Asianet Suvarna News Asianet Suvarna News

ಪ್ರಕೃತಿ ಸೊಬಗಿನಿಂದ ಮನಸೆಳೆಯುವ ಈ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ!

ಪ್ರಾಕೃತಿಕ ಸೊನಗಿನ ನಡುವೆ ಇರೋ ಈ ದೇವಾಲಯಗಳು ಮನಸ್ಸಿಗೆ ತಂಪು, ಕಣ್ಣಿಗೂ ತಂಪು. ಭಕ್ತಿಯ ಜೊತೆಗೆ ಪರಿಸರ ಪ್ರೇಮವೂ ನಿಮ್ಮಲ್ಲಿದ್ದರೆ ಈ ದೇವಾಲಯಗಳಿಗೆ ಹೋಗುವುದನ್ನು ಎಂದೂ ತಪ್ಪಿಸಬೇಡಿ.
 

7 temples in Karnataka admid beautiful nature
Author
Bangalore, First Published Jan 4, 2020, 10:02 AM IST
  • Facebook
  • Twitter
  • Whatsapp

ವರ್ಷದ ಕೊನೆಯ ರಜೆಯಲ್ಲಿ ಅಥವಾ ಹೊಸ ವರುಷದ ಆರಂಭದಲ್ಲಿ ದೇವಾಲಯಗಳಿಗೆ ಟೂರ್‌ ಹೋಗುವ ಹವ್ಯಾಸ ನಿಮ್ಮಲ್ಲಿರಬಹುದು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಇವೆಲ್ಲ ನಿಮಗೆ ಗೊತ್ತಿದ್ದದ್ದೇ. ಇದಲ್ಲದೇ ನಮ್ಮ ಸುತ್ತಮುತ್ತಲೂ ಹಲವು ದೇವಸ್ಥಾನಗಳಿವೆ. ಇವು ಎಂಥ ಪ್ರಕೃತಿ ಸೊಬಗಿನ ನಡುವೆ ಇವೆ ಎಂದರೆ, ನೀವು ಗರ್ಭಗುಡಿಯ ಒಳಗಿರೋ ದೇವರಿಗಿಂತಲೂ ಹೊರಗಿರೋ ಪ್ರಕೃತಿಗೇ ಮನಸೋತು ಬಿಡ್ತೀರ. ಅಂಥ ಸೊಬಗಿನ ತಾಣಗಳಿಗೆ ನೀವು ಈಗ ಯಾಕೆ ಭೇಟಿ ಕೊಡಬಾರದು?

ದೇವಸ್ಥಾನಗಳೇಕೆ ಎತ್ತರದ ಸ್ಥಳದಲ್ಲಿರುತ್ತವೆ?

ಹಿಮವದ್‌ ಗೋಪಾಲಸ್ವಾಮಿ ಬೆಟ್ಟ

ಬಂಡಿಪುರ ಮೂಲಕ ಊಟಿಗೆ ತೆರಳುವ ದಾರಿಯಲ್ಲಿ, ಗುಂಡ್ಲುಪೇಟೆ ಬಳಿ ಸಿಗುವ  ದೇವಾಲಯ ಒಂದು ಬೆಟ್ಟದ ಮೇಲಿದೆ. ಬಹುತೇಕ ಇಲ್ಲಿ ಸದಾ ಮಂಜು ಕವಿದಿರುತ್ತದೆ. ಮಂಜು ಸರಿದಾಗ ಸುತ್ತಲಿನ ಹುಲ್ಲುಗಾವಲು, ಕಾಡು ಸ್ವರ್ಗದಂತೆ ಗೋಚರಿಸುತ್ತದೆ. ನಡುವೆ ಗೋಪಾಲಸ್ವಾಮಿಯ ತಂಪು ತಂಪು ಕೂಲ್‌ ಕೂಲ್‌ ದೇವಾಲಯ. ಇಲ್ಲಿ ಮನಸ್ಸು ತನ್ಮಯವಾಗುತ್ತದೆ. ಬೆಟ್ಟದ ಬುಡದಿಂದ ಕೆಎಸ್‌ಆರ್ಟಿಸಿ ಬಸ್ಸುಗಳು ನಿಮ್ಮನ್ನು ಮೇಲೆ ಕೊಂಡೊಯ್ಯುತ್ತವೆ.

ಸೌತೆಡ್ಕ ಗಣಪತಿ ದೇವಾಲಯ

ಬೆಳ್ತಂಗಡಿ ತಾಲೂಕಿನಲ್ಲಿ, ಹೆದ್ದಾರಿಯ ಬದಿಯಲ್ಲಿಯೇ ಇರೋ ಸೌತೆಡ್ಕದಲ್ಲಿ ಶ್ರೀ ಗಣಪತಿ  ನೆಲೆಸಿದ್ದಾನೆ. ಸುತ್ತಮುತ್ತ ದಟ್ಟ ಕಾಡು. ಗಣಪತಿಯ ವಿಶೇಷ ಏನೆಂದರೆ ಆತನಿಗೆ ಬಯಲೇ ಆಲಯ. ಗಾಳಿ ಬೆಳಕು ಮಳೆಗಳು ಆತನಿಗೆ ಸದಾ ಸೇವೆ ಸಲ್ಲಿಸುತ್ತಿರುತ್ತವೆ. ಆತನಿಗೆ ಮಳೆಯ ಅಭಿಷೇಕ ಆಗುತ್ತಿದ್ದರೆ ನೀವೂ ನೆನೆಯಲೇಬೇಕು. ಇಲ್ಲಿ ಹರಕೆ ಹೇಳಿಕೊಂಡು ಭಕ್ತರು ತಮ್ಮ ಹರಕೆ ಈಡೇರಿದರೆ ಗಂಟೆ ತಂದು ಕಟ್ಟುತ್ತಾರೆ. ಗುಡಿಯಿಲ್ಲದ ಆವರಣದಲ್ಲಿ ಇವು ಸದಾ ಟಿಂಟಿಣೀ ಸದ್ದು ಮಾಡುತ್ತಿರುತ್ತವೆ.

ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?

ಬಿಳಿಗಿರಿರಂಗನ ಬೆಟ್ಟ

ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿ ರಂಗನ ಬೆಟ್ಟ, ಪ್ರಾಕೃತಿಕ ಸೌಂದರ‍್ಯದಿಂದ ನಿಮ್ಮನ್ನು ಚಿತ್ತಾಗಿಸೋ ತಾಣ. ಇಲ್ಲಿಗೆ ತಲುಪವ ಹಾದಿಯೇ ಮನೋಹರ. ಕಾಡಿನ ನಡುವೆ ಹತ್ತಾರು ಹಿಮ್ಮುರಿ ತಿರುವು. ಇದು ಸೋಲಿಗರ ನೆಲೆವೀಡು. ರಂಗನಾಥಸ್ವಾಮಿಯ ಅನುಗ್ರಹಪೂರ್ವಕ ದೃಷ್ಟಿಯನ್ನು ನೋಡುವ ಮೊದಲು ಸುತ್ತಲಿನ ಪ್ರಕೃತಿ ರಮಣೀಯತೆ ನೋಡಿ ಸುಖಿಸಬಹುದು. ಸೋಲಿಗರು ಸಂಗ್ರಹಿಸಿದ ಅಪ್ಪಟ ಕಾಡಿನ ಜೇನು, ಕಾಡುತ್ಪನ್ನಗಳೂ ಇಲ್ಲಿ ಸಿಗುತ್ತವೆ.

ಸಹಸ್ರಲಿಂಗೇಶ್ವರ ಶಿರಸಿ

ಜಲಪಾತಗಳ ತಾಣ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಿಂದ ಬರೀ 14 ಕಿಲೋಮೀಟರ್‌ ದೂರದಲ್ಲಿದೆ ಸಹಸ್ರಲಿಂಗೇಶ್ವರ ದೇವಾಲಯ, ಜುಳುಜುಳು ನಾದದೊಂದಿಗೆ ಹರಿಯುವ ಶಾಲ್ಮಲಿ ನದಿಯೇ ಇಲ್ಲಿ ದೇವಾಲಯ. ಈ ನದಿಯಲ್ಲಿ ನೀರು ಇಳಿದಾಗ ಸಾವಿರಾರು ಲಿಂಗಗಳು ನದಿಯ ಕಲ್ಲುಬಂಡೆಗಳಲ್ಲಿ ಕಾಣಿಸುತ್ತವೆ. ಇನ್ನೂ ಯಾವುದೇ ಆಧುನಿಕ ಸಂಗತಿಗಳು ಕಾಲಿಡದ ಈ ಊರಿಗೆ ಭೇಟಿ ನೀಡುವುದಕ್ಕೆ ಚಳಿಗಾಲ, ಬೇಸಿಗೆಗಾಲ ಪ್ರಶಸ್ತ.

ಸಿಗಂದೂರು ಚೌಡೇಶ್ವರಿ

ಶಿರಸಿಯ ಸಮೀಪದ ಸಿಗಂದೂರಿನ ಚೌಡೇಶ್ವರಿ ದೇವಿಯ ಗುಡಿ, ಆಸ್ತಿಕರಿಗೂ ಪ್ರಕೃತಿಪ್ರಿಯರಿಗೂ ಇಷ್ಟವಾಗುವಂಥದ್ದು. ಲಾಂಚ್‌ನ ಮೂಲಕ ಶರವಾತಿ ನದಿಯ ಹಿನ್ನೀರನ್ನು ದಾಟುವುದು ರೋಮಾಂಚಕ ಅನುಭವ. ನದಿ ದಾಟದೆ ದೇವತೆ ದರ್ಶನ ಕೊಡಲಾರಳು. ಮರಗಿಡಗಳ ನಡುವೆ ನೆಲೆನಿಂತ ಚೌಡೇಶ್ವರಿ ಮಧ್ಯಾಹ್ನದ ಪ್ರಸಾದವನ್ನೂ ನೀಡುವಾಕೆ.

ಮನೋಕಾಮನೆ ಈಡೇರಿಸೋ ಸಂತಾನೇಶ್ವರ ಮಹಾದೇವ

ಗೋಕರ್ಣ ಮಹಾಬಲೇಶ್ವರ

ಸಮುದ್ರದ ದಂಡೆಯಲ್ಲಿರುವ ಗೋಕರ್ಣದಲ್ಲಿ ಎಲ್ಲಿ ನೋಡಿದರೂ ಬೀಚ್‌ಗಳೇ. ಹಾಗೇ ನಿಮ್ಮನ್ನು ಮಹಾಬಲೇಶ್ವರ ದೇವರೂ ಕೈಬೀಸಿ ಕರೆಯುತ್ತಾನೆ. ರಾವಣನ ಕೈಯಿಂದ ಆತ್ಮಲಿಂಗವನ್ನು ಕಸಿದು ಗೋಕರ್ಣದಲ್ಲಿ ನೆಲೆ ನಿಲ್ಲಿಸಿದ ಗಣಪತಿಯೂ ಕಾಣಿಸುತ್ತಾನೆ. ಬೀಚ್‌ಗಳಲ್ಲಿ ಮನದಣಿಯೆ ಆಡಬಹುದು.

ಕೊಲ್ಲೂರು ಮೂಕಾಂಬಿಕಾ

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡುವುದಾದರೆ ಅಲ್ಲೇ ಪಕ್ಕದಲ್ಲಿರುವ ಕೊಡಚಾದ್ರಿಗೂ ಭೇಟಿ ನೀಡದೆ ಮರಳಬೇಡಿ. ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿಪೀಠ ಅಲ್ಲೇ ಇರುವುದು. ಕೊಡಚಾದ್ರಿಗೆ ತರಳುವ ಹಾದಿ ಕಷ್ಟ, ನಿಮ್ಮ ಕಾರು ಕೆಳಗೆ ಬಿಟ್ಟು ಜೀಪಿನಲ್ಲೇ ಹೋಗಬೇಕು. ಆದರೆ ಮೇಲೆ ಹೋಗುತ್ತ ಆಗುವ ಅನುಭವ ಮಾತ್ರ ಹೃದಯಂಗಮ.

ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದೇಕೆ?

Follow Us:
Download App:
  • android
  • ios