ವಿಶ್ರಾಂತಿಗಾಗಿ ಸಲೂನ್‌ನಲ್ಲಿ ಕಾಲ ಕಳೆಯೋರ ಗಮನಕ್ಕೆ, ಹೊಸ ರೋಗ ಬರೋ ಸಾಧ್ಯತೆ ಇದೆ!
ಸಮಯವಿಲ್ಲ, ಒತ್ತಡ ಹೆಚ್ಚಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು ಎನ್ನುವವರು ಸಲೂನ್ ಗೆ ಹೋಗಿ ಮಸಾಜ್, ಹೆಡ್ ವಾಶ್ ಮಾಡಿಕೊಳ್ತಾರೆ. ಈ ತಲೆ ಸ್ನಾನ ನಿಮಗೆ ಹಿತವೆನ್ನಿಸಿದ್ರೂ ಅಪಾಯಕಾರಿ. ಅದ್ರಿಂದ ಏನು ಸಮಸ್ಯೆ ಕಾಡುತ್ತೆ ಗೊತ್ತಾ>?
ಬ್ಯೂಟಿ ಸಲೂನ್ ಗೆ ಹೋಗುವ ಜನರು ತಮ್ಮ ಕೂದಲು ಹಾಗೂ ಚರ್ಮದ ಆರೈಕೆ ಮೇಲೆ ಹೆಚ್ಚಿನ ಪ್ರೀತಿ ಹೊಂದಿರುತ್ತಾರೆ. ಚರ್ಮ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವ ಜೊತೆಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅನೇಕರು ಬ್ಯೂಟಿ ಸಲೂನ್ ಗೆ ಹೋಗಿ ಮಸಾಜ್ ಮಾಡಿಸಿಕೊಳ್ತಾರೆ. ಬ್ಯೂಟಿ ಸಲೂನ್ ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಮಾರಣಾಂತಿಕ, ಗಂಭೀರ ಖಾಯಿಲೆಗಳಿಗೂ ಇದು ಕಾರಣವಾಗುತ್ತದೆ. ಅದ್ರಲ್ಲಿ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಕೂಡ ಒಂದು. ನಾವಿಂದು ಬ್ಯೂಟಿ ಪಾರ್ಲರ್ ಸ್ಟ್ರೋಕ್ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ನೀಡ್ತೇವೆ.
ಸಲೂನ್ (Salon ) ಸ್ಟ್ರೋಕ್ ಎಂದರೇನು? : ಬ್ಯೂಟಿ ಪಾರ್ಲರ್ ಅಥವಾ ಸಲೂನ್ ಸ್ಟ್ರೋಕ್ (Stroke) ಅಪರೂಪದ ವೈದ್ಯಕೀಯ ಸ್ಥಿತಿಯಾಗಿದೆ. ಅದು ಕುತ್ತಿಗೆ ಮಸಾಜ್ ಸಮಯದಲ್ಲಿ ಇದ್ದಕ್ಕಿದ್ದಂತೆ ಸಂಭವಿಸಬಹುದು. ಕೆಲವೊಮ್ಮೆ ಈ ಮಸಾಜ್‌ಗಳು ಮೆದುಳಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಮೆದುಳಿನ ಕೆಲವು ಪ್ರದೇಶಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಸಲೂನ್ ಸ್ಟ್ರೋಕ್ ಎಂಬ ಪದವು ಇತ್ತೀಚೆಗೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಪಾರ್ಲರ್‌ನಲ್ಲಿ ತಮ್ಮ ಕೂದಲು ವಾಶ್ ಮಾಡುವ ಸಂದರ್ಭದಲ್ಲಿ ವಾಕರಿಕೆ, ತಲೆತಿರುಗುವಿಕೆ ಮತ್ತು ವಾಂತಿ ಸಮಸ್ಯೆಗೆ ಒಳಗಾಗಿದ್ದರು. ನಂತ್ರ ವೈದ್ಯರು ಇದನ್ನು ಪಾರ್ಶ್ವವಾಯು ಎಂದು ಗುರುತಿಸಿದ್ರು.
ಸಲೂನ್ ಸ್ಟ್ರೋಕ್ ಲಕ್ಷಣಗಳು : ಸಲೂನ್ ನಲ್ಲಿ ತಲೆ ವಾಶ್ ಮಾಡಿಕೊಂಡು ಸ್ಟ್ರೋಕ್ ಗೆ ಒಳಗಾದ ಕೆಲ ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ವರದಿ ಆಧರಿಸಿ ಅದ್ರ ಲಕ್ಷಣಗಳನ್ನು ನೋಡೋದಾದ್ರೆ ,ಮುಖ, ಕಾಲು ಅಥವಾ ತೋಳುಗಳ ಭಾಗದಲ್ಲಿ ಮರಗಟ್ಟುವಿಕೆ, ತಲೆತಿರುಗುವಿಕೆ, ಅಸ್ಪಷ್ಟ ಮಾತು ಅಥವಾ ಮಾತನಾಡಲು ತೊಂದರೆ, ಪದಗಳನ್ನು ಗ್ರಹಿಸುವಲ್ಲಿ ತೊಂದರೆ, ತೀವ್ರ ಮತ್ತು ನಿರಂತರ ತಲೆನೋವು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಇದಕ್ಕೆ ಕಾರಣವೇನು? : ನೀವು ಸಲೂನ್ ನಲ್ಲಿ ಕೂದಲು ವಾಶ್ ಮಾಡಿಸಿಕೊಳ್ಳುವಾಗ ನಿಮ್ಮ ಭಂಗಿ ಭಿನ್ನವಾಗಿರುತ್ತದೆ. ನೀವು ಮನೆಯಲ್ಲಿ ತಲೆ ಸ್ನಾನ ಮಾಡಿದಂತೆ ಸಲೂನ್ ನಲ್ಲಿ ಮಾಡೋದಿಲ್ಲ. ನಿಮ್ಮ ಕತ್ತು ಹಿಂದಕ್ಕೆ ಭಾಗಿರುತ್ತದೆ. ಇದು ಸ್ಟ್ರೋಕ್ ಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಲೂನ್‌ನಲ್ಲಿ ಕೂದಲು ತೊಳೆಯುವ ಸಮಯದಲ್ಲಿ ಹಠಾತ್ ಅತಿಯಾದ ಹಿಗ್ಗಿಸುವಿಕೆ, ಕುತ್ತಿಗೆಯ ಮೇಲೆ ಬೀಳುವ ತಣ್ಣೀರು ಅಥವಾ ದೋಷಯುಕ್ತ ಮಸಾಜ್ ತಂತ್ರಗಳು ಇದಕ್ಕೆ ಕಾರಣವಾಗುತ್ತದೆ. ಅಪರೂಪಕ್ಕೆ ತಲೆಯ ತಳದ ಅಪಧಮನಿ ಛಿದ್ರಗೊಳ್ಳುವ ಅಪಾಯವಿರುತ್ತದೆ.
ಸಲೂನ್ ಸ್ಟ್ರೋಕ್ ಯಾರನ್ನು ಹೆಚ್ಚಾಗಿ ಕಾಡುತ್ತದೆ? : ಸಲೂನ್ ಸ್ಟ್ರೋಕ್ ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿರುವ ಅಥವಾ ಕೆಲ ಖಾಯಿಲೆಯಿಂದ ಬಳಲುತ್ತಿರುವ ಜನರನ್ನು ಹೆಚ್ಚು ಕಾಡುತ್ತದೆ. ಮಧುಮೇಹಿಗಳು. ತೀವ್ರ ರಕ್ತದೊತ್ತಡದಿಂದ ಬಳಲುವ ಜನ, ಹಿಂದೆ ಮೆದುಳಿನ ಸ್ಟ್ರೋಕ್ ಗೆ ಒಳಗಾಗಿದ್ದವರು, ಹೃದಯ ರೋಗದಿಂದ ಬಳಲುತ್ತಿರುವವರು ಹಾಗೂ ಬೊಜ್ಜಿರುವ ವ್ಯಕ್ತಿಗಳಲ್ಲದೆ, ಅತಿ ಹೆಚ್ಚು ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ.
ಶ್ರೀಮಂತರೂ ಈ ಆಹಾರಗಳನ್ನ ತಿನ್ನೋಕೆ ಹಿಂದೆ ಮುಂದೆ ನೋಡ್ತಾರೆ!
ಸಲೂನ್ ಸ್ಟ್ರೋಕ್ ತಡೆಯೋದು ಹೇಗೆ? :
• ತಲೆ ತೊಳೆಯುವಾಗ ಕುತ್ತಿಗೆಯ ಹಠಾತ್ ಬಾಗಿಸುವ ಪ್ರಯತ್ನಕ್ಕೆ ಹೋಗಬೇಡಿ.
• ಸಲೂನ್‌ನಲ್ಲಿ ಅತಿಯಾದ ಶಕ್ತಿಯುತ ಮಸಾಜ್ ಮಾಡಿಸಿಕೊಳ್ಳಬೇಡಿ.
• ಕೂದಲನ್ನು ತೊಳೆಯಲು ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಬಳಸಿ.
• ಯಾವುದೇ ಗಂಭೀರ ಖಾಯಿಲೆ ಇದ್ದಲ್ಲಿ ಸಲೂನ್ ವಾಶ್ ಒಳ್ಳೆಯದಲ್ಲ.
• ಬ್ಯೂಟಿ ಪಾರ್ಲರ್ ಅಥವಾ ಹೇರ್ ಸಲೂನ್ ಯಾವಾಗಲೂ ನಮಗೆ ಆರಾಮ ಮತ್ತು ತಾಜಾತನ ನೀಡುತ್ತದೆ ನಿಜ. ಅಲ್ಲದೆ ನಿಮ್ಮ ಸಮಯವನ್ನೂ ಉಳಿಸುತ್ತದೆಯಾದ್ರೂ ನೀವು ಮನೆಯಲ್ಲೇ ತಲೆ ವಾಶ್ ಮಾಡಿಕೊಳ್ಳೋದು ಒಳ್ಳೆಯದು.
• ಬ್ಯೂಟಿ ಪಾರ್ಲರ್ ನಲ್ಲಿ ತಲೆ ವಾಶ್ ಮಾಡುವಾಗ ಯಾವುದೇ ಅಸ್ವಸ್ಥತೆಯುಂಟಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.