Asianet Suvarna News Asianet Suvarna News

Dasara 2022: ಕುಂದಾನಗರಿ ಬೆಳಗಾವಿಯಲ್ಲಿ ಕಲರ್‌ಫುಲ್ ದಾಂಡಿಯಾ ನೈಟ್ಸ್!

• ಕುಂದಾನಗರಿ ಬೆಳಗಾವಿಯಲ್ಲಿ ಕಲರ್‌ಫುಲ್ ದಸರಾ‌..!
• ದಾಂಡಿಯಾ ನೈಟ್ಸ್‌ನಲ್ಲಿ ಯುವಸಮೂಹ ಸಖತ್ ಸ್ಟೆಪ್ಸ್..!
• ಯುವಸಮೂಹ ಸೆಳೆಯಲು ಸ್ಥಳೀಯ ರಾಜಕೀಯ ನಾಯಕರ ಕಸರತ್ತು..!

Dasara 2022 Dandiya Night Dance Performed In Belagavi gvd
Author
First Published Oct 5, 2022, 10:22 AM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಅ.05): ದಸರಾ ಬಂದ್ರೆ ಸಾಕು ಕುಂದಾನಗರಿ ಬೆಳಗಾವಿಯ ಯುವ ಸಮೂಹ ಫುಲ್ ಹ್ಯಾಪಿ. ಬೆಳಗ್ಗೆ ದುರ್ಗಾಮಾತಾ ದೌಡ್‌ನಲ್ಲಿ ಯುವಸಮೂಹ ಭಾಗಿಯಾದ್ರೆ ಸಂಜೆಯಾದ್ರೆ ಸಾಕು ಕಲರ್‌ಫುಲ್ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಕನ್ನಡ ಮರಾಠಿ ಸೇರಿ ಉತ್ತರ ಭಾರತ ಸಂಸ್ಕೃತಿಗಳ ಸಂಗಮದಂತಿರುವ ಕಲರ್ ಫುಲ್ ನೈಟ್ಸ್ ಈ ದಾಂಡಿಯಾ ಉತ್ಸವ. ಗಡಿಜಿಲ್ಲೆ ಬೆಳಗಾವಿಯಲ್ಲಿ ಯಾವುದೇ ಹಬ್ಬ ಆಚರಣೆಯಾಗಲಿ ತುಂಬಾ ವಿಶಿಷ್ಟವಾಗಿರುತ್ತೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗಡಿಜಿಲ್ಲೆ ಬೆಳಗಾವಿಯಲ್ಲಿ ನಡೆಯುವ ಪ್ರತಿ ಹಬ್ಬದಲ್ಲಿ ಕನ್ನಡ ಮರಾಠಿ ಸಂಸ್ಕೃತಿಗಳ ಸಂಗಮ ಕಾಣಸಿಗುತ್ತೆ‌. 

ಅದರಂತೆ ದಸರಾ ವೇಳೆ ಹತ್ತು ದಿನಗಳ ಕಾಲ ನಡೆಯುವ ದಾಂಡಿಯಾ ಉತ್ಸವದಲ್ಲಿ ಯುವಕ ಯುವತಿಯರು ಕೋಲಾಟ ಆಡಿ ಡಿಜೆ ಸಾಂಗ್‌ಗಳಿಗೆ ಸ್ಟೆಪ್ಸ್ ಹಾಕಿ ಸಖತ್ ಆಗಿ ಎಂಜಾಯ್ ಮಾಡ್ತಾರೆ. ಈ ಮೊದಲು ದಾಂಡಿಯಾ ಉತ್ಸವ ಕೇವಲ ಬಡಾವಣೆಗಳಿಗೆ ಸೀಮಿತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರು ಯುವಸಮೂಹ ಸೆಳೆಯಲು ದಾಂಡಿಯಾ ಉತ್ಸವಗಳನ್ನು ಆಯೋಜನೆ ಮಾಡಿದ್ರೆ, ಮತ್ತೊಂದೆಡೆ ಅಲ್ಲಲ್ಲಿ ದಾಂಡಿಯಾ ಕ್ಲಬ್‌ಗಳು ತಲೆ ಎತ್ತಿವೆ. ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ನಗರದ ಸರ್ದಾರ್ ಮೈದಾನದಲ್ಲಿ ದಸರಾ ನಿಮಿತ್ತ ವಿವಿಧ ಸಾಂಸ್ಕೃತಿಕ ಉತ್ಸವ ಆಯೋಜನೆ ಮಾಡಿದ್ರೆ, ಚನ್ನಮ್ಮ ನಗರದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸಹ ದಾಂಡಿಯಾ ಉತ್ಸವ ಆಯೋಜನೆ ಮಾಡಿದ್ದಾರೆ. 

ಸಿದ್ದರಾಮಯ್ಯ, ಡಿಕೆಶಿ ಭಿನ್ನಾಭಿಪ್ರಾಯ ಬಗೆ ಹರಿಸಲು ಭಾರತ ಜೋಡೋ ಯಾತ್ರೆ: ಲಕ್ಷ್ಮಣ ಸವದಿ

ದಸರಾ ಸಂದರ್ಭದಲ್ಲಿ ಬೆಳಗ್ಗೆ ದೇಶ, ಧರ್ಮಪ್ರೇಮ ಜಾಗೃತಿಗೆ ದುರ್ಗಾಮಾತಾ ದೌಡ್‌ನಲ್ಲಿ ಯುವಸಮೂಹ ಭಾಗಿಯಾದ್ರೆ, ಸಂಜೆ ವೇಳೆ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಬೆಳಗಾವಿ ನಗರದ ಪ್ರತಿ ಬಡಾವಣೆ, ಅಪಾರ್ಟಮೆಂಟ್, ಮೈದಾನಗಳು, ಕಲ್ಯಾಣಮಂಟಪಗಳು ಹೀಗೆ ಎಲ್ಲಿ ನೋಡಿದರೂ ಅಲ್ಲಿ ದಾಂಡಿಯಾ ನೃತ್ಯ ಆಯೋಜನೆ ಮಾಡಿದ್ದಾರೆ. ಚಿಕ್ಕ ಚಿಕ್ಕಮಕ್ಕಳು ಕಾಲೇಜು ಯುವತಿಯರಿಂದ ಹಿಡಿದು ವಯಸ್ಸಾದವರು ಸಹಿತ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗುತ್ತಾರೆ. 

ದಾಂಡಿಯಾ ಉತ್ಸವದಲ್ಲಿ ಭಾಗಿಯಾಗಲೆಂದೇ ಒಂದು ತಿಂಗಳಿಂದ ದಾಂಡಿಯಾದಲ್ಲಿ ಡ್ರೆಸ್ಸಿಂಗ್ ಯಾವ ರೀತಿ ಇರಬೇಕು ಅಂತಾ ಸಿದ್ಧತೆ ಮಾಡಿಕೊಳ್ತೀವಿ ಅಂತಾರೆ ದಾಂಡಿಯಾ ಉತ್ಸವದಲ್ಲಿ ಭಾಗಿಯಾದ ಯುವತಿ ಮೇಘಾ‌‌. ಇನ್ನು ದಸರಾ ವೇಳೆ ಹತ್ತು ದಿನಗಳ ಕಾಲ ನಡೆಯುವ ದಾಂಡಿಯಾ ಉತ್ಸವ ವಿವಿಧತೆಯಲ್ಲಿ ಏಕತೆ ಸಾರುವ ಸಂಸ್ಕೃತಿ ಸಂಗಮ. ಕನ್ನಡ ಮರಾಠಿ ಗುಜರಾತಿ ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಯಾ ಭಾಷೆಯ ಸಾಂಪ್ರದಾಯಿಕ ಹಾಡುಗಳಿಗೆ ಕೋಲಾಟವಾಡುತ್ತಾ ಯುವಕ ಯುವತಿಯರು ಹೆಜ್ಜೆ ಹಾಕುತ್ತಾರೆ. ಬೆಳಗಾವಿಯ ಶಾಹೂ ನಗರ, ಅನ್ನಪೂರ್ಣವಾಡಿ, ರಾಮತೀರ್ಥ ನಗರ, ಹನುಮಾನ ನಗರ, ಆಜಂನಗರ, ಬಸವೇಶ್ವರ ನಗರ, ವಡಗಾವಿ, ಶಹಾಪುರ ಸೇರಿದಂತೆ ಪ್ರತಿಯೊಂದು ಬಡಾವಣೆಗಳಲ್ಲಿ ಕಲರ್‌ಫುಲ್ ದಾಂಡಿಯಾ ಉತ್ಸವ ನಡೆಯುತ್ತದೆ. 

ಬೆಳಗಾವಿ: ದೇಶ, ಧರ್ಮಪ್ರೇಮ ಜಾಗೃತಿಗೆ ದುರ್ಗಾಮಾತಾ ದೌಡ್

ಸಂಜೆ ಆದ್ರೆ ಸಾಕು ಇಡೀ ನಗರದಲ್ಲಿ ದಾಂಡಿಯಾ ದಂಡೇ ಕಾಣಿಸುತ್ತದೆ. ಇನ್ನು ನವರಾತ್ರಿಯ 9 ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿರುತ್ತೆ. ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂಡಿ ದಾಂಡಿಯಾದಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಾರೆ. ಒಟ್ಟಾರೆಯಾಗಿ ಎರಡು ವರ್ಷ ಕೋವಿಡ್ ಹಿನ್ನೆಲೆ ಬ್ರೇಕ್ ಬಿದ್ದಿದ್ದ ದಸರಾ ಉತ್ಸವ ಬೆಳಗಾವಿಯಲ್ಲಿ ಜೋರಾಗಿದೆ. ಭಾಷೆ, ಧರ್ಮ ಎಂಬ ಬೇಧಭಾವ ಇಲ್ಲದೇ ಎಲ್ಲರೂ ಜೊತೆಗೂಡಿ ಸಾಂಸ್ಕೃತಿಕ ಸುಖ ಹಂಚುವ ಆಟವೇ ಈ ಕೋಲಾಟ ಅಂತಾರೆ ಕುಂದಾನಗರಿ ಬೆಳಗಾವಿಯ ಜನ.

Follow Us:
Download App:
  • android
  • ios