ದೀಪಾವಳಿಯಂದು ಗೋವುಗಳನ್ನು ಪೂಜಿಸುವುದು ಏಕೆ ಎಂಬುದಕ್ಕೆ ನಮ್ಮ ಪರಂಪರೆಯೇ ಉತ್ತರ. ದೀಪಾವಳಿಯ ದಿನ ಗೋವುಗಳನ್ನು ಅಲಂಕರಿಸುವುದು, ಅವುಗಳ ಹಣೆಗೆ ಕುಂಕುಮದ ಬೊಟ್ಟನ್ನಿಟ್ಟು, ಅವುಗಳಿಗೆ ರುಚಿಕರವಾದ ಆಹಾರವನ್ನು ಕೊಟ್ಟು ಸತ್ಕರಿಸುವುದು, ಅವುಗಳಿಗೆ ಬೆಳಕು ತೋರಿಸುವುದು- ರಾಜ್ಯದ ಮಾತ್ರವಲ್ಲ ದೇಶದ ಹೆಚ್ಚಿನ ಕಡೆ ಆಚರಣೆಯಲ್ಲಿದೆ. ಗೋವಿನಲ್ಲಿ ಮೂವತ್ತಮೂರು ಕೋಟಿ ದೇವತೆಗಳು ಪ್ರತಿಷ್ಠಿತರಾಗಿದ್ದಾರೆ ಎಂಬುದು ಪ್ರತೀತಿ, ನಮ್ಮ ನಂಬಿಕೆ.

ಒಮ್ಮೆ ದೇವತೆಗಳೆಲ್ಲರೂ ಸೇರಿ ಬ್ರಹ್ಮನ ಬಳಿಗೆ ಹೋದರು. ಬ್ರಹ್ಮನ ಬಳಿ ಹೇಳಿದರು- ಬ್ರಹ್ಮದೇವಾ, ಮನುಷ್ಯರೆಲ್ಲರೂ ತಮ್ಮ ಕರ್ಮವನ್ನೇ ಬಲು ಪ್ರಮುಖ ಎಂದು ತಿಳಿದಿದ್ದಾರೆ. ತಾವು ಮಾಡಿದ ಕರ್ಮದಂತೆ ತಮಗೆ ಫಲ ಸಿಗುತ್ತದೆ ಎಂದು ಅವರು ತಿಳಿದಿರುವುದರಿಂದ, ಸತ್ಕರ್ಮಗಳನ್ನು ಮಾಡುತ್ತ ಅದರಿಂದ ಸತ್ಫಲ ಪಡೆಯುತ್ತಿದ್ದಾರೆ. ದುಷ್ಕರ್ಮಗಳನ್ನು ಮಾಡುವವರೂ ಇದ್ದಾರೆ. ಆದರೆ ನಮ್ಮನ್ನು ಪೂಜಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು, ಮಳೆ ಬೆಳೆ ರೋಗ ರುಜಿನ ಸೌಖ್ಯ ಇತ್ಯಾದಿಗಳನ್ನು ಮಾನವರಿಗೆ ನೀಡುವವರು. ಆದರೆ ನಮ್ಮನ್ನು ಅವರು ಪರಿಗಣಿಸುತ್ತಲೇ ಇಲ್ಲ ಎಂದು ಹೇಳಿದರು.

ಕೊರೋನಾ ವ್ಯಾಧಿ ರೂಪದಲ್ಲಿ ಒಕ್ಕರಿಸಿದ ಕೊರೋನಾ ಓಡಿಸಲು ಲಕ್ಷ್ಮಿ ಪೂಜೆ ...

ಬ್ರಹ್ಮ ಆಗ ಹೇಳಿದ- ಯೋಚಿಸಬೇಡಿ, ಮಾನವರು ನಿಮ್ಮನ್ನು ಪೂಜಿಸುವಂತೆ ಮಾಡೋಣ. ಹಾಗೆ ಹೇಳಿದ ಬ್ರಹ್ಮನು ಒಂದು ಪ್ರಾಣಿಯನ್ನು ಸೃಷ್ಟಿಸಿದ. ಅದೇ ಗೋವು. ಅದು ಮನುಷ್ಯನಿಗೆ ಸಂಗಾತಿಯಾಯಿತು. ಅದು ನೆಲವತ್ತು ಉತ್ತು ಕೃಷಿಗೆ ನೆರವಾಯಿತು. ಅದರ ಮಲ ಮೂತ್ರಗಳು ಕೃಷಿಗೆ ಗೊಬ್ಬರವಾದವು. ಅದರ ಹಾಲು ಕುಡಿಯುವುದಕ್ಕೆ ಒದಗಿ ಮನುಷ್ಯರು ಪುಷ್ಟರೂ ಆರೋಗ್ಯವಂತರೂ ಆಗುವಂತೆ ಆಯಿತು. ಇದರಿಂದ ಮಾನವರು ಸಂತುಷ್ಟರಾದರು. 


ಆಗ ಬ್ರಹ್ಮನು ಅಶರೀರವಾಣಿ ಮೊಳಗಿಸಿ ಹೇಳಿದ- ಗೋವು ಬರೀ ಪ್ರಾಣಿಯಲ್ಲ, ಅದರಲ್ಲಿ ಮೂವತ್ತಮೂರು ಕೋಟಿ ದೇವತೆಗಳಿರುವುದರಿಂದ ಅದು ನಿಮಗೆ ಅಷ್ಟೆಲ್ಲಾ ಆಯುರಾರೋಗ್ಯ ಭಾಗ್ಯಾದಿಗಳನ್ನು ನೀಡಿದೆ. ಅದನ್ನು ನೀವು ಪೂಜಿಸಬೇಕು. ಮನುಷ್ಯರು ಈ ಮಾತಿಗೆ ಒಪ್ಪಿಕೊಂಡರು. ನಂತರ ಬ್ರಹ್ಮನು ದೇವತೆಗಳನ್ನು ಕರೆದು ಹೇಳಿದ- ನೋಡಿದಿರಾ, ಮನುಷ್ಯರು ನಿಮ್ಮನ್ನೆಲ್ಲಾ ಸೇರಿಸಿ ಒಂದು ಕಡೆಯೇ ಪೂಜಿಸುವಂತೆ ಮಾಡಿದ್ದೇನೆ. ಈಗ ಹೋಗಿ ಗೋಮಾತೆಯ ಮೈಯಲ್ಲಿ ಸೇರಿಕೊಳ್ಳಿರಿ.
ದೇವತೆಗಳು ಗೋಮಾತೆಯಲ್ಲಿಗೆ ದಾವಿಸಿದರು. ಮಾತೇ ನಮಗೆ ನಿನ್ನ ದೇಹದಲ್ಲಿ ಒಂದು ಜಾಗವನ್ನು ಪ್ರಸಾದಿಸು ಎಂದು ಸೆರಗೊಡ್ಡಿ ಬೇಡಿಕೊಂಡರು. ಒಬ್ಬೊಬ್ಬ ದೇವತೆಗೂ ಗೋಮಾತೆ ತನ್ನ ಶರೀರದಲ್ಲಿ ಜಾಗವನ್ನು ನೀಡಿದಳು. ಸೂರ್ಯ ಚಂದ್ರರಿಗೆ ತನ್ನ ಎರಡು ಕೊಂಬಿನಲ್ಲಿ, ಬ್ರಹ್ಮನಿಗೆ ತಲೆಯಲ್ಲಿ, ಹೀಗೆ. 

ಗೋಪೂಜೆ ಮಾಡುವುದರ ಒಂಬತ್ತು ಪ್ರಯೋಜನಗಳಿವು..! ...

ಲಕ್ಷ್ಮೀದೇವಿ ಬರುವ ಹೊತ್ತಿಗಾಗಲೇ ಎಲ್ಲ ದೇವತೆಗಳೂ ಗೋಮಾತೆಯ ದೇಹದ ಎಲ್ಲ ಭಾಗಗಳಲ್ಲಿ ನೆಲೆಗೊಂಡು ಆಗಿತ್ತು. ನನಗೊಂದು ಜಾಗ ಕೊಡು ತಾಯೀ ಎಂದು ಆಕೆ ಕೇಳಿದಳು. ಆಗ ಗೋಮಾತೆ ಹೇಳಿದಳು- ನೀನು ಚಂಚಲೆ, ನಿಂತ ಕಡೆ ನಿಲ್ಲುವುದಿಲ್ಲ, ನಿನಗೆ ಸ್ಥಳ ಕೊಡಲು ನಾವು ತಯಾರಿಲ್ಲ ಎಂದಿತು. ಆಗ ಮಹಾಲಕ್ಷ್ಮೀ, ನಿಮ್ಮಲ್ಲಿ ನೆಲೆಸಿದರೆ ಶಾಶ್ವತವಾಗಿ ನೆಲೆಸುತ್ತೇನೆ ಎಂದಳು. ನಖಶಿಖಾಂತ ದೇವತೆಗಳು ನೆಲೆಸಿರುವ ಕಾರಣ ಜಾಗವಿಲ್ಲ. ನಮ್ಮ ಮಲಮೂತ್ರಗಳಲ್ಲಿ ಜಾಗವಿದೆ, ಅಲ್ಲಿ ನೆಲೆಸು ಎಂದಿತು ಗೋವು. ಹಾಗೇ ಆಗಲಿ ಎಂದು ಸಿರಿದೇವಿಯು ಅಲ್ಲಿಯೇ ನೆಲೆಸಿದಳು. ಅದಕ್ಕಾಗಿಯೇ ಗೋಮಯದಿಂದ ಬಾಗಿಲು ಸಾರಿಸಿ ರಂಗವಲ್ಲಿ ಹಾಕಿದ ಮನೆಯಲ್ಲಿ ಲಕ್ಷ್ಮೀ ಸ್ಥಿರವಾಗಿ ನೆಲೆಸುತ್ತಾಳೆ. 

ನರಕ ಚತುರ್ದಶಿ ಹಿನ್ನಲೆ, ಮಹತ್ವವೇನು? ತಿಳಿಯೋಣ ಬನ್ನಿ..! ...

ಭೂಭಾರ ಹೆಚ್ಚಾಗಿದೆ, ಅದನ್ನು ಇಳಿಸಲು ಅವತಾರ ಮಾಡು ಎಂದು ಲಕ್ಷ್ಮಿ ಕ್ಷೀರಸಾಗರ ತೀರದಲ್ಲಿ ಎಲ್ಲ ದೇವತೆಗಳೊಂದಿಗೆ ಹೋಗಿ ನಾರಾಯಣನಲ್ಲಿ ಪ್ರಾರ್ಥಿಸುವಾಗ ಗೋರೂಪ ಧಾರಣೆ ಮಾಡಿದ್ದಳು. ಶ್ರೀ ಹರಿ ಗೊಲ್ಲರ ಕುಲದಲ್ಲಿ ಕೃಷ್ಣನಾಗಿ ಅವತರಿಸಿ ಗೋವುಗಳನ್ನು ಕಾಯ್ದನು. ಬ್ರಹ್ಮದೇವರು ಹಸುವಾಗಿ ಬಂದು ಹುತ್ತದಲ್ಲಿದ್ದ ಶ್ರೀಹರಿಗೆ ಹಾಲನ್ನಿತ್ತರು. ಇಂದ್ರ ಕಾಮಧೇನುವನ್ನು ತಂದು ಅದರ ಹಾಲಿನಿಂದ ಶ್ರೀಹರಿಗೆ ಅಭಿಷೇಕ ಮಾಡಿ ಗೋವಿಂದ ಎಂದು ಕರೆದ. ಸ್ವರ್ಗದಿಂದ ಬಂದ ನಂದಿನಿ ಗೋಮಾತೆಗಾಗಿಯೇ ಕೌಶಿಕನೆಂಬ ರಾಜ, ವಸಿಷ್ಠರ ಜೊತೆಗೆ ವಾಗ್ಯುದ್ಧ ಮಾಡಿ, ವಸಿಷ್ಠರ ಬ್ರಹ್ಮದಂಡದಿಂದ ಶಿಕ್ಷಿತನಾಗಿ, ನಂತರ ರಾಜ್ಯಕೋಶವನ್ನೆಲ್ಲ ತೊರೆದು ತಪಸ್ಸು ಮಾಡಿ ಬ್ರಹ್ಮರ್ಷಿಯಾದುದು. ಅದಕ್ಕಾಗಿಯೇ ಕಾರ್ತವೀರ್ಯಾರ್ಜುನನು ಜಮದಗ್ನಿಯನ್ನು ಪೀಡಿಸಿ. ಜಮದಗ್ನಿಯ ಮಗ ಪರಶುರಾಮನು ಭೂಮಿಯ ದುಷ್ಟ ಕ್ಷತ್ರಿಯರನ್ನೆಲ್ಲ ನಾಶ ಮಾಡುವಂತೆ ಆದುದು.

ಹೀಗಾಗಿಯೇ ಕಾರ್ತಿಕ ದೀಪಾವಳಿಯಂದು ಗೋಪೂಜೆ, ಗೋದಾನ ಇವುಗಳನ್ನು ಮಾಡುವುದರಿಂದ ಮಹಾಲಕ್ಷ್ಮಿ, ಶ್ರೀಹರಿಯೂ ಸೇರಿದಂತೆ ಮೂವತ್ತಮೂರು ಕೋಟಿ ದೇವತೆಗಳೂ ತೃಪ್ತರಾಗುತ್ತಾರೆ. ನಿಮಗೆ ಮನದಲ್ಲಿ ಬಯಸಿದ್ದನ್ನು ಇತ್ತು ಆಶಿರ್ವಾದ ಮಾಡುತ್ತಾರೆ.