ಹನ್ನೆರಡು ರಾಶಿಗಳಿಗೂ ಭಿನ್ನವಾದ ಗುಣ ಮತ್ತು ಸ್ವಭಾವಗಳಿವೆ. ಅದರಂತೆಯೇ ಆಯಾ ರಾಶಿಯ ವ್ಯಕ್ತಿಗಳು ಅವರ ರಾಶಿ ಮತ್ತು ನಕ್ಷತ್ರದ ಪ್ರಭಾವಕ್ಕೊಳಪಟ್ಟಿರುತ್ತಾರೆ. ರಾಶಿಯ ಸ್ವಭಾವದಂತೆ ಅವರ ವರ್ತನೆಯು ಇರುತ್ತದೆ. ಪ್ರತಿ ರಾಶಿಯವರಲ್ಲಿರುವ ವಿಶೇಷ ಗುಣ ಸ್ನೇಹದ ವಿಷಯದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿಯೋಣ...

ಮೇಷ ರಾಶಿ
ಮೇಷ ರಾಶಿಯವರು ಕೊಂಚ ಹಠ ಸ್ವಭಾವದವರು.  ತಮ್ಮ ಪ್ರಾಬಲ್ಯದ ಹಿನ್ನಡೆಯಾದರೆ ಇವರು ಸಹಿಸುವುದಿಲ್ಲ. ಬಹು ಬೇಗೆ ಬೋರ್ ಆಗುವ ಸ್ವಭಾವ ಮೇಷರಾಶಿಯವರದ್ದು. ಸದಾ ಹೊಸದನ್ನೇನಾದರೂ ಮಾಡಬೇಕೆಂಬ ಹಂಬಲ ಇವರಲ್ಲಿರುತ್ತದೆ. ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಮೇಷ ರಾಶಿಯವರು ಉತ್ತಮ ಗೆಳೆಯರಾಗುತ್ತಾರೆ. ಸ್ನೇಹಿತರ ಕಾಳಜಿ ವಹಿಸುವ ಇವರು, ಸಮಯ ಬಂದಾಗ ಸ್ನೇಹಿತರ ಪರವಾಗಿ ನಿಲ್ಲುವ ಸ್ವಭಾವ ಇವರದ್ದಾಗಿರುತ್ತದೆ.

ಇದನ್ನು ಓದಿ: ರಾಶಿಯನುಸಾರ ನಿಮ್ಮ ಸ್ನೇಹಿತರು-ಶತ್ರುಗಳ್ಯಾರೆಂದು ತಿಳಿಯಿರಿ..! 

ವೃಷಭ ರಾಶಿ
ಈ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ. ಹೆಚ್ಚು ಗೆಳೆಯರನ್ನು ಮಾಡಿಕೊಳ್ಳುವ ಬಗ್ಗೆ ಇವರು ಯೋಚಿಸುವುದಿಲ್ಲ. ಕಡಿಮೆ ಸ್ನೇಹಿತರನ್ನು ಹೊಂದಿರುವ ಇವರು, ಆ ಗೆಳೆಯರು ಇವರಿಗೆ ಅಚ್ಚುಮೆಚ್ಚಿನವರಾಗಿರುತ್ತಾರೆ. ಒಮ್ಮೆ ಗೆಳೆತನ ಮಾಡಿದರೆ ಅದನ್ನು ಜೀವನ ಪೂರ್ತಿ ನಿಭಾಯಿಸುತ್ತಾರೆ. ಈ ರಾಶಿಯವರ ಗೆಳೆತನದಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ, ಈ ರಾಶಿಯವರ ಮೇಲೆ ಸಂಪೂರ್ಣ ವಿಶ್ವಾಸವಿಡಬಹುದಾಗಿದೆ.

ಮಿಥುನ ರಾಶಿ
ಉತ್ತಮವಾಗಿ ಮಾತನಾಡುವ ಕಲೆಯನ್ನು ಬಲ್ಲ ಮಿಥುನ ರಾಶಿಯವರು ಗೆಳೆಯರಲ್ಲೂ ಈ ಗುಣವನ್ನು ಬಯಸುತ್ತಾರೆ. ಉತ್ತಮ ಗೆಳೆತನಕ್ಕೆ ಮಿಥುನ ರಾಶಿಯವರೇ ತಕ್ಕವರು. ಭಾವನಾತ್ಮಕ ವಿಚಾರಗಳಿಂದ ಇವರು ಕೊಂಚ ದೂರವಿರುವ ಕಾರಣ, ಅಂಥ ವಿಷಯಗಳು ಇವರನ್ನು ಬೇಸರಕ್ಕೆ ತಳ್ಳುತ್ತದೆ. ಸದಾ ಸ್ವತಂತ್ರವಾಗಿರಲು ಬಯಸುವ ಇವರು ಸ್ನೇಹಿತರೊಡನೆ ಹೆಚ್ಚು ಕಾಲ ಕಳೆಯಲು ಬಯಸುವುದರ ಜೊತೆಗೆ ಏಕಾಂತವನ್ನೂ ಇಷ್ಟಪಡುವ ಸ್ವಭಾವದವರಾಗಿರುತ್ತಾರೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಸೂಕ್ಷ್ಮ ಮನಸ್ಸಿನವರು. ಭಾವನೆಗಳನ್ನು ಚೆನ್ನಾಗಿ ಅರಿತು ಜೀವಿಸುವ ಸಂವೇದನಾ ವ್ಯಕ್ತಿಗಳಿವರು. ಈ ರಾಶಿಯವರು ವಿಶ್ವಾಸಕ್ಕೆ ಅರ್ಹರು. ಇವರ ಬಳಿ ವಿಶ್ವಾಸವಿಟ್ಟು ಯಾವುದೇ ರೀತಿಯ ಭಾವನೆಗಳನ್ನು ಅಥವಾ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಈ ರಾಶಿಯವರಿಗೆ ಬೇರೆಯವರ ಸಂವೇದನೆ ಮತ್ತು ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕ್ಷಮತೆ ಹೆಚ್ಚಿರುತ್ತದೆ. ತಮ್ಮ ಸಮಸ್ಯೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ತೀರಾ ಕಡಿಮೆಯಾಗಿರುತ್ತದೆ. 

ಇದನ್ನು ಓದಿ: ಈ ಕೆಲವು ಸಸ್ಯಗಳು ಮನೆಯಲ್ಲಿದ್ದರೆ ರೋಗಗಳು ದೂರ..! ಕುಟುಂಬಕ್ಕೆ ಶುಭ 

ಸಿಂಹ ರಾಶಿ
ಬೇಸರದಲ್ಲಿ ಇರುವವರ ಮನಸ್ಥಿತಿಯನ್ನು ಸರಿಪಡಿಸುವಲ್ಲಿ ಸಿಂಹ ರಾಶಿಯವರು ಎತ್ತಿದ ಕೈ. ಈ ರಾಶಿಯವರು ಗೆಳೆಯರ ಬೇಸರವನ್ನು ಹೋಗಲಾಡಿಸಿ, ಅವರಲ್ಲಿ ಹೊಸ ಉತ್ಸಾಹವನ್ನು ತುಂಬುವ ಕೆಲಸವನ್ನು ಮಾಡುತ್ತಾರೆ. ಎಲ್ಲರೊಂದಿಗೆ ಬೇಗ ಹೊಂದಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಸಿಂಹ ರಾಶಿಯವರನ್ನು ಇತರರು ಹೆಚ್ಚು ಇಷ್ಟಪಡುತ್ತಾರೆ. ಗೆಳೆಯರ ಬಗೆಗಿನ ಮನಸ್ತಾಪ ಅಥವಾ ಬೇಸರಗಳೇನಿದ್ದರೂ ಬೇಗ ಕ್ಷಮಿಸಿ ಮರೆಯುವ ಸ್ವಭಾವ ಇವರದ್ದಾಗಿರುತ್ತದೆ.

ಕನ್ಯಾ ರಾಶಿ
ಭಾವನೆಗಳಿಗಿಂತ ಹೆಚ್ಚು ಬುದ್ಧಿಗೆ ಮಹತ್ವ ನೀಡುವ ಸ್ವಭಾವ ಕನ್ಯಾ ರಾಶಿಯವರದ್ದು. ಯಾರೊಂದಿಗೂ ಹೊಂದಿಕೊಳ್ಳದವರಂತೆ ಕಾಣಿಸಿಕೊಳ್ಳುವ ಇವರು ಬೇಕಾದಲ್ಲಿ ಉತ್ತಮ ಸಲಹೆಗಳನ್ನು ನೀಡುವ ಸ್ವಭಾವದವರು. ಗೆಳೆಯರ ಸಮಸ್ಯೆಗಳಿಗೆ ಮನಸ್ಸಿನಿಂದ ಯೋಚಿಸದೇ ಬುದ್ಧಿವಂತಿಕೆಯಿಂದ ಪರಿಹರಿಸುವ ಚಾಕಚಕ್ಯತೆ ಹೊಂದಿರುತ್ತಾರೆ. ಸರಿಯಾಗಿ ಆಲೋಚಿಸಿ ಸಲಹೆ, ಸೂಚನೆಗಳನ್ನು ಕೊಡುವ ಇವರು ಸ್ನೇಹಿತರ ಒಳಿತನ್ನೇ ಬಯಸುತ್ತಾರೆ.

ತುಲಾ ರಾಶಿ
ಯಾವುದೇ ರೀತಿಯ ಗುಣ-ಸ್ವಭಾವಗಳುಳ್ಳ ವ್ಯಕ್ತಿಗಳೊಂದಿಗೆ ಬೇಗ ಹೊಂದಿಕೊಳ್ಳುವ ತುಲಾ ರಾಶಿಯವರಿಗೆ ಹೆಚ್ಚು ಸ್ನೇಹಿತರು ಇರುತ್ತಾರೆ. ಗೆಳೆತನವನ್ನು ಅತ್ಯಂತ ಸುಂದರವಾಗಿ ನಿಭಾಯಿಸುವುದಲ್ಲದೇ ಹೋದಲ್ಲೆಲ್ಲಾ ಸ್ನೇಹಿತರನ್ನು  ಮಾಡಿಕೊಳ್ಳುವ ಗುಣ ಈ ರಾಶಿಯವರದ್ದು. ಗೆಳೆಯರ ಸ್ವಭಾವಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ.

ರಾಶಿಯನುಸಾರ ನಿಮ್ಮ ಸ್ನೇಹಿತರು ಯಾರು? ಶತ್ರುಗಳು ಯಾರು?

ವೃಶ್ಚಿಕ ರಾಶಿ
ನಿಜವಾದ, ಪ್ರಾಮಾಣಿಕ ಸ್ನೇಹವನ್ನುಳ್ಳವರು ವೃಶ್ಚಿಕ ರಾಶಿಯವರು. ಹಾಗಾಗಿ ಯಾವ ವಿಚಾರವನ್ನು ಬೇಗ ಮರೆಯುವ ಸ್ವಭಾವ ಇವರದ್ದಾಗಿರುವುದಿಲ್ಲ. ಸ್ನೇಹದಲ್ಲಾದ ಮೋಸವನ್ನು ಇವರು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹಾಗೆಯೇ ಉತ್ತಮ ಸ್ನೇಹವನ್ನು ಎಂದಿಗೂ ಮರೆಯುವುದಿಲ್ಲ. ಸುಳ್ಳಾಡುವುದನ್ನು ಈ ರಾಶಿಯವರು ಇಷ್ಟಪಡುವುದಿಲ್ಲ.

ಧನು ರಾಶಿ
ಮನಸ್ಸಿನಲ್ಲಿರುವುದನ್ನೇ ಮಾತಿನಲ್ಲಿ ಹೇಳುವ ಸ್ವಭಾವ ಈ ರಾಶಿಯವರದ್ದು. ಒಳಗೊಂದು ಹೊರಗೊಂದು ರೀತಿಯ ಗುಣ ಇವರದ್ದಾಗಿರುವುದಿಲ್ಲ. ಇವರ ಈ ಗುಣ ಬಲ್ಲ ಸ್ನೇಹಿತರು ಧನು ರಾಶಿಯವರ ಮಾತಿಗೆ ಬೇಸರ ಪಟ್ಟುಕೊಳ್ಳುವುದಿಲ್ಲ. ಈ ರಾಶಿಯವರ ಮೇಲೆ ಪೂರ್ಣ ವಿಶ್ವಾಸವನ್ನು ಇಡಬಹುದಾಗಿದೆ. ಗೆಳೆಯರ ಒಳ್ಳೆಯದನ್ನೇ ಬಯಸುವ ಇವರು ಗೆಳೆಯರಿಗೆ ಉತ್ತಮ ಮಾರ್ಗದರ್ಶಕರು ಸಹ ಆಗಿರುತ್ತಾರೆ.

ಇದನ್ನು ಓದಿ: ಪತ್ನಿಗೆ ಈ ನಾಲ್ಕು ಗುಣಗಳಿವೆ ಎಂದರೆ ಪತಿ ಅದೃಷ್ಟವಂತನೆಂದೇ ಅರ್ಥ…! 

ಮಕರ ರಾಶಿ
ಈ ರಾಶಿಯವರು ಗೆಳೆಯರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದಲ್ಲದೇ, ಸ್ನೇಹಿತರಿಗೋಸ್ಕರ ಉತ್ತಮ ಯೋಜನೆಗಳನ್ನು ಹಾಕಿಕೊಟ್ಟು ಅವರ ಸಫಲತೆಗೆ ಕಾರಣರಾಗುತ್ತಾರೆ. ಬದಲಾಗಿ ಏನನ್ನು ನಿರೀಕ್ಷಿಸದ ಉತ್ತಮ ಸ್ನೇಹ ಇವರದ್ದಾಗಿರುತ್ತದೆ.

ಕುಂಭ ರಾಶಿ
ಅತ್ಯಂತ ಮೃದು ಸ್ವಭಾವವನ್ನು ಹೊಂದಿರುವ ಈ ರಾಶಿಯವರು ನೋಡುಗರ ಕಣ್ಣಿಗೆ ಭಾವನೆಗಳಿಲ್ಲವರಂತೆ ಕಾಣುತ್ತಾರೆ. ಗೆಳೆಯರಿಗೆ ಸಹಾಯ ಮಾಡಲು ಸದಾ ಸಿದ್ಧರಿರುವ ಇವರು ಸ್ನೇಹಿತರೊಂದಿಗೆ ಸಮಯ ಕಳೆಯಲು ಇಷ್ಟ ಪಡುತ್ತಾರೆ.

ಮೀನ ರಾಶಿ
ಸೂಕ್ಷ್ಮ ಮತ್ತು ಪ್ರಾಮಾಣಿಕ ಗೆಳೆತನ ಮೀನ ರಾಶಿಯವರದ್ದು. ಸ್ನೇಹಿತರಿಗೆ ಸಹಾಯ ಒದಗಿಸುವುದು ಇವರಿಗೆ ಅಚ್ಚು-ಮೆಚ್ಚಿನದ್ದಾಗಿರುತ್ತದೆ. ಗೆಳೆಯರ ಸಮಸ್ಯೆಯನ್ನು ಸ್ವತಃ ತಮ್ಮ ಸಮಸ್ಯೆಯೆಂದೇ ಭಾವಿಸಿ ಪರಿಹಾರ ಹುಡುಕುತ್ತಾರೆ.