ಶಾಪಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳಿಗೆ ಇದು ಅತ್ಯಂತ ಖುಷಿ ಕೊಡುವ ಕಾರ್ಯ. ಅದು ಬೇಕಾದರೆ ಮಾಲೇ ಆಗಿರಲಿ ಇಲ್ಲವೆ ಫುಟ್[ಪಾತ್ ಇರಲಿ, ಬೇಕು-ಬೇಡದ ವಸ್ತುಗಳನ್ನು ಕೊಳ್ಳುತ್ತ ಪರ್ಸ್ ಖಾಲಿ ಮಾಡುವ ತನಕ ಮನಸ್ಸಿಗೆ ನೆಮ್ಮದಿಯೇ ಇರಲ್ಲ. ಕೊನೆಯಲ್ಲಿ ನೋಡಿದ್ರೆ ಕೈ ತುಂಬಾ ಬ್ಯಾಗ್‍ಗಳಿರುತ್ತವೆ, ಆದರೆ ಅದರಲ್ಲಿ ಅಗತ್ಯದ ವಸ್ತುಗಳಾವುವೂ ಇರಲ್ಲ. ಪರಿಣಾಮ ಪತಿಯಿಂದಲೋ ಇಲ್ಲವೆ ಜೊತೆ
ಗೆ ಬಂದ ಮನೆಯ ಸದಸ್ಯರಿಂದಲೋ ಒಂದಿಷ್ಟು ಬೈಗುಳವಂತೂ ಫ್ರೀಯಾಗಿಯೇ ಸಿಕ್ಕಿರುತ್ತದೆ. ಹಾಗಾದ್ರೆ ಬಜೆಟ್ ಮೀರದಂತೆ ಅಗತ್ಯವಿದ್ದ ಎಲ್ಲ ವಸ್ತುಗಳನ್ನು ಕೊಂಡು ಶಾಪಿಂಗ್ ಮುಗಿಸುವುದು ಹೇಗೆ? 

1.ಚೆಕ್‍ಲಿಸ್ಟ್ ಮಾಡಿ: ಮನೆಯಿಂದ ಶಾಪಿಂಗ್‍ಗೆ ಹೊರಡುವ ಮುನ್ನ ಯಾವೆಲ್ಲ ವಸ್ತುಗಳನ್ನು ಖರೀದಿಸಬೇಕು ಎನ್ನುವುದನ್ನು ಪಟ್ಟಿ ಮಾಡಿ. ಶಾಪಿಂಗ್ ಸಂದರ್ಭದಲ್ಲಿ ಚೆಕ್‍ಲಿಸ್ಟ್‍ನಲ್ಲಿರುವ ಪ್ರತಿ ವಸ್ತುವನ್ನು ಖರೀದಿಸಿದ ಬಳಿಕ ಅದರ ಹೆಸರಿನ ಮುಂದೆ ಮಾರ್ಕ್ ಮಾಡಿ. ಇದರಿಂದ ಯಾವೆಲ್ಲ ವಸ್ತುಗಳನ್ನು ಖರೀದಿಸಿ ಆಯ್ತು, ಆಗಿಲ್ಲ ಎಂಬುದು ತಿಳಿಯುತ್ತದೆ. 

ಸ್ನ್ಯಾಪ್‌ಡೀಲ್ ಲಕ್ಕಿಡಿಪ್ ದೋಖಾ

2. ಎಲ್ಲಿ ಶಾಪಿಂಗ್ ಮಾಡುವುದು?: ಚೆಕ್‍ಲಿಸ್ಟ್‍ನಲ್ಲಿರುವ ವಸ್ತುಗಳೆಲ್ಲವನ್ನು ಖರೀದಿಸಬೇಕು ಎಂದಾದರೆ ಯಾವ ಮಾರ್ಕೆಟ್, ಮಾಲ್ ಅಥವಾ ಸ್ಥಳಕ್ಕೆ ಹೋಗುವುದು ಸೂಕ್ತ ಎಂದು ಯೋಚಿಸಿ. ಕಾರ್ ಅಥವಾ ಬೈಕ್ ಹತ್ತಿದ ಮೇಲೆ ಮನಸ್ಸು ಬಂದ ಕಡೆ ಹೋಗುವುದಕ್ಕಿಂತ ಹೊರಡುವ ಮೊದಲೇ ಎಲ್ಲಿಗೆ ಹೋಗಬೇಕು ಎಂಬುದನ್ನು ಸರಿಯಾಗಿ ಪ್ಲ್ಯಾನ್ ಮಾಡಿ. 

3. ಅಂದಾಜು ಬಜೆಟ್ ತಲೆಯಲ್ಲಿರಲಿ:  ಚೆಕ್‍ಲಿಸ್ಟ್‍ನಲ್ಲಿರುವ ಪ್ರತಿ ವಸ್ತುವನ್ನು ಖರೀದಿಸಲು ಎಷ್ಟು ಹಣ ಖರ್ಚು ಮಾಡಬಹುದು ಎಂಬುದನ್ನು ಅಂದಾಜಿಸಿ. ಇದರಿಂದ ನಿಮ್ಮ ಆ ದಿನದ ಶಾಪಿಂಗ್‍ಗೆ ಎಷ್ಟು ಹಣ ಬೇಕಾಗಬಹುದು ಎಂಬ ಅಂದಾಜು ಸಿಗುತ್ತದೆ. ಜೊತೆಗೆ ಇಷ್ಟೇ ಮೊತ್ತದ ಶಾಪಿಂಗ್ ಮಾಡಬೇಕು ಎಂದು ಮನೆಯಲ್ಲೇ ದೃಢ ನಿರ್ಧಾರ ಮಾಡಿಕೊಂಡು ಹೋದರೆ, ಕ್ರೆಡಿಟ್ ಕಾರ್ಡ್ ಅನ್ನು ತೋಚಿದಂತೆ ಎಳೆಯುವ ಬುದ್ಧಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದು. ನಿಮ್ಮ ಬಳಿಯಿರುವ ಹಣದಲ್ಲೇ ಅಗತ್ಯವಾದ ಎಲ್ಲ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

4. ಇಂತಿಷ್ಟೇ ಸಮಯದೊಳಗೆ ಮುಗಿಸಬೇಕು: ಶಾಪಿಂಗ್‍ಗೆ ಹೋದಮೇಲೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ಕೆಲವೊಮ್ಮೆ ಸಮಯದ ಅಭಾವದಿಂದ ಅಗತ್ಯವಿರುವ ಕೆಲವು ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅದಕ್ಕಾಗಿ ಇನ್ನೊಂದು ದಿನ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಹೀಗಾಗಿ ಪ್ರತಿ ಖರೀದಿಗೂ ನಿರ್ದಿಷ್ಟ ಸಮಯ ನಿಗದಿಪಡಿಸಿಕೊಂಡು ಅಷ್ಟರೊಳಗೇ ಮುಗಿಸಿ. 

5. ಆತುರವೂ ಬೇಡ, ನಿಧಾನಗತಿಯೂ ಬೇಡ: ಶಾಪಿಂಗ್ ಮಾಡುವ ಸಂದರ್ಭದಲ್ಲಿ ಆತುರ ಮಾಡುವುದು ಒಳ್ಳೆಯದ್ದಲ್ಲ. ಇದರಿಂದ ಕೆಲವೊಮ್ಮೆ ಉತ್ತಮ ಗುಣಮಟ್ಟದ, ಯೋಗ್ಯ ಬೆಲೆಯ ವಸ್ತುಗಳು ಸಿಗದೇ ಹೋಗಬಹುದು. ಆದಕಾರಣ ಅಳೆದು, ತೂಗಿ ಖರೀದಿಸುವಾಗ ಆತುರ ಬೇಡ. ಇನ್ನು ನೋಡಿದ್ದನ್ನೇ ಮತ್ತೆ ಮತ್ತೆ ನೋಡುತ್ತ ಖರೀದಿಸಬೇಕೇ, ಬೇಡವೇ ಎಂದು ಯೋಚಿಸುವುದರಿಂದ ಕೂಡ ಸಮಯ ವ್ಯರ್ಥವಾಗುತ್ತದೆ. 

ಇ-ಶಾಪಿಂಗ್‌ಗೆ ವ್ಯಸನ ಹಣೆಪಟ್ಟಿ

6. ಅಗತ್ಯವಿದ್ದರೆ ಮಾತ್ರ ಖರೀದಿಸಿ: ಯಾವುದೋ ಒಂದು ವಸ್ತುವಿಗೆ ಆಗತ್ಯವಿದೆ ಎಂದ ಮಾತ್ರಕ್ಕೆ ಅದನ್ನು ಖರೀದಿಸಲು ಮುಂದಾಗಬೇಡಿ. ಬದಲಿಗೆ ನಿಮಗೆ ಆ ವಸ್ತುವಿನ ಅಗತ್ಯವಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ. ಈ ರೀತಿ ಯೋಚಿಸಿ ಶಾಪಿಂಗ್ ಮಾಡುವುದರಿಂದ ಅನಗತ್ಯ ಖರ್ಚನ್ನು ತಡೆಯಬಹುದು.

7. ಆಯ್ಕೆ ನಿಮ್ಮದೇ ಆಗಿರಲಿ: ಶಾಪಿಂಗ್ ಮಾಡುವಾಗ ನಿಮ್ಮ ಜೊತೆಗಿರುವ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ನಿಮಗೆ ಈ ಬಣ್ಣದ ಡ್ರೆಸನ್ನೇ ತೆಗೆದುಕೋ ಎಂದು ಸಲಹೆ ಮಾಡಬಹುದು. ಖಂಡಿತವಾಗಿಯೂ ಅವರ ಸಲಹೆಗಳನ್ನು ಪಡೆಯಿರಿ. ಆದರೆ, ಅಂತಿಮ ಆಯ್ಕೆ ನಿಮ್ಮದೇ ಆಗಿರಲಿ. ಇಲ್ಲವಾದರೆ ಮನಸ್ಸಿನ ನೆಮ್ಮದಿ ಹಾಳಾಗುವುದು ಗ್ಯಾರಂಟಿ.

8. ಹೊಟ್ಟೆ ತುಂಬಿರಲಿ: ಶಾಪಿಂಗ್‍ಗೆ ಹೋಗುವಾಗ ಹೊಟ್ಟೆ ತುಂಬಿದ್ದರೆ ಅನಗತ್ಯ ವಸ್ತುಗಳತ್ತ ಕಣ್ಣು ಹರಿಯುವುದಿಲ್ಲ ಎಂಬುದು ಕೆಲವರ ಅಭಿಪ್ರಾಯ. ಹೊಟ್ಟೆ ತುಂಬಿರುವಾಗ ಮನಸ್ಸು ಕೂಡ ಶಾಂತವಾಗಿ ಸರಿಯಾದ ಆಯ್ಕೆಯನ್ನೇ ಮಾಡುತ್ತದೆ. 

ಆನ್‌ಲೈನ್ ಶಾಪಿಂಗ್ ಮಾಡ್ತೀರಾ? ಹುಷಾರ್