‘ವ್ಯಕ್ತಿ ತನ್ನ ಉಡುಗೆ ಹಾಗೂ ವಿಳಾಸದಿಂದ ಗುರುತಿಸಲ್ಪಡುತ್ತಾನೆ’ ಎಂಬ ಮಾತಿದೆ. ಇದು ಅಕ್ಷರಶಃ ಸತ್ಯ. ಉಡುಗೆ-ತೊಡುಗೆ ಕುರಿತ ವ್ಯಕ್ತಿಯ ಅಭಿರುಚಿ ಆತನ ವ್ಯಕ್ತಿತ್ವ ಹಾಗೂ ಗುಣವನ್ನು ಪ್ರತಿಬಿಂಬಿಸುತ್ತದೆ. ನೀವು ಮಾರ್ಡನಾ ಅಥವಾ ಸಾಂಪ್ರದಾಯಿಕ ಮನೋಭಾವದವರ ಎಂಬುದನ್ನು ನಿಮ್ಮ ಉಡುಗೆಯೇ ಹೇಳುತ್ತದೆ. ನಿಮ್ಮ ಸುತ್ತಲಿನವರನ್ನೇ ಗಮನಿಸಿ,ಕೆಲವರು ಡ್ರೆಸ್ ಬಗ್ಗೆ ಅದೆಷ್ಟು ಆಸಕ್ತಿ ವಹಿಸುತ್ತಾರೆ.ಇನ್ನೂ ಕೆಲವರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಜೀವನಪ್ರೀತಿ ಹೊಂದಿರುವ ವ್ಯಕ್ತಿಗಳು ನೀಟಾಗಿ ಡ್ರೆಸ್ ಮಾಡಿಕೊಂಡಿರುತ್ತಾರೆ. ಅವರ ಆಸಕ್ತಿ, ಅಭಿರುಚಿಗಳು ಅವರ ತೊಡುಗೆಯಲ್ಲಿ ಎದ್ದು ಕಾಣಿಸುತ್ತವೆ. ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಾಗ, ಅತೀವ ನೋವಿನಲ್ಲಿರುವಾಗ ಉಡುಗೆ ಸೇರಿದಂತೆ ಬಾಹ್ಯ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ಹರಿಸುವುದಿಲ್ಲ.ಬೇಕಿದ್ದರೆ ನೀವೇ ಪರೀಕ್ಷಿಸಿ ನೋಡಿ. ನೀವು ತುಂಬಾ ಸಂತೋಷದಲ್ಲಿರುವಾಗ ಚೆನ್ನಾಗಿ ಅಲಂಕಾರ ಮಾಡಿಕೊಳ್ಳಲು ಬಯಸುತ್ತೀರಿ. ಚೆನ್ನಾಗಿರುವ, ನಿಮಗೊಪ್ಪುವ ಉಡುಗೆ ತೊಡುತ್ತೀರಿ. ಅದೇ ತುಂಬಾ ಬೇಸರದಲ್ಲಿರುವಾಗ ಕೈಗೆ ಸಿಕ್ಕ ಯಾವುದೋ ಒಂದು ಡ್ರೆಸ್ ಹಾಕಿಕೊಳ್ಳುತ್ತೀರಿ. ಅಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ನಮ್ಮ ಉಡುಗೆ ಮತ್ತು ಬಾಹ್ಯ ಅಲಂಕಾರ ಪ್ರತಿಬಿಂಬಿಸುತ್ತವೆ. 

ಸ್ಕರ್ಟ್‌ನಲ್ಲಿ ಎಷ್ಟುವಿಧ, ಅವು ಯಾವುವು?

ಅನುಕರಣೆ ಏಕೆ?: ಯಾರಾದರೂ ಸುಂದರವಾದ ಉಡುಗೆ ತೊಟ್ಟಾಗ ನಮಗೂ ಅಂಥದ್ದೇ ಡ್ರೆಸ್ ಬೇಕೆಂಬ ಬಯಕೆ ಉಂಟಾಗುತ್ತದೆ.ಇದು ಸಹಜ ಕೂಡ.ಆದರೆ,ಅಂಥ ಡ್ರೆಸ್ ಆರಿಸಿಕೊಳ್ಳುವ ಮುನ್ನ ಅದು ನಮ್ಮ ವ್ಯಕ್ತಿತ್ವಕ್ಕೆ ಸೂಟ್ ಆಗುತ್ತದೆಯೇ? ಅದನ್ನು ತೊಟ್ಟರೆ ನಾನು ಕಂಫರ್ಟ್ ಆಗಿರಬಲ್ಲೇನೆ ಎಂದು ಯೋಚಿಸುವುದು ಮುಖ್ಯ.ಕಂಫರ್ಟ್ ಆಗಿಲ್ಲದ ಉಡುಗೆ ತೊಟ್ಟರೆ ಆತ್ಮವಿಶ್ವಾಸದಿಂದಿರಲು ಸಾಧ್ಯವಿಲ್ಲ.ಉದಾಹರಣೆಗೆ ಕೆಲವರು ಶಾಟ್ಸ್ ಹಾಕಿಕೊಂಡರೂ ತುಂಬಾ ಆರಾಮವಾಗಿ ಸುತ್ತಾಡಿಕೊಂಡು,ಆತ್ಮವಿಶ್ವಾಸದಿಂದ ವರ್ತಿಸುತ್ತಾರೆ. ಅದೇ ಕೆಲವರು ಏನೋ ಮುಜುಗರವಾದಂತೆ ವರ್ತಿಸುತ್ತ ತಮ್ಮ ಮನಸ್ಸಿಗೆ ತಾವೇ ಕಿರಿಕಿರಿ ಮಾಡಿಕೊಳ್ಳುತ್ತಿರುತ್ತಾರೆ.ತೊಟ್ಟ ಉಡುಗೆಯಿಂದ ಮುಜುಗರ ಉಂಟಾದರೆ ನಮ್ಮ ಆತ್ಮವಿಶ್ವಾಸವೂ ಕುಂದುತ್ತದೆ. ಆದಕಾರಣ ನಿಮ್ಮ ಅಭಿರುಚಿ, ವ್ಯಕ್ತಿತ್ವಕ್ಕೆ ಹೊಂದುವ ಉಡುಗೆಯನ್ನೇ ಆರಿಸಿ.ಇನ್ನೊಬ್ಬರನ್ನು ಅನುಕರಿಸಲು ಹೋಗಬೇಡಿ.

ಸಂದರ್ಭಕ್ಕೆ ತಕ್ಕಂತೆ ಇರಲಿ: ಸಂದರ್ಭಕ್ಕೆ ತಕ್ಕಂತೆ ನಮ್ಮ ಉಡುಗೆಯೂ ಇರಬೇಕು. ಆಫೀಸ್‍ಗೆ ತೊಡುವ ಉಡುಗೆಯನ್ನು ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ಧರಿಸಿದರೆ ಸೂಕ್ತವೆನಿಸದು. ಅದೇರೀತಿ ಮನೆಯಲ್ಲಿ ತೊಡುವ ಉಡುಗೆಯಲ್ಲೇ ಮಾರ್ಕೆಟ್‍ಗೆ ಹೋಗಲು ಸಾಧ್ಯವಿಲ್ಲ ಅಲ್ಲವೆ? ಖುಷಿಯ ಸಂದರ್ಭಕ್ಕೆ ಗಾಢ ವರ್ಣದ ಬಟ್ಟೆಗಳನ್ನು ಬಳಸುತ್ತೇವೆ. ಅದೇ ನೋವಿನ ಸಮಯದಲ್ಲಿ ತಿಳಿ ವರ್ಣದ ಬಟ್ಟೆಗಳು ಹೆಚ್ಚು ಸೂಕ್ತವೆನಿಸುತ್ತವೆ.ಬಟ್ಟೆಗಳು ನಮ್ಮ ಮನಸ್ಥಿತಿಯ ಜೊತೆಗೆ ಆ ಸಂದರ್ಭದ ಮಹತ್ವವನ್ನು ಕೂಡ ಸಾರುತ್ತವೆ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಜರ್ಮನ್‌ನಿಂದ ಕನ್ನಡತಿ ಬರೆದ ಸೀರೆ ಪುಸ್ತಕ 'ತಾನಾ ಬಾನಾ'!

ಉಡುಗೆ ಸ್ವಚ್ಛವಾಗಿರಲಿ: ನಾವು ತೊಡುವ ಉಡುಗೆ ಎಷ್ಟು ಬೆಲೆ ಬಾಳುವುದು ಎಂಬುದಕ್ಕಿಂತ ಅದೆಷ್ಟು ಸ್ವಚ್ಛವಾಗಿದೆ ಎಂಬುದು ಮುಖ್ಯವಾಗುತ್ತದೆ. ಸ್ವಚ್ಛ, ಒಪ್ಪ ಒರಣವಾದ ಉಡುಗೆ ತೊಟ್ಟವರ ಮನಸ್ಸಿಗೆ ಮಾತ್ರವಲ್ಲ, ನೋಡುಗರ ಮನಸ್ಸಿಗೂ ಖುಷಿ ನೀಡುತ್ತದೆ.ಎಷ್ಟೋ ಬಾರಿ ನಮ್ಮ ಉಡುಗೆಯೇ ನಮ್ಮತ್ತ ಜನರನ್ನು ಆಕರ್ಷಿಸುತ್ತದೆ. ನಾವು ತೊಡುವ ಉಡುಗೆ ಗ್ರ್ಯಾಂಡ್ ಆಗಿರಬೇಕು, ಹೆಚ್ಚಿನ ಬೆಲೆಯದ್ದಾಗಿರಬೇಕು ಎಂದೇನಿಲ್ಲ.ಬದಲಿಗೆ ಕಡಿಮೆ ದರದ ಸರಳ ಉಡುಪು ಕೂಡ ನಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡಬಲ್ಲದು. ಆದರೆ, ಅದು ಸ್ವಚ್ಛವಾಗಿ, ನಮಗೊಪ್ಪುವಂತೆ ಇರಬೇಕಷ್ಟೇ. ಆದಕಾರಣ ಬೆಲೆಯಿಂದ ಡ್ರೆಸ್ ಅಳೆಯುವ ಬದಲು ಅದೆಷ್ಟು ಒಪ್ಪುತ್ತದೆ ಎಂಬುದರ ಆಧಾರದಲ್ಲಿ ಆಯ್ಕೆ ಮಾಡಿ.

ನಿಮಗೆ ಖುಷಿ ನೀಡಬೇಕು: ನೀವು ತೊಡುವ ಉಡುಗೆ ನಿಮ್ಮ ಮನಸ್ಸಿಗೆ ಖುಷಿ ನೀಡುವುದು ಎಲ್ಲಕ್ಕಿಂತ ಮುಖ್ಯ.ಆದಕಾರಣ ಉಡುಗೆ ಧರಿಸಿದ ಬಳಿಕ ಹೊರಹೋಗುವ ಮುನ್ನ ಕನ್ನಡಿ ಮುಂದೆ ನಿಂತು ಒಮ್ಮೆ ಪರೀಕ್ಷಿಸಿ.ನಿಮ್ಮ ಉಡುಗೆ ನಿಮಗೊಪ್ಪುತ್ತದೆಯೇ, ನಿಮಗದನ್ನು ಧರಿಸಿದ್ದರಿಂದ ಖುಷಿ ಸಿಕ್ಕಿದೆಯೇ ಎಂಬುದನ್ನು ಅವಲೋಕಿಸಿ. ಒಂದು ವೇಳೆ ಆ ಉಡುಗೆಯಿಂದ ನಿಮಗೆ ಕಿರಿಕಿರಿಯಾಗುತ್ತಿದ್ದರೆ ಅದನ್ನು ಧರಿಸಿ ಹೊರಗೆ ಹೋಗುವ ಸಾಹಸ ಮಾಡಬೇಡಿ. ಏಕೆಂದರೆ ಉಡುಗೆ ನಿಮ್ಮ ಮನಸ್ಸಿನ ಕೈಗನ್ನಡಿಯೂ ಹೌದು.