ಉಡುಪಿ ಕೃಷ್ಣನಿಗೆ ಹೆಣ್ಣಿನ ಅಲಂಕಾರ ಮಾಡುವುದು ಯಾಕೆ ಗೊತ್ತಾ?
ನವರಾತ್ರಿಯಲ್ಲಿ ಉಡುಪಿ ಕೃಷ್ಣನ ಸ್ತ್ರೀ ರೂಪ ದರ್ಶನ, ಒಂಭತ್ತು ದಿನ ಒಂಬತ್ತು ದೇವಿಯರ ಅಲಂಕಾರ
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಅ.05): ಕೃಷ್ಣ ದೇವರು ಸ್ತ್ರೀಲೋಲ ಅಂತಾರೆ, ಆದರೆ ಕೃಷ್ಣನೇ ಹೆಣ್ಣಾಗಿ ರೂಪ ಬದಲಿಸಿದ್ದನ್ನು ಕಂಡಿದ್ದೀರಾ? ಹೌದು, ನವರಾತ್ರಿ ಬಂದಾಗ ಒಂಭತ್ತೂ ದಿನಗಳ ಕಾಲ ಉಡುಪಿಯ ಕಡಗೋಲು ಕೃಷ್ಣ ದೇವರು ದೇವೀಯ ಸ್ವರೂಪ ಪಡೆಯುತ್ತಾನೆ. ಪುರುಷ ದೇವರು ದೇವಿಯಾಗಿ ಬದಲಾಗುವ ಅಪರೂಪದ ಆರಾಧನಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೊಂದು ಅಪರೂಪದ ಪೂಜಾಕ್ರಮ. ದೇವರಿಗೆ ನೂರೆಂಟು ಬಗೆಯ ಅಲಂಕಾರ ಮಾಡುವ ಬಗ್ಗೆ ಕೇಳಿರ್ತೀರಿ; ಪುರುಷ ದೇವರನ್ನು ಹೆಣ್ಣಿನ ಸ್ವರೂಪದಲ್ಲಿ ಅಂದ್ರೆ ಶಕ್ತಿ ಸ್ವರೂಪದಲ್ಲಿ ಪೂಜಿಸ್ತಾರೆ ಗೊತ್ತಿದೆಯಾ? ಉಡುಪಿ ಕೃಷ್ಣನಿಗೆ ನವರಾತ್ರಿಯ ಒಂಭತ್ತು ದಿನವೂ ಹೆಣ್ಣಿನ ಅಲಂಕಾರ ಮಾಡಲಾಗುತ್ತೆ.
ಶಕ್ತಿಯ ಆರಾಧನೆಯ ಜೊತೆಗೆ ಅನುಸಂಧಾನ ಮಾಡುವ ಈ ಅಪರೂಪದ ಅಲಂಕಾರಗಳು ಭಕ್ತರಿಗೆ ಹೊಸ ಅನುಭವ ನೀಡುತ್ತೆ. ಉಡುಪಿ ಕೃಷ್ಣ ಮಠ ಬಿಟ್ಟರೆ ಬೇರೆಲ್ಲೂ ಈ ಪದ್ಧತಿ ಇಲ್ಲ, ಕೃಷ್ಣನ ಅಲಂಕಾರದಲ್ಲಿ ಹೊಸ ದಾಖಲೆ ಬರೆದ ವಾದಿರಾಜ ಯತಿಗಳ ಕಾಲದಿಂದ ಅಂದರೆ, ಸುಮಾರು ನಾಲ್ಕು ಶತಮಾನಗಳಿಂದ ಈ ಕ್ರಮ ಬೆಳೆದು ಬಂದಿರಬೇಕು.
ಇದು ಎಷ್ಟನೇ ದಸರಾ, ಅರಮನೆ ಹೆಸರೇನು: ದಸರಾಕ್ಕೆ ಬಂದ ಜನ ಕೊಟ್ಟ ಉತ್ತರವೇನು ಗೊತ್ತಾ?
ಉಡುಪಿ ಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಕೇವಲ ಯತಿಗಳದ್ದು. ಹಾಗಾಗಿ ಅಲಂಕಾರ ಮಾಡುವ ಜವಾಬ್ದಾರಿಯೂ ಅವರದ್ದೇ. ಉಡುಪಿಯ ಕೃಷ್ಣನನ್ನು ಸ್ವತ: ವಿಶ್ವಕರ್ಮ ದೇವರು ರುಕ್ಮಿಣೀ ದೇವಿಗಂತಲೇ ತಯಾರಿಸಿಕೊಟ್ಟರು ಎಂಬ ಪೌರಾಣಿಕ ಕಥೆಯಿದೆ. ಹಾಗಾಗಿ ಇದೊಂದು ಬಾಲಕೃಷ್ಣನ ವಿಗ್ರಹ. ಬಾಲರೂಪಿ ಕೃಷ್ಣನಿಗೆ ಏನು ಅಲಂಕಾರ ಮಾಡಿದರೂ ಸೊಗಸೇ ಅನ್ನೋದು ಜನರ ಶೃದ್ಧೆ.
ಐದು ಶತಮಾನಗಳ ಹಿಂದೆ ವಾದಿರಾಜ ಸ್ವಾಮಿಗಳು ಈ ಬಾಲಕೃಷ್ಣನಿಗೆ ಮುನ್ನೂರು ಬಗೆಯ ಅಲಂಕಾರ ಮಾಡಿ ಸಂಭ್ರಮಿಸಿದ್ದರು ಎಂಬ ಇತಿಹಾಸ ಇದೆ. ರೂಪಗಳು ಬೇರೆಯಾದರೂ ಒಳಗಿನ ಶಕ್ತಿಯೊಂದೇ ಅನ್ನೋದು ಉಡುಪಿ ಕೃಷ್ಣನ ಬಗೆಗಿರುವ ನಂಬಿಕೆ. ಈ ಬಾರಿಯೂ ಪರ್ಯಾಯ ಕೃಷ್ಣಾಪುರ ಮಠಾಧೀಶರು, ಅತ್ಯಂತ ಕಲಾತ್ಮಕವಾಗಿ ಅಲಂಕಾರ ಮಾಡಿದ್ದರು.
ಐತಿಹಾಸಿಕ ಧರ್ಮದ ಗುಡ್ಡದಲ್ಲಿ 'ದೇವರ ಬನ್ನಿ' ಉತ್ಸವ
ಗಜಲಕ್ಷ್ಮೀ, ಓಲೆ ಬರೆಯುತ್ತಿರುವ ರುಕ್ಮಿಣಿ, ಧನಲಕ್ಷ್ಮಿ, ವನದುರ್ಗಾ, ಅಂತಪುರ ವಾಸಿನಿ, ಹೀಗೆ ಅಪರೂಪದ ಅಲಂಕಾರ ಮಾಡುವ ಪದ್ದತಿ ಇದೆ. ಇದೇ ರೀತಿ ತೊಟ್ಟಿಲ ಯಶೋದೆ, ಅಶೋಕವನದ ಸೀತೆ,ಉಯ್ಯಾಲೆ ರುಕ್ಮಿಣಿ, ವೀಣಾಪಾಣಿ ಹೀಗೆ ಕಡಗೋಲು ಕೃಷ್ಣ ದೇವರು ನಾನಾ ರೂಪಗಳಲ್ಲಿ ಕಂಗೊಳಿಸುತ್ತಾನೆ. ಯಾವುದೇ ಸ್ವರೂಪಕ್ಕೂ ಉಡುಪಿಯ ಕಡಗೋಲು ಕೃಷ್ಣನ ವಿಗ್ರಹ ಒಗ್ಗಿಕೊಳ್ಳುತ್ತೆ ಅನ್ನೋದು ಇನ್ನೊಂದು ವಿಶೇಷ.
ಕೃಷ್ಣ ಸ್ತ್ರೀ ಲೋಲ ಎಂಬ ಮಾತು ಕೇಳಿದ್ದೇವೆ. ಕೃಷ್ಣ ದೇವರು ಸ್ವತ: ಶಕ್ತಿ ಸ್ವರೂಪಿಣೀಯಾಗಿ ಕಂಗೊಳಿಸುವ ಅಪರೂಪದ ಅವತಾರಗಳನ್ನು ನವರಾತ್ರಿ ಮಾತ್ರವಲ್ಲದೆ ಪ್ರತಿ ಶುಕ್ರವಾರವೂ ಕೃಷ್ಣಮಠದಲ್ಲಿ ಕಾಣಬಹುದು.