Asianet Suvarna News Asianet Suvarna News

ದೀಪಾವಳಿ ಈ ಶುಭ ಸಂದರ್ಭದಲ್ಲಿ ಎಲ್ಲರ ರಾಶಿ ಭವಿಷ್ಯ ಹೇಗಿದೆ?

ಅಬ್ಬಾ ವ್ಯಾಧಿ ಲಕ್ಷ್ಮಿಯ ಅಬ್ಬರ ಹೆಚ್ಚಾಗಿದೆ. ಮನೆಯಿಂದ ಹೊರಗೆ ಕಾಲಿಡುವುದೇ ದೊಡ್ಡ ತಲೆ ನೋವು. ದೀಪಗಳ ಹಬ್ಬ ಕಳೆದ ನಂತರವಾದರೂ ಎಲ್ಲವೂ ಸರಿ ಹೋಗುತ್ತಾರೆ. ಯಾವ ರಾಶಿಯ ಭವಿಷ್ಯ, ಹೇಗಿದೆ?

Deepavali bhavishya of sun signs who will be lucky
Author
Bengaluru, First Published Nov 14, 2020, 7:06 PM IST

ಶ್ರೀಕಂಠ ಶಾಸ್ತ್ರಿ, ಸುವರ್ಣ ನ್ಯೂಸ್

ದೀಪಾವಳಿ ನಿಮ್ಮೆಲ್ಲರಿಗೆ ತಿಳಿದಿರುವಂತೆ ಬೆಳಕಿನ ಹಬ್ಬ. ಜ್ಞಾನವನ್ನು ಪ್ರತಿನಿಧಿಸುವ ಹಬ್ಬ. ಶಾಸ್ತ್ರದಲ್ಲಿ 'ಹೃದಯ ಕಮಲ ಮಧ್ಯೆ ದೀಪವದ್ವೇದಸಾರಂ' ಎಂಬ ಮಾತನ್ನು ಹೇಳುತ್ತಾರೆ. ಹೃದಯ ಕಮಲ ಮಧ್ಯದಲ್ಲಿರುವ ದೀಪ ಸದೃಶವಾದ ವೇದಸಾರ ರೂಪಿ ಪರಬ್ರಹ್ಮನನ್ನು ನೆನೆಪಿಸುವುದೇ ಈ ದೀಪಾವಳಿಯ ಪ್ರಧಾನ ಅಂಶ. ಆ ಬೆಳಕು ಅಗಾಧ ಅಸಾಧ್ಯ ಶಕ್ತಿಯಿಂದ ಕೂಡಿದೆ. 'ಜ್ಯೋತಿಷಾಮಪಿ ತಜ್ಜ್ಯೋತಿ ತಮಸ: ಪರಮೋಚ್ಚತೇ' ಎನ್ನುವ ಹಾಗೇ ಅದು ಜ್ಯೋತಿಗಳಿಗೆ ಜ್ಯೋತಿಯಾಗಿ ಕತ್ತಲನ್ನು ದಾಟಿಸಲಿ ಎಂಬ ಪ್ರಾರ್ಥನೆ ಮಾಡುತ್ತಾ ಆ ದಿವ್ಯ ಜ್ಯೋತಿಯನ್ನು ಸ್ತುತಿಸಬೇಕು, ಆರಾಧಿಸಬೇಕು. ಆ ಪರಂಜ್ಯೋತಿ ತಮ್ಮೆಲ್ಲರ ಬದುಕಲ್ಲಿರುವ ಅಜ್ಞಾನ ಹಾಗೂ ಸಂಕಷ್ಟವೆಂಬ ಅಂಧಕಾರಗಳನ್ನು ಅಳಿಸಲಿ ಹಾಕಲಿ, ಹರಡಿರುವ ವಿಷ ಸೋಂಕನ್ನು ಸಂಪೂರ್ಣ ಶಮನಗೊಳಿಸಿ ಸರ್ವರಲ್ಲೂ ಸಂಜೀವಿನಿ ಶಕ್ತಿಯನ್ನು ವೃದ್ಧಿಸಲಿ ಎಂದು ಪ್ರಾರ್ಥಿಸುತ್ತೇನೆ. 
 
ಈ ಕಾರ್ತೀಕ ದೀಪೋತ್ಸವ ಪರ್ವಕಾಲದಲ್ಲಿ ನಮ್ಮ ಕರ್ಮ ಫಲಗಳನ್ನೇ ಆಧಾರವಾಗಿಟ್ಟುಕೊಂಡು ನಮ್ಮನ್ನಾಳುತ್ತಿರುವ ನವ ಗ್ರಹಗಳು ಯಾವ ರಾಶಿಯವರಿಗೆ ಯಾವ ಫಲವನ್ನು ಸೂಚಿಸುತ್ತಿವೆ ಎಂಬ ಸ್ಥೂಲ ಚಿಂತನೆ ಇಲ್ಲಿದೆ. ಎಲ್ಲ ರಾಶಿಯವರಿಗೂ ಶುಭಾಶುಭ ಮಿಶ್ರಫಲಗಳು ಇದ್ದೇ ಇರುತ್ತವೆ. ಕಂಗಾಲಾಗದೆ ಸಾವಧಾನ ಚಿತ್ತರಾಗಿ ಸೂಚಿಸಿರುವ ಪರಿಹಾರ ಮಾಡಿಕೊಳ್ಳಿ.  

ಮೇಷ - 
ನಿಮ್ಮ ರಾಶ್ಯಾಧಿಪತಿ ಅಂಗಾರಕ. ಅಂಗಾನಿ ಆರಯತೀತಿ ಅಂಗಾರಕ: ಅಂತಾರೆ. ಅಂಗಾಂಗಗಳನ್ನು ಅರೆದು ಹಾಕುವವನೇ ಅಂಗಾರಕ. ಇಂಥ ಅಂಗಾರಕ ವ್ಯಯ ಸ್ಥಾನದಲ್ಲಿದ್ದಾನೆ. ಹೀಗಾಗಿ ಸ್ವಲ್ಪ ದೇಹದ ಬಗ್ಗೆ, ಶರೀರರದ ಬಗ್ಗೆ ಕಾಳಜಿವಹಿಸಿ. ಅದರ ಹೊರತಾಗಿ ಈ ದೀಪಾವಳಿ ನಿಮ್ಮ ಬದುಕಿಗೆ ಬೆಳಕಿನ ಜೊತೆಗೆ ಅದೃಷ್ಟವನ್ನೂ ತರಲಿದೆ. ಹೇಗೆಂದರೆ ಧನಾಧಿಪತಿಯೂ ಸಪ್ತಮಾಧಿಪತಿಯೂ ಆದ ಶುಕ್ರ ಸ್ವಕ್ಷೇತ್ರಕ್ಕೆ ಬರುವುದರಿಂದ ಹೆಂಡತಿ ಮೂಲಕ ಹಣ-ಅದೃಷ್ಟ ಒಲಿದು ಬರಲಿದೆ. ಪ್ರೀತಿ ಪಾತ್ರರು ಹತ್ತಿರಾಗುತ್ತಾರೆ. ಪ್ರೀತಿಯಲ್ಲಿ ಭರವಸೆಯ ಬೆಳಕು ಮೂಡುತ್ತದೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಆದರೆ ಇದೇ ನವೆಂಬರ್ 20ರ ನಂತರ ಭಾಗ್ಯದ ಗುರು ಕರ್ಮಸ್ಥಳದಲ್ಲಿ ನೀಚ ಸ್ಥಾನವನ್ನು ಪ್ರವೇಶಿಸುವುದರಿಂದ ಕೊಂಚ ಫಲವ್ಯಯವಾಗುವ ಸಾಧ್ಯತೆಯೂ ಇದೆ ಎಚ್ಚರವಾಗಿರಬೇಕು. ನಿಮ್ಮಲ್ಲಿ  ಧರ್ಮಾಸಕ್ತಿ ಕಡಿಮೆಯಾಗಲಿದೆ, ತಂದೆ-ಮಕ್ಕಳ ನಡುವೆ ಸ್ವಲ್ಪ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಗುರು ಗ್ರಹವು ಉದ್ಯೋಗ ಸ್ಥಾನವನ್ನು ಪ್ರವೇಶಿಸುವುದರಿಂದ ಹಾಗೂ ಶನಿ ಇರುವುದರಿಂದ ಗ್ರಮಾಧಿಕಾರಿಗಳಿಗೆ ಕೆಲಸಗಳಲ್ಲಿ ಹಿನ್ನಡೆ, ಕ್ಷೌರಿಕರಿಗೆ ಕೆಲಸಗಳಲ್ಲಿ ವಿಳಂಬ, ಸ್ವಂತ ಉದ್ಯೋಗಿಗಳಿಗೆ ಗೊಂದಲದವಾತಾವರಣ. ಹೀಗೆ ಸ್ವಲ್ಪ ಅತಂತ್ರ ಸ್ಥಿತಿ ಏರ್ಪಾಡಾಗಲಿದೆ. ಆದರೆ ಹೆದರಬೇಕಿಲ್ಲ ಡಿಸೆಂಬರ್ 24 ರ ನಂತರ ರಾಶ್ಯಾಧಿಪತಿಯಾದ ಕುಜ ಗ್ರಹ ನಿಮ್ಮ ರಾಶಿಗೆ ಪ್ರವೇಶ ಮಾಡುವುದರಿಂದ ಕುಜನಿಗೆ ಸ್ಥಾನ ಬಲ ಪ್ರಾಪ್ತಿಯಾಗಲಿದೆ. ಆಗ ದೇಹಬಲವನ್ನೂ ಹಿಡಿದ ಕಾರ್ಯದಲ್ಲಿ ಛಲವನ್ನೂ ಸೂಚಿಸಲಿದ್ದಾನೆ. ಉಳಿದ ಗ್ರಹಗಳು ಕೂಡ ಸ್ಥಾನ ಬಲ - ಪಕ್ಷಬಲ ಪಡೆದಾಗ ಶುಭಾಶುಭ ಮಿಶ್ರ ಫಲ ಪ್ರಾಪ್ತವಾಗಲಿದೆ. ಪ್ರಧಾನ ವಾಗಿ ಉದ್ಯೋಗಿಗಳು ಕಾರ್ಯ ಕ್ಷೇತ್ರದಲ್ಲಿ ಎಚ್ಚರವಾಗಿರಿಬೇಕು, ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು, ಪ್ರಯಾಣಿಕರು ಜಾಗ್ರತೆ ವಹಿಸಬೇಕು.
ಪರಿಹಾರ - ಕಡಲೆ ದಾನ ಹಾಗೂ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಬೇಕು
ಅದೃಷ್ಟ ಸಂಖ್ಯೆ 1, 5 ಹಾಗೂ 9
ಬಣ್ಣ - ಹವಳದ ಬಣ್ಣ
ರತ್ನ - ಹವಳ, ಮಾಣಿಕ್ಯ

ಗೋವಿನಲ್ಲೇಕೆ 33 ಸಾವಿರ ಕೋಟಿ ದೇವತೆಗಳಿವೆ?

ವೃಷಭ 
- ಸೌಮ್ಯ ರಾಶಿ ಎಂದೇ ಕರೆಯಲ್ಪಡುವ ಈ ರಾಶಿಯವರಿಗೆ  ದೀಪಾವಳಿ ಬಂಗಾರದ ಫಲವನ್ನು  ಕೊಡಲಿದೆ. ರಾಶ್ಯಾಧಿಪತಿ ದೀಪಾವಳಿಯಂದೇ ನೀಚ ಸ್ಥಾನದಿಂದ ಹೊರಬರಲಿರುವುದರಿಂದ ಅನುಕೂಲ ಸಂದರ್ಭಗಳು ನಿರ್ಮಾಣವಾಗಲಿವೆ. ಶತ್ರುಗಳು ದೂರಾಗಿ,  ಸಾಲಗಳು ಸಮಾಪ್ತಿಯಾಗಿ ಮುಖದಲ್ಲಿ ನಗು ಅರಳಲಿದೆ. ಬಯಸಿದವರು ಹತ್ತಿರಾಗುತ್ತಾರೆ. ನಂಬಿಕೆ ಮೂಡಿ ನಿಂದೆಗಳು ದೂರಾಗುತ್ತವೆ. ಪ್ರಧಾನವಾಗಿ ಇದೇ ನವೆಂಬರ್ 20 ರ ನಂತರ ಗುರು ನೀಚ ಸ್ಥಾನವನ್ನು ಪ್ರವೇಶಿಸಲಿದ್ದು ನಿಮಗೆ ಶುಭವನ್ನೇ ಕೊಡುತ್ತಾನೆ. ಆತಂಕ ಬೇಡ.  ಅಲ್ಲಿ ಗುರು ನೀಚ ನಾದರೂ ಗುರು ಅಷ್ಟಾಗಿ ಬಾಧಿಸಲಾರ. ಶನಿ-ಗುರು ಗ್ರಹಗಳು ಸೇರಿ ಮಂಗಳಕಾರ್ಯಗಳನ್ನು ಮಾಡಿಸುತ್ತಾರೆ. ಧರ್ಮ ಶ್ರದ್ಧೆ ಮೂಡಲಿದೆ, ಹಿರಿಯರಿಂದ ಸಹಕಾರಗಳು, ಉದ್ಯೋಗಿಗಳಿಗೆ ಅನುಕೂಲ ವಾತಾವರಣಗಳೂ ನಿರ್ಮಾಣವಾಗಲಿವೆ. ಮಕ್ಕಳ ಸಹಕಾರ ಇರಲಿದೆ. ಹತ್ತಿರದ ಗುರು ಮಂದಿರಕ್ಕೆ ಹೋಗಿ ಕಡಲೆ ದಾನ ಮಾಡುವುದರಿಂದ ಕಷ್ಟಗಳು ದೂರಾಗಲಿವೆ. ಸ್ತ್ರೀಯರಿಗೆ ಬಲ ವೃದ್ಧಿಯಾಗಲಿದೆ. ವಾಹನ-ವಸ್ತ್ರ-ಹೈನು-ಹಾಲು ಇತ್ಯಾದಿ ಭೋಗ ವಸ್ತುಗಳ ವ್ಯಾಪಾರಿಗಳಿಗೆ ಅದೃಷ್ಟ ಒಲಿಯಲಿದೆ. ಗಂಡ-ಹೆಂಡಿರಲ್ಲಿ ಪರಸ್ಪರ ಸಹಕಾರ ಭಾವ ವೃದ್ಧಿಯಾಗಲಿದೆ.   
ಪರಿಹಾರ - ಗುರು ಪ್ರಾರ್ಥನೆ, ದುರ್ಗಾ ಪೂಜೆ, ಸುವಾಸಿನೀ ಪೂಜೆ ಮಾಡಿ, ಮಂಗಲ ದ್ರವ್ಯ ದಾನ ಮಾಡಿ.
ಅದೃಷ್ಟ ಸಂಖ್ಯೆ 5, ಹಾಗೂ 6
ಬಣ್ಣ - ಬಿಳಿ ಬಣ್ಣ
ರತ್ನ - ವಜ್ರ ಹಾಗೂ ನೀಲ


ಮಿಥುನ 
- ದ್ವಿಸ್ವಭಾವ ರಾಶಿ ಎಂದು ಕರೆಯಲ್ಪಡುವ ಈ ರಾಶಿಯವರಿಗೆ ದೀಪಾವಳಿ ಕೊಂಚ ಮಿಶ್ರಫಲವನ್ನು ಕರುಣಿಸಲಿದೆ. ಮೊದಲನೆಯದಾಗಿ ಪಂಚಮಾಧಿಪತಿ ಶುಕ್ರ ಸ್ವಕ್ಷೇತ್ರಕ್ಕೆ  ಬರುವುದರಿಂದ ಮಕ್ಕಳಿಂದ ಸಹಕಾರ, ಮನಸ್ಸಿಗೆ ಸಮಾಧಾನ, ಪ್ರತಿಭಾ ಶಕ್ತಿಯಿಂದ ಕಾರ್ಯ ಸಾಧನೆ ಇಂಥ ಉತ್ತಮ ಫಲಗಳನ್ನು ಕಾಣುತ್ತೀರಿ. ಕೆಲವರಿಗೆ ಸಂತಾನ ಸೂಚನೆಯಂಥ ಶುಭ ಫಲಗಳೂ ಇದ್ದಾವೆ. ಆದರೆ ಕೊಂಚ ಅಸಮಧಾನದ ಫಲಗಳನ್ನೂ ತರಲಿದೆ ಈ ದೀಪಾವಳಿ. ಪ್ರಧಾನವಾಗಿ  ನಿಮ್ಮ ರಾಶಿಯಿಂದ ಗುರು ಗ್ರಹ ಇದೇ 20 ರಿಂದ ಅಷ್ಟಮ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕರ್ಮೇಶೇ ರಂಧ್ರ ಭಾವಸ್ಥೆ ಕರ್ಮಹೀನೋ ಭವೇನ್ನರ: ಎನ್ನುತ್ತದೆ ಶಾಸ್ತ್ರ. ಕರ್ಮಾಧಿಪತಿ ನಷ್ಟ ಸ್ಥಾನವನ್ನು ಪ್ರವೇಶಿಸುವುದರಿಂದ ಕೊಂಚ ಉದ್ಯೋಗದಲ್ಲಿ ತೊಡಕುಗಳಾಗುವ ಸಾಧ್ಯತೆ ಇದೆ. ಕೆಲವರಿಗೆ ಸ್ಥಾನ ಚ್ಯತಿಯಾಗುವ ಸಾಧ್ಯತೆಯನ್ನು ತೋರಿಸುತ್ತಿದೆ. ಹೀಗಾಗಿ ಉದ್ಯೋಗಿಗಳು ಬಹಳ ಎಚ್ಚರವಾಗಿರಬೇಕು. ದಾಂಪತ್ಯದಲ್ಲಿ ಕೊಂಚ ನಿರಾಶೆದಾಯಕ ಫಲವಿದೆ. ಸ್ತ್ರೀ-ಪುರುಷರಲ್ಲಿ ಅಸಮಧಾನ ಮೂಡಲಿದೆ. ಸಾಂಬ ಸದಾಶಿವರ ಪ್ರಾರ್ಥನೆ ಹಾಗೂ ಗುರು ಸ್ತುತಿ ಹೇಳಿಕೊಳ್ಳುವುದು ಉತ್ತಮ. ಡಿಸೆಂಬರ್ ನಂತರ ಕೊಂಚ ಪರಿಸ್ಥಿತಿ ಸುಧಾರಿಸುತ್ತದೆ. ಲಾಭ ಭಾವಕ್ಕೆ ಕುಜ ಗ್ರಹ ಪ್ರವೇಶಿಸುವುದರಿಂದ ಲಾಭೆಶೇ ಲಾಭ ಭಾವಸ್ಥೆ ಲಾಭ: ಸರ್ವೇಷು ಕರ್ಮಸು ಎಂಬ ಶಾಸ್ತ್ರಾಧಾರದಿಂದ ಎಲ್ಲ ಕೆಲಸಗಳನ್ನೂ ಲಾಭವನ್ನು ಕಾಣುವ ದಿಗಳು ಇದ್ದಾವೆ. ಹೆದರದಿರಿ. ವಿದ್ಯಾರ್ಥಿಗಳ ಶ್ರದ್ಧೆ ಹೆಚ್ಚಬೇಕು. ದ್ವಂದ್ವ ಮನಸ್ಸನ್ನು ಬಿಟ್ಟು ಸ್ಥಿರ ಚಿತ್ತರಾಗಿ ಓದಿ. ಮುಖ್ಯವಾಗಿ ನಿಮ್ಮ ರಾಶಿಯ ಅಧಿಪತಿ ಬುಧ. ಶಶಿತನಯ: ಫಲದಸ್ತು ಸಾರ್ವಕಾಲಂ  ಎಂಬ ಶಾಸ್ತ್ರವಾಣಿಯಂತೆ ಬುಧ ಸರ್ವಕಾಲಕ್ಕೂ ಫಲದಾಯಕನಾಗಿರುವುದರಿಂದ ಹೆಚ್ಚು ಶುಭಫಲಗಳಿದ್ದಾವೆ ಹೆದರುವ ಅವಶ್ಯಕತೆ ಇಲ್ಲ. ಗುರು ಪ್ರಾರ್ಥನೆ ಮಾಡಿ. ಖಂಡಿತಾ ಅನುಕೂಲವಾಗಲಿದೆ.
ಪರಿಹಾರ - ಶಂಕರಾಚಾರ್ಯರ ಪ್ರಾರ್ಥನೆ,  ದತ್ತಾತ್ರೇಯರ ಪ್ರಾರ್ಥನೆ ಮಾಡಿ. ಅಥವಾ ನೀವು ನಂಬುವ ಗುರು ಮಂದಿರದಲ್ಲಿ ಕಡಲೆ ಎಣ್ಣೆಯಿಂದ ದೀಪ ಹಚ್ಚಿ.
ಅದೃಷ್ಟ ಸಂಖ್ಯೆ - 3 ಹಾಗೂ 5
ಬಣ್ಣ - ಹಸಿರು ಬಣ್ಣ
ರತ್ನ - ಪಚ್ಚೆ

ಕರ್ಕಟಕ 
ಪಕ್ಷೋದ್ಭವಂ ಹಿಮಕರಸ್ಯ ವಿಶೇಷ ಮಾಹು: ಎಂಬ ಶಾಸ್ತ್ರವಾಣಿಯಂತೆ ಚಂದ್ರನಿಗೆ ಪಕ್ಷದ ಬಲವಿದ್ದಾಗ, ಹಾಗೂ ದಶಾ-ಭುಕ್ತಿ ಕಾಲಗಳಲ್ಲಿ ಶುಭಫಲವನ್ನು ಕೊಟ್ಟೇ ಕೊಡುತ್ತಾನೆ. ಸಾಮಾನ್ಯವಾಗಿ ಮೃದು ಸ್ವಭಾವದವರಾದ ನಿಮಗೆ ಈ ದೀಪಾವಳಿ ಮಂಗಳಕರವಾಗಿರಲಿದೆ. ವಿವಾಹ ಕಾರ್ಯಗಳು ನೆರವೇರಲಿವೆ. ಸ್ತ್ರೀ-ಪುರುಷರಲ್ಲಿ ಅನುರಾಗ ಅರಳಲಿದೆ. ಅಲ್ಲದೇ ಡಿಸೆಂಬರ್ ನಂತರ ಉದ್ಯೋಗ ಭದ್ರವಾಗಲಿದೆ, ಹೊಸ ಕೆಲಸ ಸಿಗಲಿದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ಸಿಗಲಿದೆ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಹಾಗೂ ಹೋಟೆಲ್ ಉದ್ಯಮದವರಿಗೆ ವಿಶೇಷ ಫಲಗಳಿದ್ದಾವೆ. ವಿಶೇಷವಾಗಿ  ನದೀ ತೀರಗಳಲ್ಲಿ ಕೆಲಸ ಮಾಡುವವರಿಗೆ, ಮೀನುಗಾರರಿಗೆ, ಕೃಷಿಕರಿಗೆ ಎಲ್ಲರಿಗೂ ಶುಭಫಲವಿದೆ. ಪ್ರವಾಹದಲ್ಲಿ ನಲುಗಿದ್ದವರಿಗೂ ಕೊಂಚ ಚೇತರಿಕೆಯಾಗಲಿದೆ ಹೆದರಬೇಡಿ.  ಮುಖ್ಯವಾಗಿ ಸುಖಾಧಿಪತಿ ಶುಕ್ರ ಸುಖ ಸ್ಥಾನ ಪ್ರವೇಶಿಸುವುದರಿಂದ ವಾಹನ-ಗೃಹ ಸೌಖ್ಯಗಳು ಸಮೃದ್ಧಿಯಾಗಲಿವೆ. ಹೊಸ ಮನೆ ಕಟ್ಟುವ ಯೋಜನೆ ಪೂರ್ಣಗೊಳ್ಳಿದೆ. ಆದರೆ ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ಸಂದರ್ಭಗಳನ್ನು  ಕೊಂಚ ಸಮಾಧಾನವಾಗಿ ಸ್ವೀಕರಿಸಿ. ವೃಥಾ ಕೋಪಕ್ಕೆ ತುತ್ತಾಗಬೇಡಿ. ಆರೋಗ್ಯದ ಕಡೆ ಗಮನಕೊಡಿ. 
ಪರಿಹಾರ - ಜಲ ದುರ್ಗೆಯ ಪ್ರಾರ್ಥನೆ ಮಾಡಿ, ಕಟೀಲು ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ
ಅದೃಷ್ಟ ಸಂಖ್ಯೆ - 2 ಹಾಗೂ 9
ಬಣ್ಣ - ಬಿಳಿ ಹಾಗೂ ಹಳದಿ ಬಣ್ಣ
ರತ್ನ - ಮುತ್ತು

ಲಕ್ಷ್ಮಿ ವಾಹನವೇಕೆ ಗೂಬೆ?

ಸಿಂಹ
- ರಾಶ್ಯಾಧಿಪತಿ ಸೂರ್ಯನಾಗಿದ್ದಾನೆ. ಕಾಲ ಪುರುಷನ ಆತ್ಮ ಶಕ್ತಿಯಾಗಿರುವ ಸೂರ್ಯ ನಮ್ಮೆಲ್ಲರ ಆತ್ಮ ಕಾರಕನೂ ಹೌದು. ಅಂಥ ಸೂರ್ಯ ಇಷ್ಟು ದಿನಗಳ ಕಾಲ ನೀಚ ಸ್ಥಾನದಲ್ಲಿದ್ದು ಮಂಕಾಗಿದ್ದ, ಕಪ್ಪಾಗಿದ್ದ. ಅಂಥಾ ಸೂರ್ಯ ಈಗ ನಿಜಕ್ಕೂ  ಕತ್ತಲಿನಿಂದ ಬೆಳಕಿಗೆ ಬಂದಿದ್ದಾನೆ, ನಿಮ್ಮ ಬದುಕಿಗೂ ಬೆಳಕನ್ನು ಚೆಲ್ಲಲ್ಲಿದ್ದಾನೆ. ಸೂರ್ಯನಿಗೆ ಕೊಂಚ ಬಲ ಬಂದಿದೆ. ಹೀಗಾಗಿ ಸಹೋದರರ ಸಹಕಾರ, ಧೈರ್ಯ, ಆತ್ಮ ಸ್ಥೈರ್ಯಗಳು ಮೂಡಲಿವೆ. ಹೊಸ ಯೋಜನೆಗಳಿಗೆ ಸಹಕಾರ ದೊರೆಯಲಿದೆ. ಕರ್ಮಾಧಿಪತಿ ಶುಕ್ರನೂ ಬಲಿಷ್ಠನಾಗಿರುವುದರಿಂದ ಉದ್ಯೋಗದಲ್ಲಿ ಭದ್ರತೆ, ಹೊಸ ಉದ್ಯೋಗದ ಅವಕಾಶಗಳನ್ನು ಕಾಣಲಿದ್ದೀರಿ. ಈ ಎಲ್ಲ  ಸತ್ಫಲಗಳ ಜೊತೆ ಕೊಂಚ ಅಸಮಧಾನವೂ ಇದೆ. ಇದೇ ನವೆಂಬರ್ 20 ರ ನಂತರ ಗುರು ನೀಚ ಸ್ಥಾನಕ್ಕೆ ಹೋಗುವುದರಿಂದ  ಮಕ್ಕಳು ಶತ್ರುಗಳಾಗುವ ಸಾಧ್ಯತೆ ಇದೆ, ಮನಸ್ಸು ಮಂಕಾಗುತ್ತದೆ. ಹಿರಿಯರ ಸಲುವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸೇವಕರ ಸಲುವಾಗಿ ಹಣ ವ್ಯಯ. ಹೀಗೆ ಸ್ವಲ್ಪ ಅಸಮಧಾನದ ಫಲಗಳಿದ್ದಾವೆ. ಆದರೆ ಡಿಸೆಂಬರ್ ನಂತರ ಭಾಗ್ಯಾಧಿಪತಿ ಭಾಗ್ಯ ಸ್ಥಾನಕ್ಕೆ ಬರುವುದರಿಂದ ಭಾಗ್ಯೇಶೇ ಭಾಗ್ಯ ಭಾವಸ್ಥೇ ಬಹುಭಾಗ್ಯ ಸಮನ್ವಿತ: ಎಂಬ ಮಾತಿನಂತೆ ಎಲ್ಲ ಬಗೆಯ ಸಮಸ್ಯೆಗಳೂ ಕರಗಿ ಸಮಾಧಾನ ಸಿದ್ಧಿಸುತ್ತದೆ. ಅಲ್ಲಿಯ ವರೆಗೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳು ವಿಷಯಾಸಕ್ತರಾಗುವ ಸಾಧ್ಯತೆ ಇದೆ. ಮನಸ್ಸು ಅನ್ಯರಲ್ಲಿ ಅನುರಕ್ತವಾಗಲಿದೆ. ಬೇಡದ್ದು ಕಾಡಲಿದೆ. ಹೀಗಾಗಿ ಎಚ್ಚರವಾಗಿರಬೇಕು, ತಂದೆ-ತಾಯಿಗಳಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಎಚ್ಚರಿಕೆ ಬೇಕು. ರವಿ ಕೇತುಭ್ಯಾಂ ಶಿವಭಕ್ತಿ: ಎಂಬ ವಚನದಂತೆ ಶಿವನ ಅನುಗ್ರಹ ಬೇಕು. 
ಪರಿಹಾರ - ಈಶ್ವರ ದೇವಸ್ಥಾನದಲ್ಲಿ ಭಸ್ಮಾರ್ಚನೆ ಮಾಡಿಸಿ
ಅದೃಷ್ಟ ಸಂಖ್ಯೆ - 1, 5 ಹಾಗೂ 9
ಬಣ್ಣ - ಕೆಂಪು ಬಣ್ಣ
ರತ್ನ - ಮಾಣಿಕ್ಯ, ಹವಳ


ಕನ್ಯಾ 
- ಕನ್ಯಾರಾಶಿಯ ಅಧಿಪತಿ ಬುಧ. ಬುಧ ಗ್ರಹ ಪ್ರಸ್ತುತ ಶುಕ್ರನ ಮನೆಯಲ್ಲಿದ್ದು ಶುಕ್ರನೂ ಕೂಡ ಧನ ಸ್ಥಾನ ಪ್ರವೇಶಿಸುವುದರಿಂದ ಧನ ಸಮೃದ್ಧಿ, ಮಾತಿನ ಸಮೃದ್ಧಿ, ಕುಟುಂಬ ಸೌಖ್ಯಗಳನ್ನು ಕಾಣುವ ದಿನಗಳಿದ್ದಾವೆ. ಮನೆಯಲ್ಲಿ ಮಂಗಳ ದೀಪ ಬೆಳಗಲಿದೆ. ಭಾಗ್ಯದ ಅಧಿಪತಿಯೂ ಧನಾಧಿಪತಿಯೂ ಆಗಿರುವ ಶುಕ್ರನ ಬಲ ಭದ್ರವಾಗಿರುವುದರಿಂದ ಭಾಗ್ಯೇಶೇ ಧನ ಭಾವಸ್ಥೇ ಪಂಡಿತೋ ಜನವಲ್ಲಭ: ಎಂಬ ಮಾತಿನಂತೆ ಪಂಡಿತತ್ವವೂ, ಲೋಕ ಪೂಜ್ಯತೆಯೂ, ಧನ ಮಾನ್ಯತೆಯೂ ಸಿಗುವ ವಿಶೇಷ ಫಲವಿದೆ. ಕಲಾವಿದರಿಗೆ ಶುಭ ಫಲಗಳಿದ್ದಾವೆ. ಕುಟುಂಬದಲ್ಲಿ ಸ್ತ್ರೀಯರ ಸಹಕಾರ ಗಟ್ಟಿಯಾಗಿರಲಿದೆ. ಆದರೆ ನೆನಪಿನಲ್ಲಿರಬೇಕಾದ ಅಂಶವೆಂದರೆ ಸಪ್ತಮದ ಕುಜ. ಆತ ನಿಮ್ಮ ರಾಶಿಯನ್ನೂ ಧನ ಸ್ಥಾನವನ್ನೂ ಹಾಗೂ ಉದ್ಯೋಗ ಸ್ಥಾನವನ್ನೂ ವೀಕ್ಷಿಸುವುದರಿಂದ ಉದ್ಯೋಗ, ಕುಟುಂಬ, ಆರೋಗ್ಯದ ವಿಚಾರವಾಗಿ ಎಚ್ಚರವಾಗಿರಬೇಕು. ಬೆಂಕಿಯಿಂದ ದೂರವಿರುವುದು ಒಳಿತು. ಮಕ್ಕಳು, ವಿದ್ಯಾರ್ಥಿಗಳಲ್ಲಿ ಸ್ವಭಾವ ಬದಲಾಗುವ ಸಾಧ್ಯತೆ ಇದೆ. ಸಹೋದರರಿಂದ ನಿಂದನೆ, ಕೋರ್ಟು ಕಚೇರಿ ಕೆಲಸಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯನ್ನೂ ಸೂಚಿಸುತ್ತಿದೆ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಯೂ ಹೆಚ್ಚಿದೆ. ಸುಖದ ಅಧಿಪತಿ ಬಲಹೀನನಾಗುವುದರಿಂದ ಸುಖ-ಶಾಂತಿ ಕದಡುವ ಸಾಧ್ಯತೆ ಇದೆ. ಗೃಹ ನಿರ್ಮಾಣ, ವಾಹನ ವಿಚಾರಗಳಲ್ಲಿ ತುಂಬ ಎಚ್ಚರಿಕೆ ಬೇಕು. 

ಪರಿಹಾರ - ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ 
ಅದೃಷ್ಟ ಸಂಖ್ಯೆ - 5 ಹಾಗೂ 9 
ಬಣ್ಣ - ಹಸಿರು
ರತ್ನ - ಕೆಂಪು ಹಾಗೂ ಪಚ್ಚೆ

Deepavali bhavishya of sun signs who will be lucky

ತುಲಾ 
- ತುಲಾ ರಾಶಿಯ ಅಧಿಪತಿ ಶುಕ್ರ. ಈ ದೀಪಾವಳಿ ಸಂದರ್ಭದಲ್ಲಿ ಶುಕ್ರ ನಿಮ್ಮ ಬದುಕಿಗೆ ದಾರಿ ದೀಪವಾಗುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಸ್ವಕ್ಷೇತ್ರಕ್ಕೆ ಬಂದಿರುವ ಶುಕ್ರ ನೆಮ್ಮದಿಯನ್ನೂ ದೇಹ ಸೌಖ್ಯವನ್ನೂ ಕರುಣಿಸಲಿದ್ದಾನೆ. ಕಲಾವಿದರಿಗೆ, ವಸ್ತ್ರ-ಹರಳು-ಹೈನು ವ್ಯಾಪಾರಿಗಳಿಗೆ ಶುಭಫಲವಿದೆ. ಸ್ತ್ರೀಯರಿಗೆ ಹೆಚ್ಚಿನ ಬಲ ಇರಲಿದೆ. ಸ್ತ್ರೀಯರ ಮಾತಿಗೆ ಮಾನ್ಯತೆ ಸಿಗಲಿದೆ. ಪ್ರೀತಿ ವಿಶ್ವಾಸಗಳಿಗೆ ಮಾನ್ಯತೆ ಸಿಗಲಿದೆ. ಇದೇ ವಾರದಲ್ಲಿ ಆಗುವ ಗುರುವಿನ ಸ್ಥಾನ ಬದಲಾವಣೆಯಿಂದ ಸ್ವಲ್ಪ ಭಯದ ವಾತಾವರಣ ಮೂಡಲಿದೆ, ಸಹೋದರರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯವನ್ನು ತರಲಿದೆ. ಅಲ್ಲದೆ ಪ್ರಯಾಣಿಕರಿಗೆ ತೊಡಕುಗಳನ್ನೂ  ಕೃಷಿಕರಿಗೆ ಸ್ವಲ್ಪ ಕಾರ್ಯ ವಿಳಂಬವನ್ನು ಉಂಟುಮಾಡಲಿದೆ. ಡಿಸೆಂಬರ್ ನಂತರ ದಾಂಪತ್ಯ ಜೀವನ ಕೊಂಚ ಸುಧಾರಿಸಲಿದೆ. ವ್ಯಾಪಾರಿಗಳೂ ಕೂಡ ಸ್ವಲ್ಪ ಚೇತರಿಸಿಕೊಳ್ಳಲಿದ್ದಾರೆ. ಭಾಗ್ಯಾಧಿಪತಿ ಬುಧನ ಯುತಿ ನಿಮಗೆ ಅದೃಷ್ಟ ಫಲ ತರಲಿದೆ ಆತಂಕ ಬೇಡ. ಮುಖ್ಯವಾಗಿ ಲಾಭಾಧಿಪತಿ ಧನ ಸ್ಥಾನದಲ್ಲಿರುವುದರಿಂದ ಲಾಭ ಸಮೃದ್ಧಿಯೂ, ಧನ ಸಮೃದ್ಧಿಯೂ ಆಗಲಿದೆ. ಎಚ್ಚರದ ಅಂಶವೆಂದರೆ ಸ್ತ್ರೀ-ಪುರುಷರ ನಡುವೆ ಕೊಂಚ ಭಾವನೆಗಳು ವ್ಯತ್ಯಾಸವಾಗುವ ಸಾಧ್ಯತೆಯನ್ನು ತೋರಿಸುತ್ತಿದೆ. ರಾಶಿಗೆ ಕುಜ ದೃಷ್ಟಿ ಇರುವುದರಿಂದ ಸ್ತ್ರೀಯರ ವಿಚಾರದಲ್ಲಿ ಎಚ್ಚರವಾಗಿರಿ. 
ಪರಿಹಾರ -  ಮಹಾಲಕ್ಷ್ಮೀ ಅಷ್ಟಕ ಹೇಳಿಕೊಳ್ಳಿ 
ಅದೃಷ್ಟ ಸಂಖ್ಯೆ - 5 ಹಾಗೂ 9 
ಬಣ್ಣ - ಬಿಳಿ ಹಾಗೂ ಗಾಢ ನೀಲಿ
ರತ್ನ - ವಜ್ರ-ನೀಲ

ನಿಮ್ಮದು ಸ್ವೇಹ ಬೆಳೆಸುವ ಯೋಗ್ಯ ರಾಶಿಯೇ?

ವೃಶ್ಚಿಕ
- ದೀಪಾವಳಿ ಹಬ್ಬ ನಿಮ್ಮ ಬದುಕಿಗೆ ನೆರಳು-ಬೆಳಕಿನ ಮಿಶ್ರಫಲವನ್ನು ತರಲಿದೆ. ಕರ್ಮಾಧಿಪತಿ ಜನ್ಮಕ್ಕೆ ಬಂದಿರುವುದರಿಂದ ಸ್ವಶ್ರಮದಿಂದ ಹಣ ಸಂಪಾದನೆ ಮಾಡುತ್ತೀರಿ. ಸ್ವಂತ ವ್ಯಾಪಾರಿಗಳಿಗೆ ಬಲ ಹೆಚ್ಚಲಿದೆ, ಸರ್ಕಾರಿ ನೌಕರರಿಗೆ ಬಲ ಇರಲಿದೆ, ಕೆಲಸಗಳು ಸುಲಲಿತವಾಗಲಿವೆ. ಹೊಸ ಪ್ರಾಜೆಕ್ಟ್ ಗಳು ಕೈ ಸೇರಲಿವೆ. ಕೆಲಸಕ್ಕೆ ಕೊರತೆ ಇರುವುದಿಲ್ಲ ಆದರೆ ನಿರೀಕ್ಷಿಸಿದಷ್ಟು ಹಣ ಜೇಬು ಸೇರುವುದಿಲ್ಲ. ಕಾರಣ ಧನಾಧಿಪತಿಯಾದ ಗುರುವಿನ ಸ್ಥಾನ ಪಲ್ಲಟ. ಇದೇ 20 ರ ನಂತರ ಗುರು ನೀಚ ಸ್ಥಾನವನ್ನು ಪ್ರವೇಶಿಸುವುದರಿಂದ ಧನ ಬಲ - ಗುರು ಬಲಗಳು ಕಳೆದುಹೋಗಲಿದೆ. ಕುಟುಂಬದವರ ಸಹಕಾರ ಸಿಗದೇ ಹೋಗುತ್ತದೆ. ನಿಮ್ಮ ಪ್ರತಿಭೆಯೇ ನಿಮಗೆ ಮುಳುವಾಗುತ್ತದೆ. ಹೆಚ್ಚು ಓದಿದ್ದರೂ, ಹೆಚ್ಚು ಜಾಣರಿದ್ದರೂ ಅದರಿಂದ ಫಲವಿಲ್ಲ ಎಂಬಂತಾಗುತ್ತದೆ. ದಾಂಪತ್ಯಭಾವ ಸ್ವಲ್ಪ ಖಾರವಾಗುತ್ತದೆ. ಆದರೆ ಪ್ರಮಾದವಾಗುವುದಿಲ್ಲ. ವಿದ್ಯಾರ್ಥಿಗಳು ಶ್ರದ್ಧೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಆನ್ ಲೈನ್ ಕ್ಲಾಸ್ ಗಳು ಪೀಡನೆ ಎನಿಸಿ ಮನಸ್ಸು ಮಂಕಾಗುತ್ತದೆ.  ಹೀಗಾಗಿ ಹಿರಿಯರು ನಿಗಾ ವಹಿಸಬೇಕು. ಇಂಥ ಮಂಕು ಫಲದಿಂದ ದೂರಾಗಲು ಗುರು ಮಂದಿರಕ್ಕೆ ಹೋಗಿ  ಕಡಲೆ ಧಾನ್ಯ ದಾನ ಮಾಡಿ.  
ಪರಿಹಾರ -  ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿಸಿ, ಗುರು ಚರಿತ್ರೆ ಓದಿ
ಅದೃಷ್ಟ ಸಂಖ್ಯೆ - 2 ಹಾಗೂ 10 
ಬಣ್ಣ - ಕೆಂಪು ಹಾಗೂ ಕೇಸರಿ
ರತ್ನ - ಹವಳ ಹಾಗೂ ಪುಷ್ಯರಾಗ

ಧನಸ್ಸು 
- ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಮಬ್ಬು ಗತ್ತಲ ನಡುವಿನ ಪುಟ್ಟ ಪ್ರಣತೆಯಾಗಲಿದೆ. ನಿರೀಕ್ಷೆಗಳು ಮಹದಷ್ಟಿದ್ದರೂ ಗುರಿ ಮುಟ್ಟುವುದು ಕೊಂಚ ಕಷ್ಟವಾಗಲಿದೆ. ಕರ್ಮಾಧಿಪತಿ ಲಾಭಾಧಿಪತಿಯುತನಾಗಿರುವುದರಿಂದ ವ್ಯಾಪಾರ-ವೃತ್ತಿಯಲ್ಲಿ ಸಮೃದ್ಧಿಯನ್ನೂ ಕಾಣಬಹುದು. ಕಲಾವಿದರ ಬದುಕಲ್ಲಿ ಕೊಂಚ ಭರವಸೆಯ ಬೆಳಕಲು ಮೂಡಲಿದೆ, ವಸ್ತ್ರ-ಹಾಲು-ಹೈನು ವ್ಯಾಪಾರಿಗಳು ಲಾಭವನ್ನು ಕಾಣುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇದೇ ವಾರದಲ್ಲಿ ಗುರುವು ನೀಚ ರಾಶಿಯನ್ನು ಪ್ರವೇಶಿಸುವುದರಿಂದ ಕೊಂಚ ದೇಹಬಲ ಕುಸಿಯಲಿದೆ. ಹಣಕಾಸಿನ ವಿಚಾರದಲ್ಲಿ ಕೊಂಚ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಭಾಗ್ಯಾಧಿಪತಿ ವ್ಯಯದಲ್ಲಿರುವುದರಿಂದ ತಂದೆ-ಮಕ್ಕಳಲ್ಲಿ ಕೊಂಚ ವಿರೋಧಗಳು ಘರ್ಷಣೆಗಳು ಉಂಟಾಗಬಹುದು. ಹಾಗಾಗಿ ಎಚ್ಚರವಾಗಿರಬೇಕು. ಮುಖ್ಯವಾಗಿ ಗುರು-ಶನಿಯರ ಯುತಿ ಕುಟುಂಬ ಸ್ಥಾನದಲ್ಲಿ ಸಂಭವಿಸಿರುವುದರಿಂದ ಕುಟುಂಬದ ವಾತಾವರಣ ಕೊಂಚ ಅಸಹನೆಯಿಂದ ಕೂಡಿರುತ್ತದೆ. ಹಿರಿಯರಿಗೆ ಗೌರವ ಸಿಗದಂತಾಗುತ್ತದೆ. ಆದರೆ ಮಂಗಳ ಕಾರ್ಯಗಳಿಗೆ ಚಾಲನೆ ಇದೆ. ಪ್ರೀತಿಯ ವಿಷಯದಲ್ಲಿ ಎಡವುವ ಸಾಧ್ಯತೆ ಹೆಚ್ಚಾಗಿದೆ. ಎಚ್ಚಾವಾಗಿರಿ. ಹಿರಿಯರ ನಡುವೆ- ಕಿರಿಯರ ನಡುವೆ ಮನಸ್ತಾಪಗಳಾಗುವ ಸಾಧ್ಯತೆಯೂ ಇದೆ. ಡಿಸೆಂಬರ್ ನಂತರ ಮಕ್ಕಳಿಂದ ಕೊಂಚ ಸಹಾಯ, ಸಹಕಾರಗಳು ಸಿಗಲಿವೆ. ತೊಡಕುಗಳ ನಿವಾರಣೆಗೆ ಗುರೂಣಾಂ ಸಾಂಬಶಿವೇ ಎಂಬ ಮಾತಿನಂತೆ ಶಿವ-ಪಾರ್ವತಿಯರ ಆರಾಧನೆ ನಿಜಕ್ಕೂ ಅಂತರಂಗದಲ್ಲಿ ಬೆಳಕುಂಟಾಗಿ ಜೀವನದ ಹಾದಿ ಸುಗಮವಾಗುವಂತೆ ಮಾಡುತ್ತದೆ.
ಪರಿಹಾರ -  ಶಿವನಿಗೆ ಬಿಲ್ವಾರ್ಚನೆ ಮಾಡಿಸಿ, ಗುರು ಚರಿತ್ರೆ ಓದಿ
ಅದೃಷ್ಟ ಸಂಖ್ಯೆ - 3 ಹಾಗೂ 9
ಬಣ್ಣ - ಹಳದಿ
ರತ್ನ - ಪುಷ್ಯರಾಗ ಹಾಗೂ ನೀಲ

Deepavali bhavishya of sun signs who will be lucky

ಮಕರ 
- ಮಕರ ರಾಶಿಯವರಿಗೆ ಈ ಬೆಳಕಿನ ಹಬ್ಬ ನಿಜಕ್ಕೂ ಉದ್ಯೋಗ ಭರವಸೆಯನ್ನು ಮೂಡಿಸಿ ಜೀವನಕ್ಕೆ ಹೊಸ ಬೆಳಕನ್ನು ಕೊಡಲಿದೆ. ಹೀಗಾಗಿ ಉದ್ಯೋಗಿಗಳಿಗೆ ಶುಭಫಲವಿದೆ. ಈ ದೀಪಾವಳಿ ಫಲ ಸ್ತ್ರೀಯರಿಗೆ ಅಧಿಕಾರ, ಸ್ಥಾನ ಮಾನಗಳನ್ನು ತಂದುಕೊಡಲಿದೆ. ಭಾಗ್ಯಾಧಿಪತಿ ಕರ್ಮಾಧಿಪತಿಯರ ಸಂಗಮ ನಿಜಕ್ಕೂ ಸೌಭಾಗ್ಯವನ್ನು ತಂದುಕೊಡಲಿದೆ. ಗುರು ಗ್ರಹ ಈ ವಾರದಲ್ಲಿ ನಿಮ್ಮ ರಾಶಿಯನ್ನು ಪ್ರವೇಶಿಸುವುದರಿಂದ ನಿಮ್ಮದೇ ಆಲೋಚನೆಗಳು ನಿಮ್ಮ ಹಾದಿಯನ್ನು ಕಠಿಣ ಮಾಡುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗಿ ಎಚ್ಚರ ವಹಿಸಬೇಕು. ಶನೈಶ್ಚರನ ಬಲವಿರುವುದರಿಂದ ಹೆಚ್ಚನ ಶುಭಫಲವನ್ನೇ ಕಾಣುತ್ತೀರಿ ಸಂಶಯವಿಲ್ಲ. ಮಕ್ಕಳಿಂದ ವಿಶೇಷ ಸಹಕಾರ ಸೌಕರ್ಯಗಳು ಸಿಗಲಿವೆ. ವಾಹನ-ವಸ್ತ್ರ-ಹರಳು-ಹಣ್ಣು-ಹೂವು ವ್ಯಾಪಾರಿಗಳಿಗೆ ವಿಶೇಷ ಅನುಕೂಲಗಳಿದ್ದಾವೆ. ಕಲಾವಿದರಿಗೂ ಈ ದೀಪಾವಳಿ ಕತ್ತಲನ್ನು ಅಳಿಸಿ ಬೆಳಕನ್ನು ತಂದುಕೊಡಲಿದೆ. ಡಿಸೆಂಬರ್ ನಂತರ ಭೂ ವ್ಯಾಪಾರ ಹಾಗೂ ನಿವೇಶನ-ಗೃಹ ನಿರ್ಮಾಣದಂಥ ಕಾರ್ಯಗಳಿಗೆ ಶುಭ ಸೂಚನೆ ಸಹಕಾರಗಳು ಸಿಗಲಿವೆ. ಅಂದುಕೊಂಡದ್ದನ್ನು ಸಾಧಿಸಲಿಕ್ಕಾಗಿ ವಿಷ್ಣು ಸಹಸ್ರನಾಮ ಪಠಿಸಿ.

ಪರಿಹಾರ -  ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ
ಅದೃಷ್ಟ ಸಂಖ್ಯೆ - 5 ಹಾಗೂ 6
ಬಣ್ಣ - ನೀಲ ಹಾಗೂ ಹಸಿರು
ರತ್ನ - ಪಚ್ಚೆ ಹಾಗೂ ನೀಲ


ಕುಂಭ
- ಈ ಬೆಳಕಿನ ಹಬ್ಬ ನಿಮ್ಮ ಬದುಕಿಗೆ ಭಾಗ್ಯವನ್ನೂ ಸಮೃದ್ಧಿಯನ್ನೂ ತುಂಬಿಕೊಡುವುದರ ಜೊತೆಗೆ ಅಸಾಧ್ಯವಾದದ್ದನ್ನು ಸುಲಭ ಸಾಧ್ಯವಾಗಿಸುತ್ತದೆ. ಭಾಗ್ಯೇಶೇ ಭಾಗ್ಯಭಾವಸ್ಥೆ ಬಹುಭಾಗ್ಯ ಸಮನ್ವಿತ: ಎಂಬ ಆಧಾರದಂತೆ ಭಾಗ್ಯ ಸ್ಥಳದಲ್ಲಿರುವ ಶುಕ್ರ ಗ್ರಹ ಹಲವು ಬಗೆಯ ಸಮೃದ್ಧಿಯ ಸೌಭಾಗ್ಯದ ಫಲಗಳನ್ನು ಕರುಣಿಸುತ್ತಾನೆ. ಮುಖ್ಯವಾಗಿ ಭಾಗ್ಯ ಸ್ಥಾನದ  ಶುಕ್ರ ಸ್ತ್ರೀಯರಲ್ಲಿ ಬಲವನ್ನೂ ಅಧಿಕಾರವನ್ನೂ ಹೆಚ್ಚಿಸುತ್ತಾನೆ. ಸರ್ಕಾರಿ ನೌಕರರಿಗೆ ಈ ದೀಪಾವಳಿ ನಿಜಕ್ಕೂ ಭಾಗ್ಯ ಲಕ್ಷ್ಮಿಯನ್ನು ಕರೆತರುತ್ತದೆ. ಸಂತಾನ, ಮಡದಿ ಸೌಖ್ಯಗಳು ಹಾಗೂ ಕುಟುಂಬ ಸೌಖ್ಯದಿಂದ ನಿರಾಳರಾಗಿರುತ್ತೀರಿ. ದೇವ-ವಿಪ್ರರಿಂದ ಶುಭ ಫಲಗಳನ್ನು ಹೊಂದುತ್ತೀರಿ. ರಾಜ ಸಮಾನ ಫಲ ನಿಮ್ಮದಾಗಲಿದೆ. ಆದರೆ ಕೊಂಚ ಅಸಮಧಾನವೂ ಇದೆ. ಲಾಭಾಧಿಪತಿ ವ್ಯಯ ಸ್ಥಾನದಲ್ಲಿ ನೀಚನಾಗುವುದರಿಂದ ಕೊಂಚ ಲಾಭ ಕ್ಷೀಣ, ಅಣ್ಣಂದಿರಿಂದ ತೊಡಕು, ವಿದೇಶದ ಸಂಪರ್ಕದ ತೊಂದರೆಯಂಥ ಫಲಗಳನ್ನೂ ಅನುಭವಿಸಲಿದ್ದೀರಿ. ಇದನ್ನು ಮೀರಿ ಧಾರ್ಮಿಕ ಕ್ಷೇತ್ರಗಳ ದರ್ಶನ, ಹಿರಿಯರ ಸಂಪರ್ಕ, ಗುರುಗಳ ಉಪದೇಶದಂಥ ಶುಭ ಫಲಗಳನ್ನು ಗ್ರಹಗಳು ಸೂಚಿಸುತ್ತಿವೆ. ಒಟ್ಟಾರೆ ಈ ದೀಪಾವಳಿ ಹೆಚ್ಚು ಶುಭಫಲವನ್ನು ತಂದುಕೊಡಲಿದೆ ಎಂಬುದರಲ್ಲಿ ಸಂಶಯವಿಲ್ಲ. 
ಪರಿಹಾರ -  ಲಲಿತಾ ಸಹಸ್ರನಾಮ ಪಠಿಸಿ/ ಆಂಜನೇಯ ದರ್ಶನ ಮಾಡಿ
ಅದೃಷ್ಟ ಸಂಖ್ಯೆ - 1 
ಬಣ್ಣ - ನೀಲ ಹಾಗೂ ಕಪ್ಪು
ರತ್ನ - ನೀಲ ಹಾಗೂ ವಜ್ರ

"

ಮೀನ 
- ಬೆಳಕಿನ ಹಬ್ಬ ನಿಮ್ಮ ಮನೆ-ಮನಸ್ಸುಗಳಲ್ಲಿ ಸಂತಸವನ್ನು ಮೂಡಿಸಲಿದೆ. ಧನ ಸಮೃದ್ಧಿಯನ್ನು ತರುವುದರ ಜೊತೆಗೆ ನಷ್ಟವಾದದ್ದನ್ನು ತುಂಬಿಕೊಡಲಿದೆ. ದೂರಾಗಿದ್ದವರು ಹತ್ತಿರಾಗುತ್ತಾರೆ. ಪ್ರೀತಿ-ಸ್ನೇಹಗಳಲ್ಲಿ ಭರವಸೆ ಮೂಡಲಿದೆ. ಗುರು ಲಾಭ ಸ್ಥಾನಕ್ಕೆ ಬರುವುದರಿಂದ ಮಂಗಳ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿರೀಕ್ಷಿಸಿದಷ್ಟು ಲಾಭವಿಲ್ಲದಿದ್ದರೂ ಜೀವನ ದುಸ್ತರವಾಗುವುದಿಲ್ಲ. ವ್ಯಾಪಾರಿಗಳು ಮೈಕೊಡವಿಕೊಂಡು ಮೇಲೇಳಲಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳಿಗೂ ಸ್ವಲ್ಪ ಭರವಸೆಯ ಬೆಳಕು ಮೂಡಲಿದೆ. ಸಹೋದರರ ಸಹಕಾರ, ಕುಟುಂಬ ಸಹಕಾರ ದೊರೆಯಲಿದೆ. ಡಿಸೆಂಬರ್ ನಂತರ ಹೋಟೆಲ್ ಇಂಡಸ್ಟ್ರಿಯವರಿಗೆ ಹಾಗೂ ಅಗ್ನಿ ಸಂಬಂಧಿ ವ್ಯವಹಾರದಲ್ಲಿರುವವರಿಗೆ ಬಂಗಾರದ ಫಲಗಳಿವೆ. ಭೂವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಬಹುದು. ಸಿವಿಲ್ ಕೆಲಸಗಳಲ್ಲಿ ತೊಡಗಿರುವವರ ಜೀನವ ಭದ್ರವಾಗುವುದರಲ್ಲಿ ಸಂದೇಹವಿಲ್ಲ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ದೊರೆಯಲಿದೆ. ತೀರ್ಥಕ್ಷೇತ್ರ ದರ್ಶನ, ಪುಣ್ಯ ಕ್ಷೇತ್ರಗಳ ಸಂದರ್ಶನ ಮಾಡುತ್ತೀರಿ. ಉತ್ತಮರ ಸಹವಾಸ ಬದುಕಿಗೆ ನಿಜವಾದ ಬೆಳಕನ್ನು ಹೊತ್ತಿಸಲಿದೆ.

ಪರಿಹಾರ -  ದತ್ತಾತ್ರೇಯ ಹಾಗೂ ಸಾಯಿ ಬಾಬಾ ದರ್ಶನ ಮಾಡಿ
ಅದೃಷ್ಟ ಸಂಖ್ಯೆ - 1 ಹಾಗೂ 9
ಬಣ್ಣ - ಕೆಂಪು ಕೇಸರಿ
ರತ್ನ - ಪುಷ್ಯರಾಗ ಹಾಗೂ ಮಾಣಿಕ್ಯ

Deepavali bhavishya of sun signs who will be lucky


 

Follow Us:
Download App:
  • android
  • ios