ಪ್ರತಿಯೊಬ್ಬ ದೇವರಿಗೂ ಒಂದಲ್ಲ ಒಂದು ಪ್ರಾಣಿಯನ್ನು ದೇವತೆಯನ್ನಾಗಿ ಚಿತ್ರಿಸಲಾಗಿದೆ. ಹಾಗೇ ಲಕ್ಷ್ಮದೇವಿಗೆ ವಾಹನ ಗೂಬೆ. ಗೂಬೆಯೇ ಯಾಕೆ ಈಕೆಯ ವಾಹನ ಗೊತ್ತೆ?

ಗೂಬೆ ಕತ್ತಲಲ್ಲಿ ಇರುತ್ತದೆ. ಹಗಲಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕತ್ತಲಲ್ಲೇ ಸಂಚರಿಸುತ್ತದೆ. ಹೀಗಾಗಿ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವಾಗ, ಹೇಗೆ ಹೋಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಲಕ್ಷ್ಮಿಗೆ ಬೇಕಾದದ್ದು ಇದೇ ವಾಹನ. ಈಕೆ ಕೂಡ ಹಾಗೆಯೇ. ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಾಳೋ ಗೊತ್ತೇ ಆಗುವುದಿಲ್ಲ. ಲಕ್ಷ್ಮಿ ಅನಿರೀಕ್ಷಿತೆ. ಇಂದು ಇದ್ದಲ್ಲಿ ನಾಳೆ ಇರುತ್ತಾಳೆ ಎನ್ನಲಾಗುವುದಿಲ್ಲ. ಹೀಗಾಗಿ ಲಕ್ಷ್ಮಿಗೆ ಗೂಬೆ ವಾಹನ. ಜೊತೆಗೆ, ಗೂಬೆಯ ದೊಡ್ಡ ಉರುಟಾದ ಕಣ್ಣುಗಳು, ಚಿನ್ನದ ಉರುಟಾದ ನಾಣ್ಯಗಳನ್ನು ನೆನಪಿಸುತ್ತದಲ್ಲವೇ?

ತುಂಬ ಹಿಂದಿನ ಕಾಲ. ಆಗಿನ್ನೂ ಪ್ರಾಣಿಗಳ ಸೃಷ್ಟಿ ಆಗಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ನಡೆದೇ ಹೋಗಬೇಕಿತ್ತು. ಆಗ ದೇವತೆಗಳು ಕಡುನೊಂದು ಬ್ರಹ್ಮನ ಬಳಿಗೆ ಹೋದರು. ನಡೆದೇ ಹೋಗಬೇಕಾದ ತಮ್ಮ ಬವಣೆಯನ್ನು ವಿವರಿಸಿದರು. ಏನು ಮಾಡುವುದು ಎಂದು ಬ್ರಹ್ಮನಿಗೂ ಗೊತ್ತಾಗಲಿಲ್ಲ. ಏನು ಮಾಡೋಣ ದೇವೀ ಎಂದು ಶಾರದೆಯನ್ನು ಕೇಳಿದ.

ಜ್ಞಾನದ ಅಧಿದೇವತೆಯಾದ ಆಕೆ ಹೇಳಿದಳು- ನೀನು ಪ್ರಾಣಿಗಳನ್ನು ಸೃಷ್ಟಿಸು. ಅವುಗಳು ವಾಹನಗಳಾಗಲಿ. ಹಾಗೇ ಮುದ್ದು ಮಾಡುವುದಕ್ಕೂ ಅವು ಒದಗುವಂತಿರಲಿ.
ಹಾಗೇ ಬ್ರಹ್ಮ ಪ್ರಾಣಿಗಳನ್ನು ಸೃಷ್ಟಿಸಿದ. ಅವುಗಳಲ್ಲಿ ಒಂದೊಂದೂ, ಒಂದೊಂದು ದೇವತೆಯ ವಾಹನಗಳಾದವು. ಹೀಗೆ ಲಕ್ಷ್ಮಿಗೆ ಬಂದದ್ದು ಗೂಬೆ, ಬ್ರಹ್ಮನಿಗೆ ಹಂಸ, ಮಹಾವಿಷ್ಣುವಿಗೆ ಗರುಡ, ಯಮನಿಗೆ ಮಹಿಷ, ಗಣಪತಿಗೆ ಇಲಿ, ಶಿವನಿಗೆ ನಂದಿ, ಪಾರ್ವತಿಗೆ ಸಿಂಹ, ಷಣ್ಮುಖನಿಗೆ ನವಿಲು, ಶನಿಗೆ ಕಾಗೆ ಇತ್ಯಾದಿ.

ಬ್ರಹ್ಮನಿಗೆ ಯಾಕೆ ಹಂಸ? ಹಂಸಕ್ಕೊಂದು ವಿಶೇಷ ಶಕ್ತಿಯಿದೆ ಎನ್ನುತ್ತಾರೆ. ಅದು ಹಾಲು ನೋಡಿದರೆ, ಹಾಲನ್ನೂ ನೀರನ್ನೂ ಪ್ರತ್ಯೇಕಿಸಬಲ್ಲದು. ಹಾಲು ಎಂದರೆ ಜ್ಞಾನ, ನೀರು ಅಜ್ಞಾನ, ಜ್ಞಾನದಿಂದ ಅಜ್ಞಾನವನ್ನು ಪ್ರತ್ಯೇಕಿಸಬಲ್ಲ ಗುಣ ಸೃಷ್ಟಿಕರ್ತನಿಗೆ ಅಗತ್ಯ ಬೇಕು. ಅದಕ್ಕಾಗಿ ಆತನಿಗೆ ಹಂಸ ವಾಹನ. ಗರುಡ ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿದ್ದರೂ, ಕೆಳಗೆ ಲೋಕದಲ್ಲಿ ನಡೆಯುತ್ತಿರುವುದನ್ನೆಲ್ಲಾ ಸೂಕ್ಷ್ಮವಾದ ಕಣ್ಣಿನಿಂದ ನೋಡಬಲ್ಲದು. ಹಾಗೇ ವೇಗವಾಗಿ ಲೋಕವನ್ನೆಲ್ಲ ಸುತ್ತು ಹಾಕಬಲ್ಲದು. ಮಹಾವಿಷ್ಣು ಸ್ಥಿತಿ ಪಾಲಕ. ಲೋಕದ ಸ್ಥಿತಿಗತಿಯನ್ನು ನೋಡಿಕೊಳ್ಳುವವನು. ಹೀಗಾಗಿ ಅವನಿಗೆ ಗರುಡ ವಾಹನ.

ಈ ಕೆಲವು ಸಸ್ಯಗಳು ಮನೆಯಲ್ಲಿದ್ದರೆ ರೋಗಗಳು ದೂರ..! ಕುಟುಂಬಕ್ಕೆ ಶುಭ 

ಮಹಾಕಾಳಿ, ಪಾರ್ವತಿ, ದುರ್ಗೆ ಹೀಗೆ ಹಲವು ನಾಮರೂಪಗಳಿಂದ ಆರಾಧಿಸಲ್ಪಡುವವಳು ದೇವಿ. ಈಕೆಯ ವಾಹನ ಸಿಂಹ. ಸಿಂಹ ಕ್ರೂರ ಪಾಣಿ. ಈಕೆ ತನ್ನ ತಾಯಿಗೆ ಹೊರತುಪಡಿಸಿ ಇನ್ಯಾರಿಗೂ ಮಣಿಯದ ಮೃಗ. ಸಿಂಹವನ್ನು ಮಣಿಸಲು ತಾಯಿಪ್ರೀತಿಯೇ ಬೇಕು. ಅದಕ್ಕೇ ಲೋಕಮಾತೆ ಸಿಂಹದ ಒಡತಿ. ಸಿಂಹ ಲೋಕದ ಅಂಧಕಾರದ ಪ್ರತೀಕ, ಅಂಧಕಾರವನ್ನು ಬೆಳಗುವವಳು ತಾಯಿ ದೇವಿ.
ಯಮದೇವ ಲೋಕದ ಎಲ್ಲರನ್ನೂ ಒಂದೇ ರೀತಿ ನೋಡುವವನು. ಸಾವಿನ ಮುಂದೆ ಶ್ರೀಮಂತ ಬಡವ, ಗುಣವಂತ, ಗುಣಹೀನ, ದುಷ್ಟ, ಲೋಭಿ, ದಾನಿ ಎಲ್ಲರೂ ಸಮಾನರು. ಈತನ ವಾಹನ ಎಮ್ಮೆ ಅಥವಾ ಮಹಿಷ, ನಿಧಾನವಾಗಿ ನಡೆಯುವ, ಯಾರನ್ನೂ ಹಾಯದ, ಎಲ್ಲರಿಗೂ ಹಾಲನ್ನು ನೀಡುವ, ಸಮಾಧಾನಚಿತ್ತದ ಪ್ರಾಣಿ. 

ಗಣಪತಿಗೆ ಇಲಿ. ಇಲಿ ಕೃಷಿಕರಿಗೆ ಕಾಟ ಕೊಡುವ ಪ್ರಾಣಿ. ಅದಕ್ಕಾಗಿಯೇ ಕೃಷಿಕರೂ ಸೇರಿದಂತೆ ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಮೊದಲಿಗೆ ಗಣಪತಿಯ ಪೂಜೆ ಮಾಡುವರು. ಆತ ಇಲಿಯ ರೂಪದಲ್ಲಿ ಬರಬಹುದಾದ ವಿಘ್ನವಿಡ್ಡೂರಗಳನ್ನು ನಿಯಂತ್ರಿಸುತ್ತಾನೆ. 

ಸ್ನೇಹ ಬೆಳೆಸಬಹುದಾದ ಯೋಗ್ಯ ರಾಶಿಗೆ ಸೇರಿದವರಾ ನೀವು? 

ಕಾಗೆಯು ಸರ್ವಾಂತರ್ಯಾಮಿ ಪಕ್ಷಿ. ಅದು ಹೀನ ಎಂದೆಣಿಸದೆ ಎಲ್ಲವನ್ನೂ ತಿಂದು ಶುಚಿ ಮಾಡುತ್ತದೆ. ಶನಿಯು ಹೀನ- ಬಡವ- ಬಲ್ಲಿದ, ಪಂಡಿತ ಎನ್ನದೆ ಎಲ್ಲರನ್ನೂ ಕಾಡಿ ಕಾಡಿ, ದೈವಾರಾಧನೆ ಮಾಡುವಂತೆ ಪ್ರೇರೇಪಿಸುತ್ತಾನೆ. ಕಷ್ಟಗಳ ಮುಂದೆ ಮನುಷ್ಯರನ್ನು ಒಡ್ಡಿ ಕಷ್ಟಸಹಿಷ್ಣೂಗಳನ್ನಾಗಿಸುತ್ತಾನೆ. ಕಾಗೆ ಕಪ್ಪೆಂದು ತನ್ನನ್ನು ಎಲ್ಲರೂ ಹೀಗಳೆದರೂ ತಲೆಕೆಡಿಸಿಕೊಳ್ಳದೆ ತನ್ನ ಕೆಲಸ ತಾನು ಮಾಡುವ ಪಕ್ಷಿ. ಶನಿ ಕೂಡ ಕಿರುಕುಳ ನೀಡುವ ಗ್ರಹ ಎಂದು ಎಲ್ಲರೂ ದೂಷಿಸಿದರೂ ತನ್ನ ಕರ್ತವ್ಯ ಬಿಡದೆ ಮಾಡುವ ದೇವತೆ. ಹೀಗಾಗಿ ಶನಿಗೆ ಕಾಗೆ ಸಂಗಾತಿ.

ಪಂಚಾಂಗ : ಶುಕ್ರವಾರ ಮಹಾಲಕ್ಷ್ಮೀಯನ್ನು ಆರಾಧಿಸಿದರೆ ಮನೆಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ