ಉದಯಪುರದಲ್ಲಿ ವಿವಾಹವಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ, ಇದೀಗ ರಶ್ಮಿಕಾ ಹುಟ್ಟೂರಾದ ಕೊಡಗಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ರಶ್ಮಿಕಾ ಸಂಪೂರ್ಣ ಕೊಡವ ಸಂಪ್ರದಾಯದಂತೆ ಕೆಂಪು ಸೀರೆ ಮತ್ತು ಪತ್ತಕ್, ಜೋಮಾಲೆಯಂತಹ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಮಿಂಚಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಅತ್ಯಾಪ್ತರ ಸಮ್ಮುಖದಲ್ಲಿ ಮದುವೆಯಾದ ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯದೇವರಕೊಂಡ ಅದಾದ ನಂತರ ಹೈದರಾಬಾದ್‌ ನಲ್ಲಿ ಅದ್ಧೂರಿ ರಿಸೆಪ್ಷನ್ ಮಾಡಿಕೊಂಡಿದ್ದರು. ಇದೀಗ ಕೊಡಗಿನ ಕುವರಿ ರಶ್ಮಿಕಾ ತನ್ನ ಹುಟ್ಟೂರು ಕೊಡಗಿನಲ್ಲಿ ಮತ್ತೊಂದು ರಿಸೆಪ್ಷನ್ ಮಾಡಿಕೊಂಡಿದ್ದಾರೆ. ಕೊಡವ ಸಂಪ್ರದಾಯದಂತೆ ಮತ್ತು ತೆಲುಗು ಸಂಪ್ರದಾಯದಂತೆ ಉದಯಪುರದಲ್ಲಿ ಇವರ ವಿವಾಹವಾಗಿತ್ತು.

ಒಂದೂವರೆ ತಿಂಗಳ ಬಳಿಕ ಹುಟ್ಟೂರಲ್ಲಿ ಆರತಕ್ಷತೆ

ಉದಯಪುರದಲ್ಲಿ ನಡೆದಿದ್ದ ವಿವಾಹಕ್ಕೆ ಮಂದಣ್ಣ ಕುಟುಂಬಸ್ಥರು, ನೆಂಟರಿಷ್ಟರು ಭಾಗಿಯಾಗಲು ಆಗಿರಲಿಲ್ಲ ಹೀಗಾಗಿ ಅವರಿಗಾಗಿಯೇ ಈ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವೆಂದರೆ ರಶ್ಮಿಕಾ ಸಂಪೂರ್ಣವಾಗಿ ಕೊಡವತಿಯಾಗಿ ಮಿಂಚಿದರು. ಅವರ ಹೇರ್ ಸ್ಟೈಲ್, ಆಭರಣ, ಬಟ್ಟೆ ಬರೆ ಎಲ್ಲವೂ ಕೊಡವ ಸಂಪ್ರದಾಯದಂತೆಯೇ ಇತ್ತು. ತೆಲುಗಿನ ಸೊಸೆಯಾಗಿರುವ ರಶ್ಮಿಕಾ ತನ್ನ ತವರು ಮನೆಯಲ್ಲಿ ತಾನು ಬೆಳೆದು ಬಂದ ಸಂಪ್ರದಾಯವನ್ನೇ ಅನುಸರಿಸಿದ್ದು ಖುಷಿಯ ಸಂಗತಿಯಾಗಿದೆ. ಇನ್ನು ಪತಿ ವಿಜಯ್ ದೇವರಕೊಂಡ ಕಪ್ಪು ಮತ್ತು ಬಿಳಿ ಕಾಂಬಿನೇಷನ್ ನಲ್ಲಿ ಸೂಟ್‌, ಬಿಳಿಬಣ್ಣದ ಬೂಟು ಧರಿಸಿದ್ದರು.

ಏನೆಲ್ಲಾ ಆಭರಣ ಧರಿಸಿದ್ದರು?

ವಿರಾಜಪೇಟೆಯ ಸಿರಿನಿಟಿ ಹಾಲ್ ನಲ್ಲಿ ನಡೆದ ಆರತಕ್ಷತೆ ಸಮಾರಂಭಕ್ಕೆ ನಟಿ ರಶ್ಮಿಕಾ ಕೊಡಗಿನ ಶೈಲಿಯಲ್ಲಿ ಕೆಂಪು ಬಣ್ಣದ ಸೀರೆ, ಸಾಂಪ್ರಾದಾಯಿಕ ಆಭರಣ ಧರಿಸಿದ್ದರು. ಪತ್ತಕ್,ಜೋಮಾಲೆ,ಕೊಕ್ಕೆ ತಾತಿ, ಪೌಂಚಿ (ಕಡ ಅಥವಾ ಕಾಕಿ) ರಶ್ಮಿಕಾ ಧರಿಸಿದ್ದರು.

ಕೊಡವತಿಯವರು ಧರಿಸುವ ಆಭರಣಗಳು ಅವರ ಸಂಪ್ರದಾಯ, ಸೌಂದರ್ಯ ಮತ್ತು ಗೌರವದ ಪ್ರತೀಕವಾಗಿವೆ. ಅಂತೆಯೇ ರಶ್ಮಿಕಾ ಅದನ್ನು ಸಂಪೂರ್ಣ ಫಾಲೋ ಮಾಡಿದ್ದಾರೆ. ಅದರಂತೆ ಅವರು ಧರಿಸಿದ ಆಭರಣದ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ಪತ್ತಾಕ್ ಕೊಡವತಿಯವರ ಅತ್ಯಂತ ಪ್ರಮುಖ ಆಭರಣಗಳಲ್ಲಿ ಒಂದು. ಇದುವೇ ಅವರ ತಾಳಿ. ಇದನ್ನು ಕೊಡವತಿಯರು ಮದುವೆಯ ಸಂಕೇತವಾಗಿ ಧರಿಸುತ್ತಾರೆ. ಇದು ಸಾಮಾನ್ಯವಾಗಿ ಹವಳ ಮತ್ತು ಚಿನ್ನದ ಮಣಿಗಳ ಸರದಲ್ಲಿ, ನಾಗನ ಹೆಡೆ ಮತ್ತು ಲಕ್ಷ್ಮೀಯ ಅಚ್ಚಿರುವ ಚಿನ್ನದ ನಾಣ್ಯವನ್ನು ಒಳಗೊಂಡಿರುತ್ತದೆ. ಇದನ್ನು ವಿವಾಹದ ಮುನ್ನಾದಿನ ತಾಯಿ ಮಗಳಿಗೆ ಧರಿಸುತ್ತಾರೆ. ಈ ನೆಕ್ಲೆಸ್‌ ರಶ್ಮಿಕಾ ಇದನ್ನು ಧರಿಸಿದ್ದರು.

ಜೋಮಾಲೆ: ಕೊಡಗಿನ ಸಾಂಪ್ರದಾಯಿಕ ಮತ್ತು ಅತ್ಯಂತ ಜನಪ್ರಿಯ ಚಿನ್ನದ ಆಭರಣವಾಗಿದ್ದು, ದಪ್ಪ ಕಪ್ಪು ದಾರದಲ್ಲಿ ಎರಡು ಎಳೆಯಾಗಿ ಪೋಣಿಸಲಾದ ಟೊಳ್ಳಾದ ಚಿನ್ನದ ಗುಂಡುಗಳಿಂದ ಮಾಡಲ್ಪಟ್ಟಿದೆ.

ಕೊಕ್ಕೆಥತಿ: ಕೊಕ್ಕೆಥತಿ ಎಂಬದು ಅರ್ಧಚಂದ್ರಾಕಾರದ ಪೆಂಡೆಂಟ್, ಮಾಣಿಕ್ಯಗಳಿಂದ ಕೂಡಿದ್ದು, ಸುತ್ತು ಮುತ್ತುಗಳನ್ನು ಪೋಣಿಸಲಾಗಿರುತ್ತದೆ.

ಪೌಂಚಿ: ಇದು ಒಂದು ಸಾಂಪ್ರದಾಯಿಕ ಕಡವಾಗಿದ್ದು, ಹಲಸಿನ ಹಣ್ಣಿನ ಮುಳ್ಳುಗಳಂತೆ ಡಿಸೈನ್ ಇರುತ್ತದೆ.ಕೊಡವತಿಯವರು ಕೈಗಳಲ್ಲಿ ಧರಿಸುವ ಈ ಬಳೆಗಳು ಸೌಂದರ್ಯವನ್ನೂ ಹಾಗೂ ಸಂಪತ್ತಿನ ಸಂಕೇತವನ್ನೂ ಸೂಚಿಸುತ್ತವೆ.

ಕೊಡವತಿಯವರ ಆಭರಣಗಳು ಕೇವಲ ಅಲಂಕಾರವಲ್ಲ, ಅವು ಅವರ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಪ್ರತೀಕಗಳಾಗಿವೆ. ಮದುವೆ, ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಈ ಆಭರಣಗಳು ಅವರ ಸಾಂಪ್ರದಾಯಿಕ ಉಡುಪಿಗೆ ವಿಶೇಷ ಶೋಭೆಯನ್ನು ನೀಡುತ್ತವೆ.