ಬೆಳಗಾವಿ: ದೇಶ, ಧರ್ಮಪ್ರೇಮ ಜಾಗೃತಿಗೆ ದುರ್ಗಾಮಾತಾ ದೌಡ್
- ಕುಂದಾನಗರಿ ಬೆಳಗಾವಿಯಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ
- ಬೆಳಗಾವಿಯಲ್ಲಿ 25 ವರ್ಷಗಳಿಂದ ನಡೀತಿದೆ 'ದುರ್ಗಾಮಾತಾ ದೌಡ್'
- ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ದುರ್ಗಾಮಾತಾ ದೌಡ್
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಅ.3) : ದಸರಾ ಬಂದ್ರೆ ಸಾಕು ಕುಂದಾನಗರಿ ಬೆಳಗಾವಿಯ ಗಲ್ಲಿಗಲ್ಲಿಗಳೆಲ್ಲವೂ ಸಂಪೂರ್ಣ ಕೇಸರಿಮಯವಾಗುತ್ತದೆ. ಬೆಳಗ್ಗೆ5 ಗಂಟೆಗೇ ಎದ್ದು ಹೆಣ್ಣುಮಕ್ಕಳು ಮನೆ ಎದುರು ರಂಗೋಲಿ ಬಿಡಿಸಿ, ಹೂವಿನ ಅಲಂಕಾರ ಮಾಡಿ, ಮಕ್ಕಳಿಗೆ ಛತ್ರಪತಿ ಶಿವಾಜಿ ಮಹಾರಾಜ, ಜೀಜಾ ಮಾತಾ ಸೇರಿದಂತೆ ವಿವಿಧ ಮಹನೀಯರ ವೇಷಭೂಷಣ ತೊಡಿಸಿ ಓಟದಲ್ಲಿ ಭಾಗಿಯಾಗುತ್ತಾರೆ.
ರಾಮದುರ್ಗದಲ್ಲಿ ಭಾವೈಕ್ಯತೆ ಸಾರಿದ ದುರ್ಗಾಮಾತಾ ದೌಡ್
ಬೆಳ್ಳಂಬೆಳಗ್ಗೆ ಮನೆ ಎದುರು ಕಲರ್‌ಫುಲ್ ರಂಗೋಲಿ ಬಿಡಿಸಿ, ಪುಷ್ಪಾಲಂಕಾರ. ಜೀಜಾ ಮಾತಾ, ಛತ್ರಪತಿ ಶಿವಾಜಿ ಮಹಾರಾಜರ ವೇಷ ಭೂಷಣ ತೊಟ್ಟು ಚಿಣ್ಣರಿಂದ ಸಂಭ್ರಮ. ಕೇಸರಿ ಮುಂಡಾಸು ತೊಟ್ಟು ಕೇಸರಿ ಹಾಗೂ ಹಳದಿ ಶಾಲು ಸೊಂಟಕ್ಕೆ ಕಟ್ಟಿ ಸಹಸ್ರಾರು ಜನರಿಂದ ಓಟ. ಕೈಯಲ್ಲಿ ಹಿಡಿದ ಕೇಸರಿ ಧ್ವಜಕ್ಕೆ ಭಕ್ತಿಪೂರ್ವಕವಾಗಿ ಮಾಲಾರ್ಪಣೆ ಮಾಡಿ ನಮಿಸುವ ಭಕ್ತರು. ಓಟದುದ್ದಕ್ಕೂ ಭಾರತ್ ಮಾತಾ ಕೀ ಜೈ.. ವೀರರಾಣಿ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜಗೆ ಜೈಕಾರ.
ಬೆಳಗಾವಿ(Belagavi)ಯಲ್ಲಿ ದಸರಾ(Dasara) ವೇಳೆ ಶಿವಪ್ರತಿಷ್ಠಾನ ವತಿಯಿಂದ ಮಾಡುವ ದುರ್ಗಾಮಾತಾ ದೌಡ್(Shri Durgamata Daud)ನಲ್ಲಿ ದೌಡ್ ಅಂದ್ರೆ ಓಟ. ಪ್ರತಿವರ್ಷ ದಸರಾ ವೇಳೆ 9 ದಿನಗಳ ಕಾಲ ಬೆಳ್ಳಂಬೆಳಗ್ಗೆ ದುರ್ಗಾಮಾತಾ ಹೆಸರಿನಲ್ಲಿ ಕೈಗೊಳ್ಳುವ ಓಟವಾದ 'ದುರ್ಗಾಮಾತಾ ದೌಡ್' ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತೆ.
ಗಡಿಜಿಲ್ಲೆ ಬೆಳಗಾವಿ(Belagavi)ಯಲ್ಲಿ ವೈಭವೋಪೇತ ದಸರಾ(dasara) ಆಚರಣೆ ಮಾಡಲಾಗುತ್ತೆ. ನವರಾತ್ರಿ(Navratri)ಯ ಒಂಬತ್ತು ದಿನ ಬೆಳಗ್ಗೆ ದುರ್ಗಾಮಾತಾ ದೌಡ್ ಆಯೋಜನೆ ಮಾಡಿದ್ರೆ ರಾತ್ರಿ ವೇಳೆ ದಾಂಡಿಯಾ ಉತ್ಸವ(Dandiya Utsav)ಆಯೋಜನೆ ಮಾಡಲಾಗಿರುತ್ತೆ. ಬೆಳಗಾವಿ ನಗರದಲ್ಲಿನ ಗಲ್ಲಿಗಲ್ಲಿಯೂ ಸಂಪೂರ್ಣ ಕೇಸರಿಮಯವಾಗಿರುತ್ತೆ. ಶ್ವೇತವಸ್ತ್ರ ಧರಿಸಿ, ತಲೆಗೆ ಕೇಸರಿ ಮುಂಡಾಸು ತೊಟ್ಟು, ಸೊಂಟಕ್ಕೆ ಹಳದಿ, ಕೇಸರಿ ಶಾಲು ಕಟ್ಟಿಕೊಂಡು ಮ್ಯಾರಥಾನ್(Marathon) ಪಟುಗಳು ನಾಚುವಂತೆ ಸಹಸ್ರಾರು ಜನರು ಓಡುತ್ತಿದ್ದರೆ ಮನೆಬಾಗಿಲಿಗೆ ಬರುವ ಇವರನ್ನು ರಂಗೋಲಿ ಹಾಕಿ ಪುಷ್ಪಾಲಂಕಾರ ಮಾಡಿ ಸ್ವಾಗತಿಸಲಾಗುತ್ತೆ. ಕೈಯಲ್ಲಿರುವ ಭಗವಧ್ವಜಕ್ಕೆ ಮಾಲಾರ್ಪಣೆ ಮಾಡಿ ನಗರದ ಪ್ರಮುಖ ಮಂದಿರಗಳಿಗೆ ತೆರಳಿ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಲಾಗುತ್ತೆ.
ಬೆಳಗಾವಿ 'ದುರ್ಗಾಮಾತಾ ದೌಡ್'ಗೆ 25 ವರ್ಷಗಳ ಇತಿಹಾಸ
'ದುರ್ಗಾಮಾತಾ ದೌಡ್' ಸಂಪ್ರದಾಯಕ್ಕೆ ನಾಂದಿ ಹಾಡಿದವರು ಮಹಾರಾಷ್ಟ್ರ(Maharashtra)ದ ಹಿಂದೂ ಮುಖಂಡ ಸಂಭಾಜಿರಾವ್ ಭಿಡೆ(Sambhaji Bhide). ಸಂಭಾಜಿರಾವ್ ಭಿಡೆ ಸಂಸ್ಥಾಪಿಸಿರುವ ಶಿವಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆ ವತಿಯಿಂದ ಮಹಾರಾಷ್ಟ್ರದ ಸಾಂಗ್ಲಿ(Sangli)ಯಲ್ಲಿ 35 ವರ್ಷಗಳ ಹಿಂದೆ ದುರ್ಗಾಮಾತಾ ದೌಡ್‌ಗೆ ಚಾಲನೆ ನೀಡಲಾಗಿತ್ತು. ಇದಾದ ಹತ್ತು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಚಾಲನೆ ನೀಡಲಾಯಿತು.
ಕಳೆದ 25 ವರ್ಷಗಳಿಂದ ಬೆಳಗಾವಿಯಲ್ಲಿ ಅದ್ಧೂರಿಯಾಗಿ ದುರ್ಗಾಮಾತಾ ದೌಡ್(Durgamata daud) ನಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಓಟದಲ್ಲಿ ಭಾಗಿಯಾಗುವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳ ಕಾಲ ಕೋವಿಡ್(Covid) ಹಿನ್ನೆಲೆ ಅದ್ದೂರಿ ದುರ್ಗಾಮಾತಾ ದೌಡ್ ನೆರವೇರಿರಲಿಲ್ಲ. ಈ ವರ್ಷ ಮತ್ತೆ ದುರ್ಗಾಮಾತಾ ದೌಡ್ ಕಳೆಗಟ್ಟಿದ್ದು, ನಿತ್ಯ 35 ರಿಂದ 40 ಸಾವಿರ ಜನ ಭಾಗಿಯಾಗುತ್ತಿದ್ದಾರೆ. ಬೆಳಗಾವಿ ನಗರ ಅಷ್ಟೇ ಅಲ್ಲ, ವಿವಿಧ ತಾಲೂಕುಗಳಲ್ಲಿಯೂ ಅತ್ಯಂತ ವಿಜೃಂಭಣೆಯಿಂದ ದುರ್ಗಾಮಾತಾ ದೌಡ್ ಆಚರಿಸಲಾಗುತ್ತದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿವಪ್ರತಿಷ್ಠಾನ ಸಹಕಾರ್ಯವಾಹ ವಿಶ್ವನಾಥ ಪಾಟೀಲ್(Vishwanath Patil), 'ಕಳೆದ 25 ವರ್ಷಗಳಿಂದ ಬೆಳಗಾವಿಯಲ್ಲಿ ದುರ್ಗಾಮಾತಾ ದೌಡ್‌ನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಷ್ಟ್ರಪ್ರೇಮ ಧರ್ಮ ಪ್ರೇಮ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಸಂಭಾಜಿರಾವ ವಿನಾಯಕರಾವ್ ಬೀಡೆ ಗುರೂಜೀ ಪ್ರೇರಣೆಯಿಂದ 35 ವರ್ಷದ ಹಿಂದೆ ಸಾಂಗ್ಲಿಯಲ್ಲಿ ಆರಂಭಿಸಲಾಗಿತ್ತು. ಸರ್ವ ಹಿಂದೂ ಸಮಾಜದ ಒಗ್ಗಟ್ಟಿಗಾಗಿ, ದೇಶಪ್ರೇಮ ಧರ್ಮಪ್ರೇಮ ಜಾಗೃತಿಗಾಗಿ ದುರ್ಗಾಮಾತಾ ದೌಡ್ ಆಯೋಜಿಸಲಾಗಿತ್ತು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆ ದುರ್ಗಾಮಾತಾ ದೌಡ್ ಆಯೋಜಿಸಲು ಆಗಿರಲಿಲ್ಲ. ಈ ವರ್ಷ ನಿತ್ಯ 35 ರಿಂದ 40 ಸಾವಿರ ಜನರು ದುರ್ಗಾಮಾತಾ ದೌಡ್‌ನಲ್ಲಿ ಭಾಗಿಯಾಗುತ್ತಿದ್ದಾರೆ' ಎಂದು ತಿಳಿಸಿದರು.
ಕ್ಯಾಂಪ್ ಪ್ರದೇಶದಲ್ಲಿ ದುರ್ಗಾಮಾತಾ ದೌಡ್ ಸ್ವಾಗತಿಸಿದ ಮುಸ್ಲಿಂ ಬಾಂಧವರು..!
ಪ್ರತಿದಿನ ಕೆಲವು ಏರಿಯಾಗಳಂತೆ ದಸರಾ ವೇಳೆ ಒಂಬತ್ತು ದಿನ ಇಡೀ ಬೆಳಗಾವಿ ನಗರದ ಪ್ರತಿಯೊಂದು ಏರಿಯಾಗಳಲ್ಲೂ ಈ ದುರ್ಗಾ ಮಾತಾ ದೌಡ್ ಕಾರ್ಯಕ್ರಮ ನಡೆಯುತ್ತೆ. ಇಂದು ಬೆಳಗಾವಿಯ ಕ್ಯಾಂಪ್ ಪ್ರದೇಶಕ್ಕೆ ಆಗಮಿಸಿದ ದುರ್ಗಾಮಾತಾ ದೌಡ್‌ಗೆ ಮುಸ್ಲಿಂ ಬಾಂಧವರು ಸ್ವಾಗತ ಕೋರಿದರು. ಹಿಂದೂ ಮುಸ್ಲಿಂ ಭಾವೈಕ್ಯತೆಗೂ ಈ ದುರ್ಗಾಮಾತಾ ದೌಡ್ ಸಾಕ್ಷಿಯಾಯಿತು.
ದುರ್ಗಾಮಾತಾ ದೌಡ್‌ನಲ್ಲಿ ಭಾಗಿಯಾಗಿದ್ದ ಶಹಾಪುರ್ ನಿವಾಸಿ ಮಂಜುಳಾ ಮಾತನಾಡಿ ಎರಡು ವರ್ಷದ ಬಳಿಕ ದುರ್ಗಾಮಾತಾ ದೌಡ್ ಕಾರ್ಯಕ್ರಮ ನಡೆಯುತ್ತಿದ್ದು ರಾತ್ರಿಯಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಳಗ್ಗೆ ರಂಗೋಲಿ ಹಾಕಿ ಹೂಗಳಿಂದ ಸಿಂಗಾರ ಮಾಡಿ ದೌಡ್ ನಲ್ಲಿ ಭಾಗಿಯಾಗುತ್ತೇವೆ. ನವರಾತ್ರಿಯ ಒಂಬತ್ತು ದಿನ ಉಪವಾಸ ಮಾಡಲಾಗುತ್ತೆ. ಬೆಳಗ್ಗೆ ದೌಡ್‌ನಲ್ಲಿ ಭಾಗವಹಿಸಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತೇವೆ, ರಾತ್ರಿ ವೇಳೆ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗುತ್ತೇವೆ' ಎಂದರು
ಇಸ್ಲಾಂ ಬಿಟ್ಟು ಹಿಂದು ಧರ್ಮಕ್ಕೆ ಮರಳಿದ 3 ಕುಟುಂಬ, ಹೆಸರು ಬದಲಾಯಿಸಿಕೊಂಡ್ರು
ಇನ್ನು ದುರ್ಗಾಮಾತಾ ದೌಡ್ ಆಯೋಜನೆ ಮಾಡಬೇಕಂದ್ರೆ ಕೆಲವೊಂದಿಷ್ಟು ನಿಯಮ ರೂಪಿಸಲಾಗಿದೆ. ಓಟದ ಮುಂದಾಳತ್ವ ವಹಿಸುವವರ ಕೈಯಲ್ಲಿ ಕತ್ತಿ ಹಾಗೂ ಕೇಸರಿ ಧ್ವಜ ಇರುತ್ತೆ. ಈ ಓಟದಲ್ಲಿ ಭಾಗಿಯಾಗುವವರು ಶ್ವೇತ ಬಣ್ಣದ ಬಟ್ಟೆ ಧರಿಸಿ, ತಲೆಗೆ ಕೇಸರಿ ಮುಂಡಾಸು ಸುತ್ತಿರಬೇಕು. ಯಾವುದೇ ರಾಜಕೀಯ ಅಥವಾ ಸಂಘಟನೆಯ ಟೀಶರ್ಟ್‌ಗಳಿಗೆ ಇಲ್ಲಿ ಅವಕಾಶ ಇರೋದಿಲ್ಲ. ಒಟ್ಟಾರೆ ಯುವ ಸಮುದಾಯಕ್ಕೆ ದೇಶಪ್ರೇಮ ಹಾಗೂ ಧರ್ಮದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಯುವ ದುರ್ಗಾಮಾತಾ ದೌಡ್ ಅತ್ಯಂತ ವಿಶಿಷ್ಟವಾಗಿದೆ.