ಶಾಪಿಂಗ್ ಇಷ್ಟವಿಲ್ಲದವರು ಅಪರೂಪದಲ್ಲಿ ಅಪರೂಪವೇ. ಮನಸೋಇಚ್ಛೆ ಶಾಪಿಂಗ್ ಮಾಡಿದಾಗೊಂದು ಕ್ಷಣಿಕ ಖುಷಿ ಸಿಗುತ್ತದೆ. ಆದರೆ, ಅದಕ್ಕಾಗಿ ಆದ ಖರ್ಚು, ಅಕೌಂಟ್ ಬ್ಯಾಲೆನ್ಸ್ ನೋಡಿದೊಡನೆ ಪಶ್ಚಾತ್ತಾಪ ಕಾಡುತ್ತದೆ. ಅದರಲ್ಲೂ ಶಾಪಿಂಗ್ ಮಾಡಿದ ವಸ್ತುಗಳು ನಿಜಕ್ಕೂ ಅಗತ್ಯವಿದ್ದವೇ ಎಂಬುದನ್ನು ಯೋಚಿಸಿದರಂತೂ ದುಡ್ಡನ್ನು ಸುಮ್ಮನೇ ಹುಡಿಗರೆದೆನಲ್ಲ ಎಂದು ದುಃಖವಾಗದಿರದು. ಇಷ್ಟೆಲ್ಲ ಆದರೂ ವಾರ ಕಳೆಯುವುದರೊಳಗೆ ಅಂಗಡಿಯಲ್ಲಿ ನೇತಾಡುತ್ತಿದ್ದ ಮತ್ತೇನೋ ವಸ್ತುವೋ, ಬಟ್ಟೆಯೋ ಕೈ ಬೀಸಿ ಕರೆದು ನನ್ನ ಮನೆಗೆ ಕರೆದುಕೊಂಡು ಹೋಗೆಂದು ಗೋಳಾಡಿದಂತೆ ಕೇಳಿಸುತ್ತದೆ, ಮತ್ತೆ ನೀವು ಶಾಪಿಂಗ್ ದುಶ್ಚಟ ಮುಂದುವರಿಸುತ್ತೀರಿ. ಇಂಥ ಚಟದಿಂದ ಮುಕ್ತಿ ಹೊಂದುವುದು ಹೇಗೆ? ನಿಮ್ಮೊಳಗಿನ ಶಾಪಿಂಗ್ ಮೇನಿಯಾಕ್ಕೊಂದು ಫುಲ್‌ಸ್ಟಾಪ್ ಇಡಲು ಏನು ಮಾಡಬಹುದು? ಇಲ್ಲಿವೆ ನೋಡಿ ಸಿಂಪಲ್ ಟೆಕ್ನಿಕ್ಸ್. 

ಆನ್‌ಲೈನ್ ಶಾಪಿಂಗ್ ಮಾಡೋರೇ ಹುಷಾರ್!

ಮಾಲ್‌ಗೆ ಹೋಗ್ಬೇಡಿ
ಮಾಲ್‌ಗೆ ಹೋಗುವ ವಿಚಾರದಲ್ಲಿ ಒಂದು ಗಟ್ಟಿ ನಿರ್ಧಾರ ಮಾಡಿ. ಸುಮ್ಮನೇ ಟೈಂ ಪಾಸ್‌ಗೆಂದು ಮಾಲ್‌ಗೆ ಹೋಗುವುದು, ಹೋದ ಮೇಲೆ ಬಹಳಷ್ಟು ವಸ್ತುಗಳು ಕಣ್ಸೆಳೆಯಲು ಪ್ರಾರಂಭಿಸುತ್ತವೆ. ಕಡೆಗೆ ನೀವು ವೃಥಾ ಒಂದಿಷ್ಟು ಸಾವಿರ ಸುರಿದು ಬರುತ್ತೀರಿ. ಅದರ ಬದಲಿಗೆ ಮಾಲ್‌ಗೆ ಹೋಗುವುದೇ ಬಿಟ್ಟು ಬಿಡಿ. ಒಂದು ವೇಳೆ ಅದು ನಿಮ್ಮ ಫೇವರೇಟ್ ಸ್ಪಾಟ್  ಆಗಿದ್ದಲ್ಲಿ, ಮಾಲ್‌ಗೆ ಹೋಗುವಾಗ ಬೇಕೆಂತಲೇ ವ್ಯಾಲೆಟ್ ಮನೆಯಲ್ಲಿಟ್ಟು ಕೈಲಿ ನೂರಿನ್ನೂರು ರುಪಾಯಿ ಹಿಡಿದುಕೊಂಡು ಹೋಗಿ. ಆಗ ಹಸಿವಾದರೆ ಏನಾದರೂ ತಿನ್ನಲು ಅದು ಸಾಕಾಗುತ್ತದೆ. ಕೆಲವೊಂದು ಬಟ್ಟೆ, ಶೂ ಇಷ್ಟವಾದರೂ ನೀವದನ್ನು ಕೊಳ್ಳಲಾರಿರಿ. 

ಉಡುಗೆ ಮನಸ್ಸಿನ ಕೈಗನ್ನಡಿ; ಕಂಫರ್ಟ್ ನೀಡುವ ಡ್ರೆಸ್‍ಗೇ ಮಣೆ ಹಾಕಿ...

ಸಡನ್ ಅರ್ಜ್‌ನ್ನು ಗಮನಿಸಿ
ಶಾಪಿಂಗ್ ಮಾಡುವ ಯಾವ ಉದ್ದೇಶವೂ ನಿಮಗಿರುವುದಿಲ್ಲ. ಸಡನ್ ಆಗಿ ಏನು ಮಾಡುವುದು ತಿಳಿಯದೆಯೋ ಅಥವಾ ಕಣ್ಣಿಗೆ ಚೆಂದ ಕಂಡಿತೆಂದೋ ಶಾಪಿಂಗ್ ಮಾಡಲು ಉತ್ಸುಕರಾಗುತ್ತೀರಿ. ಸಾಮಾನ್ಯವಾಗಿ ತೀರಾ ಖುಷಿಯಾಗಿದ್ದಾಗ ಅಥವಾ ತೀರಾ ಬೇಸರವಾದಾಗ ಹೀಗೆ ಶಾಪಿಂಗ್ ಅರ್ಜ್ ಅಟಕಾಯಿಸಿಕೊಳ್ಳುತ್ತದೆ. ಹಾಗಾಗಿ, ಮುಂದಿನ ಬಾರಿ ಹೀಗೆ ಶಾಪಿಂಗ್ ಅರ್ಜ್ ಬಂದಾಗ ಆ ಕುರಿತು ಗಮನ ಹರಿಸಿ. ಇಂಥ ಕಾರಣಕ್ಕೆ ಶಾಪಿಂಗ್ ಮಾಡುವ ಮನಸ್ಸಾಗಿದೆಯೇ ಹೊರತು, ನನಗಿದರ ಅಗತ್ಯವಿಲ್ಲ ಎಂಬುದನ್ನು ಕಂಡುಕೊಳ್ಳಿ. ಅಂಥ ಸಮಯದಲ್ಲಿ ಏನಾದರೂ ಬರೆಯುವುದೋ, ಓದುವುದೋ ಅಭ್ಯಾಸ ಮಾಡಿಕೊಳ್ಳಿ.

ಕಾರ್ಡ್ ಬೇಡ
ಕ್ಯಾಶ್‌ಲೆಸ್ ಅಭ್ಯಾಸ ಒಳ್ಳೆಯದೇ. ಆದರೆ, ಶಾಪೋಹಾಲಿಕ್‌ಗಳ ಕೈಲಿ ಕಾರ್ಡ್ ಇರುವುದೇ ಅವರ ಶಾಪಿಂಗ್ ಹುಚ್ಚೆಬ್ಬಿಸಲು ಕಾರಣವಾಗುತ್ತದೆ. ಹೀಗಾಗಿ ಹೊರಗೆ ಹೋಗುವಾಗ ಅಗತ್ಯವಿರುವಷ್ಟೇ ಹಣವನ್ನು ಕೈಲಿ ಹಿಡಿದುಕೊಂಡು ಹೋಗಿ. ಕ್ರೆಡಿಟ್ ಕಾರ್ಡ್ ಬೇಡವೇ ಬೇಡ. ಡೆಬಿಟ್ ಕಾರ್ಡ್ ಬಳಸುವಿರಾದರೆ ಎರಡು ಕಾರ್ಡ್ ಇಟ್ಟುಕೊಂಡು ಒಂದು ಖಾತೆಗೆ ನಿಮ್ಮ ಹಣವನ್ನು ವರ್ಗಾಯಿಸಿ. ಮತ್ತೊಂದರಲ್ಲಿ ಕನಿಷ್ಠ ಅಗತ್ಯದ ಹಣ ಇರುವಂತೆ ಮಾಡಿಕೊಳ್ಳಿ. ಹೀಗೆ ಕನಿಷ್ಠ ಹಣವಿರುವ ಖಾತೆಯ ಡೆಬಿಟ್ ಕಾರ್ಡನ್ನು ಮಾತ್ರ ಹೊರ ಹೋಗುವಾಗ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಳ್ಳಿ. 

ಸಂಗಾತಿ ಶರ್ಟ್ ಮೂಸಿದ್ರೆ ಬರುತ್ತೆ ಸೊಂಪಾದ ನಿದ್ರೆ!...

ಆ್ಯಪ್‌ಗೆ ಮಿತಿ
ಈಗೇನು ಶಾಪಿಂಗ್ ಮಾಡಲು ಮನೆಯಿಂದ ಹೊರಹೋಗಲೇಬೇಕೆಂದೇನಿಲ್ಲ. ಮೊಬೈಲ್ ಆ್ಯಪ್‌ಗಳೇ ಆ ಕೆಲಸಗಳನ್ನು ಮಾಡುತ್ತವೆ. ಹಾಗಾಗಿ, ಮೊಬೈಲ್‌ನಲ್ಲಿ ತೀರಾ ಅಗತ್ಯವಿರುವ ದಿನಸಿ, ರಿಚಾರ್ಜ್ ಮುಂತಾದವುಗಳನ್ನು ಮಾಡಲು ಸಹಾಯಕವಾಗುವ ಆ್ಯಪ್‌ಗಳನ್ನು ಮಾತ್ರ ಇಟ್ಟುಕೊಂಡು ಉಳಿದ ಶಾಪಿಂಗ್ ಆ್ಯಪ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಿ. ಇಲ್ಲದಿದ್ದಲ್ಲಿ ಅಗತ್ಯವಿಲ್ಲದಿದ್ದರೂ ಆಫರ್ ನೋಡಿ ಶಾಪಿಂಗ್ ಮಾಡುವ ಚಟ ಮೈಗೂಡುತ್ತದೆ.

ಖರ್ಚುವೆಚ್ಚ ಬರೆದಿಡಿ
ಈ ಅಭ್ಯಾಸ ಎಲ್ಲರಿಗೂ ಒಳ್ಳೆಯದು. ಇದು ನಿಮ್ಮ ಆದಾಯ ಹಾಗೂ ಖರ್ಚು ಎಲ್ಲವನ್ನೂ ಲೆಕ್ಕಕ್ಕಿಡುತ್ತದೆ. ಜೊತೆಗೆ, ಒಮ್ಮೆ ಕಣ್ಣಾಡಿಸಿದರೆ ಯಾವುದು ಅನಗತ್ಯ ಖರ್ಚು, ಅದನ್ನು ಉಳಿಸಿದರೆ ಎಷ್ಟೊಂದು ಉಳಿಸಬಹುದೆಂಬುದು ಅರಿವಾಗುತ್ತದೆ. 

ಶಾಪಿಂಗ್‌ಗೆ ಬದಲಿ
ಶಾಪಿಂಗ್ ಚಟದಿಂದ ಮುಕ್ತರಾಗಲು ಮತ್ತೊಂದು ಆರೋಗ್ಯಕರ ಹವ್ಯಾಸ ಅಳವಡಿಸಿಕೊಳ್ಳುವುದು ಅಗತ್ಯ. ಉದಾಹರಣೆಗೆ ಶಾಪಿಂಗ್ ಮಾಡಲು ಸಮಯವೇ ಸಿಗದಷ್ಟು ಬ್ಯುಸಿಯಾಗುವುದು- ಗಿಡಗಳನ್ನು ಬೆಳೆಸಿ ಸಲಹುವುದು, ನಾಯಿಯನ್ನು ಸಾಕುವುದು, ಓದು, ಬರಹ, ನಾಟಕ, ಸಂಗೀತ ಕಚೇರಿಗಳಿಗೆ ಭೇಟಿ ಇತ್ಯಾದಿ ಹವ್ಯಾಸಗಳು ಬ್ಯುಸಿಯಾಗಿಡುವ ಜೊತೆಗೆ ನಿಮ್ಮನ್ನು ರಚನಾತ್ಮಕವಾಗಿ ಬೆಳೆಸುತ್ತವೆ. 

ಪ್ಲ್ಯಾನಿಂಗ್ ಇಲ್ಲವೆಂದರೆ ಶಾಕ್ ನೀಡುತ್ತೆ ಶಾಪಿಂಗ್

ನೋ ಶಾಪಿಂಗ್ ಮಂತ್
ಎರಡು ತಿಂಗಳಿಗೊಮ್ಮೆ ನೋ ಶಾಪಿಂಗ್ ಮಂತ್ ಎಂದು ನಿಮಗೆ ನೀವೇ ಕಟ್ಟು ಪಾಡು ಹಾಕಿಕೊಳ್ಳಿ. ಆ ಇಡೀ ತಿಂಗಳಿನಲ್ಲಿ ತೀರಾ ಅಗತ್ಯದ ವಸ್ತುಗಳಿಗಾಗಿ ಒಂದೋ ಎರಡೋ ಸಾವಿರ ತೆಗೆದಿಟ್ಟು, ಉಳಿದಂತೆ ಏನನ್ನೂ ಶಾಪಿಂಗ್ ಮಾಡುವುದಿಲ್ಲ ಎಂದು ಶಪಥ ಮಾಡಿಕೊಳ್ಳಿ. ಈ ಕಟ್ಟುಪಾಡನ್ನು ಗೆದ್ದಾಗ ಅದೆಷ್ಟು ಹಣ ಸೇವ್ ಆಗಿರುತ್ತದೆ ಎಂಬುದು ನಿಮ್ಮನ್ನು ಚಕಿತಗೊಳಿಸುತ್ತದಷ್ಟೇ ಅಲ್ಲ, ನಂತರದ ತಿಂಗಳುಗಳನ್ನೂ ಹಾಗೆಯೇ ಕಳೆಯಲು ಪ್ರೇರೇಪಿಸುತ್ತವೆ.