Asianet Suvarna News Asianet Suvarna News

ಚಾಮರಾಜಪೇಟೆ ಮೈದಾನ ಗಣೇಶೋತ್ಸವಕ್ಕೆ ಭರದ ಸಿದ್ಧತೆ

  •  ಚಾಮರಾಜಪೇಟೆ ಮೈದಾನ ಗಣೇಶೋತ್ಸವಕ್ಕೆ ಭರದ ಸಿದ್ಧತೆ
  • ವಿಶ್ವ ಹಿಂದು ಪರಿಷತ್‌ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಸಭೆ
  • ಉತ್ಸವಕ್ಕೆ 10 ರಿಂದ 12 ಸಮಿತಿಗಳ ರಚನೆ

 

Chamarajpete Maidan is busy preparing for Ganeshotsavam bengaluru rav
Author
Bengaluru, First Published Aug 22, 2022, 9:28 AM IST

ಬೆಂಗಳೂರು (ಆ.22) : ನಗರದ ಚಾಮರಾಜಪೇಟೆ ಮೈದಾನದಲ್ಲಿ 11 ದಿನ ಗಣೇಶೋತ್ಸವಕ್ಕೆ ಕಂದಾಯ ಇಲಾಖೆ ಅನುಮತಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಉತ್ಸವ ಆಚರಣೆಗೆ ಪೂರ್ವ ಸಿದ್ಧತೆ ಆರಂಭಿಸಿವೆ. ನಗರದ ಶಂಕರಪುರದ ವಿಶ್ವ ಹಿಂದು ಪರಿಷತ್‌(Vishwa Hindu Parishad) ಕಚೇರಿಯಲ್ಲಿ ಭಾನುವಾರ ಚಾಮರಾಜಪೇಟೆ ನಾಗರಿಕ ಒಕ್ಕೂಟ, ಬೆಂಗಳೂರು(Bengaluru) ಗಣೇಶೋತ್ಸವ ಸಮಿತಿ ಸೇರಿದಂತೆ ಎಂಟು ವಿವಿಧ ಸಂಘಟನೆಯ ಪದಾಧಿಕಾರಿಗಳು ಸಭೆ ನಡೆಸಿದರು.

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ನಾಗರಿಕರ ಒಕ್ಕೂಟದ ಸದಸ್ಯರ ಮೇಲೆ ಕೇಸ್‌?

ಗಣೇಶೋತ್ಸವದ ಯಶಸ್ಸಿಗೆ ಪೂರಕವಾಗಿ ಧಾರ್ಮಿಕ ಆಚರಣಾ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಪ್ರಸಾದ ವಿತರಣೆ ಸಮಿತಿ, ಪ್ರಚಾರ ಸಮಿತಿ ಸೇರಿದಂತೆ 10 ರಿಂದ 12 ಸಮಿತಿಗಳನ್ನು ರಚನೆ ಮಾಡಲಾಗಿದೆ. ಪ್ರತಿ ಸಮಿತಿಯಲ್ಲಿ 10 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶರಾಜು(Prakash Raju), ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಅದ್ಧೂರಿಯಾಗಿ ಗಣೇಶ ಉತ್ಸವ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಮ್ಮೊಂದಿಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಮತ್ತು ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ಕೂಡ ಕೈಜೋಡಿಸಿವೆ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಾಗಿ ಕಂದಾಯ ಇಲಾಖೆ ಸಚಿವ ಆರ್‌.ಅಶೋಕ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

150 ಗಣೇಶ ಮೂರ್ತಿ ಮೆರವಣಿಗೆ: ಕಳೆದ ಎರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಅದ್ಧೂರಿ ಗಣೇಶ ಉತ್ಸವಕ್ಕೆ ಕಡಿವಾಣವಿತ್ತು. ಆದರೆ, ಈ ವರ್ಷ ಸೋಂಕು ನಿಯಂತ್ರಣದಲ್ಲಿರುವ ಕಾರಣ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರ್ಷ ವಿಶೇಷವಾಗಿ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದ 150ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ವೇಳೆ ಪಾದರಾಯನಪುರಕ್ಕೆ ತಂದು, ಸಾಮೂಹಿಕವಾಗಿ ಟೌನ್‌ಹಾಲ್‌ವರೆಗೆ ಮೆರವಣಿಗೆ ಮಾಡಲಾಗುತ್ತದೆ. ಪ್ರತಿಯೊಂದು ಕಾರ್ಯಗಳನ್ನು ಸಮಿತಿಯ ಎಲ್ಲ ಸದಸ್ಯರಿಗೂ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಪಟ್ಟು ಬಿಡದ ಹಿಂದೂ ಸಂಘಟನೆಗಳು

ಹೋರಾಟಗಾರರ ಭಾವಚಿತ್ರ ಪ್ರದರ್ಶನ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣೇಶೋತ್ಸವದ ಪೆಂಡಾಲ್‌ಗಳಲ್ಲಿ ವೀರ ಸಾವರ್ಕರ್‌ ಸೇರಿ ವಿವಿಧ ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರಗಳನ್ನು ಅಳವಡಿಸಿ ಸ್ಮರಣೆ ಮಾಡಲಾಗುತ್ತದೆ. ಗಣೇಶೋತ್ಸವ ಬಗ್ಗೆ ವಿವಿಧ ಸಂಘಟನೆಗಳೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಅಂತಿಮ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

10 ರಿಂದ 12 ಅಡಿ ಎತ್ತರದ ಗಣೇಶ: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಇನ್ನೂ ಸರ್ಕಾರ ಅವಕಾಶ ನೀಡಿಲ್ಲ. ಆದರೂ ಈಗಾಗಲೇ ಗಣೇಶ ಮೂರ್ತಿ ರಚನೆಗೆ ಆರ್ಡರ್‌ ಮಾಡಲಾಗಿದ್ದು, 10 ರಿಂದ 12 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಉದ್ದೇಶಿಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios