Asianet Suvarna News Asianet Suvarna News

ಟೊಪ್ಪಿ ಹಾಕ್ಕೊಂಡು ಊರು ತಿರುಗೋ ಈ ಮಹಿಳೆ ದರ್ಶನಕ್ಕೆ ಮುಗಿ ಬೀಳ್ತಾರೆ ಜನ! ಏನಿವಳ ಶಕ್ತಿ?

ಈಕೆ ನಡೆದು ಹೋಗ್ತಿದ್ರೆ ಸಾಕು, ದಾರಿಯಲ್ಲಿ ಹೋಗೋ ಜನರೆಲ್ಲ ಕೈ ಎತ್ತಿ ಮುಗೀತಾರೆ! ಆಕೆ ದೇವರ ಅಪರಾವತಾರ ಎಂದು ಭಕ್ತಿಯಿಂದ ನಮಸ್ಕರಿಸ್ತಾರೆ! ಇಷ್ಟಕ್ಕೂ ತನ್ನ ಇಂಥ ಭಕ್ತರಿಗೆ ಆಕೆ ಆಶೀರ್ವಾದಿಸುವುದಾದರೂ ಹೇಗೆ? ತಿರುಗಿ ಉಗಿಯುತ್ತಾಳೆ, ಇಲ್ಲವೇ ಬೈತಾಳೆ ಅಥವಾ ಒದೆಯಲು ಹೋಗುತ್ತಾಳೆ.

A mentally disabled women is being worshipped as Toppi Amma in Tamil Nadu skr
Author
First Published Apr 29, 2023, 12:01 PM IST

ಈಕೆಯ ಫೋಟೋ ಸರಿಯಾಗಿ ನೋಡಿ..ಸ್ನಾನ ಮಾಡಿ ಅದೆಷ್ಟೋ ವರ್ಷಗಳಾಗಿರಬೇಕು. ಇನ್ನು ಬಟ್ಟೆಯಂತೂ ಹೊಗೆಸೊಪ್ಪು ತಿಂದು ಅದನ್ನು ಮೈ ಮೇಲೇ ಅದೆಷ್ಟು ಬಾರಿ ಅಗೆದುಕೊಂಡಿರಬಹುದೋ! ಕೆದರಿದ ಕೂದಲಂತೂ ಎಣ್ಣೆ ನೀರು ಕಂಡು ದಶಕವೇ ಆದಂತಿದೆ. ಈಕೆ ದಾರಿಯುದ್ದಕ್ಕೂ ಉಗುಳುತ್ತಾ, ಭಿಕ್ಷುಕಿಯಂತೆ ಮನಸ್ಸು ಬಂದಲ್ಲಿ ಓಡಾಡುತ್ತಾಳೆ. ಅದರಲ್ಲೇನು ವಿಶೇಷ, ಇಂಥವರು ಗಲ್ಲಿಗಲ್ಲೀಲೂ, ಹಳ್ಳಿ ದಿಲ್ಲೀಲೂ ಸಿಗ್ತಾರೆ ಅಂದ್ರಾ?
ವಿಶೇಷ ಏನಂದ್ರೆ ಈಕೆ ನಡೆದು ಹೋಗ್ತಿದ್ರೆ ಸಾಕು, ದಾರಿಯಲ್ಲಿ ಹೋಗೋ ಜನರೆಲ್ಲ ಕೈ ಎತ್ತಿ ಮುಗೀತಾರೆ! ಆಕೆ ದೇವರ ಅಪರಾವತಾರ ಎಂದು ಭಕ್ತಿಯಿಂದ ನಮಸ್ಕರಿಸ್ತಾರೆ! ಇಷ್ಟಕ್ಕೂ ತನ್ನ ಇಂಥ ಭಕ್ತರಿಗೆ ಆಕೆ ಆಶೀರ್ವಾದಿಸುವುದಾದರೂ ಹೇಗೆ? ತಿರುಗಿ ಉಗಿಯುತ್ತಾಳೆ, ಇಲ್ಲವೇ ಬೈತಾಳೆ ಅಥವಾ ಒದೆಯಲು ಹೋಗುತ್ತಾಳೆ. ಅದನ್ನೇ ಮಹಾಪ್ರಸಾದ ಎಂದು ಸಂತೋಷ ಪಡ್ತಾರೆ ಜನ!

ಹೌದು, ಹೀಗೆ ಅಲೆದಾಡುವ ಮಹಿಳೆಯನ್ನು ಅವಧೂತೆ ಎಂದು ಪರಿಗಣಿಸಲಾಗುತ್ತಿದ್ದು, ಟೋಪಿ ಅಮ್ಮ ಎಂಬ ಹೆಸರಲ್ಲಿ ಕರೆಯಲಾಗುತ್ತದೆ. ತಮಿಳುನಾಡಿನ ತಿರುವಣ್ಣಾಮಲೈ ಪರ್ವತಗಳಲ್ಲಿ ಅರುಣಾಚಲಂ ಕ್ಷೇತ್ರದಲ್ಲಿ ಈಕೆಯನ್ನು ಕಾಣಬಹುದು. ಈಕೆ ಪ್ರತಿದಿನ ಬೆಳಗ್ಗೆ ಗಿರಿ ಪ್ರದಕ್ಷಿಣೆ ಮಾಡುತ್ತಾಳೆ. ಬೀದಿಬದಿ ವ್ಯಾಪಾರಿಗಳು ಆಕೆ ತಮ್ಮಿಂದ ಏನಾದರೂ ತೆಗೆದುಕೊಂಡರೆ ಸಾಕು, ತಮ್ಮನ್ನು ಆಶೀರ್ವದಿಸುತ್ತಿದ್ದಾಳೆ ಎಂದು ಪರಿಗಣಿಸುತ್ತಾರೆ. ಏಕೆಂದರೆ, ಅವಳು ಸಾಮಾನ್ಯವಾಗಿ ಯಾರಿಂದಲೂ ಏನನ್ನೂ ಸ್ವೀಕರಿಸುವುದಿಲ್ಲ. ಒಂದು ವೇಳೆ ತೆಗೆದುಕೊಂಡರೂ ಹೆಚ್ಚು ಯೋಚಿಸದೆ ಎಸೆದು ಬಿಡುತ್ತಾಳೆ. ಅಮೂಲ್ಯ ವಸ್ತುವಾದರೂ ಆಕೆ ಅದರತ್ತ ತಿರುಗಿ ನೋಡದೆ ಎಸೆಯುತ್ತಾಳೆ. ಅದನ್ನು ಅವಳ ವೈರಾಗ್ಯ ಎಂದು ಜನ ಭಾವಿಸುತ್ತಾರೆ. ಯೋಗಿ ರಾಮ್ ಸೂರತ್ ಕುಮಾರ್ ಅವರ ಆಶ್ರಮದಲ್ಲಿ ಆಕೆಯನ್ನು ಸಂಜೆಯ ಸಮಯದಲ್ಲಿ ಕಾಣಬಹುದು. ಅಲ್ಲಿ ಜನರು ಅವಳ ದರ್ಶನಕ್ಕಾಗಿ ಬರುತ್ತಾರೆ ಮತ್ತು ಚಾಯ್‌ನೊಂದಿಗೆ ಉಪಹಾರವನ್ನು ನೀಡುತ್ತಾರೆ. 

ಶನಿಯಿಂದಾಗಿ ಈ ರಾಶಿಗಳಿಗೆ ಶಶ ಮಹಾಪುರುಷ ಯೋಗ; ಲಾಭಗಳೇನು?

ಆಶ್ರಮದ ಟ್ರಸ್ಟಿಯೊಬ್ಬರು ಹೇಳುವಂತೆ, ಅನೇಕರು ಅವಳಿಗೆ ಲಕ್ಷ ಲಕ್ಷ ಹಣ ನೀಡಲು ನೋಡಿದ್ದಾರೆ. ಆದರೆ ಆಕೆ ಅವೆಲ್ಲವನ್ನು ನಿರಾಕರಿಸಿ ತನ್ನ ಪಾಡಿಗೆ ತಾನಿರುವ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಯ ದರ್ಶನ ಮತ್ತು ಆಶೀರ್ವಾದ ಸಿಕ್ಕುವುದೇ ದೊಡ್ಡ ಭಾಗ್ಯ ಎಂದು ಇಲ್ಲಿನ ಜನ ನಂಬುತ್ತಾರೆ. 

ಮಾರಿಯಮ್ಮನ ಪುನರ್ಜನ್ಮ!
ಹಿಂದೆ ಕನ್ಯಾಕುಮಾರಿಯಲ್ಲಿ ಮಾರಿಯಮ್ಮ ಎಂಬುವವರೊಬ್ಬರು ಇದ್ದರು. ಒಮ್ಮೆ ಅಲ್ಲಿ ನಾಯಿಯೊಂದು ವಾಹನದ ಅಡಿಗೆ ಸಿಕ್ಕಿ ಸಾವನ್ನಪ್ಪಿತು. ಅದರ ಕರುಳೆಲ್ಲ ಹೊರ ಬಂದಿತ್ತು. ಆಗ ಮಾರಿಯಮ್ಮ ಅದರ ರಕ್ತಸಿಕ್ತ ಕರುಳನ್ನು ಹೊಟ್ಟೆಯೊಳಗೆ ತಳ್ಳಿದಳು, ಅದರ ಮೈ ಸವರಿದಳು. ಆಗ ನಾಯಿ ಜೀವ ಬಂದು ಎದ್ದು ನಿಂತಿತು. ಇದನ್ನು ನೋಡಿದ ಜನ ಅವಳನ್ನು ದೇವರೆಂದು ಪೂಜಿಸಲಾರಂಭಿಸಿದರು. ಕೆಲ ವರ್ಷಗಳಲ್ಲಿ ಆಕೆ ಸತ್ತಳು. ಈಗ ಆಕೆಯೇ ಅರುಣಾಚಲಂನಲ್ಲಿ ಈ ಟೋಪಿ ಅಮ್ಮನಾಗಿ ಹುಟ್ಟಿದ್ದಾಳೆಂಬುದು ಜನರ ನಂಬಿಕೆ. ಈ ಟೋಪಿ ಅಮ್ಮ ವ್ಯಕ್ತಿಯೊಬ್ಬನನ್ನು ಸುಮ್ಮನೆ ತಾಕಿದ್ದಕ್ಕೆ ಆತನ ಕಿಡ್ನಿಯ ಕಲ್ಲು ಕರಗಿತಂತೆ! ಇಂಥ ಪವಾಡಗಳ ಕತೆ ಈಕೆಯ ಸುತ್ತ ಹುಟ್ಟುತ್ತಲೇ ಇದೆ. ಅದೇನೇ ಇರಲಿ, ಜನರ ನಂಬಿಕೆಯಿಂದಾಗಿ ಈಕೆಗೂ ಗೌರವ ಸಿಗ್ತಿದೆ, ಅಷ್ಟೇ ಅಲ್ಲ, ಹೊಟ್ಟೆಗೆ ಹಿಟ್ಟೂ ದಕ್ತಿದೆ. 
ಇದೆಲ್ಲ ನೋಡಿದ್ರೆ ಜನ ಮರುಳೋ, ಆಕೆಗೆ ಮರುಳೋ ಅರ್ಥವಾಗುವುದಿಲ್ಲ.

ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾದ Gayatri Mantra; ಸಂಶೋಧನೆ ಹೇಳಿದ್ದೇನು?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios