Hair Beauty: ಬಿಯರ್ ಶ್ಯಾಂಪೂ ಗೊತ್ತು, ಹಾಗೆ ಕೋಕೋ ಕೋಲಾ ಕೂಡ ಕೂದಲಿಗೆ ಬೆಸ್ಟ್
ದಿಢೀರ್ ಎಂದು ಕೂದಲಿನ ಹೊಳಪು ಹೆಚ್ಚಿಸಿಕೊಳ್ಳಬೇಕೆ? ಕೂದಲು ಮೃದುವಾಗಿ, ಬಿರುಸು ಕಳೆದುಕೊಳ್ಳಬೇಕೆ? ಹಾಗಿದ್ದರೆ ಕೋಕಕೋಲಾ ಬಳಕೆ ಮಾಡಿ. ಕೂದಲನ್ನು ಕೋಲಾದಿಂದ ಬಳಕೆ ಮಾಡುವುದರಿಂದ ಸಾಕಷ್ಟು ಲಾಭವಿದೆ.
ನವಿರಾದ, ನಯವಾದ ಎಳೆಗಳ, ಜಿಡ್ಡಿಲ್ಲದ ಆದರೆ, ಅತಿಯಾಗಿ ಒಣಗಿರದ ಚಂದದ ಕೂದಲನ್ನು ಹೊಂದಬೇಕು ಎನ್ನುವುದು ಎಲ್ಲರ ಆಸೆ. ಅದರಲ್ಲೂ ಮಹಿಳೆಯರು ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಲು ಏನೆಲ್ಲ ಪ್ರಯತ್ನ ಪಡುತ್ತಾರೆ. ಆದರೂ ಅವರ ಕೂದಲು ಡಲ್ ಆಗಿರುತ್ತದೆ. ದುರ್ಬಲವಾಗಿದ್ದು, ನೋಡಲು ಆಕರ್ಷಕವೆನಿಸುವುದಿಲ್ಲ ಹಾಗೂ ಅವುಗಳನ್ನು ಕಾಪಾಡಿಕೊಳ್ಳುವುದು ಸಹ ಕಷ್ಟವಾಗುತ್ತದೆ. ಆದರೆ, ಸುಂದರ ಕೂದಲಿಗಾಗಿ ಪ್ರಯತ್ನ ಪಡುತ್ತಿರುವವರು ನೀವೊಬ್ಬರೇ ಅಲ್ಲ, ಲಕ್ಷಾಂತರ ಜನರಿದ್ದಾರೆ. ಇಲ್ಲೊಂದು ಅಚ್ಚರಿಯ ಸಂಗತಿ ಇದೆ. ಅದೇನೆಂದರೆ, ಕೋಕಕೋಲಾ ಬಳಕೆ ಮಾಡಿ ಕೂದಲನ್ನು ನವಿರಾಗಿ, ಮೃದುವಾಗಿ ಮಾಡಿಕೊಳ್ಳಬಹುದು. ಕೋಕಕೋಲಾದಲ್ಲಿ ಸಿಹಿ ಇರುತ್ತದೆಯಲ್ಲವೇ? ಅದನ್ನು ಹೇಗೆ ಬಳಕೆ ಮಾಡಲು ಸಾಧ್ಯ ಎಂದು ಕೇಳಬಹುದು. ಆದರೆ, ಕೆಲವು ಈ ಪ್ರಯತ್ನ ಮಾಡಿ ಯಶಸ್ಸು ಗಳಿಸಿದ್ದಾರೆ. ನಿಮಗೆ ಎಲ್ಲೋ ಹೋಗಬೇಕೆಂದಿದೆ, ಪಾರ್ಟಿಯಿದೆ, ಸ್ನೇಹಿತರು ಸೇರುವವರಿದ್ದೀರಿ ಎಂದಾದಾಗ ನೀವು ಕೂದಲ ಬಗ್ಗೆ ಕಾಳಜಿ ವಹಿಸುತ್ತೀರಲ್ಲವೇ? ಆಗ ಕೋಕಕೋಲಾದಲ್ಲಿ ಕೂದಲಿಗೆ ಸ್ನಾನ ಮಾಡಿಸಿ ಚಂದ ಕಾಣುವಂತೆ ಮಾಡಬಹುದು. ಕೋಲಾದಲ್ಲಿ ಕೂದಲ ಸ್ನಾನ ಮಾಡುವುದರಿಂದ ಸ್ವಲ್ಪ ಹೊತ್ತಿನಲ್ಲೇ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.
ಮೈ ಮೇಲೆ ಕೋಲಾವನ್ನು ಹಾಕಿಕೊಳ್ಳದೇ ಕೂದಲಿಗೆ ಮಾತ್ರ ಬಳಕೆ ಮಾಡಬೇಕು. ಸಾಮಾನ್ಯ ಕೂದಲಿಗೆ ಒಂದು ದೊಡ್ಡ ಬಾಟಲಿಯಷ್ಟು ಕೋಲಾ ಸಾಕಾಗುತ್ತದೆ. ಅದನ್ನು ತಲೆ ಕೂದಲಿಗೆ ಹಾಕಿಕೊಳ್ಳುತ್ತ, ಒಂದು ಅಗಲವಾದ ಬೌಲ್ ನಲ್ಲಿ ಕೋಲಾವನ್ನು ಸಂಗ್ರಹ ಮಾಡಿಕೊಳ್ಳಬಹುದು.
ಎಲ್ಲ ಕೂದಲುಗಳೂ ಸರಿಯಾಗಿ ಕೋಲಾದಲ್ಲಿ ನೆನೆಯುವಂತೆ ಮಾಡಿಕೊಳ್ಳಬೇಕು. ಕೂದಲ ಬುಡಕ್ಕೆ ತಾಗಿದರೂ ಪರವಾಗಿಲ್ಲ. ಆದರೆ, ಎಲ್ಲ ಕೂದಲುಗಳನ್ನೂ ಸರಿಯಾಗಿ ಕೋಲಾದಲ್ಲಿ ನೆನೆಸಬೇಕು.
ಬಳಿಕ, ಸ್ವಲ್ಪ ಹೊತ್ತು ಅದು ನೀರಿನಂತೆ ಬಸಿದು ಹೋಗುತ್ತದೆ. ಹಾಗೆಯೇ ಬಸಿದು ಹೋಗಲು ಬಿಟ್ಟ ಬಳಿಕ, ಕೂದಲನ್ನು ಹಿಂಡಬಹುದು. ಆದರೆ, ಬಟ್ಟೆಯಲ್ಲಿ ಒರೆಸಬಾರದು. ಬಳಿಕ, ಡ್ರೈಯರ್ ತೆಗೆದುಕೊಂಡು ಕೂದಲನ್ನು ಒಣಗಿಸಿಕೊಳ್ಳಬಹುದು ಅಥವಾ ಸೂರ್ಯನ ಬಿಸಿಲಿದ್ದರೆ ಅಲ್ಲಿಯೂ ಒಣಗಿಸಿಕೊಳ್ಳಬಹುದು. ಸಂಜೆ ಪಾರ್ಟಿಗೆ ಹೋಗಬೇಕು ಎಂದಾದರೆ ಬೆಳಗ್ಗೆ ಅಥವಾ ಮಧ್ಯಾಹ್ನ ಮನೆಯಲ್ಲೇ ಹೀಗೆ ಮಾಡಿ ಕೂದಲ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಹೆಚ್ಚೆಂದರೆ ಅರ್ಧ ಗಂಟೆ ಸಾಕು, ಕೂದಲು ಒಣಗಲು ಸ್ವಲ್ಪ ಸಮಯ ಬೇಕಾಗುತ್ತದೆಯಷ್ಟೆ.
ಕೋಲಾದಲ್ಲಿರುವ ಆಸಿಡ್ ನಿಂದ ಕೂದಲಿಗೆ ಲಾಭ
ಗಡುಸಾದ ಕೂದಲಿಗೆ ಕೋಲಾ ಬಳಕೆ ಮಾಡುವುದರಿಂದ ಮೃದುವಾಗುತ್ತದೆ. ಕುಂಟು ಕೂದಲಿಗೂ ಇದು ಉತ್ತಮ ಎನ್ನಲಾಗುತ್ತದೆ. ಕೋಲಾದಲ್ಲಿರುವ ಅಧಿಕ ಪ್ರಮಾಣದ ಆಸಿಡಿಟಿ ಅಂಶ ಕೂದಲಿನ ಎಳೆಗಳಲ್ಲಿರುವ ದೌರ್ಬಲ್ಯವನ್ನು ಮುಚ್ಚಲು ಮತ್ತು ಸಂಕುಚಿತಗೊಳಿಸುತ್ತದೆ. ಹಾಗೆಯೇ, ಕೂದಲಿಗೆ ಹೊಳಪು ಬರುತ್ತದೆ. ಬ್ಯೂಟಿ ವ್ಲಾಗರ್ ಎಲ್ಕೋ ಈ ಬಗ್ಗೆ ಟಿಪ್ಸ್ ನೀಡಿದ್ದಾರೆ.
ಮನೆಯಲ್ಲಿ ಮಾವಿನ ಮರ ಇದ್ಯಾ? ಹಾಗಾದ್ರೆ ಕೂದಲಿನ ಸಮಸ್ಯೆ ಚಿಂತೆ ಬಿಟ್ಬಿಡಿ…
ಕೋಲಾದಿಂದ ಬೇರೆ ಪ್ರಯೋಜನವೇ ಹೆಚ್ಚು
ಅಸಲಿಗೆ, ಕೋಲಾದಿಂದ ಇತರ ಪ್ರಯೋಜನಗಳು ಸಾಕಷ್ಟಿವೆ. ಕೋಲಾವನ್ನು ಕುಡಿಯುವ ಬದಲು ಬೇರೆ ಬೇರೆ ಉದ್ದೇಶಕ್ಕೆ ಬಳಕೆ ಮಾಡುವುದು ಲಾಭಕರ. ಏಕೆಂದರೆ, ಇದನ್ನು ಪಾನೀಯವಾಗಿ ಸೇವನೆ ಮಾಡುವ ಬಗ್ಗೆ ಸಾಕಷ್ಟು ಆಕ್ಷೇಪಗಳಿವೆ. ಒಂದೊಮ್ಮೆ ನಿಮ್ಮ ಮನೆಯ ಟೀ ಮಾಡುವ ಪಾತ್ರ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಸ್ವಲ್ಪ ಹೊತ್ತು ಕೋಲಾ ಹಾಕಿಟ್ಟು ನೋಡಿ. ಹಾಗೂ ಟಾಯ್ಲೆಟ್ ಕ್ಲೀನಿಂಗಿಗೂ ಸಹ ಕೋಲಾ ಅತ್ಯುತ್ತಮ. ಇದರಲ್ಲಿರುವ ರಾಸಾಯನಿಕಗಳು ವಸ್ತುಗಳನ್ನು ಕ್ಲೀನ್ ಮಾಡಲು ಬಳಸುವಂತಿರುತ್ತವೆ. ಕೂದಲಿಗೆ ಅಂಟಿಕೊಂಡ ಚ್ಯೂಯಿಂಗ್ ಗಮ್ ಅನ್ನೂ ಸಹ ಕೋಲಾ ಬಳಕೆ ಮಾಡಿ ಸುಲಭವಾಗಿ ತೆಗೆಯಬಹುದು. ಮನೆಯಲ್ಲಿ ಮಕ್ಕಳು ಆಟವಾಡುತ್ತ ಕೂದಲಿಗೆ ಗಮ್ ಮೆತ್ತಿಕೊಂಡರೆ ಆತಂಕ ಬೇಡ, ಅದಕ್ಕೆ ಬೌಲ್ ನಲ್ಲಿ ಕೋಲಾ ಹಾಕಿ ಸ್ವಲ್ಪ ಹೊತ್ತು ಕೂದಲನ್ನು ಅದರಲ್ಲಿ ಇರಿಸಿದರೆ ಆರಾಮಾಗಿ ಬಿಟ್ಟುಬಿಡುತ್ತದೆ.