Asianet Suvarna News Asianet Suvarna News

ನರಗುಂದ: ದೀಪಾವಳಿ ಹಬ್ಬಕ್ಕೆ ಬಂದಿದೆ ಪರಿಸರ ಸ್ನೇಹಿ ಗೋ ಹಣತೆ..!

ಸಾಲು ಸಾಲು ದೀಪ ಬೆಳಗಲು ಗೋ ಹಣತೆಗಳು, ಗೋಮಯದಿಂದ ತಯಾರಿಸಿದ ಪಣತೆಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ

Diya Made from Cow Dung at Nargund in Gadag grg
Author
First Published Oct 25, 2022, 1:49 PM IST | Last Updated Oct 25, 2022, 1:49 PM IST

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಅ.25):  ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಜನರನ್ನು ಬದಲಾವಣೆಯತ್ತ ಸಾಗಿಸುವ ಹಿಂದೂ ಸಂಸ್ಕೃತಿಯಂತೆ ಕಾರ್ತಿಕ ಮಾಸದಲ್ಲಿನ ದೀಪಗಳ ಹಬ್ಬವೇ ದೀಪಾವಳಿಯಾಗಿದೆ. ದೀಪಾವಳಿ ಪಾಡ್ಯದ ಮೊದಲ ಐದು ದಿನಗಳಿಂದ ಪ್ರತಿನಿತ್ಯ ಪ್ರತಿ ಹಿಂದೂಗಳ ಮನೆ ಬಾಗಿಲಲ್ಲಿ ಸಾಲುಸಾಲು ದೀಪದ ಹಣತೆಗಳನ್ನಿಟ್ಟು ದೀಪ ಬೆಳಗಿಸಲಾಗುತ್ತದೆ. ದೀಪದ ಹಣತೆಗಳನ್ನು ಮಣ್ಣು, ಪಿಒಪಿ, ಸ್ಟೀಲ್‌, ಕಬ್ಬಿಣ, ಬೆಳ್ಳಿ, ಹಿತ್ತಾಳೆ ಮುಂತಾದ ಲೋಹಗಳಿಂದ ತಯಾರಿಸಲಾಗಿರುತ್ತದೆ. ಆದರೆ, ತಾಲೂಕಿನ ಸಂಕದಾಳ ಗ್ರಾಮದ ಗೋ ಪ್ರೇಮಿ ಆಗಿರುವ ಸಾವಯವ ಕೃಷಿಕ ರುದ್ರಗೌಡ ಲಿಂಗನಗೌಡ್ರ ಇವರು ತಾವು ಸಾಕಿರುವ ದೇಸಿಯ ಹಸುಗಳ ಗೋಮಯದಿಂದ (ಸಗಣಿ) ದೀಪದ ಹಣತೆ, ಗೋಡೆಯ ಮೇಲಿನ ಅಲಂಕಾರಿಕ ವಸ್ತುಗಳಾದ ಕೀ ಚೈನ್‌, ಗಣಪತಿ, ರಾಧೆ- ಕೃಷ್ಣೆಯರ ಭಾವಚಿತ್ರದ ಫಲಕ ಮುಂತಾದವುಗಳನ್ನು ತಯಾರಿಸಿರುತ್ತಾರೆ.

ವಿವಿಧ ಅಲಂಕಾರ:

ದೇಸಿಯ ಹಸುವಿನ ಗೋಮಯ ಪುಡಿ, ಹಾಲು, ಮೊಸರು, ತುಪ್ಪ, ಗೋವರ್ಗಂ(ಜಿಗುಟು ಪುಡಿ) ಇವುಗಳ ಮಿಶ್ರಣದಿಂದ ಹಣತೆಗಳನ್ನು ತಯಾರಿಸಿದ್ದಾರೆ. ಹಣತೆಗಳನ್ನು ವಿವಿಧ ಆಕಾರಗಳಲ್ಲಿ ತಯಾರಿಸಲಾಗಿದ್ದು, ದೀಪ ಹಚ್ಚುವ ಮೊದಲು ಈ ಹಣತೆಗಳನ್ನು 20 ಸೆಕೆಂಡ್‌ ನೀರಿನಲ್ಲಿಟ್ಟು ಹೊರತೆಗದು ಎಣ್ಣೆಹಾಕಿದರೆ, ಹಣತೆ ಎಣ್ಣೆ ಹೀರಿಕೊಳ್ಳುವುದಿಲ್ಲ. ಈ ಹಣತೆಗಳು ಎರಡು ಬಾರಿ ಉಪಯೋಗಕ್ಕೆ ಬರುತ್ತವೆ. ಇವುಗಳ ಬಳಕೆಯಿಂದ ಬ್ಯಾಕ್ಟೀರಿಯಾಗಳು ನಾಶಗೊಳ್ಳುತ್ತವೆ. ರೋಗರುಜಿನಗಳು ಹರಡುವುದಿಲ್ಲ. ಅಗ್ನಿಹೋತ್ರದಿಂದ ಸಿಗುವ ಶ್ರೇಷ್ಠತೆ ಹಣತೆಗಳ ಸುಡುವ ಹೊಗೆಯಿಂದಲೂ ಸಿಗುತ್ತದೆ.

Ramanagara: ಪರಿಸರ ಸ್ನೇಹಿ ಹಣತೆಗೆ ಭಾರೀ ಡಿಮ್ಯಾಂಡ್

ಮೂತ್ರದಿಂದ ಆದಾಯ:

ಗೋವು ಭಾರತೀಯರ ಪೂಜ್ಯನೀಯ ಮಾತೆಯಾಗಿದ್ದಾಳೆ. ಗೋ ಸಂತತಿ ಉಳಿವಿಗಾಗಿ ಅವುಗಳು ಬರಡು ದನವೆಂದು ಬಾವಿಸದೇ, ಗೋವಿನಿಂದ ಕೇವಲ ಹಾಲಿನ ಆದಾಯವನ್ನು ನೋಡದೇ, ಹಾಲಿನ ಆದಾಯಕ್ಕಿಂತ ಅದರಿಂದ ಸಿಗುವ ಗೋಮಯ, ಮೂತ್ರ ಇವುಗಳಿಂದಲೂ ಸಾಕಷ್ಟುಆದಾಯನ್ನು ಪಡೆಯಬಹುದು. ಗೋ ಉತ್ಪನ್ನಗಳನ್ನು ಮಾರಾಟ ಮಾಡಲಿಕ್ಕೆ ಆಗದಿದ್ದರೂ, ಸ್ವಂತಕ್ಕೆ ಮನೆಯ ಉಪಯೋಗಕಷ್ಟಾದರೂ ಬಳಕೆ ಮಾಡಲು ತಯಾರಿಸಿಕೊಂಡರೆ, ಎಲ್ಲ ರೀತಿಯ ಅನುಕೂಲತೆ ಸಿಗುತ್ತದೆ.

ಕನ್ನೇರಿ ಮಠದ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ನಾನು ಸಾವಯವ ಕೃಷಿ ಹಾಗೂ ಗೋ ಉತ್ಪನ್ನಗಳನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹಲ್ಲುಪುಡಿ, ದೂಪಬತ್ತಿ, ಸೊಳ್ಳೆ ಬತ್ತಿ, ಗೋಮಯ ಸ್ನಾನದ ಸಾಬೂನು, ಇನ್ನಿತರೆ ವಸ್ತುಗಳನ್ನು ತಯಾರಿಸಿ, ಕಡಿಮೆ ದರದಲ್ಲಿ ನವಂಬರ್‌ ತಿಂಗಳೊಳಗಾಗಿ ನೀಡಲಿದ್ದೇನೆ.

ಹಣತೆಗೆ ಚಂದದ ಚಿತ್ತಾರ, ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!

ಹೆಚ್ಚು ಬೇಡಿಕೆ:

ಪ್ರಸ್ತುತದಲ್ಲಿ ದೀಪಾವಳಿ ಹಬ್ಬಕ್ಕೆ ಗೋಮಯ ಹಣತೆಗಳನ್ನು ತಯಾರಿಸುತ್ತಿದ್ದೇನೆ. 6-7 ಕೆ.ಜಿ ಹಸಿ ಸಗಣಿ ಒಣಗಿಸಿ ಪುಡಿ ಮಾಡಿದ ನಂತರ 1 ಕೆಜಿ ಒಣಪುಡಿ ಸಿಗುತ್ತದೆ. 100 ಗ್ರಾಂನಂತೆ ಹಾಲು, ಮೊಸರು, ತುಪ್ಪ, ಗೋವರ್ಗಂ ಮಿಶ್ರಣ ಮಾಡಿ 150 ಹಣತೆಗಳನ್ನು ತಯಾರಿಸಬಹುದು. ಈಗಾಗಲೇ ಸಾವಿರದಷ್ಟುಹಣತೆಗಳು ಸಿದ್ಧಗೊಂಡಿವೆ. 1 ಹಣತೆಗೆ .5 ಕ್ಕೆ ಮಾರಾಟ ಮಾಡಲಾಗುತ್ತದೆ. ಮೇಲಾಗಿ ಈ ಪಣಿತೆಗಳಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ.

ದೇಶಿಯ ಗೋ ತಳಿಗಳ ಸ್ವದೇಶಿ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಮತ್ತು ವಾತಾವರಣಕ್ಕೆ ಧನಾತ್ಮಕ ಅನುಕೂಲತೆ ಸಿಗುತ್ತದೆ. ಜೊತೆಗೆ ಗೋಸಂತತಿ ಉಳಿವಿಗೆ ಪ್ರೋತ್ಸಾಹವು ಸಿಕ್ಕಂತಾಗುತ್ತದೆ. ಗೋ ಉತ್ಪನ್ನಗಳ ಬಳಕೆಯಿಂದ ಗೋ ಸೇವೆ ಮಾಡಿದಷ್ಟುಶ್ರೇಷ್ಠ ಗೌರವ ಸಿಗುತ್ತದೆ ಅಂತ ಗೋ ಪ್ರೇಮಿ ರುದ್ರಗೌಡ ಲಿಂಗನಗೌಡ್ರ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios