವು ಬ್ರಹ್ಮಾಂಡದ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಚಕ್ರಗಳನ್ನು ಸೂಚಿಸುತ್ತದೆ. ನಟರಾಜನ ವಿಗ್ರಹ ಜ್ವಾಲೆಗಳಿಂದ ಆವೃತವಾಗಿದ್ದು ಇದು ಬ್ರಹ್ಮಾಂಡದ ಪುನರ್ಜನ್ಮ ಮತ್ತು ಅಜ್ಞಾನದ ನಾಶವನ್ನು ಒತ್ತಿಹೇಳುತ್ತದೆ. ನಟರಾಜನ ರೂಪದಲ್ಲಿ ಬಂದ ಶಿವನು ಅಪಸ್ಮಾರ ಎಂಬ ರಾಕ್ಷಸನನ್ನು ಬಲಿಹಾಕಿ ಜನರನ್ನು ಭ್ರಮೆ ಮತ್ತು ಅಜ್ಞಾನದಿಂದ ಮುಕ್ತಿಗೊಳಿಸುತ್ತಾನೆ.

3) ಅರ್ಧನಾರೀಶ್ವರ

ಭಗವಾನ್ ಶಿವನ ಈ ಸುಂದರವಾದ ರೂಪದಲ್ಲಿ ಅವನು ಪುರುಷ ಮತ್ತು ಸ್ತ್ರೀ ಶಕ್ತಿಗಳ ಏಕತೆಯನ್ನು ಪ್ರತಿನಿಧಿಸುತ್ತಾನೆ. ಈ ರೂಪದಲ್ಲಿ ಶಿವನು ಪಾರ್ವತಿ ದೇವಿಯೊಂದಿಗೆ ಐಕ್ಯವಾಗಿರುವಂತೆ ಚಿತ್ರಿಸಲಾಗಿದೆ. ಅರ್ಧ ಮಹಿಳೆ, ಅರ್ಧ ಪುರುಷ ರೂಪವು ಪುರುಷ ಮತ್ತು ಸ್ತ್ರೀ ಶಕ್ತಿಗಳ ಸಾಮರಸ್ಯದ ಆದರ್ಶವನ್ನು ಪ್ರತಿನಿಧಿಸುತ್ತದೆ. ಶಿವ (ಅರಿವು) ಮತ್ತು ಶಕ್ತಿ (ಶಕ್ತಿ) ಎರಡೂ ಇಲ್ಲದೆ ಜೀವನವು ಅಪೂರ್ಣ.

4) ಮಹಾಕಾಲ

ಶಿವನ ವಿನಾಶಕಾರಿ ಸ್ವರೂಪವಿದು. ಇವನು ಸಮಯದ ನಿಯಂತ್ರಕ. ಸಮಯವನ್ನು ನಿಯಂತ್ರಿಸುವ ಸಂಪೂರ್ಣ ಶಕ್ತಿಯನ್ನು ಹೊಂದಿರುವವನು. ಮಹಾಕಾಲ ಅನುಯಾಯಿಗಳ ಮತ್ತು ಧರ್ಮದ ರಕ್ಷಕ. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿರುವ ಶಿವನು ಭಕ್ತರಿಗೆ ಆಶೀರ್ವಾದ ನೀಡುತ್ತಾನೆ. 

5) ಭೈರವ

ಭಗವಾನ್ ಶಿವನ ಉಗ್ರ ಅಭಿವ್ಯಕ್ತಿಗಳಲ್ಲಿ ಒಂದಾದ ಭೈರವ ರಕ್ಷಣೆ ಮತ್ತು ವಿನಾಶ ಎರಡಕ್ಕೂ ಸಂಪರ್ಕ ಹೊಂದಿದೆ. ಈ ಅವತಾರದಲ್ಲಿ ಶಿವನು ಸಾಮಾನ್ಯವಾಗಿ ತ್ರಿಶೂಲವನ್ನು ಹೊಂದಿರುತ್ತಾನೆ. ಆತನ ಭಯಾನಕ ಮುಖವು ಅಜ್ಞಾನ, ಅಹಂ ಮತ್ತು ಭಯದ ನಾಶವನ್ನು ಪ್ರತಿನಿಧಿಸುತ್ತದೆ.

6) ದಕ್ಷಿಣಾಮೂರ್ತಿ

ಭಗವಾನ್ ದಕ್ಷಿಣಾಮೂರ್ತಿಯು ಶಿವನ ಮತ್ತೊಂದು ಸ್ವರೂಪ. ಈತ ಶಿಕ್ಷಕ ಅಥವಾ ಗುರು. ಭಗವಾನ್ ಶಿವನು ಜ್ಞಾನಾನ್ವೇಷಕರ, ಗುರುಗಳ ಗುರು. ಈ ರೂಪದಲ್ಲಿ ಅವನು ಆಲದ ಮರದ ಕೆಳಗೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಈ ಅವತಾರ ಜ್ಞಾನೋದಯ ಮತ್ತು ಸ್ವಯಂ ಸಾಕ್ಷಾತ್ಕಾರದ ಮೌಲ್ಯವನ್ನು ಒತ್ತಿಹೇಳುತ್ತದೆ.

7) ವೀರಭದ್ರ

ಶಿವನ ಮತ್ತೊಂದು ಯೋಧ ಅಭಿವ್ಯಕ್ತಿ ವೀರಭದ್ರ. ಶಿವನ ಸತ ದಾಕ್ಷಾಯಿಣಿ ದಕ್ಷನ ಯಜ್ಞದಲ್ಲಿ ಅವಮಾನಗೊಂಡು ಯೋಗಾಗ್ನಿಯಲ್ಲಿ ತಾನೇ ದಹಿಸಿಕೊಂಡ ಬಳಿಕ ಕ್ರೋಧತಪ್ತನಾದ ಶಿವನು ತನ್ನ ಜಟೆಯಿಂದಲೇ ವೀರಭದ್ರನನ್ನು ಸೃಷ್ಟಿಸಿದ. ವೀರಭದ್ರನು ದಕ್ಷನನ್ನೂ ಅವನ ಅನುಯಾಯಿಗಳನ್ನೂ ನಾಶ ಮಾಡಿದ. ಈ ಉಗ್ರ ಅವತಾರವು ಧರ್ಮ ಮತ್ತು ಸದಾಚಾರದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಭಕ್ತರ ನೈತಿಕ ತತ್ವಗಳನ್ನು ರಕ್ಷಿಸಿ ಅನ್ಯಾಯವನ್ನು ವಿರೋಧಿಸಲು ಪ್ರೇರೇಪಿಸುತ್ತದೆ.

ನಾಗಾ ಸಾಧ್ವಿಗಳು ಮುಟ್ಟಾದಾಗ ಮಹಾಕುಂಭದಲ್ಲಿ ಸ್ನಾನ ಮಾಡಬಹುದಾ?

8) ಅಘೋರ

ಅಘೋರನೆಂದರೆ ತಪಸ್ವಿ ಸ್ವರೂಪ ಮತ್ತು ವಿಧ್ವಂಸಕ ಸ್ವರೂಪವೂ ಹೌದು. ಅಘೋರ ಎಂಬುದು ಸ್ಮಶಾನವಾಸಿ, ಕಠಿಣವಾದ ತಂತ್ರದ ಮಾರ್ಗಗಳನ್ನು ಅನುಸರಿಸುವ ತಪಸ್ವೀ ಅನ್ವೇಷಕ. ಅಂತಿಮವಾಗಿ ಮರಣವನ್ನು ಸ್ವೀಕರಿಸುವುದನ್ನು, ವಸ್ತು ಪ್ರಪಂಚದಿಂದ ನಿರ್ಗಮನವನ್ನು ಇದು ಪ್ರೋತ್ಸಾಹಿಸುತ್ತದೆ. ಜೀವನ- ಸಾವಿನ ಚಕ್ರವನ್ನು ಮೀರಿ ಆಧ್ಯಾತ್ಮಿಕವಾಗಿ ಮೇಲೆ ಏರಲು ಸೂಚಿಸುತ್ತದೆ.

9) ರುದ್ರ

ರುದ್ರ ಭಗವಾನ್ ಶಿವನ ಉಗ್ರ ರೂಪ. ಈತ ಚಂಡಮಾರುತದಂಥ ದೇವರು. ಇವನು ಆರಂಭಿಕ ವೈದಿಕ ಶಿವನ ಅಭಿವ್ಯಕ್ತಿ ಕೂಡ. ನಾಜೂಕಲ್ಲದ ಮತ್ತು ಉಗ್ರವಾದ ಸ್ವರೂಪ ರುದ್ರ. ಪ್ರಕೃತಿ, ಬೇಟೆ, ಬಿರುಗಾಳಿ, ಕಾಡುಗಳು ಅವನ ಸಂಪರ್ಕ ಹೊಂದಿವೆ. ವಿನಾಶದ ಶುದ್ಧೀಕರಣ ಶಕ್ತಿಗೆ ರುದ್ರ ಸಂಕೇತ. ಇದು ಪುನರ್ಜನ್ಮಕ್ಕೆ ಜಾಗವನ್ನು ನೀಡುತ್ತದೆ.

10) ಕಾಲ ಭೈರವ

ಕಾಲ ಭೈರವ, ಹೆಸರೇ ಸೂಚಿಸುವಂತೆ ಅವನು ಸಮಯ ಮತ್ತು ಮರಣದ ಅಧಿಪತಿ. ಭಗವಾನ್ ಶಿವನ ಅತ್ಯಂತ ಉಗ್ರ ರೂಪಗಳಲ್ಲಿ ಒಂದು. ಜನರು ತಮ್ಮ ಅಸ್ತಿತ್ವದ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು, ಆಧ್ಯಾತ್ಮಿಕ ಬೆಳವಣಿಗೆ ಮಾಡಿಕೊಳ್ಳಲು, ಜೀವನದ ಆಳವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು, ಭಯವನ್ನು ಜಯಿಸಲು ಕಾಲಭೈರವನ ಪೂಜೆಯ ಮೂಲಕ ಸಾಧ್ಯವಾಗುತ್ತದೆ.

ಆಂಜನೇಯ ಹಿಮಾಲಯದಿಂದ ಹೊತ್ತು ತಂದ ಮೃತಸಂಜೀವಿನಿ ಮೂಲಿಕೆ ಈಗಲೂ ಇದೆ!