ಮಣ್ಣಿನ ಗಣಪನಾ? ಪಿಓಪಿ ಗಣೇಶನಾ? ಗೊಂದಲದಲ್ಲಿ ಭಕ್ತರು!
ಸರಕಾರ ಈ ಬಾರಿ ಗಣೇಶೋತ್ಸವ ನಿಮಿತ್ತವಾಗಿ ಹೇರಿದ್ದ ಎಲ್ಲಾ ನಿಯಮಗಳನ್ನು ಹಿಂಪಡೆದು ಸಂಭ್ರಮದ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇತ್ತ ಈ ಸಾರಿ ಮಣ್ಣಿನ ಗಣೇಶನನ್ನ ಸ್ಥಾಪನೆ ಮಾಡೋದಾ ಅಥವಾ ಪಿಓಪಿ ಗಣೇಶನಾ ಎನ್ನುವ ಗೊಂದಲದಲ್ಲಿ ಭಕ್ತ ಸಮೂಹವಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆಗಷ್ಟ 16) : ಗಣೇಶ ಹಬ್ಬ ಸಮೀಪಿಸುತ್ತಿದೆ. ಗೌರಿಪುತ್ರನ ಸ್ವಾಗತಕ್ಕೆ ಭಕ್ತರು ಸಜ್ಜಾಗುತ್ತಿದ್ದಾರೆ. ಈಗಾಗಲೇ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸರಕಾರ ಈ ಬಾರಿ ಗಣೇಶೋತ್ಸವ ನಿಮಿತ್ತವಾಗಿ ಹೇರಿದ್ದ ಎಲ್ಲಾ ನಿಯಮಗಳನ್ನು ಹಿಂಪಡೆದು ಸಂಭ್ರಮದ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇತ್ತ ಈ ಸಾರಿ ಮಣ್ಣಿನ ಗಣೇಶನನ್ನ ಸ್ಥಾಪನೆ ಮಾಡೋದಾ ಅಥವಾ ಪಿಓಪಿ ಗಣೇಶನಾ ಎನ್ನುವ ಗೊಂದಲದಲ್ಲಿ ಭಕ್ತ ಸಮೂಹವಿದೆ. ಹೀಗಾಗಿ ಈ ಗೊಂದಲ ನಿವಾರಣೆಗೆ ವಿಜಯಪುರ ಜಿಲ್ಲೆಯ ಹಿಂದೂ ಮುಖಂಡರು, ನಾಯಕರು ಮುಂದಾಗಿದ್ದಾರೆ. ವಿಜಯಪುರ ನಗರದಲ್ಲಿ ಈ ಬಾರಿ ಗಣೇಶೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಅದರಲ್ಲೂ ಪರಿಸರ ಪ್ರೇಮ ಮೆರೆಯವಂತೆ ಜಿಲ್ಲೆಯ ಪರಿಸರ ಪ್ರೇಮಿಗಳು ಗಣೇಶ ಭಕ್ತರಿಗೆ ಮನವಿ ಮಾಡುತ್ತಿದ್ದಾರೆ. ಗಣೇಶೋತ್ಸವ ನಿರ್ಬಂಧ ವಾಪಸ್ ತೆಗೆದುಕೊಂಡಿದ್ದನ್ನು ನಗರ ಗಣೇಶ ಉತ್ಸವ ಮಹಾ ಮಂಡಲ ದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸ್ವಾಗತಿಸಿದ್ದಾರೆ.
ಪಿಓಪಿ ಬದಲಿಗೆ ಮಣ್ಣಿನ ಗಣೇಶನಿಗೆ ಆಧ್ಯತೆ ನೀಡಿ!
ಪ್ರತಿ ಬಾರಿ ಪಿಓಪಿ ಹಾಗೂ ಮಣ್ಣಿನ ಗಣೇಶ ಮೂರ್ತಿ ಕುರಿತು ಸರಕಾರ ಹಾಗೂ ಭಕ್ತರ ನಡುವೆ ಜಟಾಪಟಿ, ಗೊಂದಲ ನಡೆಯುತ್ತದೆ. ಆದ್ರೆ ಸರಕಾರ ಮಾತ್ರ ಪಿಓಪಿ ಮೂರ್ತಿ ಬ್ಯಾನ್ ಎಂದು ಆದೇಶ ಹೊರಡಿಸುತ್ತದೆ. ಲಕ್ಷಾನುಗಟ್ಟಲೇ ಮಣ್ಣಿನ ಗಣಪ ಮೂರ್ತಿ ಸಿಗುವದು ಅಸಾಧ್ಯದ ಮಾತು. ಆದ್ರೂ ಸರಕಾರದ ಮಾರ್ಗಸೂಚಿಯಂತೆ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ ಪರಿಸರ ರಕ್ಷಿಸಿ ಎಂದು ಪರಿಸರ ಪ್ರೇಮಿಗಳು ಮನವಿ ಮಾಡ್ತಿದ್ದಾರೆ.
ಮಣ್ಣಿನ ಗಣಪನ ಪೂಜೆಯೆ ಶ್ರೇಷ್ಠ!
ಪಿಓಪಿ ಗಣೇಶನ ಮೂರ್ತಿ ಪೂಜೆಗಿಂತ ಮಣ್ಣಿನ ಗಣೇಶನ ಪೂಜೆ ಶ್ರೇಷ್ಠ. ಮಣ್ಣಿನ ಗಣೇಶನ ಆರಾಧನೆಯೆ ಶ್ರಾಸ್ತೋಕ್ತವಾದದ್ದು. ಪಿಓಪಿ ಗಣೇಶ ಸ್ಥಾಪನೆ ಮಾಡಿ ಪೂಜೆ ಮಾಡಿದ್ರೆ ಧಾರ್ಮಿಕವಾಗಿ ಅದಕ್ಕೆ ಮಾನ್ಯತೆ ಸಿಗೋದಿಲ್ಲ. ಬದಲಿಗೆ ಮಣ್ಣಿನ ಗಣೇಶನ ಪೂಜೆಯೆ ಶ್ರೇಷ್ಠ.
ಈದ್ಗಾ ಮೈದಾನದಲ್ಲಿ ಈ ಸಲ ಗಣೇಶೋತ್ಸವ ಆಚರಿಸಿಯೇ ಸಿದ್ಧ: ಸನಾತನ ಸಂಸ್ಥೆ
ಪಿಓಪಿ ಪರಿಸರ ಸ್ನೇಹಿ ಅಲ್ಲ, ಹಾನಿಯೆ ಹೆಚ್ಚು!
ಗಣೇಶೋತ್ಸವ ಸಂದರ್ಭದಲ್ಲಿ ನಮ್ಮತನ ಮರೆಯುವದು ಬೇಡಾ, ಪಿಓಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಡಿಮೆ ಮಾಡಿ, ಜಲಮೂಲ ರಕ್ಷಣೆ ನಿಮ್ಮೆಲ್ಲರ ಆದ್ಯ ಕರ್ತವ್ಯ ಹೀಗಾಗಿ ವಿವೇಚನೆಯಿಂದ ಹಬ್ಬ ಆಚರಿಸಿ ಎಂದು ಹಿಂದೂ ಮುಖಂಡ ಹಾಗೂ ಪರಿಸರ ಪ್ರೇಮಿ ಡಾ. ಬಾಬುರಾಜೇಂದ್ರ ನಾಯಿಕ್ ಮನವಿ ಮಾಡಿದ್ದಾರೆ. ಪಿಓಪಿಗಿಂತ ಮಣ್ಣಿನ ಗಣೇಶ ಸ್ಥಾಪನೆಯಿಂದ ಪರಿಸರ ರಕ್ಷಣೆಯಾಗಲಿದೆ. ಜಲಮೂಲಗಳಿಗೆ ಉಂಟಾಗುವ ಹಾನಿ ತಪ್ಪಲಿದೆ.
ಚಾಮರಾಜಪೇಟೆ ಈದ್ಗಾ ವಿವಾದ: ದಿನಕ್ಕೊಂದು ರೂಪ ಪಡೆಯುತ್ತಿರುವ ಗಣೇಶೋತ್ಸವ ಗಲಾಟೆ
ಈ ಬಾರಿಯೂ ಗೊಂದಲ ಸೃಷ್ಟಿ!
ಪ್ರತಿ ವರ್ಷವೂ ಈ ಗೊಂದಲ ಇದ್ದೆ ಇರುತ್ತೆ. ಆದ್ರೆ ಈ ಬಾರಿ ಸ್ವತಃ ಹಿಂದು ಮುಖಂಡರು ಹಾಗೂ ಗಣೇಶ ಮಂಡಳಿಗಳ ಅಧ್ಯಕ್ಷರು ಸಾರ್ವಜನಿಕರಲ್ಲಿ ಮಣ್ಣಿನ ಗಣೇಶ ಪ್ರತಿಷ್ಠಾಪಿಸಲು ಮನವಿ ಮಾಡಿದ್ದು ಭಕ್ತರು ಅದ್ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.